ಭಾನುವಾರ, ಸೆಪ್ಟೆಂಬರ್ 20, 2020
23 °C
ಅಸ್ಪೃಶ್ಯತೆ ಪದ ಸವಕಲು; ಆಹಾರ ಸಂಹಿತೆ ಚರ್ಚೆಯಾಗಲಿ; ಜಾತಿ- ವಿಜಾತಿಯ ಪ್ರಶ್ನೆ ಎತ್ತಿದ ಸಂವಾದ

ದಲಿತ ಎಂಬುದು ದಾರಿ ತಪ್ಪಿಸುವ ಶಬ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ ಎಂಬುದು ದಾರಿ ತಪ್ಪಿಸುವ ಶಬ್ದ

ಪಾವಗಡದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂವಾದದಲ್ಲಿ ಕೆ.ಬಿ.ಸಿದ್ದಯ್ಯ ಅವರು ಹಲವು ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರು. ಈ ಸುದ್ದಿ ಮಾರ್ಚ್ 4, 2017ರಂದು ಪ್ರಕಟವಾಗಿತ್ತು.

---

 

ಶ್ರೀಕೋಟೆಬಂಡೆ ವೆಂಕಟರಾಮಪ್ಪ ವೇದಿಕೆ (ಪಾವಗಡ): ತಳ ಸಮುದಾಯಗಳನ್ನು ದೂರವಿಟ್ಟಿರುವುದೇ ಆ ಸಮುದಾಯಗಳ ಮೇಲೆ ಹೇರುವ ಅಸ್ಪೃಶ್ಯತೆ ಎಂದು ಡಾ.ಲಿಂಗಣ್ಣ ಜಂಗಮರಹಳ್ಳಿ ತಿಳಿಸಿದರು.

ಇಲ್ಲಿನ ಶ್ರೀಕೋಟೆಬಂಡೆ ವೆಂಕಟರಾಮಪ್ಪ ವೇದಿಕೆಯಲ್ಲಿ ಶುಕ್ರವಾರ ನಡೆದ ಸರ್ವ ಸಮ್ಮೇಳನಾಧ್ಯಕ್ಷ ಕೆ.ಬಿ.ಸಿದ್ದಯ್ಯರ ಬದುಕು ಬರಹ ಕುರಿತು ಮಾನತಾಡಿ, ಗಲ್ಲೇಬಾನಿ, ಅನಾತ್ಮ, ದಕ್ಲಕಥಾದೇವಿಯನ್ನೇ ಕೇಂದ್ರೀಕರಿಸಿ ಪರಿಚಯಿಸಿದರು. ಇದಾದ ಬಳಿಕ ಸಮ್ಮೇಳನಾಧ್ಯಕ್ಷರ ಜತೆ ನಡೆದ ಸಂವಾದದ ಝಲಕ್‌ ಇಂತಿದೆ. ಸಂವಾದದಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ಸಿದ್ದಯ್ಯ ಉತ್ತರ.

*ಎಲ್.ಮುಕುಂದ: ದಲಿತ ಪದ ಎಲ್ಲೆಡೆ ಬಳಕೆಯಲ್ಲಿದೆ. ಮುಖ್ಯಮಂತ್ರಿ ವಿಚಾರದಲ್ಲೂ ಕೇಳಿದೆ. ಇದಕ್ಕೆ ನೀವೇನು ಹೇಳುತ್ತೀರಿ?
ಕೆ.ಬಿ.ಸಿದ್ದಯ್ಯ: ಅಸ್ಪೃಶ್ಯತೆ ಪದ ಸವಕಲಾಗಿದೆ. ದಲಿತ ಎನ್ನುವುದು ಸ್ವಾಭಿಮಾನಿ ಶಬ್ದವಲ್ಲ. ಕಾರ್ಪೋರೇಟ್‌ ಶಬ್ದವಾಗಿದೆ. ಸಂಘಟನೆಗೆ ದಲಿತ ಎನ್ನುವುದನ್ನು ಸಂಕೇತವಾಗಿ ಬಳಸುತ್ತಿದ್ದಾರೆ. ದಲಿತಕ್ಕೆ ಪರ್ಯಾಯ ಶಬ್ದ ಕಂಡುಕೊಳ್ಳಬೇಕಿದೆ. ದಲಿತ ಶಬ್ದ ದಾರಿತಪ್ಪಿಸುವ ಶಬ್ದವೂ ಹೌದು. ಆದರೆ ದಲಿತ ಮುಖ್ಯಮಂತ್ರಿ ಪದ ರಾಜಕೀಯ ಪ್ರಜ್ಞೆ ಬೆಳೆಸುತ್ತಿದೆ.

*ಜಯದೇವಪ್ಪ: ಕೆಲ ಸಮುದಾಯಗಳು ಮೀಸಲಿಗೆ ನಮ್ಮನ್ನು ಸೇರಿಸಿ ಎಂದು ಒತ್ತಾಯಿಸುವುದು ಎಷ್ಟು ಸರಿ?
ಯಾರು ಸಮಾನವಾಗಿ ಬದಕಲು ಸಾಧ್ಯವಿಲ್ಲವೋ, ಅವರನ್ನು ಗೌರವಯುತವಾಗಿ ಬದುಕುವಂತೆ ಮಾಡಲು ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಅಭಿವೃದ್ಧಿ ಸಂಹಿತೆ, ಆಹಾರ ಸಂಹಿತೆ ಚರ್ಚೆಯಾಗಬೇಕು. 

* ಡಾ.ಶಿವಣ್ಣ ತಿಮ್ಲಾಪುರ  ಮೇರುಕವಿಗಳನ್ನು ಜಾತಿ ಹೆಸರಲ್ಲಿ ಗುರುತಿಸದ ನಾವು, ದಲಿತ ಸಮುದಾಯದ ಕವಿಗಳು ಕವಿತೆ ಬರೆದರೆ 'ದಲಿತ ಕವಿ ಎಂದು ಏಕೆ ಹಣೆಪಟ್ಟಿ ಹಚ್ಚುತ್ತಾರೆ. ಮತಾಂತರಕ್ಕೆ ದಲಿತರು ಹೆಚ್ಚು ಒಳಗಾಗುತ್ತಿರುವುದರ ಗುಟ್ಟೇನು?
ಓದುಗರು ಕೃತಿ ಓದಿ ಅಂಟಿಸುವ ಹಣೆಪಟ್ಟಿಯನ್ನು ಸ್ವೀಕರಿಸಲೇ ಬೇಕಿದೆ. ಮತಾಂತರ ಆಗಲು ಯಾರೇ ಇಚ್ಛಿಸಿದರೂ  ತಪ್ಪಿಲ್ಲ. ಅದು ಅವರು ಪಡೆದ ಹಕ್ಕು ಎಂದರು.

*ಡಾ.ಜ್ಯೋತಿ:  ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಮೊದಲ ಪ್ರಾಶಸ್ತ್ಯವಿಲ್ಲ ಏಕೆ?
ಕನ್ನಡ ಭಾಷೆಯಲ್ಲಿ ಓದಿದವರಿಗೆ ಶೇ 50ರಷ್ಟು ಉದ್ಯೋಗ ನೀಡಲು ಸರ್ಕಾರ ಕಾನೂನು ತರಬೇಕು.

* ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ: ದಲಿತ ಕವಿಗಳ ಕೃತಿಗಳಲ್ಲಿರುವ ಅನೇಕ ಅಂಶಗಳು ಅವರ ಮಾತಿನಲ್ಲೇ ಸಡಿಲಗೊಂಡಿವೆ ಏಕೆ? ಸಿದ್ದಲಿಂಗಯ್ಯ ನಿಮ್ಮನ್ನೂ ಸೇರಿಸಿದಂತೆ.
ದಲಿತರ ಕೃತಿಗಳನ್ನು ದಲಿತರು ವಿಮರ್ಶಿಸುವಂತೆ ದಲಿತೇತರರು ವಿಮರ್ಶಿಸಬೇಕು. ದಲಿತ ಸಾಹಿತ್ಯವನ್ನು ವಿಮರ್ಶಿಸುವುದನ್ನೆ ಗುತ್ತಿಗೆ ಮಾಡಿಕೊಳ್ಳಬಾರದು.

* ಡಾ.ಪಾಲಸಂದ್ರ ಹನುಮಂತರಾಯಪ್ಪ: ದಲಿತ ಸಂಘಟನೆ ಹೋಳಾಗಿದೆ? ಇದರಿಂದ ಏನು ಕಟ್ಟಲು ಸಾಧ್ಯ?
ದಲಿತ ಸಂಘಟನೆಗಳು ಒಡೆದರೆ, ಬಹುತ್ವವಾಗಿ ಬೆಳೆಯುತ್ತವೆ ಎಂದು ತಿಳಿದುಕೊಳ್ಳಬೇಕು.

* ಕೊಟ್ಟಾಶಂಕರ್:  ಜಾತಿ ಸಂಘಟನೆಯಿಂದ ದಲಿತ ಚಳವಳಿಯನ್ನು ಗಟ್ಟಿಗೊಳಿಸಬಹುದೇ?
  ಜಾತಿ ಎನ್ನುವುದು ಸತ್ಯವೋ? ಸುಳ್ಳೋ? ಎಂಬುದನ್ನು ತೀರ್ಮಾನಿಸಬೇಕು. ಜಾತಿ ಎನ್ನುವುದು ಸಾಮಾಜಿಕ ವಾಸ್ತವವಾಗಿದೆ. ಎಲ್ಲ ಜಾತಿಗಳ ಅಸ್ಮಿತೆ ಇರಬೇಕು ಎನ್ನುವುದಾದರೆ ಜಾತಿ ಉಳಿಯಲೇ ಬೇಕು. ಜಾತಿ ಸಮ್ಮೇಳನಗಳು ನಡೆದರೆ ಜಾತಿಯನ್ನು ಬಲಪಡಿಸಲು ನಡೆಸುತ್ತಿದ್ದಾರೆ ಎಂದೇ ಭಾವಿಸಬೇಕು.
–ಕೆ.ಆರ್‌. ಜಯಸಿಂಹ

**
ತೆಲುಗಿಗೆ ಕನ್ನಡ ಪೂರಕ
ಕನ್ನಡ ಭಾಷೆ ಬೆಳೆಸುವ ರೀತಿ ನೀತಿಗಳನ್ನು ನಾವು ಕೊಡಲು ಸಾಧ್ಯವಿಲ್ಲ. ಅಕ್ಷರ ಕಲಿತವರಿಗಿಂತಲೂ, ಓದು ಬಾರದವರಿಂದ ಕನ್ನಡ ಬೆಳೆದಿದೆ. ಪಾವಗಡದಲ್ಲಿ ಶೇ 60ರಷ್ಟು ಕನ್ನಡ ಭಾಷೆ ಇದೆ. ಶೇ 40ರಷ್ಟು ತೆಲುಗು ಇದೆ. ತೆಲುಗಿಗೆ ಕನ್ನಡ ಪೂರಕವಾಗಿದೆ ಎನ್ನುವಾಗ, ಕನ್ನಡಕ್ಕೆ ತೆಲುಗು ಪೂರಕವಾಗಿಲ್ಲ ಎಂದು ಯಾರೂ ತಿಳಿಯಬಾರದು ಎಂದು ಸಮ್ಮೇಳನಾಧ್ಯಕ್ಷ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

**
ಪರದೇಶಿ ಭಾಷೆಗಳು ನಮ್ಮ ದೇಸೀ ಭಾಷೆಗಳನ್ನು ನುಂಗಿ ಹಾಕುತ್ತಿವೆ. ಈ ಸನ್ನಿವೇಶದಲ್ಲಿ ಈ ನೆಲದ ಜನರು  ಕನ್ನಡ ನಾಡು, ನುಡಿ, ಛಲದ ಬಗ್ಗೆ ಪ್ರೀತಿ ಹೊಂದಬೇಕು.
-ಡಾ.ಓ.ನಾಗರಾಜಯ್ಯ, ಸಾಹಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು