ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಮೊನಿಯಂ ಸ್ವರಾಲಾಪ

ನಾದ ಲೋಕ
Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಅಂದು ತಿಳಿ ನೀಲಿ ಬಣ್ಣದ ಶೇರ್ವಾನಿ ತೊಟ್ಟು ಹಾರ್ಮೊನಿಯಂ ಮುಂದೆ ಕುಳಿತ ಚಿನ್ಮಯ್ ಕೊಲ್ಹಾಟ್ಕರ್ ಮಹಾರಾಷ್ಟ್ರದಿಂದ ಬಂದವರು. ಕನ್ನಡದಲ್ಲಿ ಮಾತಾಡಲು ಯತ್ನಿಸಿ ಹೂನಗೆ ಸೂಸುತ್ತಲೇ ಭೀಮ್‌ಪಲಾಸಿ ರಾಗವನ್ನು ನುಡಿಸಲು ಆರಂಭಿಸಿದರು.

ಅದು ಬಿಜಾಪುರೆ ಹಾರ್ಮೊನಿಯಂ ಫೌಂಡೇಷನ್ ಆಯೋಜಿಸಿದ್ದ ಹತ್ತನೇ ‘ಹಾರ್ಮೊನಿಯಂ ಹಬ್ಬ’ ಕಾರ್ಯಕ್ರಮವಾಗಿತ್ತು. ಖ್ಯಾತ ಹಾರ್ಮೊನಿಯಂ ಕಲಾವಿದರಾಗಿದ್ದ ರಾಮಬಾವು ಬಿಜಾಪುರೆ ಅವರ ನೆನಪಿನಲ್ಲಿ ಅವರ ಶಿಷ್ಯ ರವೀಂದ್ರ ಕಾಟೋಟಿಯವರು ಪ್ರತಿವರ್ಷ ಹಾರ್ಮೊನಿಯಂ ಹಬ್ಬವನ್ನು ನಡೆಸುತ್ತಾರೆ.

ಭೀಮ್‌ಪಲಾಸಿ (ಕಾಫಿ ಥಾಟ್) ಉತ್ತರ ಮಧ್ಯಾಹ್ನ ಸಮಯದಲ್ಲಿ ಹಾಡುವಂಥಾ ರಾಗ. 5-6 ನಿಮಿಷಗಳ ಕಾಲ ನುಡಿಸಿದ ಆಲಾಪ ಶಾಂತವಾಗಿ ಹರಿದು ಬಂದು, ನಂತರ, ರೂಪಕ್ ತಾಳ ಧೃತ್ ಲಯದಲ್ಲಿ ಮುಂದುವರೆಯಿತು.

ತಬಲಾ ಸಾಥ್‌ನಲ್ಲಿ ಉದಯರಾಜ್ ಕರ್ಪೂರರು ಹಾರ್ಮೊನಿಯಂ ಸ್ವರ ಯಾತ್ರೆ ಸುಗಮವಾಗಬಲ್ಲ ಲಯವನ್ನು ನೀಡುತ್ತಲಿದ್ದರು. ಹಾರ್ಮೊನಿಯಂ ಕೀಲಿಗಳ ಮೇಲೆ ಆಡುತ್ತಿದ್ದ ಚಿನ್ಮಯ್ ಅವರ ಬೆರಳುಗಳು ಅದೆಷ್ಟು ಸಲೀಸಾಗಿ ಹರಿದಾಡುತ್ತಿದ್ದವೆಂದರೆ, ಅದರಲ್ಲಿನ ಸೊಗಸುಗಾರಿಕೆಗೆ ಹಾಗೂ ಕ್ರಿಯಾಶೀಲತೆಗೆ ಶ್ರೋತೃವರ್ಗದಿಂದ ವಾಹ್... ಎಂಬ ಉದ್ಘಾರಗಳು ಹೊರಡುತಲಿದ್ದವು.

ಚಿನ್ಮಯ್ ನುಡಿಸಾಣಿಕೆ ಕೇಳುತ್ತಾ ಹೋದಂತೆ ‘ಹಾರ್ಮೊನಿಯಂ ಅಂದ್ರ ಬರೇ ಪಕ್ಕ ವಾದ್ಯ ಅಲ್ಲ. ಅದ್ರಾಗ ಮೀಂಡ್ ಬರಂಗಿಲ್ಲೇನು? ಯಾರ್ ಹೇಳಿದ್ದು ಮೀಂಡ್‌ ಅನೂ ತೆಗೆದು ತೋರಿಸ್ತೇನಿ ಹಾರ್ಮೊನಿಯಂದಾಗ’ ಎನ್ನುತ್ತಿದ್ದ ಹಾರ್ಮೊನಿಯಂ ವಾದಕ ವಸಂತ ಕನಕಾಪುರ್ ಅವರ ಮಾತುಗಳು ನೆನಪಿಗೆ ಬರುವುದರ ಜೊತೆಗೆ ಹೊಸ ಶ್ರೋತೃಗಳಿಗೆ ‘ಹೌದಲ್ಲ ಹಾರ್ಮೊನಿಯಂನಲ್ಲಿ ಎಷ್ಟೆಲ್ಲ ಸಾಧ್ಯತೆಗಳುಂಟು’ ಎಂದೆನಿಸುವಂತಿತ್ತು.

ಸೇವಾ ಸದನದ ಒಳಗೆ ಕಾರ್ಯಕ್ರಮ ರಂಗೇರುತ್ತಿದ್ದಂತೆ ಹೊರಗೆ ಮಳೆ ಸುರಿಯಲಾರಂಭಿಸಿತ್ತು. ಚಳಿ ಮೈತಾಗದಂತೆ ಸ್ವರಾಲಾಪಗಳು ಶ್ರೋತೃಗಳನ್ನು ಬೆಚ್ಚಗಿಟ್ಟಿದ್ದವು. ಆಲಾಪ್-ಝೋಡ್ ನುಡಿಸುಗಾರಿಕೆ ನಂತರದಲ್ಲಿ ಸ್ವಲ್ಪ ಹೊತ್ತು ಝಪ್‍ತಾಳದ ಮಧ್ಯಲಯದಲ್ಲಿ ಹಾರ್ಮೊನಿಯಂ ವಾದನ ಮುಂದುವರೆಯಿತು.

ಭೀಮ್‌ಪಲಾಸಿಯ ನುಡಿಸಾಣಿಕೆಯ ನಂತರ ಶ್ರೀ ರಾಗವನ್ನು ನುಡಿಸಲಾರಂಭಿಸಿದರು. ಶ್ರೀ ಬಹಳ ಹಳೆಯ ರಾಗವಾಗಿದ್ದು, ಗಂಭೀರ ಭಾವವುಳ್ಳದ್ದು. ಅದರ ಆಲಾಪ ನುಡಿಸಾಣಿಕೆಯಲ್ಲಿದ್ದ ಕ್ರಿಯಾಶೀಲತೆ, ಭಾವಸ್ಫುರತೆಯಲ್ಲಿದ್ದ ವೇಗ ಇಡೀ ಸಭಾಂಗಣವನ್ನೆಲ್ಲ ತನ್ನ ಹರಿವಿನೊಟ್ಟಿಗೆ ಒಯ್ಯುತ್ತ, ಶ್ರೋತೃಗಳನ್ನೆಲ್ಲ ಮೋಹಕಗೊಳಿಸಿತ್ತು. ಆಲಾಪ್ ನುಡಿಸಿದ ನಂತರದ ಭಾಗವೂ ಅಷ್ಟೇ ರಸಭರಿತವಾಗಿ ಮೂಡಿ ಬಂದಿತ್ತು.

ಅದರ ಬಳಿಕ ಕಾಫಿ ರಾಗದಲ್ಲಿ ‘ಮಾಧವ ಮುಕುಂದ ಮುರಾರೆ...’ ಎಂಬ ಪಂಜಾಬಿ ತಾಳದಲ್ಲಿದ್ದ ಠಪ್ಪಾ ಒಂದನ್ನು ಕೇಳಿಸಿದರು. ಠಪ್ಪಾ ಲಘುಶಾಸ್ತ್ರೀಯ ಸಂಗೀತದ ಒಂದು ಪ್ರಕಾರವಾಗಿದ್ದು ಹಿಡಿಹಿಡಿದು, ಒಂದು ನಮೂನೆ ಗಂಟುಗಂಟಾಗಿ ಹಾಡನ್ನು ಕಂಠದಲ್ಲಿ ನೇಯುತ್ತಾ ಹೋಗುವಂಥಾದ್ದು. ಕೊನೆಗೊಂದು ‘ಸೌತನ ಕೆ ಘರವಾಲ...’ ಎಂಬ ಠುಮ್ರಿಯನ್ನು ನುಡಿಸಿ ದೇಸಿ ಭಾವರಸದ ಸವಿಯುಣಿಸಿದರು.

ಹಾರ್ಮೊನಿಯಂ ಏಕವ್ಯಕ್ತಿ ವಾದನದ ನಂತರದಲ್ಲಿ ಆರಂಭಗೊಂಡದ್ದು ಹಾರ್ಮೊನಿಯಂ ಹಾಗೂ ಸಿತಾರ್ ಜುಗಲ್‌ಬಂದಿ. ಜುಗಲ್‌ಬಂದಿ ವಾದನಕ್ಕೆ ಮಾರುಬಿಹಾಗ್ (ಕಲ್ಯಾಣ್ ಥಾಟ್) ರಾಗವನ್ನು ಆಯ್ದುಕೊಳ್ಳಲಾಗಿತ್ತು. ಎರಡೆರೆಡು ವಾದ್ಯಗಳು ಒಂದೇ ರಾಗದ ಕೊಳದಲ್ಲಿ ಮೀಯುತ್ತಿದ್ದರೂ ರಸ ಕದಡದೇ,  ಆಲಾಪ್ ವಾದನ ಶಾಂತ ಕೊಳದಂತಿತ್ತು.

ಸುಮಾರು ಇಪ್ಪತ್ತು ನಿಮಿಷಗಳವರೆಗೂ ಆಲಾಪ್ ಝೋಡ್ ವಾದನದ ನಂತರ ರಾಜೇಂದ್ರ ನಾಕೋಡರ ತಬಲಾದಲ್ಲಿ ರೂಪಕ ತಾಳದ ಲಯದಲ್ಲಿ ಜುಗಲ್‌ಬಂದಿ ವಾದನ ಮುಂದುವರೆಯಿತು.

ಇಲ್ಲಿ ಇಬ್ಬರೂ ಕಲಾವಿದರು ತಮ್ಮತಮ್ಮ ವಾದ್ಯಗಳಲ್ಲಿ ರಾಗವನ್ನು ಭಿನ್ನ ಭಿನ್ನವಾಗಿ ಪ್ರಯೋಗಿಸುತ್ತಿದ್ದರೂ, ಅದು ಮತ್ತೊಂದು ವಾದ್ಯ ನುಡಿಸಿದುದಕ್ಕೆ ಕೊಂಡಿಯಾಗಿರುತ್ತಿತ್ತು. ಆನಂತರ ತೀನ್ ತಾಳದಲ್ಲಿ ರಾಗವನ್ನು ಮತ್ತೊಂದು ಹಂತದಲ್ಲಿ ನುಡಿಸಲಾರಂಭಿಸಿದಾಗ ವಾದನ ಲಯ ಮತ್ತು ನುಡಿಸಾಣಿಕೆ ಎರಡರಲ್ಲೂ ತೀವ್ರತೆ ಹೆಚ್ಚಾಗಿ, ನುಡಿಸಾಣಿಕೆಯಲ್ಲಿನ ಕ್ರಿಯಾಶೀಲತೆಯೂ ದುಪ್ಪಟ್ಟಾಗುತ್ತ ಹೋಯಿತು.

ಎರಡೂ ವಾದ್ಯಗಳು ನುಡಿಸಿದಂತೆಲ್ಲ ರಸ ಕೊನೆಯಿಲ್ಲವೆಂಬಂತೆ ಹರಿಯುತ್ತ ಓಡುವ ನದಿಯಂತಾಗಿತ್ತು. ಕಾಟೋಟಿ ಹಾಗೂ ಖಾನರ ಬೆರಳುಗಳು ಆರೋಗ್ಯಕರ ಪೈಪೋಟಿಗಿಳಿದಂತಿದ್ದವು.

ಕೊನೆಗೆ 15 ನಿಮಿಷಗಳ ಕಾಲ ನುಡಿಸಿದ ಭೈರವಿ (ಭೈರವಿ ಥಾಟ್) ರಾಗ ಶಾಂತ, ಗಂಭೀರ ಹಾಗೂ ಕರುಣಾ ರಸ ಮಿಶ್ರಿತವಾದದ್ದು. ಕೇಳಕೇಳುತ್ತಲೇ ಶ್ರೋತೃಗಳನ್ನು ಗಂಭೀರಗೊಳಿಸಿಬಿಡುತ್ತದೆ.

ಎರಡೂ ವಾದ್ಯಗಳು ಒಂದಕ್ಕಿಂತ ಮತ್ತೊಂದು ಭೈರವಿಯನ್ನು ತನ್ನ ಸ್ವರಗಳಲ್ಲಿ ಸುಂದರಗೊಳಿಸಿದಷ್ಟೂ, ಹೊತ್ತು ಮಾರು ಬಿಹಾಗದ ಪ್ರೇಮದ ರಸದಲ್ಲಿದ್ದವರನ್ನು ಗಂಭೀರ ಮಾಡುತ್ತಲೇ ಹೋದವು. ಆರ್ಭಟಿಸುವ ತಬಲಾ ನಾದಕ್ಕಂತೂ ಚಪ್ಪಾಳೆಗಳು ಸುರಿಯುತ್ತಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT