ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳ ತಂತ್ರ

ಸೋಮವಾರದಿಂದ ಹತ್ತು ದಿನಗಳ ವಿಧಾನಮಂಡಲ ಅಧಿವೇಶನ
Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲ ಅಧಿವೇಶನ ಜೂನ್‌ 5ರಿಂದ ಆರಂಭವಾಗಲಿದ್ದು, ನಾಲ್ಕು ವರ್ಷ ಪೂರೈಸಿರುವ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ.

ಹತ್ತು ದಿನ ನಡೆಯಲಿರುವ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ, ಗದ್ದಲ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ.

ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಉಳಿದಿರುವುದರಿಂದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ, ರಾಜಕೀಯ ಲಾಭ ಮಾಡಿಕೊಳ್ಳಲು ವಿರೋಧ ಪಕ್ಷಗಳು ತಂತ್ರ ರೂಪಿಸಿವೆ. ವಿರೋಧ ಪಕ್ಷಗಳನ್ನು ಹಣಿಯಲು ಆಡಳಿತ ಪಕ್ಷವೂ ಪ್ರತಿ ತಂತ್ರ  ರೂಪಿಸುತ್ತಿದೆ.

ಆಹಾರ ಇಲಾಖೆ ಆಯುಕ್ತರಾಗಿದ್ದ ಅನುರಾಗ್‌ ತಿವಾರಿ ಅಸಹಜ ಸಾವು, ಹಿರಿಯ ಅಧಿಕಾರಿಗಳಿಗೆ ಕಿರುಕುಳ, ಭ್ರಷ್ಟಾಚಾರ ಹಗರಣ, ಕೆಲವು ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಪ್ರಸ್ತಾಪಿಸಿ, ಕಾನೂನು– ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಲಿವೆ.

‘ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹೊರಹಾಕಲು ಮುಂದಾಗಿದ್ದೇ ಅನುರಾಗ್‌ ಸಾವಿಗೆ ಕಾರಣ’ ಎಂದು ಅವರ ಸಹೋದರ ಮಯಾಂಕ್ ತಿವಾರಿ ಮಾಡಿರುವ ಆರೋಪ ಉಲ್ಲೇಖಿಸಿ, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದೂ ವಿರೋಧ ಪಕ್ಷಗಳು ವಾಗ್ದಾಳಿ ನಡೆಸುವ ಸಂಭವವಿದೆ.

ಬರ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ. ಪರಿಹಾರ ಕಾರ್ಯಕ್ರಮಗಳು ಅನುಷ್ಠಾನ ಆಗಿಲ್ಲ. ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿರುವುದು ವಿರೋಧ  ಪಕ್ಷಗಳಿಗೆ  ಸರ್ಕಾರವನ್ನು ಹಣಿಯಲು ದಾರಿ ಆಗಲಿದೆ.

ಈಗಾಗಲೇ ಬಿಜೆಪಿ ನಾಯಕರು ತಂಡಗಳಲ್ಲಿ  ರಾಜ್ಯ ಪ್ರವಾಸ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಯಾವ ಜಿಲ್ಲೆಗಳಲ್ಲಿ  ಕುಡಿಯುವ ನೀರಿಗೆ ತೊಂದರೆಯಿದೆ, ಮೇವು, ನೀರು ಇಲ್ಲದೆ ಜಾನುವಾರುಗಳನ್ನು ಮಾರಲಾಗುತ್ತಿದೆ. ಕೂಲಿ ಇಲ್ಲದೆ ಜನರು ಗುಳೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ. ಅದನ್ನು ಸದನದ ಮುಂದಿಡಲು ತೀರ್ಮಾನಿಸಿದ್ದಾರೆ.

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ), ರೈತರ ಸಾಲ ಮನ್ನಾ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ಕೋಲಾಹಲ ಸೃಷ್ಟಿಸಲು ಜೆಡಿಎಸ್‌ ಅಣಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಬೆಳೆ ಪರಿಹಾರ ನೀಡಿಕೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ರಾದ್ಧಾಂತ ಸೃಷ್ಟಿಸಲು ಜೆಡಿಎಸ್‌ ಚಿಂತಿಸಿದೆ.

ಅಹಿಂದ ಅಡಿ ವಿವಿಧ ಯೋಜನೆಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರನ್ನೂ ಆ ವರ್ಗಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಆ ಪಕ್ಷದ ವಾದ. ಜಿಎಸ್‌ಟಿ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದ ಹಿತಾಸಕ್ತಿಗೆ ಮಾರಕವಾಗಿರುವ ಜಿಎಸ್‌ಟಿಗೆ ಸರ್ಕಾರ ಮೌನ ಸಮ್ಮತಿ ನೀಡಿದೆ ಎಂದು ಆರೋಪಿಸಿ ಕೋಲಾಹಲ ಉಂಟು ಮಾಡಲು ಉದ್ದೇಶಿಸಿದೆ.

ವಿಧಾನಮಂಡಲ ಕಲಾಪಕ್ಕೆ ಅಧಿಕಾರಿಗಳ ಹಾಜರಿ ಕಡ್ಡಾಯ
ವಿಧಾನಮಂಡಲದ ಉಭಯ ಸದನಗಳ ಕಲಾಪದ ವೇಳೆಯಲ್ಲಿ ಹಿರಿಯ ಅಧಿಕಾರಿಗಳು ತಮಗೆ ಮೀಸಲಾದ ಗ್ಯಾಲರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಇದೇ 5 ರಿಂದ 16ರವರೆಗೆ ನಡೆಯಲಿರುವ ಕಲಾಪದಲ್ಲಿ  ಉಭಯ ಸದನಗಳಲ್ಲಿ ಯಾವ ಸಮಯದಲ್ಲಿ, ಯಾವ ಅಧಿಕಾರಿ ಹಾಜರಿರಬೇಕು ಎಂಬ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಅಧಿಕಾರಿ ಹಾಜರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಲಾಪದಲ್ಲಿ ನಡೆದ ಚರ್ಚೆಯ ಬಗೆಗಿನ ಟಿಪ್ಪಣಿಯನ್ನು   ಪ್ರತಿನಿತ್ಯ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಇದಕ್ಕಾಗಿ ಪ್ರತ್ಯೇಕ ನಮೂನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಇದರಲ್ಲಿ ಅಧಿಕಾರಿ ಹೆಸರು, ಹುದ್ದೆ, ಇಲಾಖೆ, ಯಾವ ಸದನದಲ್ಲಿ ಹಾಜರಿ
ದ್ದರೆಂಬ ಮಾಹಿತಿ ಹಾಗೂ ಸದನದಲ್ಲಿ ನಡೆದ ಚರ್ಚೆ, ಸದಸ್ಯರು ಪ್ರಸ್ತಾಪಿಸಿದ ಪ್ರಮುಖ ವಿಷಯಗಳ ಬಗ್ಗೆ ಟಿಪ್ಪಣಿ ನೀಡಬೇಕು ಎಂದೂ ಸೂಚಿಸಲಾಗಿದೆ.

ಆಡಳಿತ ಚುರುಕಿಗೆ ಕ್ರಮ: ‘ಅಧಿಕಾರಿ ಗಳ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ. ಹಾಗಾಗಿಯೇ ಕಲಾಪ ವೇಳೆ ಅಧಿಕಾರಿಗಳ ಗ್ಯಾಲರಿ ಖಾಲಿ ಇರುತ್ತದೆ’ ಎಂಬ ವಿರೋಧ ಪಕ್ಷಗಳ ಟೀಕೆ ತಪ್ಪಿಸಿಕೊಂಡು, ಆಡಳಿತಕ್ಕೆ ಚುರುಕು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಗಾಲ, ಬಜೆಟ್‌ ಮೇಲಿನ ಚರ್ಚೆ, ನೀರಾವರಿ ಯೋಜನೆಗಳು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ವಿಷಯ ಕುರಿತು ಉಭಯ ಸದನಗಳ ವಿರೋಧ ಪಕ್ಷದ ನಾಯಕರು ವಿಷಯ ಪ್ರಸ್ತಾಪಿಸುವಾಗ ಸಚಿವರು ಇರುವುದಿಲ್ಲ ಎಂಬ ಟೀಕೆ, ಆಕ್ರೋಶ ಹಾಗೂ ಆಡಳಿತ ಮತ್ತು ವಿರೋಧ ಸದಸ್ಯರ ಮಧ್ಯೆ ವಾಗ್ವಾದ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ.

ಸರ್ಕಾರದ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ವಿರೋಧ ಪಕ್ಷದ ಸದಸ್ಯರು ಟೀಕಾ ಪ್ರಹಾರ ನಡೆಸುವಾಗ ಸಭಾಧ್ಯಕ್ಷ ಅಥವಾ ಸಭಾಪತಿ ಬಲಭಾಗದಲ್ಲಿ ಇರುವ ಅಧಿಕಾರಿಗಳ ಗ್ಯಾಲರಿಯ ಮೊದಲ ಸಾಲಿನಲ್ಲಿ(ಮುಖ್ಯ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಮೀಸಲಾದ) ಯಾವ ಅಧಿಕಾರಿಯೂ ಇರುತ್ತಿರಲಿಲ್ಲ.

ಇದನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ಅನೇಕ ಬಾರಿ ಹಿರಿಯ ಸಚಿವರು ಮುಜುಗರ ಅನುಭವಿಸಿದ್ದರು. ಇದನ್ನು ತಪ್ಪಿಸಲು ಮುಂದಾಗಿರುವ ಸರ್ಕಾರ ಇದೇ ಮೊದಲ ಬಾರಿಗೆ, ಅಧಿಕಾರಿಗಳ ಹಾಜರಿಯನ್ನು ಕಡ್ಡಾಯಗೊಳಿಸುವ ಸುತ್ತೋಲೆ ಹೊರಡಿಸಿದೆ.

ಬೆಳಿಗ್ಗೆ ಮತ್ತು ಮಧ್ಯಾಹ್ನದ ಕಲಾಪದ ವೇಳೆ ಉಭಯ ಸದನಗಳಲ್ಲಿ ಕನಿಷ್ಠ ಮೂರು ಜನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂರು ಜನ ಪ್ರಧಾನ ಕಾರ್ಯದರ್ಶಿ ಇರುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಇದರ ಜತೆಗೆ ಕಾರ್ಯದರ್ಶಿ, ಆಯುಕ್ತ, ನಿರ್ದೇಶಕ, ಉಪಕಾರ್ಯದರ್ಶಿಗಳ
ಹಾಜರಿಯನ್ನು ಎರಡೂ ಸದನಗಳಿಗೆ ಹಂಚಿಕೆ ಮಾಡಲಾಗಿದೆ.

ಒಗ್ಗಟ್ಟು ಪ್ರದರ್ಶನಕ್ಕೆ ಯತ್ನ ಕಳೆದ ಅಧಿವೇಶನ ಮತ್ತು ಈ ಅಧಿವೇಶನದ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಕಾಣಿಸಿಕೊಂಡಿದ್ದ ಭಿನ್ನಮತ ನಿವಾರಿಸಿ, ‘ಒಗ್ಗಟ್ಟು’ ಪ್ರದರ್ಶಿಸುವ ಪ್ರಯತ್ನ ನಡೆದಿದೆ.

ಕಾಂಗ್ರೆಸ್‌ ನಾಯಕತ್ವದ ವಿವಾದ ಸುಖಾಂತ್ಯ ಕಂಡಿದ್ದರೂ, ಅಸಮಾಧಾನ ತಣ್ಣಗಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ವಿರುದ್ಧ ಗುಡುಗಿದ್ದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಪಕ್ಷದ ವರಿಷ್ಠರ ಎಚ್ಚರಿಕೆ ಬಳಿಕ ಮೌನವಾಗಿದ್ದಾರೆ.

ಜೆಡಿಎಸ್‌ನಲ್ಲೂ ಅತೃಪ್ತಿ ಹೊಗೆಯಾಡುತ್ತಿದೆ. ಅಸಮಾಧಾನ ಶಮನಗೊಳಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಕಸರತ್ತು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT