ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದ ಹೀರೊ ಫಿಡೆಲ್ ಕ್ಯಾಸ್ಟ್ರೊ

ವಸಾಹತು ಆಡಳಿತ, ವರ್ಣಭೇದ ನೀತಿಯ ವಿರುದ್ಧದ ಹೋರಾಟದ ಹಿಂದಿನ ಶಕ್ತಿ
Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಡರ್ಬನ್, ದಕ್ಷಿಣ ಆಫ್ರಿಕಾ: ‘ನಿಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದ ಜೀವನದಲ್ಲಿ ನೀವು ತೃಪ್ತರಾಗಿದ್ದೀರಿ ಎಂದರೆ ನಿಮ್ಮಲ್ಲಿನ ಭಾವಾವೇಶ ಕುಸಿದು ಹೋಗಿದೆ ಎಂದರ್ಥವಲ್ಲ’ ಎಂದು ಆಫ್ರಿಕಾ ಸ್ವಾತಂತ್ರ್ಯ ಹೋರಾಟದ ನಾಯಕ ನೆಲ್ಸನ್ ಮಂಡೇಲಾ ಒಮ್ಮೆ ಬರೆದಿದ್ದರು. ಇತ್ತೀಚೆಗೆ ನಿಧನರಾದ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಅವರನ್ನು ಉದ್ದೇಶಿಸಿಯೇ ಮಂಡೇಲಾ ಅವರು ಈ ಪದಗಳನ್ನು ಬರೆದಿರಬೇಕು.

ಕ್ಯಾಸ್ಟ್ರೊ ಅವರನ್ನು ನಿರ್ಲಕ್ಷಿಸುವುದಕ್ಕೆ ಅಥವಾ ತಳ್ಳಿ ಹಾಕುವುದಕ್ಕೆ ಯಾವ ಅವಕಾಶವೂ ಇಲ್ಲ. ಅವರನ್ನು ಪ್ರೀತಿಸಬೇಕು ಇಲ್ಲ ದ್ವೇಷಿಸಬೇಕು. ಶತ್ರುಗಳಿಗೆ ಅವರೊಬ್ಬ ನಿರಂಕುಶಾಧಿಕಾರಿ. ಆದರೆ ವರ್ಣಭೇದ ನೀತಿಯಡಿ ನಲುಗಿದ ದಕ್ಷಿಣ ಆಫ್ರಿಕನ್ನರಿಗೆ ಅವರು ಸ್ವಾತಂತ್ರ್ಯದ ದೀಪ.

ಕ್ಯಾಸ್ಟ್ರೊ ಮತ್ತು ಮಂಡೇಲಾ ನಡುವೆ ಹಾಗೂ ಕ್ಯೂಬಾ ಮತ್ತು ದಕ್ಷಿಣ ಆಫ್ರಿಕಾ ಜನರ ನಡುವಣ ನಂಟು 1950ರ ದಶಕದ ಕೊನೆಯ ಭಾಗದಲ್ಲಿ ಆರಂಭವಾಗುತ್ತದೆ.

ಅಲ್ಪಸಂಖ್ಯಾತ ಬಿಳಿಯರ ಆಡಳಿತದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ಮಾನವ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿದ್ದ 156 ಮಂದಿಯ ವಿರುದ್ಧ 1956ರಲ್ಲಿ ದೇಶದ್ರೋಹದ ದೋಷಾರೋಪ ಹೊರಿಸಲಾಯಿತು. ದಕ್ಷಿಣ ಆಫ್ರಿಕಾದ ವಿವಿಧ ವರ್ಗಗಳ ಮತ್ತು ವಿವಿಧ ಭಾಗಗಳ ಜನರು ಇದರಲ್ಲಿ ಸೇರಿದ್ದರು.

ಈ ದೇಶದ್ರೋಹ ಪ್ರಕರಣದ ವಿಚಾರಣೆ ನಾಲ್ಕು ವರ್ಷಗಳ ಕಾಲ ನಡೆಯಿತು; ದಕ್ಷಿಣ ಆಫ್ರಿಕಾ ಮೂವತ್ತು ವರ್ಷಗಳ ಕಾಲ ಬಿಳಿಯರ ದಮನ ಮತ್ತು ಕಪ್ಪು ವರ್ಣೀಯರು ಅದಕ್ಕೆ ಒಡ್ಡಿದ ಪ್ರತಿರೋಧದ ಸರಪಣಿಯಲ್ಲಿ ನಲುಗಿತು. (1956ರ ಪ್ರಕರಣದಲ್ಲಿ ನಾನು ಆರೋಪಿ ಆಗಿರಲಿಲ್ಲ. ಆದರೆ 1960ರ ದಶಕದ ಮಧ್ಯದ ಅವಧಿಯಿಂದ ನಾನೂ ಮಂಡೇಲಾ ಅವರ ಜತೆ ರಾಬೆನ್ ದ್ವೀಪದಲ್ಲಿ 12 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದೇನೆ).

1953ರ ಜುಲೈ 26ರಂದು ಕ್ಯಾಸ್ಟ್ರೊ ಮತ್ತು ಅವರ 140 ಕಾಮ್ರೇಡ್‌ಗಳು ಮೊಂಕಾಡ ಸೇನಾನೆಲೆ (ಕ್ಯೂಬಾದ ಸ್ಯಾಂಟಿಯಾಗೊದಲ್ಲಿರುವ ಸೇನಾ ನೆಲೆ, ಮೊಂಕಾಡೊ ಬ್ಯಾರಕ್‌ನ ಮೇಲೆ ನಡೆದ ದಾಳಿಯನ್ನು ಕ್ಯೂಬಾ ಕ್ರಾಂತಿಯ ಆರಂಭ ಎಂದು ಪರಿಗಣಿಸಲಾಗುತ್ತದೆ) ಮೇಲೆ ವಿಫಲ ದಾಳಿ ನಡೆಸಿದರು ಎಂಬ ವಿಚಾರ ದೇಶದ್ರೋಹ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರರಿಗೆ ತಿಳಿಯಿತು.

ವಿಫಲ ದಾಳಿಯ ವಿಚಾರಣೆ ಸಂದರ್ಭದಲ್ಲಿ (ದಾಳಿ ವಿಫಲವಾದ ನಂತರ ಕ್ಯಾಸ್ಟ್ರೊ ಅಲ್ಲಿಂದ ತಪ್ಪಿಸಿಕೊಂಡರೂ ನಂತರ ಅವರನ್ನು ಸೆರೆ ಹಿಡಿಯಲಾಯಿತು) ತಮ್ಮ ಮೇಲೆ ಹೊರಿಸಲಾಗಿದ್ದ ಯಾವುದೇ ಆರೋಪವನ್ನು ಕ್ಯಾಸ್ಟ್ರೊ ನಿರಾಕರಿಸಲಿಲ್ಲ. ಪ್ರಜಾಪ್ರಭುತ್ವದ ಪರ ನಿಂತಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.
‘ಇತಿಹಾಸ ನನ್ನನ್ನು ನಿರಪರಾಧಿ ಎಂದು ಘೋಷಿಸುತ್ತದೆ’ ಎಂದು ವೀರೋಚಿತವಾಗಿ ಹೇಳುವ ಮೂಲಕ ಕ್ಯಾಸ್ಟ್ರೊ ತಮ್ಮ ವಾದವನ್ನು ಕೊನೆಗೊಳಿಸಿದರು.

ಈ ಸಂದೇಶ ನಮ್ಮ 156 ನಾಯಕರು ಮಾತ್ರವಲ್ಲ ನನ್ನಂತಹ ಯುವ ಹೋರಾಟಗಾರರ ಮನಸಿನಲ್ಲಿ ಅನುರಣಿಸಿತು. ಮೊಂಕಾಡ ಬ್ಯಾರಕ್ ಮೇಲೆ ನಡೆಸಿದ ದಾಳಿ ತನ್ನ ತಕ್ಷಣದ ಗುರಿಯನ್ನು ತಲುಪಲು ವಿಫಲವಾದರೂ ಹೊಸ ಜನರನ್ನು ಸೇರಿಸಿಕೊಳ್ಳಲು ನೆರವಾಯಿತು. ಜುಲೈ 26ರ ಚಳವಳಿ ಎಂದೇ ಹೆಸರಾಗಿರುವ ಕ್ಯೂಬಾ ಕ್ರಾಂತಿಯ  ಯಶಸ್ಸಿಗೆ ಕಾರಣವಾಯಿತು. ಕ್ಯಾಸ್ಟ್ರೊ ಮತ್ತು ಅವರ ಜುಲೈ 26ರ ಚಳವಳಿ ವಿಜಯಿಯಾಗಿದೆ ಮತ್ತು ಕ್ಯೂಬಾದ ನಿರಂಕುಶಾಧಿಕಾರಿ ಫುಲ್‍ಗೆನ್ಸಿಯೊ ಬಟಿಸ್ಟ ಪಲಾಯನ ಮಾಡಿದ್ದಾರೆ ಎಂಬ ಸುದ್ದಿ 1959ರ ಜನವರಿ 1ರಂದು ಬೆಳಗ್ಗೆ ನಿದ್ದೆಯಿಂದ ಏಳುವಾಗ ನಮ್ಮ ಕಿವಿಗೆ ಬಿತ್ತು.

ಸೀಮಿತವಾದ ಬದುಕಿನ ಬಗ್ಗೆ ಯಾವ ಆಸಕ್ತಿಯೂ ಇಲ್ಲದಿದ್ದ ಈ ವ್ಯಕ್ತಿಯ ನಾಯಕತ್ವ ಹೀಗೆ ಆರಂಭಗೊಂಡಿತು. ಬಲಾಢ್ಯ ಅಮೆರಿಕದ ಹೊಸ್ತಿಲಲ್ಲಿರುವ ಬಡ ದ್ವೀಪದಲ್ಲಿ ಬದುಕಿದರೂ ಜಗತ್ತಿನ ಇತಿಹಾಸದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಅವರು ಮೂಡಿಸಿದರು.

ಕ್ಯಾಸ್ಟ್ರೊ ಮತ್ತು ಕ್ಯೂಬಾದ ಜನರು ಹಾಗೂ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಅಷ್ಟೇ ಅಲ್ಲದೆ, ನಮ್ಮ ಇಡೀ ಖಂಡದ ಜನರೊಂದಿಗೆ ಅವರ ಪ್ರೀತಿಯ ಆರಂಭ ಅದು. ತನ್ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದುಕೊಂಡಿದ್ದ ಕ್ಯಾಸ್ಟ್ರೊ ಅವರಿಗಾಗಿ ದಕ್ಷಿಣ ಆಫ್ರಿಕಾದಲ್ಲಿ ಇಂದು ದುಃಖಾಚರಣೆ ನಡೆಯುತ್ತಿದೆ.

1966ರಲ್ಲಿ ಹವಾನಾದಲ್ಲಿ ಮೂರು ಖಂಡಗಳಲ್ಲಿನ ದೇಶಗಳ ಸಮಾವೇಶ ನಡೆದಾಗ ಈ ಪ್ರೇಮ ಅರಳಿ ಪಸರಿಸಿತು. ಸಮಾವೇಶದಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಸ್ವಾತಂತ್ರ್ಯ ಹೋರಾಟದ ಮುಖಂಡರು ಭಾಗವಹಿಸಿದ್ದರು.

1970 ಮತ್ತು 1980ರ ದಶಕಗಳಲ್ಲಿ ಕ್ಯಾಸ್ಟ್ರೊ ಅವರ ಕ್ಯೂಬಾ ಮತ್ತು ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟದ ನಡುವಣ ಸಂಬಂಧ ಇನ್ನಷ್ಟು ಆಳಕ್ಕೆ ಬೇರುಬಿಟ್ಟಿತು. ದಕ್ಷಿಣ ಆಫ್ರಿಕನ್ನರಿಗೆ ಸೇನಾ ತರಬೇತಿ ಮತ್ತು ಇತರ ನೆರವನ್ನು ಕ್ಯೂಬಾ ಒದಗಿಸಿತು.

1987ರಲ್ಲಿ ಕ್ಯಾಸ್ಟ್ರೊ ಅವರನ್ನು ಭೇಟಿಯಾಗುವ ಭಾಗ್ಯ ನನಗೆ ದೊರೆಯಿತು. ವರ್ಣಭೇದ ನೀತಿಯ ವಿರುದ್ಧ ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಉಲಾ ಕಾರ್ಯಾಚರಣೆ ನಡೆಸಲು ಕ್ಯೂಬಾ ನನಗೆ ನೆರವಾಯಿತು. ದೇಶದೊಳಗೆ ಒಂದು ಗುಂಪು ರಹಸ್ಯವಾಗಿ ಕೆಲಸ ಮಾಡುತ್ತಿತ್ತು. ಅದರಿಂದಾಗಿ ದಕ್ಷಿಣ ಆಫ್ರಿಕಾದ ದೇಶಭ್ರಷ್ಟವಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ದೇಶದೊಳಕ್ಕೆ ನುಸುಳಿದರು.

ಆಗ ಕ್ಯಾಸ್ಟ್ರೊ ಅವರು ನಮ್ಮಲ್ಲಿ ತುಂಬಿದ್ದ ಚೈತನ್ಯ ಈಗಲೂ ನನಗೆ ಭಾಸವಾಗುತ್ತಿದೆ. ಉಲಾ ಕಾರ್ಯಾಚರಣೆಯ ಕಮಾಂಡರ್ ಆಗಿದ್ದ ನಾನು ನೆರವಿಗಾಗಿ ಮಾಡಿದ್ದ ಮನವಿಗೆ ಅವರು ಮುಕ್ತವಾಗಿ ಸ್ಪಂದಿಸಿದ್ದು ಈಗಲೂ ನನ್ನ ನೆನಪಿನಲ್ಲಿ ಇದೆ. ತಮ್ಮ ಅಧಿಕಾರ ಮತ್ತು ಶಕ್ತಿ ತಮ್ಮ ಮುಂದೆ ಇರುವವರಿಗೆ ತಿಳಿಯಬೇಕು ಎಂಬ ಯಾವ ಭಾವವೂ ಅವರಲ್ಲಿ ಇರಲಿಲ್ಲ. ಅವರ ಜತೆಯಲ್ಲಿದ್ದಾಗ ನನ್ನ ಒಳ್ಳೆಯತನ ಇನ್ನಷ್ಟು ವೃದ್ಧಿಯಾಯಿತು ಎಂಬ ಭಾವನೆ ನನ್ನಲ್ಲಿ ಮೂಡಿತು. ಒಳ್ಳೆಯತನ ಎಂದರೆ, ಇತರರ ಜೀವನದಲ್ಲಿ ಒಳ್ಳೆಯದಾಗಬೇಕು ಎಂದು ಯೋಚಿಸುವುದನ್ನು ಎಂದೂ ನಿಲ್ಲಿಸಲು ಬಯಸದ ಭಾವನೆ.

ಕ್ಯಾಸ್ಟ್ರೊ ಮತ್ತು ಕ್ಯೂಬಾದ ಜನರ ಜತೆಗೆ ನಡೆಸಿದ ಸಂವಹನಗಳು ನಮ್ಮ ಸ್ವಾತಂತ್ರ್ಯ ಹೋರಾಟ ಎಷ್ಟು ಮಹತ್ವದ್ದು ಎಂಬ ನಮ್ಮ ಗ್ರಹಿಕೆಯನ್ನು ಇನ್ನಷ್ಟು ದೃಢಪಡಿಸಿದವು. 1970 ಮತ್ತು 80ರ ದಶಕಗಳಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ) ಮತ್ತು ಅದರ ಸೇನಾ ಘಟಕದ ಮುಖ್ಯ ಶಿಬಿರಗಳು ಅಂಗೋಲಾ ಗಣರಾಜ್ಯದಲ್ಲಿ ನಡೆದವು. ನಮೀಬಿಯಾ ಸ್ವಾತಂತ್ರ್ಯ ಹೋರಾಟದ ಶಿಬಿರಗಳೂ ಅಲ್ಲಿಯೇ ನಡೆಯುತ್ತಿದ್ದವು.

1974ರಲ್ಲಿ ಅಂಗೋಲಾ ಸ್ವಾತಂತ್ರ್ಯ ಪಡೆದ ನಂತರ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಸರ್ಕಾರ ತನ್ನ ಸೇನಾ ಬಲವನ್ನು ಬಳಸಿಕೊಂಡು ಅಂಗೋಲಾ ಸರ್ಕಾರವನ್ನು ಪದಚ್ಯುತಗೊಳಿಸಲು ಯತ್ನಿಸತೊಡಗಿತು. ಕ್ಯೂಬಾ ಸೈನಿಕರು ರಕ್ಷಣೆಗೆ ಬಂದದ್ದೇ ಅಂಗೋಲಾದ ಸ್ವಾತಂತ್ರ್ಯ ಉಳಿಯಲು ಕಾರಣ; ಅಂಗೋಲಾ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಜನರ ಸ್ವಾತಂತ್ರ್ಯಕ್ಕೆ ಕ್ಯೂಬಾದ ಸೈನಿಕರು ಜೀವ ತೆತ್ತರು. ಈ ಯೋಧರ ರಕ್ತ ನನ್ನ ಖಂಡದ ಮಣ್ಣಿನೊಳಗೆ ಸೇರಿಕೊಂಡಿದೆ.

ಅಂಗೋಲಾದಲ್ಲಿ ನಡೆದ ಕ್ವಿಟೊ ಕ್ಯುವನವೇಲ್ ಯುದ್ಧ ಆಫ್ರಿಕಾದ ನೆಲದಲ್ಲಿ ನಡೆದ ಅತ್ಯಂತ ದೀರ್ಘವಾದ ಸಮರ. 1987ರಿಂದ 1988ರವರೆಗೆ ನಡೆದ ಈ ಯುದ್ಧದಲ್ಲಿ ಅಂಗೋಲಾ ಸ್ವಾತಂತ್ರ್ಯಕ್ಕೆ ಹೋರಾಡಲು ಕ್ಯಾಸ್ಟ್ರೊ ತಮ್ಮ ಪಡೆಗಳನ್ನು ಕಳುಹಿಸಿದ್ದರು.

ವರ್ಣಭೇದ ನೀತಿ ಅನುಸರಿಸುತ್ತಿದ್ದ ಸರ್ಕಾರದ ಸೇನಾ ಮಹತ್ವಾಕಾಂಕ್ಷೆಯನ್ನು ಈ ಘೋರ ಯುದ್ಧ ಕೊನೆಗೊಳಿಸಿತು. ಅಮೆರಿಕದ ಮಧ್ಯಸ್ಥಿಕೆಯಲ್ಲಿ 1988ರಲ್ಲಿ ಶಾಂತಿ ಒಪ್ಪಂದ ಇದರಿಂದಾಗಿ ಸಾಧ್ಯವಾಯಿತು. ಈ ಒಪ್ಪಂದದಿಂದಾಗಿ ಅಂಗೋಲಾದಲ್ಲಿದ್ದ ವಿದೇಶಿ ಸೈನಿಕರನ್ನು ಹಿಂದಕ್ಕೆ ಕಳುಹಿಸಲಾಯಿತು. ನಮೀಬಿಯಾದ ಸ್ವಾತಂತ್ರ್ಯಕ್ಕೂ ಇದು ಕಾರಣವಾಯಿತು.

ಅಂಗೋಲಾದಲ್ಲಿದ್ದ ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್‌ನ  ಶಿಬಿರಗಳನ್ನು ಮುಚ್ಚುವುದು ಕೂಡ ಒಪ್ಪಂದಗಳ ಷರತ್ತಿನಲ್ಲಿ ಸೇರಿತ್ತು. ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಪಡೆ ಮತ್ತು ವರ್ಣಭೇದ ನೀತಿಯ ಸರ್ಕಾರದ ನಡುವೆ ಅಲ್ಪಸಂಖ್ಯಾತ ಬಿಳಿಯರ ಸರ್ಕಾರದ ಬದಲಿಗೆ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪನೆಯ ಸಂಧಾನ ನಡೆಯಲೂ ಇದು ಕಾರಣವಾಯಿತು.

ತಮ್ಮ ಆತ್ಮಕತೆಯ ಮುಂದುವರಿದ ಭಾಗವಾದ ‘ಲಾಂಗ್ ವಾಕ್ ಟು ಫ್ರೀಡಂ’ ಕೃತಿಯಲ್ಲಿ ನೆಲ್ಸನ್ ಮಂಡೇಲಾ ಹೀಗೆ ಬರೆದಿದ್ದಾರೆ: ‘ಶತ ಶತಮಾನಗಳಿಂದ ಜಗತ್ತಿನಾದ್ಯಂತ ಜನರು ಹುಟ್ಟುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ಕೆಲವರು ಏನನ್ನೂ ಬಿಟ್ಟು ಹೋಗುವುದಿಲ್ಲ. ಅವರ ಹೆಸರು ಕೂಡ ಅಲ್ಲಿ ಉಳಿಯುವುದಿಲ್ಲ. ಅವರು ಎಂದೂ ಅಸ್ತಿತ್ವದಲ್ಲಿ ಇರಲೇ ಇಲ್ಲ ಅನಿಸಿಬಿಡುತ್ತದೆ’.

ಫಿಡೆಲ್ ಕ್ಯಾಸ್ಟ್ರೊ ಎಂಬ ವ್ಯಕ್ತಿ ಒಂದು ಕಾಲದಲ್ಲಿ ಇದ್ದರು ಎಂಬುದನ್ನು ಜಗತ್ತು ಸದಾ ನೆನಪಿನಲ್ಲಿ ಇರಿಸಿಕೊಳ್ಳುತ್ತದೆ. ಆಫ್ರಿಕಾದ ಜನರು ಎಂದೂ ಕ್ಯಾಸ್ಟ್ರೊ ಅವರನ್ನು ಮರೆಯುವುದಿಲ್ಲ. ವಸಾಹತುಶಾಹಿಯ ವಿರುದ್ಧ ಮತ್ತು ವರ್ಣಭೇದ ನೀತಿಯ ವಿರುದ್ಧ ಹೊಂದಿದ್ದ ಅಚಲ ನಂಬಿಕೆಯಿಂದಾಗಿ ಅವರು ದಕ್ಷಿಣ ಆಫ್ರಿಕಾದ ಜನರ ಮನಸ್ಸಿನಲ್ಲಿ ಪೂಜನೀಯ ಸ್ಥಾನ ಹೊಂದಿದ್ದಾರೆ.

ಲೇಖಕ ವರ್ಣಭೇದ ನೀತಿ ಕೊನೆಗೊಳಿಸಲು 1991ರಿಂದ 94ರ ವರೆಗೆ ನಡೆದ ಸಂಧಾನ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದರು. ನಂತರ ಅವರು ನೆಲ್ಸನ್ ಮಂಡೇಲಾ ನೇತೃತ್ವದ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು.
-ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT