ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆಯೂ ನಡೆದಿತ್ತು ನಿರ್ದಿಷ್ಟ ದಾಳಿ

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಸೆ. 29ರಂದು ಸೇನೆ ನಡೆಸಿದ್ದು ಮೊದಲ ನಿರ್ದಿಷ್ಟ ದಾಳಿಯೇ? ಅಲ್ಲ ಎನ್ನುವ ಅಭಿಪ್ರಾಯವನ್ನು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರು ವಿದೇಶಾಂಗ ವ್ಯವಹಾರಗಳ ಸಂಸತ್‌ ಸ್ಥಾಯಿ ಸಮಿತಿಯ ಮುಂದೆ ವ್ಯಕ್ತಪಡಿಸಿದ್ದಾರೆ.

‘ಭಯೋತ್ಪಾದನೆಯ ವಿರುದ್ಧ ಸೇನೆಯು ವೃತ್ತಿಪರ, ಗುರಿ ನಿರ್ದಿಷ್ಟ, ಸೀಮಿತ ಮತ್ತು ಕರಾರುವಾಕ್‌ ಲೆಕ್ಕಾಚಾರದ ದಾಳಿಯನ್ನು ಹಿಂದೆಯೂ ನಡೆಸಿತ್ತು’ ಎಂದು ಜೈಶಂಕರ್‌ ಹೇಳಿದ್ದಾರೆ.

ಜೈಶಂಕರ್‌ ಅವರು ‘ನಿರ್ದಿಷ್ಟ ದಾಳಿ’ ಎಂಬ ಪದವನ್ನು ಬಳಸಿಲ್ಲ. ಆದರೆ ಅವರು ನೀಡಿದ ವಿವರಣೆ ಅಂತಹುದೇ ಕಾರ್ಯಾಚರಣೆಯನ್ನು ಸೂಚಿಸುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮೂಲವೊಂದು ತಿಳಿಸಿದೆ.

ಸೇನೆಯ ಉಪ ಮುಖ್ಯಸ್ಥ ಬಿಪಿನ್‌ ರಾವತ್‌ ಅವರೂ ಸಮಿತಿಗೆ ಮಾಹಿತಿ ನೀಡಿದರು. ಗಡಿ ನಿಯಂತ್ರಣ ರೇಖೆದಾಟಿ ಹೋಗಿ ಹಿಂದೆಯೂ  ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಈ ಬಾರಿ ಮಾತ್ರ ಈ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ನೇತೃತ್ವದ ಸಮಿತಿಗೆ ನಿರ್ದಿಷ್ಟ ದಾಳಿ ಮತ್ತು ಅದರಿಂದಾದ ರಾಜತಾಂತ್ರಿಕ ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ಲೆ. ಜ. ರಾವತ್‌, ಜೈಶಂಕರ್‌ ಅವರಲ್ಲದೆ, ರಕ್ಷಣಾ ಕಾರ್ಯದರ್ಶಿ ಜಿ. ಮೋಹನ್ ಕುಮಾರ್‌, ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ಕೆ.ಕೆ. ಶರ್ಮ ಮತ್ತು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಎಂ.ಕೆ ಸಿಂಗ್ಲಾ ಅವರು ಮಾಹಿತಿ ನೀಡಿದರು.

ರಕ್ಷಣೆಯ ಸಂಸತ್‌ ಸ್ಥಾಯಿ ಸಮಿತಿಗೆ  ಕಳೆದ ವಾರ ಸೇನೆ ಮತ್ತು ಸರ್ಕಾರದ ಅಧಿಕಾರಿಗಳು ನಿರ್ದಿಷ್ಟ ದಾಳಿ ಬಗ್ಗೆ ಮಾಹಿತಿ ನೀಡಿದ್ದರು. ಆಗ ಸದಸ್ಯರ ಪ್ರಶ್ನೆಗೆ ಅವಕಾಶ ನೀಡಿರಲಿಲ್ಲ. ಆದರೆ ಮಂಗಳವಾರದ ಮಾಹಿತಿ ನೀಡಿಕೆ ಸಭೆಯಲ್ಲಿ ಸದಸ್ಯರು ಪ್ರಶ್ನೆಗಳನ್ನು ಕೇಳಿದ್ದಾರೆ.

ಕಾಂಗ್ರೆಸ್‌ನ ಸತ್ಯವ್ರತ ಚತುರ್ವೇದಿ ಮತ್ತು ಸಿಪಿಎಂನ ಮೊಹಮ್ಮದ್‌ ಸಲೀಂ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದರು. ನಿರ್ದಿಷ್ಟ ದಾಳಿಯನ್ನು ಪ್ರಧಾನಿ ಮೋದಿ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸಭೆಯಲ್ಲಿ ಯಾವುದೇ ಪ್ರಶ್ನೆ ಕೇಳಲಿಲ್ಲ.

ನಿರ್ದಿಷ್ಟ ದಾಳಿಯು ವಿರೋಧಿಗಳ ಮನಸ್ಸಿನಲ್ಲಿ ಅನಿಶ್ಚಿತತೆ ಮೂಡಿಸಿದೆ. ಮುಂದೆಯೂ ಇಂತಹ ದಾಳಿ ನಡೆಯಬಹುದು ಎಂಬ ಅಂಜಿಕೆಯೂ ಅವರಲ್ಲಿ ಉಂಟಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದರು.

ಉಗ್ರರ ಶಿಬಿರಗಳನ್ನು ನಾಶ ಮಾಡುವುದು ನಿರ್ದಿಷ್ಟ ದಾಳಿಯ ಉದ್ದೇಶವಾಗಿತ್ತೇ ಹೊರತು ಸಾಕ್ಷ್ಯ ಸಂಗ್ರಹ ಅಲ್ಲ ಎಂದೂ ಸ್ಪಷ್ಟಪಡಿಸಲಾಯಿತು.

ನಿರ್ದಿಷ್ಟ ದಾಳಿಯ ರಾಜತಾಂತ್ರಿಕ ಪರಿಣಾಮ ಏನು ಎಂಬುದನ್ನು ತಿಳಿಯಲು ಎಐಎಡಿಎಂಕೆಯ ಪಿ.ಆರ್‌. ಸೆಂಥಿಲ್‌ನಾಥನ್‌ ಮತ್ತು ಡಿಎಂಕೆಯ ಕನಿಮೊಳಿ ಬಯಸಿದರು.

ಪಾಕಿಸ್ತಾನದ ಜತೆಗಿನ ಸಾಂಸ್ಕೃತಿಕ ಸಂಬಂಧವನ್ನು ಸರ್ಕಾರ ನಿಷೇಧಿಸಿಲ್ಲ. ಅಂತಹ ಯೋಚನೆಯೂ ಇಲ್ಲ ಎಂದು ಜೈಶಂಕರ್‌ ತಿಳಿಸಿದರು.

ಪಾಕಿಸ್ತಾನ ಜತೆಗೆ ಮಾತುಕತೆ ಪುನರಾರಂಭಕ್ಕೆ ಯಾವುದೇ ವೇಳಾಪಟ್ಟಿ ನಿಗದಿಪಡಿಸಲಾಗಿಲ್ಲ. ಆದರೆ ಆ ದೇಶದ ಜತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT