ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಸಾಗೆ ಭಾರಿ ಮುಖಭಂಗ

ಬ್ರಿಟನ್‌: ಕನ್ಸರ್ವೇಟಿವ್‌ ಪಕ್ಷಕ್ಕೆ ಬಹುಮತ ನಷ್ಟ
Last Updated 10 ಜೂನ್ 2017, 10:36 IST
ಅಕ್ಷರ ಗಾತ್ರ

ಲಂಡನ್‌: ತಮ್ಮ ಬಹುಮತ ಹೆಚ್ಚಿಸಿಕೊಳ್ಳುವುದಕ್ಕಾಗಿ ಅವಧಿಗೆ ಮೊದಲೇ ಚುನಾವಣೆಗೆ ಹೋದ ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರಿಗೆ ಭಾರಿ ಮುಖಭಂಗವಾಗಿದೆ.

ಅವರ ಕನ್ಸರ್ವೇಟಿವ್‌ ಪಾರ್ಟಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದರೂ ಬಹುಮತ ಕಳೆದುಕೊಂಡಿದೆ. ಆದರೆ ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿ (ಡಿಯುಪಿ) ಬೆಂಬಲದಲ್ಲಿ ಸರ್ಕಾರ ರಚಿಸುವುದಾಗಿ ಮೇ ಅವರು ಹೇಳಿದ್ದಾರೆ.

650 ಸದಸ್ಯ ಬಲದ ಬ್ರಿಟನ್‌ ಕೆಳಮನೆಯಲ್ಲಿ ಸರ್ಕಾರ ರಚಿಸಲು 326  ಸ್ಥಾನಗಳು ಬೇಕು. ಕನ್ಸರ್ವೇಟಿವ್ ಪಾರ್ಟಿ 318 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಲೇಬರ್‌ ಪಾರ್ಟಿಗೆ 261 ಸ್ಥಾನಗಳು ದೊರೆತಿವೆ.

ಜೆರೆಮಿ ಕಾರ್ಬಿನ್‌ ನೇತೃತ್ವದ ಮುಖ್ಯ ವಿರೋಧ ಪಕ್ಷ ಲೇಬರ್ ಪಾರ್ಟಿ ತನ್ನ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.

ಬ್ರೆಕ್ಸಿಟ್‌ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಹೋಗುವುದು) ಮಾತುಕತೆ ಸಂದರ್ಭದಲ್ಲಿ ತಮಗೆ ಹೆಚ್ಚಿನ ಬಹುಮತ ಬೇಕು ಎಂಬ ಕಾರಣಕ್ಕೆ ಮೇ ಅವರು ಮಧ್ಯಂತರ ಚುನಾವಣೆ ಘೋಷಿಸಿದ್ದರು.

ಯಾವ ಪಕ್ಷಕ್ಕೂ ಬಹುಮತ ದಕ್ಕದೆ ಇರುವುದರಿಂದ ಇದೇ 19ರಿಂದ ನಡೆಯಬೇಕಿರುವ ಬ್ರೆಕ್ಸಿಟ್‌ ಮಾತುಕತೆಯ ಮೇಲೆ ಕರಿಛಾಯೆ ಕವಿದಿದೆ.

ಅವಧಿಗೆ ಮುನ್ನವೇ ನಡೆದ ಈ ಚುನಾವಣೆಯನ್ನು ‘ಬ್ರೆಕ್ಸಿಟ್‌’ ಚುನಾವಣೆ ಎಂದೇ ಬಣ್ಣಿಸಲಾಗಿತ್ತು. ಬ್ರೆಕ್ಸಿಟ್‌ ಪರವಾಗಿ ಇನ್ನಷ್ಟು ಬಹುಮತ ತಮಗೆ ದೊರೆಯಬಹುದು ಎಂದು ಮೇ ಅವರು ನಂಬಿದ್ದರು.  ಆದರೆ, 2016ರ ಜೂನ್‌ನಲ್ಲಿ ನಡೆದ ಜನಮತಗಣನೆಯಲ್ಲಿ ಬ್ರೆಕ್ಸಿಟ್‌ ವಿರುದ್ಧ ಮತ ಚಲಾಯಿಸಿದವರಲ್ಲಿಯೂ ಈ ಚುನಾವಣೆ ಆಶಾಭಾವನೆ ಸೃಷ್ಟಿಸಿತ್ತು.  ಈ ಚುನಾವಣೆಯು 2016ರ ಜನಮತಗಣನೆ ಮತ್ತು ಬ್ರೆಕ್ಸಿಟ್‌ ಪರವಾದ ಮೇ ಅವರ ‘ದೃಢ ನಿಲುವ’ನ್ನು ಜನರು ತಿರಸ್ಕರಿಸಬಹುದು ಎಂದು ಅವರು ಭಾವಿಸಿದ್ದರು.

ಫಲಿತಾಂಶ ಈ ಎರಡೂ ಗುಂಪಿನ ಆಶಾಭಾವಕ್ಕೆ ತಣ್ಣೀರೆರಚಿದೆ. ಫಲಿತಾಂಶದ ಬಳಿಕ ಮಾತನಾಡಿದ ಮೇ ಅವರು, ‘ನನ್ನ ನಿಲುವು ಹಿಂದಿನಷ್ಟೇ ದೃಢವಾಗಿ ಈಗಲೂ ಇದೆ. ಕನ್ಸರ್ವೇಟಿವ್‌ ಪಾರ್ಟಿಯು ಸ್ಥಿರತೆಯ ಪಕ್ಷವಾಗಿಯೇ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಅವರು ಬ್ರೆಕ್ಸಿಟ್‌ ಪರವಾದ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂಬ ಸುಳಿವು ನೀಡಿದ್ದಾರೆ. ಆದರೆ ಅಲ್ಪಮತದ ಸರ್ಕಾರಕ್ಕೆ ತನಗೆ ಬೇಕಿರುವಂತಹ ಕಾನೂನುಗಳನ್ನು ರೂಪಿಸುವುದು ಅಷ್ಟು ಸುಲಭವಾಗಲಿಕ್ಕಿಲ್ಲ.

ಸುಳ್ಳಾದ ಸಮೀಕ್ಷೆ: ಚುನಾವಣೆಗೆ ಮೊದಲು ನಡೆದ ಹಲವು ಸಮೀಕ್ಷೆಗಳಲ್ಲಿ ಕನ್ಸರ್ವೇಟಿವ್‌ ಪಾರ್ಟಿ ಮತ್ತು ಪ್ರಧಾನಿ ಮೇ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂಬ ಫಲಿತಾಂಶ ಬಂದಿತ್ತು. ಆದರೆ ಪಕ್ಷವು ಸರಳ ಬಹುಮತ ಪಡೆಯಲು ಯಾವ ಸಮಸ್ಯೆಯೂ ಆಗದು ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಈಗ ಅದು ಸುಳ್ಳಾಗಿದೆ.

ರಾಜಕೀಯ ಬಿಕ್ಕಟ್ಟು: ಇತ್ತೀಚಿನ ದಿನಗಳಲ್ಲಿ ಬ್ರಿಟನ್‌ ಮೇಲೆ ಉಗ್ರರ ಹಲವು ದಾಳಿಗಳು ನಡೆದಿವೆ. ಜತೆಗೆ ಬ್ರೆಕ್ಸಿಟ್‌ ಮಾತುಕತೆ ನಡೆಯಬೇಕಿರುವ ಈ ದಿನಗಳು ಬ್ರಿಟನ್‌ಗೆ ನಿರ್ಣಾಯಕ. ಅಂತಹ ಸಂದರ್ಭದಲ್ಲಿಯೇ ಚುನಾವಣಾ ಫಲಿತಾಂಶ ದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ.

ಮುಕ್ಕಾದ ಮೇ ನಾಯಕತ್ವ: ಮೇ ಅವರು ತಮ್ಮ ಜನಪ್ರಿಯತೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದ್ದರು. ಪಕ್ಷದ ಹೆಸರಿಗಿಂತ ತಮಗೇ ಹೆಚ್ಚಿನ ಮಹತ್ವ ನೀಡಿದ್ದರು. ಹಾಗಾಗಿ ಫಲಿತಾಂಶವನ್ನು ಮೇ ಅವರಿಗೆ ಹೀನಾಯ ಸೋಲು ಎಂದೇ ಬ್ರಿಟನ್‌ ಮಾಧ್ಯಮಗಳು ಬಣ್ಣಿಸಿವೆ.

ರಾಜೀನಾಮೆಗೆ ಒತ್ತಡ: ಇನ್ನೂ ಯಾಕೆ ಮೇ ಅವರು ಪಕ್ಷದ ನಾಯಕಿಯಾಗಿ ಮುಂದುವರಿಯಬೇಕು ಎಂದು ಕನ್ಸರ್ವೇಟಿವ್‌ ಪಾರ್ಟಿಯ ಸಂಸದೆ ಅನ್ನಾ ಸೋರ್ಬಿ ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ಇದೊಂದು ಬೇಸರದ ಮತ್ತು ದುರ್ದೈವದ ಫಲಿತಾಂಶ ಎಂದು ಅವರು ಹೇಳಿದ್ದಾರೆ.

ಮಧ್ಯಂತರ ಚುನಾವಣೆಯ ಜೂಜಿನಲ್ಲಿ ಮೇ ಅವರು ಸೋತಿದ್ದಾರೆ. ಹಾಗಾಗಿ ಮೇ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಕಾರ್ಬಿನ್‌ ಒತ್ತಾಯಿಸಿದ್ದಾರೆ. ಅಲ್ಪಮತದ ಸರ್ಕಾರ ರಚಿಸಲು ತಮ್ಮ ಪಕ್ಷ ಸಿದ್ಧವಿದೆ ಎಂದೂ ಅವರು ತಿಳಿಸಿದ್ದಾರೆ.

(‘ಬ್ರೆಕ್ಸಿಟ್‌’ಗೆ ಸೋಲಾಗಿದೆ ಎಂದು ಬಿಂಬಿಸಲು ಲಂಡನ್‌ನಲ್ಲಿ ವ್ಯಕ್ತಿಯೊಬ್ಬ ತೆರೆಸಾ ಅವರ ಮುಖವಾಡ ಧರಿಸಿ ಅಣಕು ಪ್ರದರ್ಶಿಸಿದ್ದು ಹೀಗೆ  –ಎಎಫ್‌ಪಿ ಚಿತ್ರ)

ಡಿಯುಪಿ ಬಲದಲ್ಲಿ ಸರ್ಕಾರ

ಬೆಲ್‌ಫಾಸ್ಟ್‌ (ರಾಯಿಟರ್ಸ್‌): ಮೇ ಅವರ ಹಿನ್ನಡೆಯಿಂದಾಗಿ ಉತ್ತರ ಐರ್ಲೆಂಡ್‌ನ ಸಣ್ಣ ಪಕ್ಷ ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿಯ (ಡಿಯುಪಿ)  ಅದೃಷ್ಟದ ಬಾಗಿಲು ತೆರೆದಿದೆ.

ಬ್ರೆಕ್ಸಿಟ್‌ ಮಾತುಕತೆಯಲ್ಲಿ ಈ ಮೂಲಕ ಉತ್ತರ ಐರ್ಲೆಂಡ್‌ ಪ್ರಾಂತ್ಯದ ವಾದಕ್ಕೆ ಹೆಚ್ಚಿನ ಬಲ ದೊರೆಯಲಿದೆ. ಬ್ರಿಟನ್‌ನ ಭಾಗವಾಗಿಯೇ ಉತ್ತರ ಐರ್ಲೆಂಡ್‌ ಮುಂದುವರಿಯಬೇಕು ಎಂದು ಪ್ರತಿಪಾದಿಸುವ ಈ ಪಕ್ಷಕ್ಕೆ ಈ ಬಾರಿ 10 ಸ್ಥಾನಗಳು ದೊರೆತಿವೆ.

318 ಸ್ಥಾನಗಳನ್ನು ಹೊಂದಿರುವ ಮೇ ಅವರಿಗೆ ಡಿಯುಪಿ ಬೆಂಬಲದಿಂದಾಗಿ ಸರಳ ಬಹುಮತ ಪಡೆಯುವುದು ಸಾಧ್ಯವಾಗುತ್ತದೆ.

ಸರ್ಕಾರ ರಚಿಸುವುದಕ್ಕಾಗಿ ಡಿಯುಪಿ ಮತ್ತು ಕನ್ಸರ್ವೇಟಿವ್‌ ಪಾರ್ಟಿಯ ನಡುವೆ ಒಪ್ಪಂದ ಏರ್ಪಟ್ಟರೆ ಉತ್ತರ ಐರ್ಲೆಂಡ್‌ನ ರಾಜಕೀಯ ಸಮತೋಲನ ತಪ್ಪುತ್ತದೆ. ಐರ್ಲೆಂಡ್‌ ಜತೆಗೆ ಉತ್ತರ ಐರ್ಲೆಂಡ್‌  ಸೇರಿಸಿ ‘ಯುನೈಟೆಡ್‌ ಐರ್ಲೆಂಡ್‌’ ಎಂಬ ದೇಶ ರಚಿಸಬೇಕು ಎಂಬ ಹೋರಾಟ ಉತ್ತರ ಐರ್ಲೆಂಡ್‌ನಲ್ಲಿ ನಡೆಯುತ್ತಿದೆ. ಆದರೆ ಡಿಯುಪಿ ಈ ಹೋರಾಟದ ವಿರುದ್ಧ ಇದೆ. ಸರ್ಕಾರದ ಭಾಗವಾಗುವ ಮೂಲಕ ಡಿಯುಪಿ ಪ್ರಭಾವ ಹೆಚ್ಚುತ್ತದೆ.

ಪರಿಣಾಮವಾಗಿ ಈ ಪ್ರಾಂತ್ಯದ ರಾಜಕೀಯ ಸಮತೋಲನ ತಪ್ಪಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬ್ರೆಕ್ಸಿಟ್‌ ಮಾತುಕತೆ ವಿಳಂಬ: ಐರೋಪ್ಯ ಒಕ್ಕೂಟದ ಮುಖ್ಯ ಸಂಧಾನಕಾರ್ತಿ ಮಿಷೆಲ್‌ ಬಾರ್ನಿಯರ್  ಅವರು ಬ್ರೆಕ್ಸಿಟ್‌ ಮಾತುಕತೆ ವಿಳಂಬವಾಗಲಿದೆ ಎಂದು ಹೇಳಿದ್ದಾರೆ. ಮಾತುಕತೆಗೆ ಬ್ರಿಟನ್‌ ‘ಸಿದ್ಧ’ವಾಗುವ ತನಕ ಕಾಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪರಿಣಾಮಗಳೇನು

* ಪ್ರಭಾವ ಕುಗ್ಗಿದರೂ ಪ್ರಧಾನಿಯಾಗಿ ಮೇ ಮುಂದುವರಿಕೆ
* ಪಕ್ಷ ಹಿನ್ನಡೆ ಅನುಭವಿಸಿದ ಸಂದರ್ಭದಲ್ಲಿ ಮೇ ಅವರ ನಾಯಕತ್ವಕ್ಕೆ ಪಕ್ಷದಲ್ಲಿ ಸವಾಲು ಎದುರಾಗದು
* ವಿಳಂಬವಾದರೂ ಬ್ರೆಕ್ಸಿಟ್‌ ಮಾತುಕತೆ ಖಚಿತ

* ಸ್ಥಿರ ಸರ್ಕಾರ ನೀಡುವುದು ಮೇ ಅವರಿಗೆ ಕಷ್ಟ. ಹಾಗಾಗಿ ಅವಧಿಗೆ ಮುನ್ನ ಮತ್ತೊಂದು ಚುನಾವಣೆ ಸಾಧ್ಯತೆ ತಳ್ಳಿ ಹಾಕಲಾಗದು

****
ರಾಣಿಯನ್ನು ಭೇಟಿಯಾಗಿದ್ದೇನೆ. ಹೊಸ ಸರ್ಕಾರ ರಚಿಸಲಿದ್ದೇನೆ. ಈ ಸರ್ಕಾರ ಬ್ರಿಟನ್‌ಗೆ ಸ್ಥಿರತೆ ಕೊಡಲಿದೆ. ಈ ನಿರ್ಣಾಯಕ ಹಂತದಲ್ಲಿ ದೇಶವನ್ನು ಮುನ್ನಡೆಸಲಿದೆ. 

- ತೆರೆಸಾ ಮೇ, ಕನ್ಸರ್ವೇಟಿವ್‌ ಪಕ್ಷದ ಮುಖ್ಯಸ್ಥೆ

=============

ಸ್ಕಾಂಟ್ಲೆಂಡ್‌: ಎಸ್‌ಎನ್‌ಪಿಗೆ ಹಿನ್ನಡೆ

ಎಡಿನ್‌ಬರ್ಗ್‌/ಲಂಡನ್‌: ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆಯಬೇಕು ಎಂದು ಆಗ್ರಹಿಸಿ ಸ್ಕಾಟ್ಲೆಂಡ್‌ನಲ್ಲಿ ನಡೆಸಲು ಉದ್ದೇಶಿಸಿರುವ 2ನೇ ಜನಮತ ಸಂಗ್ರಹಕ್ಕೆ  ಹಿನ್ನಡೆಯಾಗಿದೆ.

ಸ್ವಾತಂತ್ರ್ಯಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ, ನಿಕೋಲಾ ಸ್ಟರ್ಜನ್ಸ್‌ ಅವರ ಸ್ಕಾಟ್ಲೆಂಡ್‌ನ ನ್ಯಾಷನಲ್‌ ಪಾರ್ಟಿ (ಎಸ್‌ಎನ್‌ಪಿ) ಈ ಬಾರಿಯ ಚುನಾವಣೆಯಲ್ಲಿ 21 ಸ್ಥಾನಗಳನ್ನು ಕಳೆದುಕೊಂಡಿದೆ.

ಎರಡು ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಅದು, 59  ಸ್ಥಾನಗಳ ಪೈಕಿ 56ರನ್ನು ಗೆದ್ದಿತ್ತು. ಪಕ್ಷದ 21 ಅಭ್ಯರ್ಥಿಗಳು ಕೂಡ  ಬ್ರಿಟನ್‌ ಒಟ್ಟಾಗಿ ಇರಬೇಕು ಎಂದು ಬಯಸುವ ಪಕ್ಷಗಳ ಎದುರು ಪರಾಭವಗೊಂಡಿದ್ದಾರೆ.

ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿರುವ ತೆರೆಸಾ ಮೇ ನೇತೃತ್ವದ ಕನ್ಸರ್ವೇಟಿವ್‌ ಪಕ್ಷಕ್ಕೆ ಸ್ವಲ್ಪ ಸಮಾಧಾನಕರ ಫಲಿತಾಂಶ ಸ್ಕಾಂಟ್ಲೆಂಡ್‌ನಲ್ಲಿ ಸಿಕ್ಕಿದೆ. ಒಟ್ಟು 13 ಸ್ಥಾನಗಳಲ್ಲಿ ಅದು ಗೆದ್ದಿದೆ.

ಸ್ಕಾಟ್ಲೆಂಡ್‌, ಬ್ರಿಟನ್ನಿನಿಂದ ಪ್ರತ್ಯೇಕವಾಗಬೇಕೇ ಬೇಡವೇ ಎಂಬ ಬಗ್ಗೆ ಮತ್ತೊಮ್ಮೆ ಜನಮತ ಸಂಗ್ರಹಿಸಬೇಕು ಎಂದು ನಿಕೋಲಾ ಸ್ಟರ್ಜನ್ಸ್‌ ಈ ವರ್ಷದ ಮಾರ್ಚ್‌ನಲ್ಲಿ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT