ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರದಿಂದ ಬೃಹತ್ ಅಂಚೆ ಚೀಟಿ ಪ್ರದರ್ಶನ

Last Updated 12 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ವರ್ಷ ಪೂರ್ತಿ ವಸ್ತ್ರ ಪ್ರದರ್ಶನ, ಒಡವೆ ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಪುಸ್ತಕ ಪ್ರದರ್ಶನ ಹೀಗೆ ಯಾವುದಾದರೂ ವಸ್ತು ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಈ ಸಾಲಿನಲ್ಲಿ ಈ ವಾರಾಂತ್ಯಕ್ಕೆ ಅಂದರೆ ಜನವರಿ ೧೬ರಿಂದ ೧೯ರವರೆಗೆ ನಿಮ್ಮನ್ನು ಸ್ವಾಗತಿಸಲಿದೆ ಅಂಚೆ ಚೀಟಿ ಪ್ರದರ್ಶನ.

ಅಂಚೆ ಚೀಟಿಗಳ ಸಂಗ್ರಹವೇ ಒಂದು ಕಲೆ. ಇದನ್ನು ಹವ್ಯಾಸಗಳ ರಾಜ ಮತ್ತು ರಾಜರ ಹವ್ಯಾಸ ಎಂದೂ ಕರೆಯುತ್ತಾರೆ. ಅಂಚೆ ಚೀಟಿ ಸಂಗ್ರಹಣೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅಂಚೆ ಇಲಾಖೆ ಜಿಲ್ಲಾ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಅಂಚೆ ಚೀಟಿ ಪ್ರದರ್ಶನ ನಡೆಸುತ್ತದೆ.

ಕರ್ನಾಟಕ ಅಂಚೆ ವೃತ್ತ ಇದೀಗ ವಲಯ ಮಟ್ಟದ ಪ್ರಥಮ ಅಂಚೆ ಚೀಟಿ ಪ್ರದರ್ಶನ ‘ಕರ್ನಾಪೆಕ್ಸ್ ೨೦೧೫’ನ್ನು ಬೆಂಗಳೂರಿನ ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘ ಹಾಗೂ ಮಂಗಳೂರಿನ ದಕ್ಷಿಣ ಕನ್ನಡ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಸಕ್ರಿಯ ನೆರವಿನೊಂದಿಗೆ ಜನವರಿ ೧೬ ರಿಂದ ೧೯ರ ವರೆಗೆ ಬೆಂಗಳೂರಿನ ಕಸ್ತೂರಬಾ ರಸ್ತೆಯ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ  ಏರ್ಪಡಿಸಿದೆ. ೬೦೦ ಫಲಕಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಂಚೆ ಚೀಟಿಗಳು ಪ್ರದರ್ಶನಗೊಳ್ಳಲಿವೆ.

‘ಕರ್ನಾಪೆಕ್ಸ್ ೨೦೧೫’ರಲ್ಲಿ ಗಾಂಧೀಜಿಯಿಂದ ಗಂಗೂಬಾಯಿ ಹಾನಗಲ್, ರಾಜಕುಮಾರಿ ಡಯಾನಳಿಂದ ಹಿಡಿದು ಶೇಕ್ಸ್‌ಪಿಯರ್‌ವರೆಗೂ ಅನೇಕ ರೀತಿಯ ಅಂಚೆ ಚೀಟಿಗಳನ್ನು ನೀವು ಕಾಣಬಹುದು. ಕಿರಿಯರ ವಿಭಾಗಲ್ಲಿ ೭೫, ಹಿರಿಯರ ವಿಭಾಗದಲ್ಲಿ ೧೫೦ ಸ್ಪರ್ಧಿಗಳು ಭಾಗವಹಿಸಲಿದ್ದು, ಎಂಟು ಶಾಲೆಗಳು ಸಹ ತಮ್ಮ ಸಂಗ್ರಹ ಪ್ರದರ್ಶಿಸಲಿವೆ.

ಹಲವಾರು ಪ್ರಸಿದ್ಧ ಅಂಚೆ ಚೀಟಿ ಸಂಗ್ರಾಹಕರು ತಂತಮ್ಮ ಸಂಗ್ರಹಗಳನ್ನು ಪ್ರದರ್ಶಿಸಲಿದ್ದಾರೆ. ನಾಲ್ಕು ದಿನಗಳು ನಡೆಯುವ ಈ ಪ್ರದರ್ಶನವನ್ನು ಕ್ರಮವಾಗಿ ವಿಜ್ಞಾನ ದಿನ, ಸಂಸ್ಕೃತಿ ದಿನ, ಸ್ವಾಸ್ಥ್ಯ ದಿನ ಮತ್ತು ಸ್ವಚ್ಛತಾ ದಿನವನ್ನಾಗಿ  ಆಚರಿಲಾಗುತ್ತಿದ್ದು, ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ದಿನವೂ ವಿಶೇಷ ಅಂಚೆ ಲಕೋಟೆಗಳನ್ನು ಹೊರತರಲಾಗುವುದು.

ಇದೇ ೧೬ರಂದು ಮೈಸೂರು ಅಂಚೆ, ೧೯೬೦ರಿಂದ ೨೦೧೪ರವರೆಗೆ ಕರ್ನಾಟಕದಲ್ಲಿ ಹೊರತರಲಾಗಿರುವ ವಿಶೇಷ ಲಕೋಟೆಗಳು ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಅಂಚೆ ಚೀಟಿಗಳ ಬಗೆಗಿನ ಪುಸ್ತಕಗಳನ್ನು ಬಿಡುಗಡೆಮಾಡಲಾಗುವುದು. ದಿನಾಂಕ ೧೮ರಂದು ೧೧ ಗಂಟೆಗೆ ‘ಹೂಡಿಕೆಗೆ ಒಂದು ಪರ್ಯಾಯವಾಗಿ ಅಂಚೆಚೀಟಿ ಸಂಗ್ರಹ’ ಎನ್ನುವ ವಿಷಯದ ಬಗ್ಗೆ ಚರ್ಚೆ ಏರ್ಪಡಿಸಲಾಗಿದೆ. ಇದರಲ್ಲಿ ಅಂಚೆ ಚೀಟಿ ಸಂಗ್ರಾಹಕರು, ರಾಯಲ್ ಫಿಲ್ಯಾಟೆಲಿಕ್ ಸೊಸೈಟಿ, ಚೇಂಬರ್ ಆಫ್ ಕಾಮರ್ಸ್ ಹಾಗೂ ರೋಟರಿ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಫಿಲ್ಯಾಟೆಲಿಕ್ ಬ್ಯೂರೋ, ಪೋಸ್ಟ್ ಶಾಪ್ ಮತ್ತು ಉತ್ತರ ಕರ್ನಾಟಕ ಅಂಚೆ ವಲಯ ಮಳಿಗೆಗಳನ್ನು ಸ್ಥಾಪಿಸಲಿವೆ. ಅಂಚೆ ಚೀಟಿ ಪ್ರದರ್ಶನದ ನಾಲ್ಕೂ ದಿನಗಳು ನಿಧಿ ಬೇಟೆ (Treasure Hunt) ನಡೆಯಲಿದ್ದು, ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.

ಪ್ರಮುಖ ಆಕರ್ಷಣೆ: ನನ್ನ ಅಂಚೆ ಚೀಟಿ
ಇದು ನನ್ನ ಅಂಚೆ ಚೀಟಿ. ಏಕೆಂದರೆ ಅದರಲ್ಲಿರುವುದು ನನ್ನದೇ ಚಿತ್ರ. ಭಾರತೀಯ ಅಂಚೆ ಇಲಾಖೆಯ ‘ನನ್ನ ಅಂಚೆ ಚೀಟಿ’ (My Stamp)  ಯೋಜನೆಯ ಮೂಲಕ ನೀವು ಕೂಡ ನಿಮ್ಮ ಚಿತ್ರವನ್ನು ಹೊಂದಿರುವ ಖಾಸಗಿ ಅಂಚೆ ಚೀಟಿಯನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ ನಿಮ್ಮ ಭಾವಚಿತ್ರವನ್ನು ಈಗಾಗಲೇ ಲಭ್ಯವಿರುವ ಅಂಚೆ ಚೀಟಿಯ ಮಗ್ಗಲಲ್ಲಿ ಮುದ್ರಿಸಿ ಹೊಸ ಅಂಚೆ ಚೀಟಿಯನ್ನು ತಯಾರಿಸಿಕೊಡಲಾಗುತ್ತದೆ.

ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ: ಅಂಚೆ ಚೀಟಿ ಪ್ರದರ್ಶನಕ್ಕೆ ಹೋಗುವಾಗ ನಿಮ್ಮ ಒಂದು ಭಾವ ಚಿತ್ರ ಮತ್ತು ಅಧಿಕೃತ ಗುರುತಿನ ಚೀಟಿಯನ್ನು (ಚುನಾವಣಾ ಆಯೋಗದ ಗುರುತಿನ ಚೀಟಿ, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಇತ್ಯಾದಿ) ತಪ್ಪದೇ ತೆಗೆದುಕೊಂಡು ಹೋಗಿ. ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಫಿಲ್ಯಾಟೆಲಿಕ್ ಬ್ಯೂರೋ ಮಳಿಗೆಯಲ್ಲಿ ದೊರೆಯುವ  ಅರ್ಜಿಯನ್ನು ಪಡೆದು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ–ಮೇಲ್ ಐಡಿ ಮುಂತಾದ ವಿವರಗಳ ಜೊತೆಗೆ ನಿಮ್ಮ ಭಾವಚಿತ್ರದ ಪಕ್ಕ ಯಾವ ಅಂಚೆ ಚೀಟಿಯಿರಬೇಕು ಎನ್ನುವುದನ್ನು ನಮೂದಿಸಿರಿ.

ಭರ್ತಿ ಮಾಡಿದ ಅರ್ಜಿಯನ್ನು ನಿಮ್ಮ ಭಾವಚಿತ್ರ ಮತ್ತು ರೂ.೩೦೦ ಶುಲ್ಕದ ಜೊತೆಗೆ ಕೌಂಟರ್‌ನಲ್ಲಿ ನೀಡಿ ಅಂಗೀಕಾರ ಪತ್ರವನ್ನು ಪಡೆಯಿರಿ. ಅರ್ಜಿಯನ್ನು ಪರಿಶೀಲಿಸಿ ನಿಗದಿತ ಅವಧಿಯ ಒಳಗೆ ಅಂಚೆ ಚೀಟಿಯನ್ನು ನಿಮಗೆ ನೀಡಲಾಗುವುದು. ನನ್ನ ಅಂಚೆ ಚೀಟಿಯು ರೂ.೫ ರ ೧೨ ಅಂಚೆ ಚೀಟಿಯನ್ನೊಳಗೊಂಡು ಪಕ್ಕದಲ್ಲಿ ಭಾವಚಿತ್ರವನ್ನು ಹೊಂದಿರುವ ಒಂದು ಪುಟವಾಗಿದ್ದು, ಮಾರಾಟ ಬೆಲೆಯು ರೂ.೩೦೦ ಆಗಿರುತ್ತದೆ. ಈ ಖಾಸಗಿ ಅಂಚೆ ಚೀಟಿಯನ್ನು ನಿಮ್ಮ ಪ್ರೀತಿಪಾತ್ರರಿಗೆ ಪತ್ರವನ್ನು ಕಳುಹಿಸಲು ಬಳಸಬಹುದು.

ಪ್ರದರ್ಶನದ ಸಮಯ
ಜನವರಿ 16 ಮತ್ತು 19, ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ
ಜನವರಿ 17 ಮತ್ತು 18- ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT