ಗುರುವಾರ , ಸೆಪ್ಟೆಂಬರ್ 16, 2021
26 °C
ಎನ್‌ಡಿಎ ಅಂಗಪಕ್ಷಗಳ ಬೆಂಬಲದೊಂದಿಗೆ ಅಧಿಕಾರ ಹಿಡಿದ ಬಿಜೆಪಿ

ಮಣಿಪುರ ಮುಖ್ಯಮಂತ್ರಿ ಬಿರೇನ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮಣಿಪುರ ಮುಖ್ಯಮಂತ್ರಿ ಬಿರೇನ್‌

ಇಂಫಾಲ್‌: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಮಣಿಪುರ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್‌. ಬಿರೇನ್‌ ಸಿಂಗ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿ ಮತ್ತು ಮಿತ್ರ ಪಕ್ಷಗಳ ಎಂಟು ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

ಬಿಜೆಪಿಗೆ ಈಗ ಬೆಂಬಲ ಸೂಚಿಸಿರುವ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ಮನಸ್ಸು ಬದಲಿಸದಂತೆ ಸಚಿವ ಸ್ಥಾನಗಳನ್ನು ಹಂಚಲಾಗಿದೆ. ಎನ್‌ಪಿಪಿಯ ವೈ. ಜಾಯ್‌ಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ನಾಲ್ವರು ಸದಸ್ಯರನ್ನು ಹೊಂದಿರುವ ಎನ್‌ಪಿಪಿಯ ಎನ್‌. ಕಯಿಸಿ ಅವರನ್ನೂ ಸಚಿವರನ್ನಾಗಿ ಮಾಡಲಾಗಿದೆ.

ನಾಲ್ವರು ಶಾಸಕರನ್ನು ಹೊಂದಿರುವ ನಾಗಾ ಪೀಪಲ್ಸ್‌ ಫ್ರಂಟ್‌ನ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಎಲ್‌ಜೆಪಿಯ ಏಕೈಕ ಶಾಸಕ ಕರಮ್‌ ಶ್ಯಾಮ್‌ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಟಿ. ಶ್ಯಾಮಕುಮಾರ್‌ ಅವರೂ ಸಚಿವರಾಗಿದ್ದಾರೆ.

28 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 21 ಶಾಸಕರನ್ನು ಹೊಂದಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ನಜ್ಮಾ ಅವರು ಆಹ್ವಾನಿಸಿದ್ದರು.

32 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿರುವ ಬಿಜೆಪಿ ಬಿರೇನ್‌ ಸಿಂಗ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕನ್ನಾಗಿ ಆಯ್ಕೆ ಮಾಡಿತ್ತು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರು ಪ್ರಮಾಣವಚನ ಬೋಧಿಸಿದರು. ನಿರ್ಗಮಿತ ಮುಖ್ಯಮಂತ್ರಿ ಓಕ್ರಮ್‌ ಇಬೋಬಿ ಸಿಂಗ್‌ ಹಾಜರಿದ್ದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಕಾರ್ಯಕ್ರಮಕ್ಕೆ ಹಾಜರಾಬೇಕಿತ್ತು. ಆದರೆ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ  ವಿಮಾನ ಮತ್ತೆ ದೆಹಲಿಗೆ ಹಿಂದಿರುಗಿತು.

ಫುಟ್‌ಬಾಲ್‌ ಮೈದಾನದಿಂದ ಮುಖ್ಯಮಂತ್ರಿ  ಗಾದಿಗೆ

(ಐಎಎನ್‌ಎಸ್‌):
ಮಣಿಪುರ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್ (56) ಅವರಿಗೆ ಫುಟ್‌ಬಾಲ್ ಎಂದರೆ ಬಹಳ ಪ್ರೀತಿ. ಬಾಲಕನಾಗಿದ್ದಾಗಲೇ ಫುಟ್‌ಬಾಲ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಮಾಡಿದ್ದ ಅವರು ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸೇರಿಕೊಂಡರು.

ಡ್ಯುರಾಂಡ್‌ ಕಪ್‌ನಲ್ಲಿ ಬಿಎಸ್‌ಎಫ್‌ ಅನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದರು. ನಂತರ ಆ ಕೆಲಸಕ್ಕೆ ರಾಜೀನಾಮೆ ನೀಡಿ ಮಣಿಪುರಿ ಭಾಷೆಯಲ್ಲಿ ‘ನಹರೋಲ್‌ ಗಿ ಥೌಡಂಗ್‌’ ಎಂಬ ಹೆಸರಿನ ಪತ್ರಿಕೆ ಆರಂಭಿಸಿದರು. ಪತ್ರಿಕೆ ಬಹಳ ಜನಪ್ರಿಯವಾಯಿತು.

ದೇಶವಿರೋಧಿ ಲೇಖನಗಳನ್ನು ಪ್ರಕಟಿಸಿದ ಆರೋಪದಲ್ಲಿ 2000ನೇ ಇಸವಿಯ ಏಪ್ರಿಲ್‌ನಲ್ಲಿ ಅವರ ಪತ್ರಿಕಾ ಕಚೇರಿ ಮೇಲೆ  ಪೊಲೀಸ್‌ ದಾಳಿ ನಡೆದಿತ್ತು. ತೀವ್ರವಾದಿಗಳಿಗೆ ಬೆಂಬಲ ನೀಡಿದ ಆಪಾದನೆ ಮೇಲೆ ಅವರನ್ನು ಬಂಧಿಸಲಾಯಿತು. ಹೀಗಾಗಿ ಅವರು ತಮ್ಮ ವೃತ್ತಿಯನ್ನೇ ಬದಲಾಯಿಸಿ ರಾಜಕಾರಣಿಯಾದರು.

‘ಜನ ಸೇವೆಗೆ ಬರಬೇಕು ಎಂಬ ನನ್ನೊಳಗಿನ ತುಡಿತ ಎಷ್ಟೊಂದು ಬಲವಾಗಿತ್ತೆಂದರೆ ಅಪಾರವಾಗಿ ಪ್ರೀತಿಸುತ್ತಿದ್ದ ಪತ್ರಿಕೋದ್ಯಮವನ್ನು

ಬಿಟ್ಟು ರಾಜಕೀಯಕ್ಕೆ ಬಂದೆ’ ಎಂದು ಬಿರೇನ್‌ ಸಿಂಗ್‌ ಹೇಳುತ್ತಾರೆ.

2002ರಲ್ಲಿ ಡೆಮಾಕ್ರಟಿಕ್‌ ರೆವಲ್ಯೂಷನರಿ ಪೀಪಲ್ಸ್‌ ಪಾರ್ಟಿಯ ಟಿಕೆಟ್‌ನಿಂದ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. 2003ರಲ್ಲಿ ಕಾಂಗ್ರೆಸ್‌ ಸೇರಿ ಸಚಿವರಾದರು. ನಂತರದ ಎಲ್ಲ ಚುನಾವಣೆಗಳಲ್ಲಿ ಅವರು ತಮ್ಮ ಹೈನ್‌ಗಾಂಗ್‌ ಕ್ಷೇತ್ರವನ್ನು ಉಳಿಸಿಕೊಂಡರು.

ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದಲ್ಲದೆ ಸರ್ಕಾರದ ವಕ್ತಾರರೂ ಆಗಿದ್ದರು. ಓಕ್ರಮ್‌ ಇಬೋಬಿ ಅವರ ಸರ್ಕಾರ ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲ ಅದರ ನಿವಾರಣೆಯ ಹೊಣೆಯೂ ಸಿಂಗ್‌ ಅವರದ್ದೇ ಆಗಿತ್ತು.

ಆದರೆ ಇಬೋಬಿ ಮತ್ತು ಬಿರೇನ್‌ ನಡುವಣ ಸಂಬಂಧ ಹಳಸಿತು. ಇಬೋಬಿ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಅಭಿಯಾನಕ್ಕೆ ಬಿರೇನ್‌ ಅವರೇ ನಾಯಕರಾದರು. ಅದರಿಂದ ಸಿಟ್ಟುಗೊಂಡ ಇಬೋಬಿ, ಬಿರೇನ್‌ ಅವರನ್ನು ಸಂಪುಟದಿಂದ ಕೈಬಿಟ್ಟರು.

2016ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಇತ್ತ ಬಿರೇನ್‌, ಬಿಜೆಪಿ ಸೇರಿದರು. ತಾವೆಂದೂ ಮುಖ್ಯಮಂತ್ರಿಯಾಗುವ ಕನಸು ಕಂಡಿರಲಿಲ್ಲ ಎಂದು ಹೇಳುವ ಬಿರೇನ್‌ ಮಣಿಪುರದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.