ನಾವು, ನಮ್ಮತನ ಮತ್ತು ನಮ್ಮ ಹೆಮ್ಮೆ

ಭಾನುವಾರ, ಮೇ 26, 2019
32 °C

ನಾವು, ನಮ್ಮತನ ಮತ್ತು ನಮ್ಮ ಹೆಮ್ಮೆ

Published:
Updated:
Prajavani

ಕರ್ನಾಟಕದ ಸಂಸ್ಕೃತಿಯನ್ನು ತಿಳಿಸಿಕೊಡುವ ಪ್ರಮುಖವಾದ ಆಕರಗ್ರಂಥಗಳಲ್ಲಿ ಒಂದು ‘ಕರ್ಣಾಟಕ ಸಂಸ್ಕೃತಿ ಸಮೀಕ್ಷೆ’. 

ಡಾ. ಎಚ್‌. ತಿಪ್ಪೇರುದ್ರಸ್ವಾಮಿ ಅವರು ರಚಿಸಿರುವ  ಈ ಬೃಹತ್‌ ಕೃತಿ ಮೊದಲು ಪ್ರಕಟವಾದದ್ದು 1968ರಲ್ಲಿ; 2018ರಲ್ಲಿ ಹದಿನೈದನೆಯ ಮುದ್ರಣ ಹೊರಬಂದಿದೆ ಎನ್ನುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕರ್ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಷ್ಟು ದೀರ್ಘ ಕಾಲಪ್ರವಾಹದಲ್ಲಿ ಇಲ್ಲಿಯ ಸಂಸ್ಕೃತಿ ಹಲವು ಆಯಾಮಗಳಲ್ಲಿ ಅರಳಿದೆ. ಈ ಎಲ್ಲವುಗಳ ಪ್ರಮುಖ ಘಟ್ಟಗಳನ್ನು ಗುರುತಿಸುವ ಕೆಲಸವನ್ನು ಈ ಕೃತಿ ಯಶಸ್ವಿಯಾಗಿ ಮಾಡಿದೆ. ಕರ್ನಾಟಕ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ಭಾಗವೇ ಹೌದು. ಹೀಗಾಗಿ ಮೊದಲು ಭಾರತೀಯ ಸಂಸ್ಕೃತಿಯ ಬಗ್ಗೆ ವಿಸ್ತಾರವಾಗಿ ಚರ್ಚಿಸಿ ಬಳಿಕ ಕರ್ನಾಟಕ ಸಂಸ್ಕೃತಿಯ ಬಗ್ಗೆ ವಿವರಿಸಿರುವುದು ಯುಕ್ತವಾಗಿದೆ. ಒಂಬತ್ತು ಅಧ್ಯಾಯಗಳೂ ಎರಡು ಅನುಬಂಧಗಳೂ ಸೇರಿರುವ ಈ ಕೃತಿಯ ಹರಹು 800 ಪುಟಗಳನ್ನು ಮೀರಿದೆ. ಭಾರತೀಯ ಸಂಸ್ಕೃತಿ, ಕರ್ಣಾಟಕರಾಜ್ಯ, ಕನ್ನಡ ಜನಪದ, ಶಾಸನಗಳಲ್ಲಿ ಸಂಸ್ಕೃತಿ, ಸಾಹಿತ್ಯದಲ್ಲಿ ಸಂಸ್ಕೃತಿ, ಜಾನಪದಸಾಹಿತ್ಯ, ವಾಸ್ತುಶಿಲ್ಪ ಮತ್ತು ಶಿಲ್ಪ, ಸಂಗೀತ ಮತ್ತು ನೃತ್ಯ, ಚಿತ್ರಕಲೆ – ಹೀಗೆ ವಿಷಯಗಳ ವಿಂಗಡಣೆಯಾಗಿದೆ.

‘ಭರತಖಂಡದ ಸಂಸ್ಖೃತಿಯ ಚೌಕಟ್ಟಿನಲ್ಲಿ ಅಳವಟ್ಟು ಸುಂದರವಾಗಿ ಅರಳಿರುವ ಸಂಸ್ಕೃತಿಕುಸುಮಗಳಲ್ಲಿ ಕರ್ನಾಟಕದ ಸ್ಥಾನ ಬಹಳ ಹಿರಿದು ಮತ್ತು ವಿಶಿಷ್ಟವಾದುದು. ಸಾಮ್ರಾಜ್ಯಗಳ ನಿರ್ಮಾಣ ಮತ್ತು ಅವುಗಳ ವ್ಯವಸ್ಥೆಯಲ್ಲಿ, ಧಾರ್ಮಿಕ ದರ್ಶನದ ದಿವ್ಯದೃಷ್ಟಿಯಲ್ಲಿ, ಸಾಹಿತ್ಯಸೃಷ್ಟಿಯ ರಸಮಾರ್ಗದಲ್ಲಿ, ಶಿಲ್ಪ ಸಂಗೀತಾದಿಗಳ ಕಲೋಪಾಸನೆಯಲ್ಲಿ – ಹೀಗೆ ಜೀವನದ ಎಲ್ಲ ರಂಗಗಳಲ್ಲಿಯೂ ಕರ್ನಾಟಕದ ಸಾಧನೆ ಸಾರ್ಥಕತೆಯನ್ನು ಪಡೆದಿದೆ. ಅತಿ ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಉಜ್ವಲ ಪರಂಪರೆಯನ್ನಿತ್ತು ಅದನ್ನು ಬೆಳೆಸಿಕೊಂಡು ಬಂದಿದೆ. ಮನುಷ್ಯ ಜನಾಂಗದ ಉದಯವನ್ನು ಕಂಡ ಅತಿ ಪ್ರಾಚೀನವಾದ ಭೂಬಾಗದಲ್ಲಿ ದಖ್ಖನ್‌ ಪ್ರಸ್ಥಭೂಮಿಯು ಒಂದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆ ಪ್ರಸ್ಥಭೂಮಿಯ ಮಧ್ಯಭಾಗವನ್ನೆಲ್ಲಾ ವ್ಯಾಪಿಸಿರುವ ಕರ್ನಾಟಕ, ಅದರಿಂದ ಕೆಳಗೂ ಇಳಿದು ಪಶ್ಚಿಮ ಸಮುದ್ರದವರೆಗೂ ಹಬ್ಬಿದೆ.’ ಇಲ್ಲಿಯ ಸಂಸ್ಕೃತಿಯ ಪರಿಚಯಕ್ಕೆ ‘ಕರ್ಣಾಟಕ ಸಂಸ್ಕೃತಿ ಸಮೀಕ್ಷೆ’ ನಮಗೆ ನೆರವಾಗುತ್ತದೆ.

ಆನಂದದ ಹುಡುಕಾಟ
ಹಸಿವಾದಾಗ ಅನ್ನವನ್ನು ತಿನ್ನುತ್ತೇವೆ. ಅದರಿಂದ ಸಂತೋಷವಾಗುತ್ತದೆ. ಆದರೆ ಹಸಿವು ಹಿಂಗಿದಮೇಲೆ ಮನಸ್ಸು ಅಷ್ಟರಿಂದಲೇ ತೃಪ್ತವಾಗುವುದಿಲ್ಲ. ಆನಂದದ ಪರಿಧಿ ವಿಸ್ತಾರವಾಗೊಳ್ಳುತ್ತಾ ಹೋಗುತ್ತದೆ. ದೈಹಿಕ ತೃಷೆಗಳನ್ನು ಮೀರಿದ ಸೌಂದರ್ಯೋಪಾಸನೆಯ ವಲಯವನ್ನು ಪ್ರವೇಶಿಸುತ್ತದೆ; ಅಂತರ್ಮುಖವಾದ ದೈವಿಕಶಕ್ತಿಯಾಗಿ ಪರಿಣಮಿಸುತ್ತದೆ. ಈ ಎಲ್ಲ ಮಟ್ಟದ ಅನುಭವಗಳೂ ವಿವಿಧ ರೂಪಗಳನ್ನು ಧರಿಸಿ ಕಲೆಯಲ್ಲಿ, ಧರ್ಮದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ನಾಗರಿಕತೆಗೆ ಎಟುಕಲಾರದ ಆನಂದವನ್ನು ಈ ಮೂಲಕ ಸಾಧಿಸಲು ಪ್ರಯತ್ನಿಸುತ್ತಾನೆ. ಈ ದೃಷ್ಟಿಯಿಂದ ಸಂಸ್ಕೃತಿಯೆಂಬುದು ಪರಿಪೂರ್ಣ ಆನಂದವನ್ನು ಹುಡುಕುವ ಸಾಹಸದ ಫಲ – ಎಂದು ಹೇಳಬಹುದು. 

ಸನಾತನವೃಕ್ಷ
ಕರ್ಣಾಟಕ ಸಂಸ್ಕೃತಿ ಒಂದು ಸನಾತನ ವೃಕ್ಷ. ಕಾಲದಿಂದ ಮತ್ತು ಸತ್ವದಿಂದ ಅದು ಸನಾತನ; ಆದರೆ ಅದರ ಚೇತನ ನಿತ್ಯನೂತನ. ಇಂದೂ ಹೊಸ ಹೊಸ ಬಿಳುಲುಗಳೂ ಬೇರೂರಿ ಬೆಳೆಯುತ್ತಿವೆ; ಟಿಸಿಲುಗಳು ಕುಡಿಯೊಡೆದು ಹೂವುಗಳು ಅರಳುತ್ತಿವೆ. ನಿರಂತರವಾಗಿ ಬೆಳೆದು ಬಂದ ಪರಂಪರೆಯಿಂದ ಅದು ಪೋಷಿತವಾಗುತ್ತಿದೆ...

ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಜನಜೀವನ ಹೊಂದಿಕೊಳ್ಳಬೇಕಾಗುತ್ತದೆ. ಹೊಸ ಹೊಸ ವಿಚಾರಗಳ ಮಥನದಿಂದ ಅನೇಕ ಹಳೆಯ ನಂಬಿಕೆಗಳು ಕುಸಿಯುತ್ತವೆ; ಹೊಸ ಬೆಳಕು ಮೂಡುತ್ತದೆ. ಅದು ಅನಿವಾರ್ಯ; ಮತ್ತು ಅಗತ್ಯ. ಹಣ್ಣೆಲೆ ಉದುರಿ ಹೊಸ ಎಲೆ ಚಿಗುರುವಂತೆ ಸಹಜವೂ ಹೌದು. ವೃಕ್ಷ ಜೀವಂತವಾಗಿರುವುದರ ಲಕ್ಷಣ ಅದು. ಕರ್ಣಾಟಕ ಸಂಸ್ಕೃತಿ ಇಂತಹ ಜೀವಂತ ಲಕ್ಷಣವನ್ನು ಪಡೆದು, ಹೊಸ ಹೊಸ ಚಿಗುರನ್ನು ಹೂವು ಹಣ್ಣುಗಳನ್ನು ಅರಳಿಸುತ್ತಾ ಬಂದಿದೆ. ಆಯಾ ಯುಗದ ಆವಶ್ಯಕತೆಗಳಿಗುಣವಾಗಿ ಹೊಸದನ್ನು ಅಳವಡಿಸಿಕೊಳ್ಳುವ ಅಕ್ಷಯಶಕ್ತಿಯನ್ನು ವ್ಯಕ್ತಪಡಿಸಿದೆ. ಆದುದರಿಂದಲೇ ಸನಾತನವಾದರೂ ನಿತ್ಯನೂತನವಾಗಿ ಬೆಳೆಯುತ್ತಾ ನಳನಳಿಸುತ್ತದೆ. ‘ತಳದಲ್ಲಿ ನೀರೆರೆದರೆ ಮೇಲೆ ಪಲ್ಲವಿಸುತ್ತು ನೋಡಾ’ ಎಂಬಂತೆ ಮೇಲೆ ಪಲ್ಲವಿಸುವುದು ತಳದಲ್ಲಿರುವ ತಾಯಿಬೇರಿನ ಸತ್ವದಿಂದ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !