ಮಂಗಳವಾರ, ಆಗಸ್ಟ್ 4, 2020
22 °C

ಕನಸಿನಲ್ಲಿ ಮರಣ ಪಯಣ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಕನಸಿನಲ್ಲಿ ಮರಣ ಪಯಣ

ನಿರ್ಮಾಣ: ಗಿರಿಧರ್, ರಾಜಶೇಖರ್

ನಿರ್ದೇಶನ: ಭರತ್ ನಂದಾ

ತಾರಾಗಣ: ತೇಜಸ್ವಿನಿ, ಶ್ರೀಧರ್, ರಾಘವ್ ನಾಗ್, ಸತ್ಯ

ಕನಸು ಹಾಗೂ ವಾಸ್ತವವನ್ನು ಮುಖಾಮುಖಿಯಾಗಿಸುವ ಚಿತ್ರಗಳು ತಂತ್ರದ ಕಾರಣಕ್ಕೆ ಇಷ್ಟವಾಗುತ್ತವೆ. ಈ ನಿಟ್ಟಿನಲ್ಲಿ ಮೊದಲು ನೆನಪಾಗುವುದು ‘ರೂಬರೂ’ ಹಿಂದಿ ಸಿನಿಮಾ. ಆ ಚಿತ್ರದ ಆತ್ಮ ಹಿಡಿದುಕೊಂಡು ದಯಾಳ್ ಪದ್ಮನಾಭನ್ ಕನ್ನಡದಲ್ಲಿ ‘ಶ್ರೀಹರಿಕಥೆ’ ಎಂಬ ಚಿತ್ರವನ್ನು ಈ ಹಿಂದೆ ನಿರ್ದೇಶಿಸಿದ್ದರು.

ಅರ್ಧ ಚಿತ್ರದಲ್ಲಿ ನಡೆಯುವುದೆಲ್ಲ ಕನಸು; ಇನ್ನರ್ಧ ವಾಸ್ತವ. ಕನಸಿನಲ್ಲಿ ಕಂಡ ಸನ್ನಿವೇಶಗಳೇ ವಾಸ್ತವದಲ್ಲಿಯೂ ಮರುಕಳಿಸಿದರೆ ಪಾತ್ರಗಳ ಸ್ಥಿತಿ ಹೇಗಾಗಬೇಡ? ‘ಡೈಯಾನ ಹೌಸ್’ ಶೇ 99ರಷ್ಟು ಕನಸನ್ನು ತೋರಿಸಿ, ಇನ್ನೊಂದು ಭಾಗ ಮಾತ್ರ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಇದನ್ನು ತರ್ಕಕ್ಕೆ ಒಗ್ಗಿಸಲು ನಿರ್ದೇಶಕರು ಮಾಡಿಕೊಂಡ ಅನುಕೂಲ ಎಂದೆನ್ನಬಹುದೇ ವಿನಾ ಕನಸು–ವಾಸ್ತವದ ಸಶಕ್ತ ದರ್ಶನ ಎನ್ನಲಾಗದು.

ಚಿತ್ರದ ಶೀರ್ಷಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾವಿನ ಪಯಣವನ್ನು ಸಾರುವ ಉದ್ದೇಶ ಅರಿವಿಗೆ ಬರುತ್ತದೆ. ಡಯಾನ ಎಂಬಾಕೆ ಗಂಡನಿಲ್ಲದ ಹೊತ್ತಿನಲ್ಲಿ ಭವ್ಯ ಬಂಗಲೆಯಲ್ಲಿ ಪ್ರಿಯಕರನ ಜತೆ ಕೇಳಿಯಾಡುತ್ತಾಳೆ. ಅದನ್ನು ಅರಿಯಲು ಅವಳ ಗಂಡ ಗುಪ್ತ ಕ್ಯಾಮೆರಾ ಅಳವಡಿಸುತ್ತಾನೆ. ಸತ್ಯ ಗೊತ್ತಾದಮೇಲೆ ಚಾಕುವಿನಿಂದ ಅವಳ ಹೊಟ್ಟೆಗೆ ಇರಿಯುತ್ತಾನೆ. ಕಪಾಟಿನಲ್ಲಿ ಅವಿತು ಅವಳು ಕದವಿಕ್ಕಿಕೊಳ್ಳುತ್ತಾಳೆ. ಆ ಕದಕ್ಕೆ ಶಿಲುಬೆಯಾಕಾರವನ್ನೇ ಚಿಲಕದಂತೆ ಸಿಕ್ಕಿಸಿಬಿಟ್ಟು, ತಾನೂ ನೇಣುಹಾಕಿಕೊಳ್ಳುತ್ತಾನೆ. ಸಂಸ್ಕಾರವಾಗದ ಡಯಾನಾಳ ದೇಹದಿಂದ ಆತ್ಮ ಮನೆಯಲ್ಲಿ ಅಡ್ಡಾಡುತ್ತದೆ. ಆ ಮನೆಯನ್ನು ಕೊಳ್ಳಲು ಹೋದವರನ್ನು ಅದು ಮುಗಿಸುತ್ತಾ ಹೋಗುತ್ತದೆ.

ಇದು ಸಿನಿಮಾದಲ್ಲಿ ವಿವರವಾಗಿ ನೋಡಸಿಕ್ಕುವ ಕಥೆ. ಈ ಕಥೆ ನಾಯಕಿಗೆ ಕನಸಾಗಿ ಬೀಳುತ್ತದೆ ಎಂದು ಕೊನೆಯಲ್ಲಿ ಗೊತ್ತಾಗುತ್ತದೆ. ಅದಕ್ಕೂ ಮೊದಲು ಇನ್ನೊಂದು ಭೂತದ ಮನೆಯ ಕನಸನ್ನು ತೋರಿಸಿ, ಈ ನಾಯಕಿಯ ಹಣೆಬರಹವೇ ಕನಸು ಕಾಣುವುದು ಎಂದು ನಿರ್ದೇಶಕರು ಭೂಮಿಕೆಯನ್ನೂ ಹಾಕಿಕೊಟ್ಟಿದ್ದಾರೆ. ಈ ನಿರೂಪಣೆಯ ತಂತ್ರದಿಂದ ‘ಹೀಗಾ ವಿಷಯ’ ಎಂದು ಪ್ರೇಕ್ಷಕ ಹೇಳಿಕೊಳ್ಳಬಹುದಾದರೂ ಅದುವರೆಗೆ ನೋಡಿದ ಕಥಾನಕದಲ್ಲಿ ಹೊಸತನವೇನೂ ದಕ್ಕುವುದಿಲ್ಲ. ಈ ‘ಹಾರರ್ ಥ್ರಿಲ್ಲರ್’ ಸಿನಿಮಾದಲ್ಲಿ ಕೆಲವು ನಿಮಿಷಗಳಷ್ಟು ಅನಗತ್ಯ ಹಾಸ್ಯವಿದೆ. ಎಷ್ಟು ಕಷ್ಟಪಟ್ಟರೂ ಅದು ನಗು ತರಿಸುವುದಿಲ್ಲ ಎನ್ನುವುದು ಬೇರೆ ಮಾತು.

ಬಹುಕಾಲದ ನಂತರ ನಟಿ ತೇಜಸ್ವಿನಿ ಅವರಿಗೆ ಅಭಿನಯಿಸುವ ದೊಡ್ಡ ಅವಕಾಶ ಸಿಕ್ಕಿದೆ. ‘ಸಿದ್ಲಿಂಗು’ ಶ್ರೀಧರ್‌ ಅವರಿಗೆ ಸತತ ಎರಡನೇ ವಾರ ಭೂತದ ಚಿತ್ರದಲ್ಲಿ ಅಭಿನಯಿಸಿದ ಭಾಗ್ಯ (ಮಮ್ಮಿ ಚಿತ್ರದಲ್ಲೂ ಅವರು ನಟಿಸಿದ್ದರು). ಸಣ್ಣ ಪಾತ್ರದಲ್ಲಿ ಸತ್ಯ ಅವರ ಅಭಿನಯ ಚೆನ್ನಾಗಿದೆ. ನೋಬಿನ್ ಪಾಲ್ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ ಒದಗಿಬಂದಿರುವ ಅವಕಾಶ ಬಳಸಿಕೊಂಡಿರುವುದಕ್ಕೆ ಸಾಕ್ಷಿಗಳನ್ನು ಉಳಿಸಿವೆ.

ಭೂತಚೇಷ್ಟೆಯ ಕಥಾನಕಗಳನ್ನು ರೋಮಾಂಚನ ಹುಟ್ಟಿಸುವ ‘ಫ್ಯಾಂಟಸಿ’ಯ ಮಟ್ಟಕ್ಕೆ ಕನ್ನಡ ಚಿತ್ರರಂಗ ಏರಿಸಲು ಇನ್ನೆಷ್ಟು ವರ್ಷಗಳು ಬೇಕೋ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.