ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವನಿತೆಯರಿಗೆ ಪ್ರಶಸ್ತಿ

ವಿಶ್ವ ಹಾಕಿ ಲೀಗ್‌ ರೌಂಡ್‌ 2; ಗೋಲ್‌ಕೀಪರ್‌ ಸವಿತಾ ಅಮೋಘ ಆಟ
Last Updated 10 ಏಪ್ರಿಲ್ 2017, 20:12 IST
ಅಕ್ಷರ ಗಾತ್ರ

ವೆಸ್ಟ್‌ ವ್ಯಾಂಕೊವರ್‌ : ಶೂಟೌಟ್‌ನಲ್ಲಿ ಎದುರಾಳಿ ಆಟಗಾರ್ತಿಯರ ಗೋಲು ಗಳಿಕೆಯ ಪ್ರಯತ್ನಗಳನ್ನು ಅಮೋಘ ರೀತಿಯಲ್ಲಿ ತಡೆದ ಗೋಲ್‌ಕೀಪರ್ ಸವಿತಾ ಪೂನಿಯಾ, ಭಾರತದ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಸವಿತಾ ಅವರ ಮನಮೋಹಕ ಆಟದ ಬಲದಿಂದ ಭಾರತ ತಂಡ ಇಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ರೌಂಡ್‌–2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು.
ಸೋಮವಾರ ನಡೆದ ಫೈನಲ್ ಹಣಾಹಣಿಯ ಶೂಟೌಟ್‌ನಲ್ಲಿ  ಭಾರತ ತಂಡ 3–1 ಗೋಲುಗಳಿಂದ ಬಲಿಷ್ಠ ಚಿಲಿ ತಂಡದ ಸವಾಲು ಮೀರಿ ನಿಂತಿತು.

ನಿಗದಿತ ಅವಧಿ ಮುಗಿದಾಗ ಎರಡೂ ತಂಡಗಳು 1–1ರಲ್ಲಿ ಸಮಬಲ ಸಾಧಿಸಿದ್ದ ರಿಂದ ವಿಜೇತರನ್ನು ನಿರ್ಧರಿ ಸಲು ಶೂಟೌಟ್‌ ಮೊರೆ ಹೋಗಲಾಗಿತ್ತು. ಈ ಅವಕಾಶದಲ್ಲಿ ಭಾರತದ ವನಿತೆ ಯರು ಪ್ರಾಬಲ್ಯ ಮೆರೆದರು. ಈ ಗೆಲುವಿನೊಂದಿಗೆ ರಾಣಿ ರಾಂಪಾಲ್‌ ಪಡೆ ಮುಂಬರುವ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಟೂರ್ನಿಗೆ ಅರ್ಹತೆ ಗಳಿಸಿದೆ.

ಭಾನುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬೆಲಾರಸ್‌ ತಂಡವನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಭಾರ ತದ ಆಟಗಾರ್ತಿಯರು ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾದರು. ಬಲಿಷ್ಠ ಆಟಗಾರ್ತಿಯರ ಕಣಜ ಅನಿಸಿದ್ದ ಚಿಲಿ ತಂಡ ಐದನೇ ನಿಮಿಷದಲ್ಲೇ ಖಾತೆ ತೆರೆದು ಸುಲಭ ಗೆಲುವಿನ ಕನಸು ಕಂಡಿತ್ತು.

ಈ ತಂಡದ ಮರಿಯಾ ಮಲ್ಡೊ ನಾಡೊ ಚೆಂಡನ್ನು ಗುರಿ ಮುಟ್ಟಿಸಿ ಚಿಲಿ ಸಂಭ್ರಮಕ್ಕೆ ಕಾರಣರಾದರು. ಇದರಿಂದ ಭಾರತದ ವನಿತೆಯರು ಎದೆಗುಂದಲಿಲ್ಲ. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ಸವಾಲು ಮೀರಿ ನಿಂತಿದ್ದ ರಾಣಿ ಪಡೆಯ ಆಟ ಗಾರ್ತಿಯರು ಬಳಿಕ ಗುಣಮಟ್ಟಕ್ಕೆ  ಒತ್ತು ನೀಡಿ ಆಡಿದರು.

ಬಹುಮುಖ್ಯವಾಗಿ ರಕ್ಷಣಾ ವಿಭಾಗದವರು ಎದುರಾಳಿ ಆಟಗಾರ್ತಿಯರು  ಆವರಣ ಪ್ರವೇಶಿಸ ದಂತೆ ತಡೆಯುವಲ್ಲಿ ಸಫಲರಾದರು.
ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿದ ಭಾರತ ತಂಡ 22ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಸೃಷ್ಟಿಸಿ ಕೊಂಡಿತ್ತು. ಆದರೆ ಈ ಅವಕಾಶದಲ್ಲಿ ಭಾರತದ ಆಟಗಾರ್ತಿ ಬಾರಿಸಿದ ಚೆಂಡನ್ನು ಚಿಲಿ ತಂಡದ ಗೋಲ್‌ ಕೀಪರ್‌ ಕ್ಲಾಡಿಯಾ ಶುಲರ್‌ ಸೊಗಸಾದ ರೀತಿಯಲ್ಲಿ ತಡೆದರು.

ಹೀಗಾಗಿ 40ನೇ ನಿಮಿಷದವರೆಗೂ ಚಿಲಿ ತಂಡ ಮುನ್ನಡೆ ಕಾಯ್ದುಕೊಳ್ಳು ವಲ್ಲಿ ಯಶಸ್ವಿಯಾಗಿತ್ತು. 41ನೇ ನಿಮಿಷ ದಲ್ಲಿ ಅನುಪಾ ಬಾರ್ಲಾ ಮೋಡಿ ಮಾಡಿದರು. ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವ ಕಾಶದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿ ಸುತ್ತಿದ್ದಂತೆ ಭಾರತದ ಪಾಳಯ ದಲ್ಲಿ ಹರ್ಷದ ಹೊನಲು ಹರಿಯಿತು.

ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ ಪಂದ್ಯ 1–1ರಲ್ಲಿ ಸಮಬಲವಾಗಿದ್ದರಿಂದ ನಾಲ್ಕನೇ ಕ್ವಾರ್ಟರ್‌ನ ಆಟ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿತ್ತು. ಈ ಕ್ವಾರ್ಟರ್‌ನಲ್ಲಿ ಭಾರತದ ಸ್ಟ್ರೈಕರ್‌ ರಾಣಿ ಬಾರಿಸಿದ ಬ್ಯಾಕ್‌ ಹ್ಯಾಂಡ್‌ ಹೊಡೆತ ವನ್ನು ಚಿಲಿ ಗೋಲ್‌ಕೀಪರ್‌ ಕ್ಲಾಡಿಯಾ ಮನಮೋಹಕ ರೀತಿಯಲ್ಲಿ ತಡೆದು ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಶೂಟೌಟ್‌ನಲ್ಲಿ ಮೋಡಿ
ನಿಗದಿತ ಅವಧಿಯ ಆಟದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದರಿಂದ ವಿಜೇತರನ್ನು ನಿರ್ಣಯಿಸಲು ಶೂಟೌಟ್‌ ಮೊರೆ ಹೋಗಲಾಯಿತು. ಶೂಟೌಟ್‌ನ ಮೊದಲ ಎರಡು ಅವಕಾಶಗಳಲ್ಲಿ ಭಾರತದ ನಾಯಕಿ ರಾಣಿ ರಾಂಪಾಲ್‌ ಮತ್ತು ಮೋನಿಕಾ ಅವರು ಚೆಂಡನ್ನು ನಿಖರವಾಗಿ ಗುರಿ ಮುಟ್ಟಿಸಿ ತಂಡದ ಮುನ್ನಡೆಗೆ ಕಾರಣರಾದರು.

ಭಾರತದ ಗೋಲ್‌ಕೀಪರ್‌ ಸವಿತಾ ಚಿಲಿ ತಂಡದ ಕಿಮ್‌ ಜೇಕಬ್‌ ಮತ್ತು ಜೋಸೆಫಾ ವಿಲ್ಲಾಲಾಬೆಟಿಯಾ ಅವರ ಗೋಲು ಗಳಿಕೆಯ ಪ್ರಯತ್ನಕ್ಕೆ ಅಡ್ಡಿಯಾ ಗಿದ್ದರಿಂದ ಭಾರತ ತಂಡದ  ಪ್ರಶಸ್ತಿಯ ಹಾದಿ ಸುಗಮವಾಯಿತು. ಮೂರನೇ ಅವಕಾಶ ದಲ್ಲಿ ಚಿಲಿ ತಂಡದ ಕ್ಯಾರೋಲಿನಾ ಗಾರ್ಸಿಯಾ ಗೋಲು ಗಳಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಮರು ಪ್ರಯತ್ನದಲ್ಲಿ ದೀಪಿಕಾ ಗೋಲು ಗಳಿಸುತ್ತಿದ್ದಂತೆ ಭಾರತದ ವನಿತೆ ಯರು ಖುಷಿಯ ಕಡಲಲ್ಲಿ ತೇಲಿದರು.

ದೀಪಿಕಾ 200 ಪಂದ್ಯಗಳ ಸಾಧನೆ
ಮಿಡ್‌ಫೀಲ್ಡರ್‌ ಆಟಗಾರ್ತಿ ದೀಪಿಕಾ,  ಚಿಲಿ ತಂಡದ ವಿರುದ್ಧ ಆಡುವ ಮೂಲಕ ‘ದ್ವಿಶತಕ’ ಬಾರಿಸಿದ ಕೀರ್ತಿಗೆ ಪಾತ್ರರಾದರು. ಇದು ಅವರಿಗೆ 200ನೇ ಅಂತರ ರಾಷ್ಟ್ರೀಯ ಪಂದ್ಯವಾಗಿತ್ತು. ದೀಪಿಕಾ 2003 ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ‘ಮಹತ್ವದ ಪಂದ್ಯದಲ್ಲಿ ಗೆಲುವು ಪಡೆದಿದ್ದು ಮತ್ತು ನನ್ನ 200ನೇ ಪಂದ್ಯದಲ್ಲಿ ಈ ಸಾಧನೆ ಮೂಡಿ ಬಂದಿದ್ದರಿಂದ ತುಂಬಾ ಸಂತೋಷ ವಾಗಿದೆ. ತಂಡದವ ರೆಲ್ಲರೂ ಸೇರಿ ಹೊರಗಡೆ ಊಟಕ್ಕೆ ಹೋಗಿ ಸಂಭ್ರಮವನ್ನು ಆಚರಿಸುತ್ತೇವೆ’ ಎಂದು ದೀಪಿಕಾ ಹೇಳಿದ್ದಾರೆ.

ಹೋದ ವರ್ಷ ಮಲೇಷ್ಯಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ಯಶಸ್ಸಿನಲ್ಲಿ ದೀಪಿಕಾ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಎನ್ನುವ ಗೌರವಕ್ಕೂ ಭಾಜನರಾಗಿದ್ದರು.
‘ಮಹತ್ವದ ಟೂರ್ನಿಯಲ್ಲಿ ಉತ್ತಮ ಆಟವಾಡಲು ಸಾಧ್ಯವಾಗಿ ದ್ದಕ್ಕೆ ಸಂತೋಷವಾಗಿದೆ. ಮುಂದೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಇಲ್ಲಿನ ಆಟ ಪ್ರೇರಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT