ಭಾನುವಾರ, ಮಾರ್ಚ್ 26, 2023
32 °C

ಬಣ್ಣ ಬಣ್ಣದ ಬದುಕಿನ ನೋವು ನಲಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಣ್ಣ ಬಣ್ಣದ ಬದುಕಿನ ನೋವು ನಲಿವು

ಕೆಂಡದುಂಡೆಗಳಂಥ ಕೆಂಪು ಕಣ್ಣುಗಳ, ಒರಟು ಮುಖ, ಗಡಸು ಧ್ವನಿಯ ಖಳನಟ ಸತ್ಯಜಿತ್‌ ಅಂದು ತುಂಬ ಮೆತ್ತಗಾಗಿದ್ದರು. ಗ್ಯಾಂಗ್ರಿನ್‌ ಮಾರಿ ಅವರ ಒಂದು ಕಾಲನ್ನು ಬಲಿ ತೆಗೆದುಕೊಂಡಿದ್ದರಿಂದ ಗಾಲಿ ಕುರ್ಚಿಯಲ್ಲಿಯೇ ಪತ್ರಿಕಾಗೋಷ್ಠಿಗೆ ಬಂದಿದ್ದರು.



ಅವರು ಬೇಸರಗೊಳ್ಳಲು ಇನ್ನೂ ಒಂದು ಕಾರಣವಿತ್ತು. ಅದು ‘ಬಣ್ಣ ಬಣ್ಣದ ಬದುಕು’ ಚಿತ್ರಕ್ಕೆ ಸಂಬಂಧಿಸಿದ್ದು. ತಮ್ಮ ಬೇಸರವನ್ನು ಬಚ್ಚಿಟ್ಟುಕೊಳ್ಳದೇ ಸತ್ಯಜಿತ್‌ ಪತ್ರಕರ್ತರ ಮುಂದೆ ನೇರವಾಗಿಯೇ ಹೇಳಿಕೊಂಡರು.



ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿದ್ದ ‘ಬಣ್ಣ ಬಣ್ಣದ ಬದುಕು’ ಸತ್ಯಜಿತ್‌ ಅವರ ಬೇಸರವನ್ನೂ ಎದುರಿಸಬೇಕಾಯ್ತು. ಈ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್‌ ಮಾಡಿಸಲಾಗಿದೆ ಎಂಬುದು ಅವರ ಬೇಸರಕ್ಕೆ ಕಾರಣ.



‘ಬಣ್ಣ ಬಣ್ಣ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸತ್ಯಜಿತ್‌ ಆರೋಗ್ಯವಾಗಿಯೇ ಇದ್ದರು. ಆದರೆ ಡಬ್ಬಿಂಗ್‌ ಸಮಯದಲ್ಲಿ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರು. ಆದ್ದರಿಂದ ಅವರ ಪಾತ್ರಕ್ಕೆ ಬೇರೊಬ್ಬರ ಕಡೆಯಿಂದ ಡಬ್ಬಿಂಗ್‌ ಮಾಡಿಸಲಾಯಿತು.



‘ನಾನೀಗ ಡಬ್ಬಿಂಗ್‌ ಮಾಡಲು ಸಮರ್ಥನಾಗಿದ್ದೇನೆ. 600ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ನನಗೆ ನನ್ನ ಪಾತ್ರಕ್ಕೆ ಡಬ್ಬಿಂಗ್‌ ಮಾಡಲು ಬರುವುದಿಲ್ಲವಾ? ಈಗ ಆ ಪಾತ್ರಕ್ಕೆ ನನ್ನಿಂದಲೇ ಡಬ್ಬಿಂಗ್ ಮಾಡಿಸಬೇಕು’ ಎಂದು ಅವರು ಪಟ್ಟು ಹಿಡಿದರು.



ಆ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕೃಷ್ಣನಾಯಕ್‌ ಅವರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ತಕ್ಷಣವೇ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನಿರ್ದೇಶಕ ಇಸ್ಮಾಯಿಲ್‌ ಮೂಡುಶೆಡ್ಡೆ ಅವರು ಮತ್ತೆ ಸತ್ಯಜಿತ್‌ ಅವರಿಂದಲೇ ಡಬ್ಬಿಂಗ್‌ ಮಾಡಿಸಲು ಅನುಮತಿಯನ್ನೂ ಪಡೆದರು. ಅಲ್ಲಿಗೆ ಸತ್ಯಜಿತ್‌ ಮುಖದಲ್ಲಿ ಸಮಾಧಾನದ ನಗು ಮೂಡಿತು.



‘ಬಣ್ಣ ಬಣ್ಣದ ಬದುಕು’ ಚಿತ್ರದ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆಯನ್ನೂ ಇಸ್ಮಾಯಿಲ್‌ ಅವರೇ ಹೊತ್ತುಕೊಂಡಿದ್ದಾರೆ. ಮೇ 19ರಂದು ಚಿತ್ರವನ್ನು ತೆರೆಗೆ ತರಲು ತಂಡ ಸಿದ್ಧತೆ ನಡೆಸಿದೆ. ದಕ್ಷಿಣ ಕನ್ನಡದಲ್ಲಿನ ಕಲಾಪ್ರಕಾರಗಳಲ್ಲಿನ ಸಾಮರಸ್ಯ ಮತ್ತು ಅಲ್ಲಿ ಇತ್ತೀಚೆಗೆ ಚಿಗುರೊಡೆಯುತ್ತಿರುವ ಕೋಮುಭಾವನೆಗಳ ವಿಷಬೀಜ ಎರಡನ್ನೂ ಈ ಚಿತ್ರದಲ್ಲಿ ನಿರ್ದೆಶಕರು ಹೇಳಹೊರಟಿದ್ದಾರೆ.



ಇದು ಯಕ್ಷಗಾನ ಕಲೆಯನ್ನು ಆರಾಧಿಸುವ, ಅದನ್ನು ಕಲಿತುಕೊಂಡಿರುವ ಮುಸ್ಲಿಂ ಹುಡುಗನೊಬ್ಬನ ಕಥೆಯಂತೆ. ‘ಹಿಂದೂ ಕಲಾಪ್ರಕಾರವಾದ ಯಕ್ಷಗಾನದಲ್ಲಿ ಮುಸ್ಲಿಂ ಹುಡುಗನೊಬ್ಬ ಪಾತ್ರ ಮಾಡತೊಡಗಿದಾಗ ಎದುರಿಸುವ ಸಂಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು ನಿರ್ದೇಶಕರು.



ರವಿರಾಜ್‌ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ಮೊದಲು ಚಿತ್ರದ ಕಥೆ ಕೇಳಿದಾಗ ನನ್ನಿಂದ ಇದು ಸಾಧ್ಯವಾಗುವುದಿಲ್ಲವೇನೋ ಅನಿಸಿತ್ತು. ಆದರೆ ನಟಿಸುತ್ತಾ ಹೋದಂತೆ ಈ ಪಾತ್ರವನ್ನು ಮಿಸ್‌ ಮಾಡಿಕೊಂಡಿದ್ದರೆ ಬಹುದೊಡ್ಡ ಅವಕಾಶ ಕಳೆದುಕೊಳ್ಳುತ್ತಿದ್ದೆ ಅನಿಸಿತು’ ಎಂದರು.



ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ ರಿಯಾ ಮೇಘನಾ, ‘ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಡೀ ಕಥೆಗೇ ತಿರುವು ನೀಡುವ ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು. ನಾಯಕಿ ಅನ್ವಿತಾ ಸಾಗರ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. ಎ.ಕೆ. ವಿಜಯ್‌ ಸಂಗೀತ, ವಿಜಯ್‌ ಎಸ್‌. ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.