ಬುಧವಾರ, ಮೇ 25, 2022
30 °C

ಚಿನ್ನದೊಡವೆಯಲ್ಲಿ ಹೊಸ ಟ್ರೆಂಡ್‌

ಕೃಷ್ಣವೇಣಿ ಪ್ರಸಾದ್ ಮುಳಿಯ Updated:

ಅಕ್ಷರ ಗಾತ್ರ : | |

ಒಡವೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೊಳೆಯುವ ಲೋಹ ಚಿನ್ನದ ಆಭರಣಗಳೆಂದರೆ ವರ್ಗ, ವರ್ಣ, ಅಂತಸ್ತಿನ ಬೇಧವಿಲ್ಲದೇ ಆಕರ್ಷಿತರಾಗುವುದು ಸಹಜ. ಭಾರತೀಯರ ಬದುಕಿನಲ್ಲಂತೂ ಹುಟ್ಟಿನಿಂದ ಸಾವಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ಈ ಬಂಗಾರ ಹಾಸುಹೊಕ್ಕಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಸಾವಿರಾರು ವರ್ಷಗಳ ಹಿಂದೆ ಕೂಡ ಸ್ವರ್ಣದಿಂದ ಮಾಡಿದ ಒಡವೆಗಳಿಂದ ಮನುಷ್ಯ ಅಲಂಕರಿಸಿಕೊಂಡು ಆನಂದಿಸುತ್ತಿದ್ದ ಎಂಬುದರ ಬಗ್ಗೆ ಕುರುಹುಗಳು ಉತ್ಖನನದಲ್ಲಿ ಲಭಿಸಿವೆ.

ಈಗಂತೂ ಹೆಂಗಳೆಯರ ಮನಸ್ಸಿನಲ್ಲಿ ಒಂದಾದರೂ ಚಿನ್ನದೊಡವೆ ಧರಿಸಿ ಖುಷಿಪಡಬೇಕೆಂಬ ಆಸೆ ಸುಪ್ತವಾಗಿರುವುದು ಸಹಜ. ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲೂ ಅವರವರ ಬಯಕೆ, ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ವೈವಿಧ್ಯಮಯ ಆಭರಣಗಳು ಲಭ್ಯ. ಅಜ್ಜಿ, ಅಮ್ಮಂದಿರು ಧರಿಸುತ್ತಿದ್ದ ಸಾಂಪ್ರದಾಯಕವಾದ ಎಥ್ನಿಕ್‌, ಹೆರಿಟೇಜ್‌, ರಾಜ ವೈಭೋಗದ ರಾಯಲ್‌, ಭಾರ, ಹಗುರ ಆಭರಣಗಳಿಂದ ಹಿಡಿದು ಬಾಲಿವುಡ್‌ ಸಿನಿಮಾದಲ್ಲಿ ನಾಯಕಿ ಧರಿಸಿದ ಇತ್ತೀಚಿನ ವಿನ್ಯಾಸದ ಆಭರಣಗಳವರೆಗೂ ನೀವು ಆಯ್ಕೆ ಮಾಡಿಕೊಳ್ಳಬಹುದು.

ಟರ್ಕಿ ಆಭರಣ

ಇಂದು ಒಂದು ತರದ ವಿನ್ಯಾಸವಿದ್ದರೆ, ನಾಳೆ ಇನ್ನೊಂದು ಬಗೆಯ ಆವಿಷ್ಕಾರ ಆಭರಣ ಮಳಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ಆವಿಷ್ಕಾರವಾದ ಹೊಸ ವಿನ್ಯಾಸ ಟರ್ಕಿ ಆಭರಣಗಳು.

ಮಹಿಳೆಯರ ಕಣ್ಣು ಯಾವುದಕ್ಕೆ ಸೆಳೆಯುತ್ತದೆ ಎಂದರೆ ಅದಕ್ಕೊಂದು ಅದ್ಭುತ ವಿನ್ಯಾಸವಿರಬೇಕು; ಎಲ್ಲಾ ಬಟ್ಟೆ ಬರೆಗೆ ಹೊಂದುವಂತಿರಬೇಕು; ಹೊಳಪಿನಿಂದ ಕೂಡಿರಬೇಕು; ಎಲ್ಲರ ಕಣ್ಮನ ಸೆಳೆಯಬೇಕು. ಇಂತಹ ಬಯಕೆಗಳಿಗೆ ಪೂರಕವಾಗಿದೆ ಈ ವಿನ್ಯಾಸದ ಆಭರಣ.

ಟರ್ಕಿ ಆಭರಣದ ವಿನ್ಯಾಸದಲ್ಲೇ ಅಂತಹ ಹೊಳಪಿದೆ. ಸ್ವಲ್ಪ ಉಬ್ಬು ಚಿತ್ರಣವನ್ನು ಹೊಂದಿದ್ದು ಹೂವಿನ ವಿನ್ಯಾಸ ಇದರ ಹಿರಿಮೆ. ಎಲೆಯ ವಿನ್ಯಾಸ, ರಂಗೋಲಿಯಲ್ಲಿ ಬಳಸುವ ವಿನ್ಯಾಸಗಳನ್ನು ಮಿಶ್ರ ಮಾಡಿ ಈ ಬಗೆಯ ಆಭರಣ ತಯಾರಿಸಲಾಗಿದೆ. ಲೈಟ್ ವೈಟ್ ಹಾಗೂ ಭಾರದ ಟರ್ಕಿ ಹಾರಮ್ ಕೂಡ ಲಭ್ಯ.

ಇದರ ವಿಶೇಷತೆ ಏನೆಂದರೆ ಲೈಟ್ ವೈಟ್ ಆಭರಣವನ್ನು ನೋಡುವಾಗ ಇದು ಲೈಟ್ ವೈಟ್ ಎಂದು ತಿಳಿಯುವುದೇ ಇಲ್ಲ. ಬಹಳ ಅದ್ದೂರಿಯ ಆಭರಣದಂತೆ ಗೋಚರಿಸುತ್ತಿದ್ದು ಕೈಯಲ್ಲಿ ಹಿಡಿದಾಗ ಮಾತ್ರ ಇದರ ಭಾರದ ಅನುಭವವಾಗುತ್ತದೆ. ಒಂದು ಸರದಲ್ಲಿ 2 ಎಳೆ, 3 ಎಳೆ ಇದ್ದು ಸಮಾರಂಭಗಳಿಗೂ ಒಂದೇ ಒಂದು ಹಾರಮ್ ಧರಿಸಿದರೆ ಸಾಕು, ಎದ್ದು ಕಾಣುವ ಗುಣ ಇದಕ್ಕಿದೆ.

ಸಾಧಾರಣ ಕಂಚಿ ಸೀರೆ, ಲೆಹೆಂಗಾಕ್ಕೆ ಹೊಂದಿಕೊಳ್ಳುವ ಆಭರಣವಿದು. ಸೀರೆ ಆದಷ್ಟು ಸರಳವಾಗಿದ್ದು ಹೊಳಪು ಇರಬಾರದು. ಆಗ ಆಭರಣ ಎದ್ದು ಕಾಣುತ್ತದೆ. ಆದರೆ ಇದು ಬಹಳ ನಾಜೂಕಿನ ಅಭರಣ. ಹೀಗಾಗಿ ಚಿನ್ನದ ಪೆಟ್ಟಿಗೆಯಲ್ಲೇ ಒಯ್ಯಿರಿ. ಧರಿಸಿದ ನಂತರ ಬಹಳ ಜಾಗರೂಕತೆಯಿಂದ ತೆಗೆದಿರಿಸಿ.

ಆಭರಣದಲ್ಲಿ ದೇವತೆಗಳ ಚಿತ್ರಣ

ಇದು ಎಂದಿಗೂ ಹಳತಾಗದ, ಹೊಸತಲ್ಲದ ಎವರ್‌ಗ್ರೀನ್ ಆಭರಣ. ಹೆಸರಿನಲ್ಲಿ ಇರುವಂತೆ ಯಾವುದೇ ಆಭರಣವಾಗಿರಲಿ ಮಧ್ಯಭಾಗದಲ್ಲಿ ದೇವರ ಚಿತ್ರಣವಿದ್ದಾಗ ಆ ಆಭರಣದ ನೋಟವೇ ಬೇರೆ. ತೊಟ್ಟುಕೊಂಡ ನಾರಿಯ ಅಂದವೇ ಬೇರೆ! ಮುಖದ ಕಾಂತಿಯ ಜೊತೆಗೆ ವ್ಯಕ್ತಿತ್ವವನ್ನು ಮೇರು ಮಟ್ಟದಲ್ಲಿ ಬಿಂಬಿಸುವಂತಹ ಒಂದು ಆಭರಣ ಇದಾಗಿದೆ. ಅನ್ನಪೂರ್ಣೇಶ್ವರಿ ಕಳೆಯನ್ನು ತಂದು ಕೊಡುವಂತಹ ಅಲಂಕಾರಿಕ ಆಭರಣ ಎಂದರೆ ತಪ್ಪಾಗಲಾರದು. ಲಕ್ಷ್ಮೀ, ಸರಸ್ವತಿ, ದುರ್ಗೆ ಚಿತ್ರಣದ ಜೊತೆಗೆ ಪಾರ್ವತಿ, ಪರಮೇಶ್ವರ, ಗಣಪತಿ, ವಿಷ್ಣುವಿನ ಚಿತ್ರಣವೂ ಬಳಕೆಯಲ್ಲಿದೆ. ಶ್ರೀ ಕೃಷ್ಣನ ಬಾಲಲೀಲೆ, ರಾಧಾ ಕೃಷ್ಣ ಈಗ ಪ್ರಚಲಿತವಿರುವ ದೇವತಾ ಚಿತ್ರಣಗಳಾಗಿವೆ. ಹನುಮಂತನನ್ನು ಆರಾಧಿಸುವವರು ಹನುಮಂತನ ಚಿಕ್ಕ ಮೂರ್ತಿಯ ಚಿತ್ರಣವನ್ನು ಹೊಂದಿದ ಪದಕವನ್ನು ಧರಿಸಿ ಭಕ್ತಿಭಾವ ಮೆರೆಯಬಹುದು. ಒಟ್ಟಿನಲ್ಲಿ ಅವರವರ ಭಾವಕ್ಕೆ ಅನುಗುಣವಾಗುವಂತೆ ಆಭರಣ ಧರಿಸಬಹುದು.

ಅಕ್ಷಯ ತೃತೀಯದ ವಿಶೇಷ

ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನ ಅಕ್ಷಯ ತೃತೀಯ. ಈ ದಿನದಂದು ಹಲವು ಸತ್ಕಾರ್ಯಗಳು ನಡೆದಿವೆ ಎಂಬುದರ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ.

ಪಾರ್ವತಿ ದೇವಿಯ ಅಂಶವಾದ ಅನ್ನಪೂರ್ಣೆಯ ಜನನ, ಮಹಾವಿಷ್ಣುವು ಪರಶುರಾಮನ ಅವತಾರವನ್ನು ತಾಳಿದ ದಿನವಿದು. ಮನುಕುಲದ ಸಮಸ್ತ ಪಾಪ, ಕರ್ಮಗಳನ್ನು ತೊಡೆದು ಹಾಕಿದ ದಿನ. ಕುಬೇರನು ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮಿಗೆ ಉಪದೇಶಿಸಿದ ದಿನ, ಆದಿನಾಥನು ಸನ್ಯಾಸತ್ವವನ್ನು ತೆಗೆದುಕೊಂಡ ದಿನ. ಹೀಗಾಗಿ ಇದು ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ.

ಅಕ್ಷಯ ಎಂದರೇನು? ಕೊನೆಯಲ್ಲದ್ದು, ಅವಿನಾಶಿ. ನಾವು ದಾನ ಕೊಟ್ಟರೂ ಅದು ಅಲ್ಲಿ ಅಕ್ಷಯವಾಗುತ್ತದೆ. ಮನೆಗೆ ಲಕ್ಷ್ಮಿ (ಐಶ್ವರ್ಯ) ಯನ್ನು ಕರೆತಂದರೂ ಅವಳು ಸದಾ ಅಲ್ಲಿ ನೆಲೆಸಿರುತ್ತಾಳೆ. ಈ ದಿನದಂದು ಶುದ್ಧ ಮನಸ್ಸಿನಿಂದ ಮಾಡಿದ ಎಲ್ಲಾ ಸತ್ಕಾರ್ಯಗಳಿಗೆ ಶಕ್ತಿಯಿದ್ದು ಸದಾ ನಮ್ಮೊಂದಿಗೆ ಇರುತ್ತದೆ ಅನ್ನೋ ಒಂದು ನಂಬಿಕೆಯೂ ಇದೆ. ಅಕ್ಷಯ ತೃತೀಯದಂದು ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿದಲ್ಲಿ ಮನುಷ್ಯನ ಸುಖವು ಅಕ್ಷಯವಾಗುತ್ತದೆ. ಸನ್ಮಾರ್ಗ, ಸದ್ಬುದ್ಧಿ, ಸನ್ನಡತೆ ಈ ಮೂರೂ ಇದ್ದಾಗ ಮಾನವನ ಬದುಕು ಸಾರ್ಥಕತೆಯನ್ನು ಹೊಂದುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು