ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡಾರ, ರುಬೆಲ್ಲಾ ಲಸಿಕೆ ಕೊಡಿಸಲು ಹಿಂಜರಿಕೆ ಬೇಡ

ಸಂಪಾದಕೀಯ
Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಜೀವವನ್ನೇ ಬಲಿ ತೆಗೆದುಕೊಳ್ಳುವ ಅಥವಾ ಜೀವನವಿಡೀ ನರಳುವಂತೆ ಮಾಡುವಷ್ಟು ಗಂಭೀರ ಕಾಯಿಲೆಗಳಾದ ದಡಾರ ಮತ್ತು ರುಬೆಲ್ಲಾ  (ಎಂಆರ್‌) ವಿರುದ್ಧ ಲಸಿಕಾ  ಅಭಿಯಾನ ಶುರುವಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಲಕ್ಷದ್ವೀಪಗಳಲ್ಲಿ ಹಂತಹಂತವಾಗಿ ನಡೆಯಲಿದೆ.
 
ನಮ್ಮ ರಾಜ್ಯದಲ್ಲಿ ಇದು ಮಂಗಳವಾರ ಆರಂಭವಾಗಿದ್ದು, ಈ ತಿಂಗಳ 28ರವರೆಗೂ ಮುಂದುವರಿಯಲಿದೆ. ನಮ್ಮಲ್ಲಿ 9 ತಿಂಗಳ ಶಿಶುಗಳಿಂದ ಹಿಡಿದು 15 ವರ್ಷದವರೆಗಿನ ಒಟ್ಟು 1.65 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ದೇಶದಲ್ಲಿ ಒಟ್ಟಾರೆ 41 ಕೋಟಿ ಮಕ್ಕಳಿಗೆ ಲಸಿಕೆ ನೀಡಲು ಏರ್ಪಾಟು ಮಾಡಿಕೊಳ್ಳಲಾಗಿದೆ.  ರಾಜ್ಯ ಸರ್ಕಾರ ಕೂಡ ಇದರ ಯಶಸ್ಸಿಗೆ ಟೊಂಕಕಟ್ಟಿ ನಿಂತಿದೆ. ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲದೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರನ್ನೂ ತೊಡಗಿಸಲಾಗಿದೆ. ಮಕ್ಕಳೇ ಈ ಲಸಿಕಾ ಅಭಿಯಾನದ ಮುಖ್ಯ ಫಲಾನುಭವಿಗಳು. ಹೀಗಾಗಿ ಯಾವ ಅರ್ಹ ಮಗುವೂ ಇದರಿಂದ ವಂಚಿತವಾಗಬಾರದು ಎಂಬ ಕಾರಣಕ್ಕಾಗಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವಲ್ಲದೆ ಶಾಲೆಗಳಿಗೇ ಹೋಗಿ ಲಸಿಕೆ ಹಾಕುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಚುಚ್ಚುಮದ್ದು ಮೂಲಕ ನೀಡುವ ಈ ಲಸಿಕೆ ಸುರಕ್ಷಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ. ವಿಶ್ವದಾದ್ಯಂತ ಅಸಂಖ್ಯಾತ ಮಕ್ಕಳು ಈಗಾಗಲೆ ಇದನ್ನು ಹಾಕಿಸಿಕೊಂಡು ಸುರಕ್ಷಿತರಾಗಿದ್ದಾರೆ. 
 
ದಡಾರ ಕಾಯಿಲೆ ತನ್ನ ಜತೆಗೆ ನ್ಯುಮೋನಿಯಾ, ಅತಿಭೇದಿಯಂತಹ ಆರೋಗ್ಯ ಸಮಸ್ಯೆ ತರುತ್ತದೆ. ರುಬೆಲ್ಲಾ ಇನ್ನೂ ಹೆಚ್ಚು ಅನಾಹುತಕಾರಿ. ಗರ್ಭಿಣಿಯಲ್ಲಿ ರುಬೆಲ್ಲಾ ಕಾಣಿಸಿಕೊಂಡರೆ ಗರ್ಭಪಾತವಾಗಬಹುದು ಅಥವಾ ಹುಟ್ಟುವ ಮಗುವಿಗೆ ಕುರುಡುತನ, ಕಿವಿ ಕೇಳಿಸದೇ ಇರುವಿಕೆ, ಮಾನಸಿಕ ವೈಕಲ್ಯ, ಹೃದಯ ಸಮಸ್ಯೆ ಎದುರಾಗಬಹುದು. ಹೀಗಾಗಿ ಈ ಲಸಿಕೆಗಳನ್ನು ನೀಡುವ ಮೂಲಕ ಮಕ್ಕಳನ್ನು ಸೋಂಕಿನಿಂದ ಮುಕ್ತಗೊಳಿಸಬಹುದು. ಮಗು ಹುಟ್ಟಿದಾಗಿನಿಂದ ನಿರ್ದಿಷ್ಟ ವಯಸ್ಸಿಗೆ ಬರುವ ತನಕ ನಿಯಮಿತ ಅಂತರದಲ್ಲಿ ಲಸಿಕೆ ಕೊಡಿಸುವ ರೀತಿಯಲ್ಲಿಯೇ ಇದನ್ನು ಕೊಡಿಸಬೇಕು. ಈ ಹಿಂದೆ ಎಂಎಂಆರ್‌ ಲಸಿಕೆ ತೆಗೆದುಕೊಂಡಿದ್ದರೂ ಈಗ ಮತ್ತೆ ಇದನ್ನು ತೆಗೆದುಕೊಳ್ಳುವುದು ಅವಶ್ಯ ಎಂದು ತಜ್ಞರೇ ಹೇಳಿದ್ದಾರೆ. ಅದು ಎಲ್ಲರ ಗಮನದಲ್ಲಿ ಇರಬೇಕು.
 
ಆದರೆ ದುರದೃಷ್ಟ ಎಂದರೆ, ಇಂತಹ ಸದುದ್ದೇಶದ ಪ್ರತಿಯೊಂದು ಲಸಿಕಾ ಕಾರ್ಯಕ್ರಮಕ್ಕೂ ಅಡ್ಡಗಾಲು ಹಾಕುವ ಶಕ್ತಿಗಳು ಈ ಸಲವೂ ಬಹಳಷ್ಟು ಕ್ರಿಯಾಶೀಲವಾಗಿವೆ. ಉದ್ದೇಶಪೂರ್ವಕ  ಅಪಪ್ರಚಾರ ನಡೆಸುತ್ತಿವೆ. ಡಿಟಿಪಿ, ಪೋಲಿಯೊ ನಿರ್ಮೂಲನೆಯ ಭಾಗವಾದ ಪಲ್‌್ಸ ಪೋಲಿಯೊ ಮುಂತಾದ ಕಾರ್ಯಕ್ರಮಗಳಿಗೂ ಇಂತಹುದೇ ಪ್ರತಿರೋಧ ಎದುರಾಗಿತ್ತು. ಅದೇ ಪ್ರವೃತ್ತಿ ಮುಂದುವರಿದಿದೆ. ಅಮೆರಿಕದ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್ಷನ್‌ನ  ವರದಿಯ ಪ್ರಕಾರ, ಈ ಲಸಿಕೆಯಿಂದ 10 ಲಕ್ಷದಲ್ಲಿ ಒಬ್ಬರಿಗೆ ಸ್ವಲ್ಪ ಗಂಭೀರ ಅಲರ್ಜಿ ಆಗಬಹುದು.
 
ಸರ್ವೇಸಾಮಾನ್ಯವಾಗಿ ಎಲ್ಲ ಔಷಧ, ಚಿಕಿತ್ಸೆಗಳಲ್ಲೂ ಒಂದಿಷ್ಟು ಅಡ್ಡಪರಿಣಾಮ, ತೊಂದರೆ ಇದ್ದೇ ಇರುತ್ತದೆ. ಹಾಗೆಂದು ಅದರಿಂದ ದೊರೆಯುವ ಪ್ರಯೋಜನಗಳನ್ನು ನಿರ್ಲಕ್ಷಿಸುವುದು ಎಷ್ಟು ಸರಿ ಎಂದು ಇದನ್ನು ವಿರೋಧಿಸುವವರು ಆಲೋಚಿಸಬೇಕು. ಉದಾಹರಣೆಗೆ, ಕ್ಯಾನ್ಸರ್‌  ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಿಮೊ ಥೆರಪಿಯಿಂದ ದೈಹಿಕವಾಗಿ ಅನೇಕ ಮಾರ್ಪಾಟುಗಳಾಗುತ್ತವೆ. ಆದರೆ ಕ್ಯಾನ್ಸರ್‌ ಗುಣಪಡಿಸುವ ವಿಷಯದಲ್ಲಿ ಅದು ಅತ್ಯಂತ ಪರಿಣಾಮಕಾರಿ ವಿಧಾನ ಎಂದೇ ಪರಿಗಣಿಸಲಾಗಿದೆ.  ಹಾಗೆಯೇ  ದಡಾರ, ರುಬೆಲ್ಲಾ ಲಸಿಕೆಯಿಂದ ಕೂಡ ತೊಂದರೆಗಿಂತ  ಪ್ರಯೋಜನ ಹೆಚ್ಚು ಎನ್ನುವುದನ್ನು  ಪೋಷಕರು, ಶಿಕ್ಷಕರು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಮಕ್ಕಳು ರೋಗರುಜಿನದಿಂದ ಮುಕ್ತರಾಗಬೇಕು ಎನ್ನುವ ಆಕಾಂಕ್ಷೆ ಹೊಂದಿದ ಎಲ್ಲ ತಂದೆ ತಾಯಿ ಮತ್ತು ತಮ್ಮ ಶಾಲೆ ಆರೋಗ್ಯವಂತ  ಮಕ್ಕಳಿಂದ ಕೂಡಿರಬೇಕು ಎಂದು ಬಯಸುವ ಶಿಕ್ಷಕ ಸಮೂಹ ಈ ಕಾರ್ಯಕ್ಕೆ ಸಹಕಾರ ನೀಡಬೇಕು.
 
‘ಇದು ನಮಗೆ ಸಂಬಂಧಿಸಿದ್ದಲ್ಲ. ಲಸಿಕೆಯಿಂದ ಏನಾದರೂ ಆದರೆ ನಾವು ಹೊಣೆ ಅಲ್ಲ’ ಎಂದು ಪೋಷಕರನ್ನು ಭಯಪಡಿಸುವ ಕೆಲಸವನ್ನು ಶಾಲೆಗಳು ಬಿಡಬೇಕು. ಸರ್ಕಾರ ಕೂಡ ಇದರ ಉಪಯೋಗಗಳ ಬಗ್ಗೆ ಇನ್ನಷ್ಟು ಹೆಚ್ಚು ಪ್ರಚಾರ, ಜಾಗೃತಿ ಅಭಿಯಾನ ನಡೆಸಬೇಕು. ಪೋಷಕರಲ್ಲಿ ಇರಬಹುದಾದ ಹಿಂಜರಿಕೆ ಹೋಗಲಾಡಿಸಬೇಕು. ವೈದ್ಯ ಸಮೂಹದ ನೆರವು ಪಡೆದುಕೊಳ್ಳಬೇಕು. ಇದೊಂದು ಸಾಮೂಹಿಕ ಕಾರ್ಯಕ್ರಮವಾಗಬೇಕು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅನುಷ್ಠಾನದಿಂದ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದಲ್ಲಿ ಆರ್ಥಿಕ ಪರಿಹಾರ ನೀಡುವ ವ್ಯವಸ್ಥೆಯನ್ನು ಕೆಲ ದೇಶಗಳು ಅಳವಡಿಸಿಕೊಂಡಿವೆ. ಆ ಬಗ್ಗೆಯೂ ಯೋಚಿಸಬಹುದು. ರಾಷ್ಟ್ರದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರ ಮಕ್ಕಳು ದಡಾರದಿಂದ ಸಾಯುತ್ತಿದ್ದಾರೆ ಎಂಬಂತಹ ವರದಿ ಇದೆ. ಇದು ಕಳವಳಕಾರಿಯಾದ ಸಂಗತಿ. ಹೀಗಾಗಿ ಈ ಲಸಿಕಾ ಕಾರ್ಯಕ್ರಮವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT