ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಕೆಂಡ: ಉಷ್ಣೋಗ್ರತೆಗೆ ತತ್ತರಿಸಿದ ಉತ್ತರ ಭಾರತ

ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶ ಏರಿಕೆ
Last Updated 7 ಜೂನ್ 2017, 19:19 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಧಾನಿ ದೆಹಲಿ ವಾರದೊಪ್ಪತ್ತಿನಿಂದ ‘ಕೆಂಡದ ಹೊಂಡ’­ದಂತಾಗಿ ಜನಜೀವನ ತತ್ತರಿಸಿದೆ. ಮಹಾನಗರದ ಕೆಲ ಭಾಗಗಳಲ್ಲಿ ಉಷ್ಣೋಗ್ರತೆ 47 ಡಿಗ್ರಿ ಸೆಲ್ಸಿಯಸ್‌ಗೆ ಜಿಗಿದಿದೆ.

ರೋಹಿಣಿಯ ರಾಣಿಬಾಗ್ ಬಳಿ ಬಿಸಿಲಿನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಆಕಸ್ಮಿಕವಾಗಿ ಹೊಕ್ಕ ಆರು ವರ್ಷದ ಬಾಲಕ ಸೋನು ಹೊರಬರಲಾಗದೆ ಉಷ್ಣೋಗ್ರತೆ ಕಾರಣ ಅಲ್ಲಿಯೇ ಉಸಿರು ಕಟ್ಟಿ ಮೃತಪಟ್ಟ ದಾರುಣ ಘಟನೆ ಜರುಗಿದೆ. ಉತ್ತರಪ್ರದೇಶದ ನಾನಾ ಭಾಗಗಳಲ್ಲಿ ಕಳೆದ 24 ತಾಸುಗಳಲ್ಲಿ ಉಷ್ಣೋಗ್ರತೆಗೆ ಹತ್ತು ಮಂದಿ ಬಲಿಯಾಗಿದ್ದಾರೆ, ಒಡಿಶಾದಲ್ಲಿ 34 ಮಂದಿ ಅಸುನೀಗಿದ್ದಾರೆ.

ನೆರೆಯ ಪಾಕಿಸ್ತಾನದ ಪಂಜಾಬ್  ಪ್ರಾಂತ್ಯದ ನೂರ್ ಪುರ್ಥಲ್ ಮತ್ತ ಭಕ್ಕರ್ 52 ಡಿಗ್ರಿ ಸೆಲ್ಶಿಯಸ್, ಖೈಬರ್ ಪಖ್ತೂನ್ ನ ಡೇರಾ ಇಸ್ಮಾಯಿಲ್ ಖಾನ್ ಹಾಗೂ ಸಿಬ್ಬಿ 51 ಡಿಗ್ರಿ ಸೆಲ್ಶಿಯಸ್, ಸರ್ಗೋಧ ಮತ್ತು ರಿಸಾಲ್ಪುರ್ 50 ಡಿಗ್ರಿ ಸೆಲ್ಸಿಯಸ್‌ ಝಳದಲ್ಲಿ ಬಸವಳಿದಿವೆ.
ದೆಹಲಿಗೆ ಅಂಟಿಕೊಂಡಿರುವ ಉತ್ತರಪ್ರದೇಶದ ನೋಯ್ಡಾ, ಘಾಜಿಯಾ­ಬಾದ್, ಹರಿಯಾಣದ ಗುಡಗಾಂವ್ ಸೇರಿರುವ ರಾಷ್ಟ್ರೀಯ ರಾಜಧಾನಿ ಕ್ಷೇತ್ರದ ಸರಾಸರಿ 44.6 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಸ್ಥಿರಗೊಂಡಿದೆ. ಗರಿಷ್ಠ ಉಷ್ಣೋಗ್ರತೆಯ ಜೊತೆಗೆ ಕನಿಷ್ಠ ಉಷ್ಣಾಂಶವು 33.6 ಸೆಲ್ಸಿಯಸ್‌ಗೆ ಏರಿದ್ದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಧ್ಯಾಹ್ನದ ವೇಳೆಯಲ್ಲಿ ರಾಜಧಾನಿಯಲ್ಲಿ ಜನ-ವಾಹನ ಸಂಚಾರ ಅತಿ ವಿರಳವಾಗಿದೆ.

ಮಿತಿ ಮೀರಿದ ಕಟ್ಟಡ ನಿರ್ಮಾಣದಿಂದ ರಾತ್ರಿ ಉಷ್ಣಾಂಶದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಈ ಕಟ್ಟಡಗಳು ಹಗಲಿನಲ್ಲಿ ಹೀರಿ ಹಿಡಿದಿರಿಸಿಕೊಳ್ಳುವ ಉಷ್ಣಾಂಶದ ಬಿಡುಗಡೆಗೆ ದೀರ್ಘ ಸಮಯ ಹಿಡಿಯುತ್ತಿರುವುದು ಇದಕ್ಕೆ  ಕಾರಣವೆಂದು ಅಧ್ಯಯನಗಳು ತಿಳಿಸಿವೆ.
ರಾಜಸ್ತಾನದಿಂದ ಬೀಸುವ ಉಷ್ಣ ಮಾರುತಗಳಿಂದ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದೆಹಲಿಯಷ್ಟೇ ಅಲ್ಲ, ಹಿಮಾಚಲ ಪ್ರದೇಶ ಮತ್ತು ಜಮ್ಮು ಕೂಡ ಅತಿ ತಾಪದ ಸಂಕಟ ಎದುರಿಸಿವೆ. ಶಿಮ್ಲಾದ ತಾಪಮಾನ ಶೇ 30.1ಕ್ಕೆ ಏರಿದ್ದರೆ ಜಮ್ಮು 43.3 ಡಿಗ್ರಿ ಆಸುಪಾಸಿನಲ್ಲಿ ಬೇಯತೊಡಗಿದೆ. ಪಶ್ಚಿಮ ಹರಿಯಾಣ, ಉತ್ತರಪ್ರದೇಶದ ವಾರಾ­ಣಸಿ, ಆಗ್ರಾ, ಝಾನ್ಸಿ, ತೀವ್ರ ತಾಪದಿಂದ ಬಳಲಿವೆ. ಬುಂದೇಲಖಂಡದ ಬಾಂದಾ ಮತ್ತು ಮಹೋಬ ಜಿಲ್ಲೆಗಳು 47 ಮತ್ತು 48 ಡಿಗ್ರಿ ತಾಪಮಾನದಲ್ಲಿ ಕುದಿಯತೊಡಗಿವೆ.

ಹವಾನಿಯಂತ್ರಣ ಯಂತ್ರಗಳ ಬಳಕೆಯಲ್ಲಿ ದೇಶದ ಇತರೆಲ್ಲ ಮಹಾನಗರಗಳನ್ನು ಹಿಂದಿಟ್ಟಿರುವ ದೆಹಲಿಯ ನಿತ್ಯದ ವಿದ್ಯುಚ್ಛಕ್ತಿ ಬೇಡಿಕೆ 6,361 ಮೆಗಾವಾಟ್. ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರ ಕಳೆದ ವರ್ಷ ಬಿಡುಗಡೆ ಮಾಡಿದ್ದ ವರದಿಯೊಂದರ ಪ್ರಕಾರ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಛತ್ತೀಸಗಡ, ಗೋವಾ, ಕೇರಳ, ಜಾರ್ಖಂಡ್, ಒಡಿಶಾ, ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳೆಲ್ಲ ಉಪಯೋಗಿಸುವುದಕ್ಕಿಂತ ಹೆಚ್ಚು ವಿದ್ಯುಚ್ಛಕ್ತಿಯನ್ನು ದೆಹಲಿ ಕಬಳಿಸುತ್ತದೆ. ನಾಲ್ಕು ಮಹಾನಗರಗಳು ಕೂಡಿ ಬಳಸುವುದಕ್ಕಿಂತ ಹೆಚ್ಚು ವಿದ್ಯುತ್ ಬಳಸುತ್ತಿದೆ.

ತೀವ್ರ ತಾಪದ ಅಲೆ
ಸಾಧಾರಣ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿ, ಆರು ಡಿಗ್ರಿಗಳಷ್ಟು ಹೆಚ್ಚಿದರೆ ತೀವ್ರ ತಾಪದ ಅಲೆಗಳೆಂದು ಕರೆಯಲಾಗುತ್ತದೆ. ಗರಿಷ್ಠ ಉಷ್ಣಾಂಶ ಸತತ ಎರಡು ದಿನಗಳ ಕಾಲ 45 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿರುವ ಸ್ಥಿತಿಯನ್ನು ತೀವ್ರ ತಾಪದ ಮಾರುತ (ಹೀಟ್ ವೇವ್) ಎಂದು ಕರೆಯಲಾಗುತ್ತದೆ. ಮೈದಾನ ಪ್ರದೇಶದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಶಿಯಸ್ ಮತ್ತು ಪರ್ವತ ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಶಿಯಸ್ ದಾಟದಿದ್ದರೆ, ಅಂತಹ ಸ್ಥಿತಿಯನ್ನು ಹೀಟ್ ವೇವ್ ಎಂದು ಪರಿಗಣಿಸಲಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT