ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿತನ ತಂದ ಶಾಸನ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕನ್ನಡ ಭಾಷೆಯ ಇತಿಹಾಸವನ್ನು ಹುಡುಕುತ್ತಾ ಸಾಗಿದಂತೆಲ್ಲ ಕನ್ನಡದ ಹಿರಿತನ ಹೆಚ್ಚುತ್ತಾ ಸಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದಲ್ಲಿ ಈಚೆಗೆ ಸಿಕ್ಕಿರುವ ಶಾಸನಗಳು ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಗ್ರಾಮವು ಶಿರಾಳಕೊಪ್ಪದಿಂದ ಆರು ಕಿ.ಮೀ. ಅಂತರದಲ್ಲಿದೆ. ಕನ್ನಡದ ಮೂಲ ಬೇರುಗಳು ಇಲ್ಲಿಂದಲೇ ಟಿಸಿಲೊಡೆದು ಜಗತ್ತಿನಾದ್ಯಂತ ಹಬ್ಬಿವೆ. ಕನ್ನಡದ ಪ್ರಥಮ ದೊರೆ ಮಯೂರ ವರ್ಮನ ಜನ್ಮಸ್ಥಳವಾಗಿರುವ ತಾಳಗುಂದ ಹಲವು ಪ್ರಥಮಗಳ ಮುಕುಟವನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಪ್ರಥಮ ಸಾಮ್ರಾಜ್ಯ ಎನಿಸಿರುವ ಕದಂಬ ಸಾಮ್ರಾಜ್ಯ ಸ್ಥಾಪನೆ, ಪ್ರಾಚೀನ ಶಿವಲಿಂಗ, ಕೆರೆ, ಶಿಲಾಶಾಸನ, ಕನ್ನಡ ಶಾಲೆ, ವಿಶ್ವವಿದ್ಯಾಲಯ ಸೇರಿದಂತೆ ಕನ್ನಡ ನಾಡಿನ ಹಲವಾರು ಪ್ರಥಮಗಳು ತಾಳಗುಂದ ಗ್ರಾಮದಲ್ಲಿ ನಿರ್ಮಾಣವಾಗಿವೆ. ಈಗ ಆ ಗುಂಪಿಗೆ  ಕರ್ನಾಟಕದ ಪ್ರಾಚೀನ ಕನ್ನಡ ಶಾಸನ ಸೇರ್ಪಡೆಯಾಗಿದೆ.

ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಗ್ರಾಮವನ್ನು ಸಾತಕರ್ಣಿಯರು, ಕದಂಬರು, ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಕಲಚೂರಿಗಳು, ಅಳೂಪರು, ಭಟಾರಿಗಳು, ಕಲ್ಯಾಣಿ ಚಾಲುಕ್ಯರು, ಕೆಳದಿ ಅರಸರು, ವಿಜಯನಗರ ಸಾಮಾಜ್ಯ ಸೇರಿದಂತೆ ಕನ್ನಡ ನಾಡಿನ ಎಲ್ಲಾ ಪ್ರಮುಖ ರಾಜವಂಶಗಳು ಪ್ರವೇಶಮಾಡಿದ್ದು ಅದಕ್ಕೆ ಸಂಬಂಧಪಟ್ಟ ಶಾಸನಗಳು, ವೀರಗಲ್ಲು, ಮಾಸ್ತಿಕಲ್ಲು, ನಾಣ್ಯಗಳು, ತಾಮ್ರದ ಶಾಸನ ಸೇರಿದಂತೆ ಹಲವಾರು ರೂಪದಲ್ಲಿ ದಾಖಲೆಗಳು ಲಭಿಸಿವೆ.

ಈ ಶಾಸನವನ್ನು 2014ರಲ್ಲಿಯೇ ಪತ್ತೆ ಹಚ್ಚಲಾಗಿತ್ತು. ಹಲವಾರು ಅಧ್ಯಯನಗಳ ನಂತರ ಈ ಶಾಸನವು ಕ್ರಿ.ಶ.370–450ರ ಅವಧಿಯದು ಎಂದು ಕಳೆದ ಡಿಸೆಂಬರ್‌ನಲ್ಲಿ ಪುರಾತತ್ವ ಇಲಾಖೆ ಪ್ರಕಟಿಸಿದೆ. ಕನ್ನಡದ ಹಿರಿತನ ಒಂದು ಶತಮಾನ ಹಿಂದಕ್ಕೆ ಸಾಗಿದರೂ ಕನ್ನಡ ತಾಯಿ ಭುವನೇಶ್ವರಿಯ ಬುದ್ಧಿವಂತ ಮಕ್ಕಳು  ಎಂದು ಕರೆಸಿಕೊಳ್ಳುವ ಕೆಲವು ಸಾಹಿತಿಗಳು, ಬುದ್ಧಿಜೀವಿಗಳು ಮೌನಕ್ಕೆ ಶರಣವಾಗಿರುವುದು ಕನ್ನಡ ನಾಡಿನ ದೌರ್ಭಾಗ್ಯವೇ ಸರಿ.

ಸಿಂಹಕಟಾಂಜನ (ಶಾಸನ) ಪತ್ತೆಯಾದದ್ದು ಹೇಗೆ? ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ತಾಳಗುಂದ ಗ್ರಾಮ ಹಾಗೂ ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ ವರ್ಮನ ಇತಿಹಾಸವನ್ನು ಹೊರಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ 2010 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ತಾಳಗುಂದ ಗ್ರಾಮದಲ್ಲಿ ಉತ್ಖನನ ನಡೆಯಬೇಕು ಎಂದು ಪುರಾತತ್ವ ಇಲಾಖೆಯ ಮೇಲೆ ಸತತ ಒತ್ತಡ ಹೇರುತ್ತಾ ಬಂದಿತ್ತು. ಆಗ ಇಲಾಖೆಯು ನಿವೃತ್ತ ಅಧೀಕ್ಷಕ  ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಿ, ಮೊದಲ ಬಾರಿಗೆ 2012–13ರಲ್ಲಿ ಪ್ರಾಯೋಗಿಕ ಉತ್ಖನನ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಗಂಗರ ಭೂ ವಿಕ್ರಮ(ಕ್ರಿ.ಶ.630–670)  ಕಾಲದ 13 ಚಿನ್ನದ ಆನೆ ವರಹ ಹಾಗೂ ಒಂದು ವಿಜಯನಗರ/ಕೆಳದಿ ಅರಸರ ನಾಣ್ಯ ಪತ್ತೆಯಾಯಿತು. ಕಲಚೂರಿ ಕಾಲದ ತಾಮ್ರದ ತಟ್ಟೆಗಳು, ಸಾವಿರಾರು ವರ್ಷದ ಹಿಂದಿನ ಪೂಜಾ ಸಾಮಗ್ರಿಗಳು, ಮಣ್ಣಿನ ಹಣತೆ ಲಭಿಸಿದವು.

ಇದರಿಂದ ಉತ್ತೇಜನಗೊಂಡ ಇಲಾಖೆ 2013–14ರಲ್ಲಿ ಮತ್ತೆ ಪ್ರಾಯೋಗಿಕ ಉತ್ಖನನ ನಡೆಸಿತು. ಆಗ ಒಂದು ಸಿಂಹಕಟಾಂಜನ (ಶಾಸನ) ಲಭ್ಯವಾಯಿತು. ಅದರಲ್ಲಿ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಶಾಸನದಲ್ಲಿ ತುಂಡರಿಸಿದ ಏಳು ಸಾಲುಗಳಿವೆ. ಕೊಟ್ಟಾರ್, ನಾಲ್ಕು, ಬೊಯ್ಗರಾ, ನಾಗಣ, ಪುಲಿಂದಿಗೆ, ಕೊಳ್ಳೆ ಎಂಬ ಕನ್ನಡ ಶಬ್ದಗಳು ಸೇರಿದಂತೆ ಸಂಸ್ಕೃತ ಹಾಗೂ ಕನ್ನಡ ಶಬ್ದಗಳನ್ನು ಬಳಸಲಾಗಿದೆ.

ಈ ಶಾಸನವು ಭೂಮಿಯ ಮೇಲ್ಮೈಯಿಂದ ಆರು ಪದರಗಳನ್ನು ದಾಟಿ ನೈಸರ್ಗಿಕ ಮಣ್ಣಿನ ಮೇಲೆ ಸುಮಾರು  ಎರಡು ಮೀಟರ್ ಆಳದಲ್ಲಿ ಭೂಗತವಾಗಿತ್ತು. ಈ ಶಾಸನದ ಮೇಲಿನ ಮಣ್ಣಿನ ಪದರದಲ್ಲಿ ಕಾಕುತ್ಸವರ್ಮನ ಕಾಲದ ನಾಣ್ಯ, ಮೇಲಿನ ಮಣ್ಣಿನ ಪದರದಲ್ಲಿ ಗಂಗರ ಕಾಲದ ನಾಣ್ಯಗಳು, ಕಲ್ಯಾಣ ಚಾಲುಕ್ಯರು, ಕಲಚೂರಿಗಳ ಕಾಲದ ವಸ್ತುಗಳು ಸಿಕ್ಕಿವೆ. ಈ ಎಲ್ಲಾ ಭೌಗೋಳಿಕ ಅಂಶಗಳನ್ನು ಗಮನಿಸಿದರೆ ಸಿಂಹಕಟಾಂಜನವು ಕಾಕುತ್ಸವರ್ಮನ ಹಿಂದಿನ ತಲೆಮಾರಿನ ಶಾಸನವೆನ್ನುವುದು ಸ್ಪಷ್ಟವಾಗುತ್ತದೆ. ಈ ಶಾಸನವನ್ನು ಪತ್ತೆಹಚ್ಚಿ ಕಾಪಾಡುವಲ್ಲಿ ನಿವೃತ ಅಧೀಕ್ಷಕ ಟಿ.ಎಂ.ಕೇಶವ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

(ತಾಳಗುಂದ ಪ್ರಣವೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸಿಕ್ಕ ಕ್ರಿ.ಶ.450ರ ಸ್ತಂಭ ಶಾಸನ)

ಈ ಶಾಸನ ಮಹಾದ್ವಾರದ ಪ್ರವೇಶ ಪಾವಟಿಕೆಗಳ ಇಕ್ಕೆಲದಲ್ಲಿ ನಿರ್ಮಿತವಾಗಿರುವ ಸಿಂಹ ಕಟಾಂಜನದ ಶಿಲ್ಪ ಲಕ್ಷಣಗಳು ಕ್ರಿ.ಶ 400ರ ಸುಮಾರಿನಲ್ಲಿ ಬಳಕೆಯಾಗಿರುವ ಶೈಲಿಯಲ್ಲಿವೆ. ಪೂರ್ವಕ್ಕೆ ಎರಡು ಮೀಟರ್‌ ಅಂತರದಲ್ಲಿ ಸುಪ್ರಸಿದ್ಧ ಕಾಕುತ್ಸ-ಶಾಂತಿವರ್ಮರ ಪೇಟಿಕಾಶಿರ ಅಕ್ಷರಗಳುಳ್ಳ ಸ್ತಂಭ ಶಾಸನವಿದೆ. ಇದರ ಕಾಲಮಾನವನ್ನು ಕ್ರಿ.ಶ. 430 ಎಂದು ಲಿಪಿಯ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಈ ಶಾಸನದಲ್ಲಿ ಬರುವ ಲಿಪಿಯು ಕದಂಬರ ಪೇಟಿಕಾ ಅಕ್ಷರಗಳಂತಲ್ಲದೆ ತುಸು ವಿಭಿನ್ನವಾಗಿದ್ದು ಮೇಲುನೋಟಕ್ಕೆ ಹಲ್ಮಿಡಿ ಶಾಸನದ ಅಕ್ಷರಗಳಂತೆ ಗೋಚರವಾಗುತ್ತವೆ. ಇದರ ಲಿಪಿ ಲಕ್ಷಣಗಳು ಹತ್ತಿರದ ಮಳವಳ್ಳಿಯ ಶಿವಸ್ಕಂದವರ್ಮನ ಶಾಸನದ (ಕ್ರಿ.ಶ.3ನೇ ಶತಮಾನದ) ಅಕ್ಷರಗಳನ್ನು ಹೋಲುತ್ತದೆ. ಶಾಸನದಲ್ಲಿ ಆರು ಕನ್ನಡ ಪದಗಳು ಮಾತ್ರವಿದ್ದು, ಪ್ರಾಯಶಃ ಇದು ಕೇವಲ ಏಳು ಸಾಲುಗಳ ಶಾಸನವಿರಬಹುದು ಎಂದು ಅಂದಾಜಿಸಬಹುದು.

ಉತ್ಖನನದಲ್ಲಿ ದೊರೆತ ಈ ಶಾಸನವು ಕದಂಬ ಕಾಕುತ್ಸವರ್ಮನ ಶೀಲಾಶಾಸನದ ವೇದಿಕೆಯಿಂದ ಸುಮಾರು 80 ಸೆಂ.ಮೀ.ಆಳದಲ್ಲಿ ದೊರೆತಿದ್ದು,ಇನ್ನಿತರ ಸಾಂದರ್ಭಿಕ ಆಧಾರಗಳಿಂದ ಸ್ತಂಭಶಾಸನಕ್ಕಿಂತ ಪೂರ್ವದ್ದಿರಬಹುದು ಎಂಬುದನ್ನು ಸೂಚಿಸುತ್ತದೆ. ಉತ್ಖನನದಲ್ಲಿ ದೊರೆತ ಮಂಟಪದ ರಚನೆಗೆ ಹೊಂದಿಕೊಳ್ಳುವಂತೆ ಜೋಡಿಸಲಾದ ಇಟ್ಟಿಗೆಯ ನೆಲಹಾಸು ಇದ್ದು ಅದರ ಮೇಲೆ ಕಾಕುತ್ಸವರ್ಮನ ‘ಕಾ’ ಅಕ್ಷರವುಳ್ಳ ಚಿನ್ನದ ಬೇಳೆ ಕಾಸು ದೊರೆತಿದೆ. ಸಿಂಹಕಟಾಂಜನದ ದಕ್ಷಿಣದಲ್ಲಿ ಮತ್ತೊಂದು ಶಾಸನ ಸಹ ಕ್ರಿ.ಶ 450ರ ಹಿಂದಿನ ಶಾಸನ ಎನ್ನಲಾಗಿದ್ದು, ತುಂಡರಿಸಿದ ಎರಡು ಸಾಲುಗಳು ಮಾತ್ರ ಲಭ್ಯವಾಗಿರುವುದರಿಂದ ಸಾಕಷ್ಟು ಮಾಹಿತಿಗಳು ಲಭ್ಯವಾಗಿಲ್ಲ.

ಹಲ್ಮಿಡಿ ಶಾಸನದ ಕನ್ನಡ ಪದ ಪ್ರಯೋಗ ಮತ್ತು ಅಕ್ಷರಗಳ ವಿನ್ಯಾಸವನ್ನು ಗಮನಿಸಿದರೆ ಕ್ರಿ.ಶ.450ಕ್ಕೂ ಮೊದಲೇ ಕನ್ನಡ ಲಿಪಿಗಳು ಬಳಕೆಯಲ್ಲಿ ಇದ್ದವು ಎನ್ನುವುದು ಸಾಮಾನ್ಯ ಅಭಿಪ್ರಾಯ. ಹಾಗಾಗಿ, ಆ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ತಾಳಗುಂದ ಹೊರತು ಮತ್ಯಾವ ಪ್ರದೇಶದಲ್ಲೂ ಉನ್ನತ ಅಧ್ಯಯನ ಕೇಂದ್ರಗಳು ಕಾಣಸಿಗುವುದಿಲ್ಲ. ಆದ್ದರಿಂದ ತಾಳಗುಂದದಲ್ಲಿ ಹಲ್ಮಿಡಿಗಿಂತ ಪ್ರಾಚೀನ ಶಾಸನ ಲಭ್ಯವಾಗಿರುವುದು ಆಶ್ಚರ್ಯಕರವಾದ ಸಂಗತಿಯಲ್ಲವೆನ್ನಬಹುದು.

‘ಕನ್ನಡ ಭಾಷೆಯ ಲಿಖಿತ ಪ್ರಾಚೀನತೆಯ ಕಾಲಮಾನವನ್ನು ಈ ಶಾಸನದ ಕಾಲಮಾನಕ್ಕಿಂತ ಸುಮಾರು 200 ವರ್ಷ ಹಿಂದಕ್ಕೆ, ಎಂದರೆ ಒಂದನೇ ಶತಮಾನದ ಆಸುಪಾಸಿಗೆ ಕೊಂಡೊಯ್ಯಬಹುದು ಹಾಗೂ ಅದಕ್ಕೆ ಪೂರಕ ದಾಖಲೆಗಳನ್ನು ತಾಳಗುಂದದಲ್ಲಿ ಪತ್ತೆ ಹಚ್ಚಬೇಕಾದರೆ ಸುದೀರ್ಘ ಉತ್ಖನನ ನಡೆಯಬೇಕು’ ಎನ್ನುತ್ತಾರೆ ಟಿ.ಎಂ.ಕೇಶವ.

(ಲೇಖಕರು ಅಧ್ಯಕ್ಷರು, ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಶಿರಾಳಕೊಪ್ಪ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT