ಹೊಸದಿದ್ದರೂ, ಶಿಥಿಲ ಟ್ಯಾಂಕ್‌ ಮೂಲಕ ನೀರು ಪೂರೈಕೆ!

7
ಕೊಳ್ಳೇಗಾಲ: ಭಯದಲ್ಲಿ ಜನರು, ಹಳೆ ಟ್ಯಾಂಕ್‌ ಕೆಡವಲು ಹರಳೆ ಗ್ರಾಮಸ್ಥರ ಆಗ್ರಹ,

ಹೊಸದಿದ್ದರೂ, ಶಿಥಿಲ ಟ್ಯಾಂಕ್‌ ಮೂಲಕ ನೀರು ಪೂರೈಕೆ!

Published:
Updated:
Deccan Herald

ಕೊಳ್ಳೇಗಾಲ: ತಾಲ್ಲೂಕಿನ ಹರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೂರೈಸುವುದಕ್ಕಾಗಿ ಹೊಸ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಿದ್ದರೂ, ಶಿಥಿಲಗೊಂಡಿರುವ ಹಳೆಯ ಟ್ಯಾಂಕ್‌ ಮೂಲಕವೇ ನೀರು ಪೂರೈಸಲಾಗುತ್ತಿದೆ. 

ಶಿಥಿಲಗೊಂಡಿರುವ ಟ್ಯಾಂಕ್‌ 40 ವರ್ಷಗಳಷ್ಟು ಹಳೆಯದು. ಪಿಲ್ಲರ್‌ಗಳಿಂದ ಸಿಮೆಂಟ್‌ ಕಿತ್ತು ಬರುತ್ತಿದ್ದು, ಕಂಬಿಗಳು ಕಾಣುತ್ತಿವೆ. ಟ್ಯಾಂಕ್‌ನಲ್ಲಿ ಸಣ್ಣ ಬಿರುಕೂ ಉಂಟಾಗಿದೆ. 

ಟ್ಯಾಂಕ್‌ ಹಳೆಯದಾಗಿದೆ ಎಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ₹15 ಲಕ್ಷ ವೆಚ್ಚದಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಲಾಗಿತ್ತು. ಒಂದೂವರೆ ವರ್ಷಗಳ ಕಾಲ ಅದರ ಮೂಲಕವೇ ಗ್ರಾಮದಲ್ಲಿರುವ 350 ಮನೆಗಳಿಗೆ ನೀರು ಸರಬರಾಜು ಮಾಡಲಾಗಿತ್ತು. ಆದರೆ ನಾಲ್ಕೈದು ತಿಂಗಳ ಹಿಂದೆ ಪಂಪು ಕೆಟ್ಟು ಹೋಗಿತ್ತು. ಹಾಗಾಗಿ, ಗ್ರಾಮ ಪಂಚಾಯಿತಿ ಹಳೆ ಟ್ಯಾಂಕ್‌ನಿಂದಲೇ ಮತ್ತೆ ನೀರು ಪೂರೈಸಲು ಆರಂಭಿಸಿತ್ತು.  

ಜೀವಕ್ಕೆ ಅಪಾಯ: ಹಳೆ ಟ್ಯಾಂಕ್‌ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಗ್ರಾಮಸ್ಥರು ಆ ಭಾಗದಲ್ಲಿ ಓಡಾಡಲು ಹೆದರುವ ಪರಿಸ್ಥಿತಿ ಇದೆ. 50 ಸಾವಿರ ಲೀಟರ್‌ ಸಾಮರ್ಥ್ಯದ ಈ ಟ್ಯಾಂಕ್‌ನ ಸಮೀಪವೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಇದೆ. ಕೆಲವು ಮಕ್ಕಳು ಈ ಟ್ಯಾಂಕ್‌ ಕೆಳಗಡೆಯೇ ಆಟವಾಡುತ್ತಿರುತ್ತಾರೆ. ಶೀಘ್ರವಾಗಿ ಹಳೆ ಟ್ಯಾಂಕ್‌ ಅನ್ನು ಕೆಡವಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಹಳೆಯ ಟ್ಯಾಂಕ್ ಪಕ್ಕದಲ್ಲೇ, ಹೊಸ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಅದರಿಂದ ಗ್ರಾಮಸ್ಥರಿಗೆ ಏನೂ ಪ್ರಯೋಜನವಾಗುತ್ತಿಲ್ಲ. ಗ್ರಾಮದಲ್ಲಿರುವ ಮನೆಗಳಿಗೆ ಹಳೆಯ ಟ್ಯಾಂಕ್‌ನಿಂದಲೇ ನೀರು ಪೂರೈಕೆಯಾಗುತ್ತಿದೆ. ಶಿಥಿಲಗೊಂಡಿರುವ ಟ್ಯಾಂಕ್‌ ಅನ್ನು ಕೆಡವಿ ಎಂದು ಮನವಿ ಮಾಡಿದರೂ ಅಧಿಕಾರಿಗಳಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು‌ ಗ್ರಾಮದ ಶಿವಮ್ಮ ಅವರು ಆರೋಪಿಸಿದರು.

‘ತೆರವಿಗೆ ಕ್ರಮ’
‘ಶಿಥಿಲಗೊಂಡಿರುವ ಹಳೆಯ ಟ್ಯಾಂಕ್‌ ಕೆಡವಿ, ಹೊಸ ಓವರ್‌ ಹೆಡ್‌ ಟ್ಯಾಂಕ್‌ ಮೂಲಕವೇ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಟ್ಯಾಂಕ್‌ಗೆ ನೀರೆತ್ತುವ ಪಂಪ್‌ ಹಾಳಾಗಿದೆ. ಅದನ್ನು ಸರಿಪಡಿಸಬೇಕಾಗಿದೆ. ತಕ್ಷಣವೇ ಅದರ ರಿಪೇರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹರಳೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಚರಂಡಿ ವ್ಯವಸ್ಥೆ ಸರಿ ಇಲ್ಲ
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕೆಲವು ಬಡಾವಣೆಗಳಲ್ಲಿ ನೆಪ‍ ಮಾತ್ರಕ್ಕೆ ಚರಂಡಿ ಇದೆ. ಆದರೆ, ಅದರಲ್ಲಿ ಗಿಡಗಂಟಿಗಳು ಬೆಳೆದು ಕಸ ತುಂಬಿ, ಕೊಳಚೆ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲೇ ಹರಿಯುತ್ತಿದೆ.

‘ಕೊಳಚೆ ನೀರು ಹಬ್ಬುನಾಡುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರಿದ್ದಾರೆ. ತಕ್ಷಣವೇ ಗ್ರಾಮ ಪಂಚಾಯಿತಿ ಚರಂಡಿಯನ್ನು ಸರಿಪಡಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !