ಮಂಗಳದಲ್ಲಿ 15 ವರ್ಷ ಪೂರೈಸಿದ ಅಪಾರ್ಚುನಿಟಿ ರೋವರ್‌

7

ಮಂಗಳದಲ್ಲಿ 15 ವರ್ಷ ಪೂರೈಸಿದ ಅಪಾರ್ಚುನಿಟಿ ರೋವರ್‌

Published:
Updated:

ವಾಷಿಂಗ್ಟನ್‌ : ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿರುವ ಅಪಾರ್ಚುನಿಟಿ ರೋವರ್‌ ನೌಕೆಯು 15 ವರ್ಷಗಳನ್ನು ಪೂರೈಸಿದೆ.

6 ಚಕ್ರಗಳನ್ನು ಹೊಂದಿರುವ ಈ ನೌಕೆಯು 2004ರ ಜನವರಿ 24ರಂದು ಮಂಗಳ ಗ್ರಹದ ಮೆರಿಡಿಯೆನಿ ಪ್ಲೇನಮ್‌ ಎಂದು ಕರೆಯಲಾಗುವ ಭಾಗದಲ್ಲಿ ಇಳಿದು, ಕೆಂಪು ಗ್ರಹದಿಂದ ತನ್ನ ಮೊದಲ ಸಂದೇಶವನ್ನು ಭೂಮಿಗೆ ರವಾನಿಸಿತ್ತು.

2018ರ ಫೆಬ್ರುವರಿಗೆ ಮೊದಲು ಅಪಾರ್ಚುನಿಟಿ ಮಂಗಳನದ ಅಂಗಳದಲ್ಲಿ 45 ಕಿ.ಮೀ ಪ್ರಯಾಣ ಮಾಡಿದೆ. ಈ ಕೆಂಪು ಗ್ರಹದಲ್ಲಿನ ಅಪಾರ ದೂಳಿನಿಂದಾಗಿ ‘ಅಪಾರ್ಚುನಿಟಿ ರೋವರ್‌’ ಕಳೆದ ವರ್ಷದ ಜೂನ್‌ನಲ್ಲಿ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡು, ಕಾರ್ಯ ಸ್ಥಗಿತಗೊಳಿಸಿದೆ ಎಂದು ನಾಸಾ ಹೇಳಿದೆ.

‘ಕೆಂಪು ಗ್ರಹದ ಮೇಲೆ ಅಪಾರ್ಚುನಿಟಿಯು ಮಹತ್ವದ ಅನ್ವೇಷಣೆ ನಡೆಸುವ ಒಂದು ಅದ್ಭುತ ಯಂತ್ರವಷ್ಟೇ ಆಗಿರಲಿಲ್ಲ. ಅದರ ಹಿಂದೆ ಅರ್ಪಣಾ ಮನೋಭಾವದ ಮತ್ತು ಪ್ರತಿಭಾನ್ವಿತರ ಒಂದು ದೊಡ್ಡ ತಂಡವೇ ಇತ್ತು. ಅದರಿಂದಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಸಾಧ್ಯತೆಗಳನ್ನು ವಿಸ್ತರಿಸಲು ಸಾಧ್ಯವಾಯಿತು’ ಎಂದು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿಯಲ್ಲಿನ (ಜೆಪಿಎಲ್) ಅಪಾರ್ಚುನಿಟಿಯ ಪ್ರಾಜೆಕ್ಟ್ ಮ್ಯಾನೇಜರ್ ಜಾನ್‌ ಕ್ಯಾಲ್ಲಸ್ ಹೇಳಿದ್ದಾರೆ.

‘ಸಂಪರ್ಕ ಕಳೆದುಕೊಂಡಿರುವ ಅಪಾರ್ಚುನಿಟಿ ಜತೆಗೆ ಸಂವಹನ ಸಾಧಿಸಲು ನಾವು ನಮ್ಮ ಎಲ್ಲ ಶಕ್ತಿಯನ್ನು ಬಳಸುತ್ತಿದ್ದೇವೆ. ಆದರೆ, ಸಮಯ ಕಳೆದಂತೆ ರೋವರ್‌ ಜತೆಗೆ ಯಶಸ್ವಿ ಸಂಪರ್ಕದ ಸಂಭವನೀಯತೆ ಕ್ಷೀಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಪ್ರಸ್ತುತದಲ್ಲಿ ಅಪಾರ್ಚುನಿಟಿ ಸ್ಥಿತಿ ಏನಾಗಿದೆ ಎನ್ನುವುದು ನಮಗೆ ತಿಳಿದಿಲ್ಲ. ಇದರ ವಾರ್ಷಿಕೋತ್ಸವದಿಂದಾದರೂ ಅದರ ಬಗ್ಗೆ ತಿಳಿಯಲು ಸ್ವಲ್ಪಮಟ್ಟಿಗಿನ ನೆರವಾಗಬಹುದು’ ಎಂದು ಕ್ಯಾಲ್ಲಸ್‌ ಹೇಳಿದ್ದಾರೆ.

ಭಾರಿ ದೂಳಿನಿಂದಾಗಿ ‘ಅಪಾರ್ಚುನಿಟಿ ರೋವರ್‌’ ಸೌರಫಲಕಗಳಿಂದ ಶಕ್ತಿ ಪಡೆಯುವ ಸಾಮರ್ಥ್ಯ ಕಳೆದುಕೊಂಡಿದೆ. ಹಾಗಾಗಿ, ರೋವರ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 2018ರ ಜೂನ್‌ 10ರಂದು ದೊರೆತ ಸಂದೇಶವೇ ಕೊನೆಯದಾಗಿತ್ತು. ದೂಳು ಕಡಿಮೆಯಾದ ನಂತರವೂ ನೌಕೆಯೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನಗಳು ಫಲಿಸಿಲ್ಲ ಎಂದು ನಾಸಾ ಹೇಳಿದೆ.

ಆದಾಗ್ಯೂ, ಅಪಾರ್ಚುನಿಟಿಯ ಕಾರ್ಯಾಚರಣೆ ಮುಂದುವರಿಯಲಿದೆ. ಜೆಪಿಎಲ್‌ನಲ್ಲಿ ಈ ಯೋಜನೆಯಲ್ಲಿ ತೊಡಗಿರುವ ಎಂಜಿನಿಯರ್‌ಗಳು ರೋವರ್‌ಗೆ ಸಂಜ್ಞೆಗಳನ್ನು ಕಳುಹಿಸಿ, ಅಲ್ಲಿಂದ ಸಂದೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ರೋವರ್‌ನಿಂದ ಸಂದೇಶ ಬಂದರೆ, ಎಂಜಿನಿಯರ್‌ಗಳ ಪ್ರಯತ್ನ ಫಲಿಸಿದಂತೆ ಎಂದು ಅದು ಹೇಳಿದೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !