ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ ಸಮೀಕ್ಷೆ

Last Updated 29 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಉಪೇಂದ್ರ ನಾಯಕ ನಟರಾಗಿದ್ದ `ಗಾಡ್‌ಫಾದರ್~ ಮೂಲಕ ಸಿನಿ ದುನಿಯಾಕ್ಕೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಸೌಂದರ್ಯ. `ಗಾಡ್‌ಫಾದರ್~ ತೆರೆಕಂಡಿದ್ದೂ, ತೆರೆಯಿಂದ ನಿರ್ಗಮಿಸಿದ್ದೂ ಆಯಿತು. ಮುಂದೇನು?

`ಗಾಡ್‌ಫಾದರ್ ಸಿನಿಮಾದಲ್ಲಿನ ನನ್ನ ಅಭಿನಯಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ತುಂಬಾನೇ ಖುಷಿಯಾಗುತ್ತಿದೆ. ಈಗ ನನ್ನ ಅಭಿನಯ ಸಾಮರ್ಥ್ಯಕ್ಕೆ ಸಾಣೆ ಹಿಡಿವ ಸಿನಿಮಾದಲ್ಲಿ ನಟಿಸಲು ಹಾತೊರೆಯುತ್ತಿದ್ದೇನೆ, ಮತ್ತೊಮ್ಮೆ ಕ್ಯಾಮೆರಾ ಎದುರಿಸಲು ತವಕಿಸುತ್ತಿದ್ದೇನೆ~- ಮುಂದೇನು ಎನ್ನುವುದಕ್ಕೆ ಸೌಂದರ್ಯ ಅವರ ಉತ್ತರವಿದು.

ತೆಲುಗು ಚಿತ್ರರಂಗದಲ್ಲಿ ಸೌಂದರ್ಯ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಈಚೆಗೆ ಹರಿದಾಡುತ್ತಿತ್ತು. ಅದನ್ನು ನಿಜ ಎಂದು ಒಪ್ಪಿಕೊಳ್ಳುವ ಸೌಂದರ್ಯ, ಆ ಸಿನಿಮಾ ಬಗ್ಗೆ ನನ್ನೊಳಗೆ ಕೆಲವೊಂದಿಷ್ಟು ಗೊಂದಲಗಳು ಎದ್ದಿದ್ದರಿಂದ ಆ ಪ್ರಾಜೆಕ್ಟ್‌ನ್ನು ಅಲ್ಲಿಗೆ ಕೈ ಬಿಟ್ಟೆ~ ಎಂದು ಸ್ಪಷ್ಟನೆ ನೀಡುತ್ತಾರೆ.

ಸಿನಿಮಾಗಳಲ್ಲಿ ನಟಿಸಬೇಕು, ನಟಿ ಆಗಬೇಕು ಎಂಬ ಯೋಚನೆ ನನ್ನ ಕನಸು ಮನಸಿನಲ್ಲೂ ಇರಲಿಲ್ಲ. ಸಿನಿಮಾ ಎಂದರೆ ವಾಸ್ತವಿಕತೆಯಿಂದ ಆಚೆಗೆ ಇರುವುದು ಎಂದು ಅಮ್ಮನ ಹತ್ತಿರ ತಮಾಷೆ ಮಾಡುತ್ತಿದ್ದೆ. ನನ್ನ ಪ್ರಕಾರ ನಟನೆ ಎಂದರೆ, ಬಣ್ಣ ಹಚ್ಚಿಕೊಂಡ ನಟ-ನಟಿಯರು ಕ್ಯಾಮೆರಾ ಮುಂದೆ ನಿಂತು ಸಂಭಾಷಣೆಯನ್ನು ಒಪ್ಪಿಸುವುದು ಎಂದು ತಿಳಿದಿದ್ದೆ. ಆದರೆ, ಈಗ ಒಬ್ಬ ನಟಿಯಾಗಿ ನಟನೆ ಎಂದರೆ ಏನು?

ಒಂದು ಸಿನಿಮಾದಲ್ಲಿ ನಮ್ಮ ಪಾತ್ರವೇನು? ಸಿನಿಮಾ ಪರಿಣಾಮಕಾರಿ ಮೂಡಿಬರಲು ಎಷ್ಟು ಶ್ರಮ ವಹಿಸಬೇಕು ಎಂದು ನನಗೆ ಅರ್ಥವಾಗಿದೆ. ಒಂದು ಪಾತ್ರಕ್ಕೆ ಜೀವ ತುಂಬುವುದು ಸುಲಭದ ಕೆಲಸವಲ್ಲ. ನಟಿಸುವವರು ತಮ್ಮ ಶ್ರಮದ ಬೆವರು ಬಸಿಯಬೇಕಾಗುತ್ತದೆ ಎನ್ನುತ್ತಾರವರು.

ಸೌಂದರ್ಯ ಅವರಿಗೆ ಸ್ವಂತ ಪ್ರತಿಭೆಯಿಂದಲೇ ಮೇಲೆ ಬರಬೇಕು ಎಂಬ ಹಂಬಲವಂತೆ. ಈಕೆ ಖ್ಯಾತ ನಟಿ ಜಯಮಾಲಾ ಅವರ ಮಗಳಾದರೂ ಅಮ್ಮನ ನೆರಳಿನಿಂದಾಚೆ ಬಂದು ತನ್ನ ಅಸ್ಮಿತೆಯನ್ನು ಚಿತ್ರರಂಗದಲ್ಲಿ ಉಳಿಸಬೇಕು ಎಂಬ ಛಲಗಾತಿ. ಹಾಗಾಗಿ ಸೌಂದರ್ಯ ಸದ್ಯಕ್ಕೆ ಈಗ ಅಮ್ಮನ ಶ್ರೀರಕ್ಷೆಗಿಂತ ತನ್ನ ಅಭಿನಯ ಸಾಮರ್ಥ್ಯವನ್ನೇ ಹೆಚ್ಚಾಗಿ ನಂಬಿದ್ದಾರೆ.

`ಗಾಡ್‌ಫಾದರ್~ ಸಿನಿಮಾದಲ್ಲಿ ಸೌಂದರ್ಯ ನಟನೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತು ಕೇಳಿಬಂದಿತ್ತು. ಬಬ್ಲಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕನಿಗೆ ಕಚಗುಳಿ ಇಟ್ಟ ಸೌಂದರ್ಯ ಈ ಸಿನಿಮಾದಿಂದ ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡವರು.

ಅಂದಹಾಗೆ, ಜಯಮಾಲಾ ಅವರ ಮಗಳಾಗಿರುವುದು ಸಿನಿಮಾ ರಂಗದಲ್ಲಿ ಸೌಂದರ್ಯ ಅವರಿಗೆ ಅನುಕೂಲವಾಗಿ ಪರಿಣಮಿಸಿದೆಯಾ? ಇಲ್ಲ ಎನ್ನುತ್ತಾರೆ ಸೌಂದರ್ಯ. `ಸಿನಿಮಾ ನಟ-ನಟಿಯರ ಮಕ್ಕಳಾದವರಿಗೆ ಅನುಕೂಲವಿರುವಂತೆ ಕೆಲವು ಅನನುಕೂಲವೂ ಇರುತ್ತದೆ. ಸಿನಿಮಾದಲ್ಲಿ ಎಲ್ಲರಿಗೂ ಅವಕಾಶಗಳು ಸುಲಭವಾಗಿ ದಕ್ಕುವುದಿಲ್ಲ. ಹಾಗಂತ ನಾನು ನಟಿ ಮಗಳು, ನನಗೆ ಅವಕಾಶಗಳು ತುಂಬಾ ಸಿಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಸಿನಿ ಪ್ರಪಂಚ ಹರಿವ ನೀರಿದ್ದಂತೆ.

ಇಲ್ಲಿಗೆ ನಿತ್ಯ ಹೊಸನೀರು ಹರಿದು ಬರುತ್ತಲೇ ಇರುತ್ತದೆ. ಸಿನಿಮಾ ಹಿನ್ನೆಲೆ ಇಲ್ಲದ ಹೊಸ ನಟ-ನಟಿಯರಿಗಿಂತ ನಾವು ಇಲ್ಲಿ ಹೆಚ್ಚು ಒತ್ತಡಕ್ಕೆ ಈಡಾಗುತ್ತೇವೆ. ಯಾಕಂದ್ರೆ ನಮ್ಮ ನಟನೆಯನ್ನು ನಮ್ಮ ಪೋಷಕರ ನಟನೆಯೊಂದಿಗೆ ಹೋಲಿಸಿ ನೋಡುತ್ತಾರೆ. ಹಾಗೆಯೇ, ನಮ್ಮ ಅಪ್ಪ-ಅಮ್ಮ ಈ ಕ್ಷೇತ್ರದಲ್ಲಿ ಒಂದು ಹೆಸರು ಗಳಿಸಿರುತ್ತಾರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ನಮ್ಮ ಮೇಲೆ ಇರುತ್ತದೆ. ಹಾಗಾಗಿ ನಟ-ನಟಿಯರ ಮಕ್ಕಳನ್ನು ಎಲ್ಲರ ಕಣ್ಣುಗಳು ಗಮನಿಸುತ್ತಿರುತ್ತವೆ~ ಎನ್ನುವುದು ಅವರ ಅನಿಸಿಕೆ.

`ನನ್ನ ಅಮ್ಮನಿಂದ ತುಂಬಾ ವಿಷಯವನ್ನು ಕಲಿತುಕೊಂಡಿದ್ದೇನೆ. ನನ್ನ ತಾಯಿ ಯಾವುದೇ ಸಂದರ್ಭ ಬಂದರೂ ಶಾಂತವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಅವರ ಈ ಗುಣ ನನಗೆ ತುಂಬಾ ಇಷ್ಟ” ಎನ್ನುತ್ತಾರೆ.

ಮುಂದೆ ಒಂದು ಒಳ್ಳೆ ಸಿನಿಮಾದಲ್ಲಿ ನಟಿಸಬೇಕು ಎಂದು ಕಾಯುತ್ತಿರುವ ಸೌಂದರ್ಯ ಅವರಿಗೆ ಊಟದಲ್ಲಿ ಉಪ್ಪಿನ ಕಾಯಿ ಆಗುವುದಕ್ಕೆ ಇಷ್ಟವಿಲ್ಲವಂತೆ. ಇಡೀ ಚಿತ್ರವನ್ನು ಆವರಿಸಿಕೊಳ್ಳುವಂಥಹ ಪಾತ್ರದಲ್ಲಿ ನಟಿಸಬೇಕು ಎಂಬುದು ಅವರ ಆಸೆ. ಹಾಗಾಗಿ ಅಂಥ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ಮಾತು ಮುಗಿಸುತ್ತಾರೆ ಸೌಂದರ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT