‘ಪಾರದರ್ಶಕತೆ ತರಲಿದೆ’

7

‘ಪಾರದರ್ಶಕತೆ ತರಲಿದೆ’

Published:
Updated:
‘ಪಾರದರ್ಶಕತೆ ತರಲಿದೆ’

ತೆರಿಗೆ ಪದ್ಧತಿಯಲ್ಲಿ ಸರಳೀಕರಣ ಮತ್ತು ಪಾರದರ್ಶಕತೆ ತರಲಿರುವ ಜಿಎಸ್‌ಟಿಯಿಂದ ರಾಜ್ಯದ ಆರ್ಥಿಕ ಪ್ರಗತಿಗೆ ಹೊಸ ವ್ಯವಸ್ಥೆ ದಾರಿ ಮಾಡಿಕೊಡಲಿದೆ ಎಂದು ರಾಜ್ಯ ಕೃಷಿ ಸಚಿವ ಹಾಗೂ ಜಿಎಸ್‌ಟಿ ಮಂಡಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸದಸ್ಯ ಕೃಷ್ಣ ಬೈರೇಗೌಡ ಅಭಿಪ್ರಾಯಪಡುತ್ತಾರೆ.

ಜಿಎಸ್‌ಟಿ ವಿಷಯದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡುವಷ್ಟು ಪ್ರಾಜ್ಞತೆ ಪಡೆದುಕೊಂಡಿರುವ ಅವರು ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.

ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಕೃಷಿ ಅಥವಾ ಕೈಗಾರಿಕಾ ಉತ್ಪನ್ನಗಳು ಬೇರೆ ರಾಜ್ಯಕ್ಕೆ ಹೋಗಬೇಕಾದರೆ ಪ್ರವೇಶ ತೆರಿಗೆ ಪಾವತಿಸಬೇಕಾಗಿತ್ತು. ಕೆಲವು ನಿರ್ಬಂಧಗಳು ಇದ್ದವು. ಅವೆಲ್ಲವೂ ಮರೆಯಾಗಲಿವೆ. ಹಲವು ತೆರಿಗೆಗಳಿಗೆ ಕಡಿವಾಣ ಬೀಳಲಿದೆ.

ಇದರಿಂದ ದೀರ್ಘಾವಧಿಯಲ್ಲಿ ಉದ್ಯಮಕ್ಕೆ ಲಾಭವಾಗಲಿದೆ. ಸರಕುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸಾಗಣೆಯಾಗಲು ಆರಂಭವಾದರೆ ಉದ್ಯಮ ವಲಯ ಬೆಳೆದು, ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಇದರಿಂದ ರಾಜ್ಯಗಳ ಆದಾಯವೂ ಹೆಚ್ಚಳವಾಗಲಿದೆ.

ತೆರಿಗೆ ತಪ್ಪಿಸಿ ವ್ಯವಹಾರ ಮಾಡುತ್ತಿದ್ದವರಿಗೆ ಮುಂದಿನ ದಿನಗಳು ಕಷ್ಟಕರವಾಗಲಿವೆ. ಹಾಗಂತ ತೆರಿಗೆ ಕಳ್ಳತನಕ್ಕೆ ಅವಕಾಶವೇ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗುತ್ತದೆಯೇ ಎಂದು ಈಗಲೇ ಹೇಳುವುದು ಕಷ್ಟ. ಲೆಕ್ಕ ತೋರಿಸದೇ ವಹಿವಾಟು ನಡೆಸುತ್ತಿದ್ದವರಿಗೆ ಜಿಎಸ್‌ಟಿ ಪದ್ಧತಿ ಅಸಹಕಾರಿಯಾಗಲಿದೆ.

ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂಬ ವಾದಕ್ಕೆ ನಿಖರವಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಾಗದು. ಅದು ಆಗುವ ಸಾಧ್ಯತೆಯೂ ಇದೆ. ಹಾಗೊಂದು ವೇಳೆ ನಷ್ಟವಾದರೆ ಅದನ್ನು ಕೇಂದ್ರ ಸರ್ಕಾರ ಭರಿಸುವ ವ್ಯವಸ್ಥೆ ಜಿಎಸ್‌ಟಿಯಲ್ಲಿ ಇದೆ. ಜಿಎಸ್‌ಟಿಯಿಂದ ಆಗಬಹುದಾದ ಸಂಭವನೀಯ ತೆರಿಗೆ ನಷ್ಟವನ್ನು ಐದು ವರ್ಷಗಳವರೆಗೆ ಕೇಂದ್ರ ಸರ್ಕಾರ ತುಂಬಿಕೊಡಲಿದೆ. ಜಾರಿಯಾದ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ.

ತೆರಿಗೆ ಸಂಗ್ರಹದಲ್ಲಿ ಮೊದಲಿನಿಂದಲೂ ಇರುವ ಸ್ವಾಯತ್ತತೆ ಮುಂದೆಯೂ ಇರಲಿದೆ. ಆಡಳಿತಾತ್ಮಕ ಚಟುವಟಿಕೆಗಳನ್ನು ನಮ್ಮವರೇ ನಿಭಾಯಿಸುತ್ತಾರೆ. ಕರ್ನಾಟಕದಲ್ಲಿ ತೆರಿಗೆ ನೀಡದೇ ಇದ್ದವರ ಮೇಲೆ ದಾಖಲಿಸುತ್ತಿದ್ದ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಬಹುದು.

ಯಾವುದೇ ಕಾರಣಕ್ಕೂ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಮುಂದುವರಿಯುವುದಿಲ್ಲ. ವ್ಯಾಟ್ ಮತ್ತು ಸೇವಾ ತೆರಿಗೆ ಎರಡೂ ಸಮ್ಮಿಳಿತವಾಗಿ ಜಿಎಸ್‌ಟಿ ಬರಲಿದೆ. ಸಂಗ್ರಹವಾಗುವ ತೆರಿಗೆಯಲ್ಲಿ ಅರ್ಧದಷ್ಟು ರಾಜ್ಯಕ್ಕೆ ದಕ್ಕಲಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಿದ್ಯುತ್ ಶುಲ್ಕ ಮತ್ತು ಅಬಕಾರಿ(ಮದ್ಯದ ಮೇಲಿನ) ಸುಂಕ ರಾಜ್ಯದ ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದೆ. ಈ ತೆರಿಗೆಯನ್ನು ನಿಗದಿ ಮಾಡುವ ಅಧಿಕಾರ ರಾಜ್ಯದ ಬಳಿಯೇ ಉಳಿಯಲಿದೆ.

ಜಿಎಸ್‌ಟಿ ದರದಲ್ಲಿಯೂ ಪರಿಷ್ಕರಣೆ ಮಾಡುವ ಅವಕಾಶ  ಒಕ್ಕೂಟ ವ್ಯವಸ್ಥೆಯಲ್ಲಿ ಇರುತ್ತದೆ. ಅದನ್ನು ಕರ್ನಾಟಕ ಒಂದೇ ಮಾಡಲಾರದು. ಬೇರೆ ರಾಜ್ಯಗಳು ಸಹಮತ ಸೂಚಿಸಿ, ಕೇಂದ್ರ ಸರ್ಕಾರದ ಸಮ್ಮತಿ ಪಡೆದೇ ಮಾಡಬೇಕಾಗುತ್ತದೆ.

*‘ವಿಶೇಷ ಸಿದ್ಧತೆ ಅನಗತ್ಯ : ಜಾಗೃತಿಯಷ್ಟೇ ಮುಖ್ಯ’

ಜಿಎಸ್‌ಟಿ ಜಾರಿ ಮಾಡಲು ರಾಜ್ಯ ಸರ್ಕಾರ ವಿಶೇಷ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಋತ್ವಿಕ್ ಪಾಂಡೆ ಹೇಳುತ್ತಾರೆ.

ತೆರಿಗೆ ಪಾವತಿಸುವವರ ಮೇಲೆ ಕಣ್ಣಿಡುವ ಇಲಾಖೆಯ ಅಧಿಕಾರಿಗಳು ಹಾಗೂ ತೆರಿಗೆ ಪಾವತಿಸುವ ವರ್ತಕ ಸಮೂಹವನ್ನು ಜಾಗೃತಿಗೊಳಿಸುವುದಷ್ಟೇ ರಾಜ್ಯ ಸರ್ಕಾರಗಳು ಮಾಡಬೇಕಾದ ಕೆಲಸ. ವಿವಿಧ ಹಂತಗಳಲ್ಲಿ 200ಕ್ಕೂ ಹೆಚ್ಚು ಕಾರ್ಯಾಗಾರ ಹಾಗೂ ಶಿಬಿರಗಳನ್ನು ಇಲಾಖೆ ನಡೆಸಿದೆ. ತೆರಿಗೆ ಪದ್ಧತಿಯ ಸರಳೀಕರಣ ಮತ್ತು ಪಾರದರ್ಶಕತೆಯಿಂದಾಗುವ ಅನುಕೂಲತೆಗಳ ಬಗ್ಗೆ ವರ್ತಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದೂ ಅವರು ವಿವರಿಸಿದರು.

ಜಿಎಸ್‌ಟಿ ನೆಟ್‌ವರ್ಕ್ ಇದಕ್ಕಾಗಿ ವಿಶೇಷ ತಂತ್ರಾಂಶ ಮತ್ತು ವ್ಯವಸ್ಥೆ ಸಿದ್ಧಪಡಿಸಿದೆ. ಹಾಗಾಗಿ ತಾಂತ್ರಿಕತೆಯನ್ನು ಮೇಲ್ದರ್ಜೆಗೆ ಏರಿಸುವ ಜವಾಬ್ದಾರಿಯೂ ಇಲಾಖೆಗೆ ಇಲ್ಲ. ವಿವಿಧ ರೂಪದಲ್ಲಿ ವಸೂಲಾಗುತ್ತಿದ್ದ ತೆರಿಗೆಗಳ ಬದಲು ಏಕರೂಪದ ತೆರಿಗೆ ಪದ್ಧತಿ ಜಾರಿಯಾಗಲಿದೆ. ತೆರಿಗೆ ಪದ್ಧತಿಯಲ್ಲಿ ಬದಲಾಗಲಿದೆಯೇ ವಿನಾ ಪಾವತಿ ವಿಧಾನದಲ್ಲಿ ಗಮನಾರ್ಹವಾದ ವ್ಯತ್ಯಾಸವಾಗುವುದಿಲ್ಲ ಎಂದು ಅವರು ತಿಳಿಸಿದರು.

ಪ್ರತಿ ಅಂಗಡಿ ಅಥವಾ ಉದ್ದಿಮೆಗೆ ಹೋಗಿ ತೆರಿಗೆ ವಸೂಲಾತಿ ಮಾಡುವ ಪದ್ಧತಿ ಇಲ್ಲ. ಪ್ರತಿಯೊಬ್ಬ ವರ್ತಕ ಆಯಾ ವರ್ಷದ ಆಗಸ್ಟ್‌ನಲ್ಲಿ ಇ-ಫೈಲಿಂಗ್ ಮಾಡುತ್ತಾರೆ. ಇದನ್ನು ಮಾಡದೇ ಇದ್ದವರನ್ನು ಪತ್ತೆಹಚ್ಚುವ ಕೆಲಸವಷ್ಟೇ ಇರುತ್ತದೆ. ಜುಲೈನಲ್ಲಿಯೇ ಹೊಸ ಪದ್ಧತಿ ಅಳವಡಿಸಲಾಗುವುದರಿಂದ ಆಗಸ್ಟ್ ಹೊತ್ತಿಗೆ ಎಲ್ಲವೂ ಸುಗಮವಾಗಿ ನಡೆಯಲು ಆರಂಭವಾಗುತ್ತದೆ ಎಂದು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿನ ಸಿಬ್ಬಂದಿ ಅವಶ್ಯ ಇದೆಯೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಸಿಬ್ಬಂದಿ ಕೊರತೆಯಿಲ್ಲ. ಜುಲೈ ನಂತರದ ಪರಿಸ್ಥಿತಿ ಅವಲೋಕಿಸಿ ಯೋಚನೆ ಮಾಡಬೇಕಾಗುತ್ತದೆ ಎಂದರು.

ಜಿಎಸ್‌ಟಿಯಿಂದ ರಾಜ್ಯ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗಲಿದೆಯೇ ಎಂಬ ಪ್ರಶ್ನೆಗೆ, ಅದರ ಬಗ್ಗೆ ಈಗಲೇ ಏನೂ ಹೇಳಲು ಬರುವುದಿಲ್ಲ. ಜಾರಿಯಾದ ಬಳಿಕವಷ್ಟೇ ಅದು ಗೊತ್ತಾಗಲಿದೆ ಎಂದು ಪ್ರತಿಕ್ರಿಯಿಸಿದರು.

*

‘ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಪರಿಸ್ಥಿತಿ ಬರುವುದಿಲ್ಲ’

ಜಿಎಸ್‌ಟಿ ಜಾರಿಯಾದರೆ ಕೇಂದ್ರ ಸರ್ಕಾರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಪರಿಸ್ಥಿತಿ ರಾಜ್ಯ ಸರ್ಕಾರಗಳಿಗೆ ಬರುತ್ತದೆ ಎಂಬುದು ಸುಳ್ಳು. ಅದು ವಾಣಿಜ್ಯ ತೆರಿಗೆ ಇಲಾಖೆಯ ಕೆಲವೇ ಅಧಿಕಾರಿಗಳು ಸೃಷ್ಟಿಸಿದ ಕಟ್ಟುಕತೆ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತೆರಿಗೆ ಕಳ್ಳರಿಂದ ಮಾಮೂಲಿ ಪಡೆದು ತಮ್ಮ ತಿಜೋರಿ ತುಂಬಿಸಿಕೊಳ್ಳುವುದು ತಪ್ಪುತ್ತದೆ ಎಂಬ ಕಾರಣಕ್ಕೆ ಇಂತಹ ಕತೆಯನ್ನು ಸೃಷ್ಟಿಸಲಾಯಿತು. ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುವುದು ತಪ್ಪಿದರೂ ಪರವಾಗಿಲ್ಲ, ತಮ್ಮ ಬೇಳೆ ಬೇಯಿಸಿಕೊಳ್ಳಲು ಅವಕಾಶ ಇರಬೇಕು ಎಂದು ಪ್ರತಿಪಾದಿಸಿದ ಕೆಲವರು ಈ ರೀತಿಯ ಸುದ್ದಿ ಹರಡಿದರು. ರಾಜ್ಯಕ್ಕೆ ಬರುತ್ತಿದ್ದ ತೆರಿಗೆ ಪಾಲಿಗಾಗಿ ಯಾರ ಮುಂದೆಯೂ ಅರ್ಜಿ ಹಾಕಿಕೊಂಡು ಕಾಯಬೇಕಾದ ಸ್ಥಿತಿ ಬರುವುದಿಲ್ಲ ಎಂದೂ ಅವರು ಪ್ರತಿಪಾದಿಸಿದರು.

ಹೋಟೆಲ್ ಗಳಿಗೆ ಹೊರೆಯಿಲ್ಲ: ಸೇವಾ ತೆರಿಗೆ ಹಾಕಿದ್ದರಿಂದ ಹೋಟೆಲ್ ಗಳ ಮೇಲೆ ಹೊರೆ ಬೀಳುತ್ತದೆ ಎಂಬುದೂ ಕೂಡ ಅಸತ್ಯ. ರಾಜ್ಯದಲ್ಲಿ ತೆರಿಗೆ ಪಾವತಿಸುತ್ತಿರುವ ಹೋಟೆಲ್, ರೆಸ್ಟೊರೆಂಟ್‌ಗಳ ಸಂಖ್ಯೆ 13,600. ಈ ಪೈಕಿ 600 ಉದ್ಯಮಗಳು ವಾರ್ಷಿಕ ₹ 1 ಕೋಟಿಗಿಂತ ಹೆಚ್ಚು ವಹಿವಾಟು, ಮತ್ತೂ 600 ಉದ್ಯಮಗಳು ₹50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುತ್ತಿರುವುದಾಗಿ ಘೋಷಿಸಿಕೊಂಡು ತೆರಿಗೆ ಪಾವತಿಸುತ್ತಿವೆ.

ಶೇ 90ಕ್ಕಿಂತ ಹೆಚ್ಚಿನ ಉದ್ಯಮಗಳು ₹ 50 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುತ್ತಿವೆ. ಜಿಎಸ್ ಟಿ ಅಳವಡಿಸುವ ಮುನ್ನ ಎಲ್ಲ ರಾಜ್ಯಗಳಲ್ಲಿ ವಿಧಿಸುತ್ತಿರುವ ತೆರಿಗೆಯ ಸರಾಸರಿ ಲೆಕ್ಕಾಚಾರದ ಮೇಲೆ ಸೇವಾ ತೆರಿಗೆಯ ಸ್ಲ್ಯಾಬ್ ನಿಗದಿ ಮಾಡಲಾಗಿದೆ ಎಂದೂ ಅವರು ಹೇಳಿದರು.

₹ 50 ಲಕ್ಷದ ಒಳಗಿನವರಿಗೆ ಶೇ 5ರಷ್ಟು ತೆರಿಗೆ ವಿಧಿಸಲಾಗಿದೆ. ಅಂದರೆ ಕರ್ನಾಟಕದಲ್ಲಿನ ಶೇ 90ಕ್ಕಿಂತ ಹೆಚ್ಚಿನ ಹೋಟೆಲ್ ಉದ್ಯಮಗಳಿಗೆ ಈ ಸ್ಲ್ಯಾಬ್ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಈ ದರ ಮೊದಲಿನಿಂದಲೂ ಅಷ್ಟೇ ಇತ್ತು. ಈಗ ವ್ಯತ್ಯಾಸವಾಗಿಲ್ಲ.

₹50 ಲಕ್ಷಕ್ಕಿಂತ ಮೇಲ್ಪಟ್ಟವರಿಗೆ ಶೇ 12, ₹1 ಕೋಟಿಗಿಂತ ಮೇಲ್ಪಟ್ಟ ಆದಾಯ ಇರುವವರಿಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹಾಗಂತ, ₹50 ಲಕ್ಷ ಅಥವಾ ಅದರೊಳಗೆ ವಹಿವಾಟು ನಡೆಸುತ್ತಿರುವುದಾಗಿ ಘೋಷಿಸಿಕೊಂಡವರು ವಾಸ್ತವವಾಗಿ ಎಷ್ಟು ಮೊತ್ತದ ವಹಿವಾಟು ನಡೆಸುತ್ತಾರೆ ಗೊತ್ತಿಲ್ಲ. ಅವರೇ ಘೋಷಿಸಿಕೊಂಡ ಆದಾಯದ ಅನುಸಾರ ತೆರಿಗೆ ನಿರ್ಧರಣೆ ಮಾಡಲಾಗಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ₹50 ಲಕ್ಷ ಮತ್ತು ₹1 ಕೋಟಿ ಆದಾಯ ಇರುವವರಿಗೆ ಕರ್ನಾಟಕದಲ್ಲಿ ಕಡಿಮೆ ತೆರಿಗೆ ಇದ್ದಿರಬಹುದು. ಕರ್ನಾಟಕವೊಂದನ್ನೇ ಮಾದರಿಯಾಗಿಟ್ಟುಕೊಂಡು ತೆರಿಗೆ ಪ್ರಮಾಣ ನಿರ್ಧಾರ ಮಾಡಲಾಗುವುದಿಲ್ಲ. ಹಾಗಾಗಿ ಹೆಚ್ಚಿನ ಆದಾಯ ಇರುವ ಶೇ 10ರಷ್ಟು ಉದ್ಯಮಗಳಿಗೆ ಸ್ವಲ್ಪಮಟ್ಟಿನ ಹೊರೆಯಾಗಿರಬಹುದು. ಆದರೆ, ಶೇ 90ರಷ್ಟು ಉದ್ಯಮಗಳಿಗೆ ಇದರಿಂದ ತೊಂದರೆಯಾಗಿಲ್ಲ ಎಂದವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry