ನಾಗರಿಕ ಸೇವೆ ಪರೀಕ್ಷೆ ಬರೆಯಲು ಯತ್ನಿಸಿ

7

ನಾಗರಿಕ ಸೇವೆ ಪರೀಕ್ಷೆ ಬರೆಯಲು ಯತ್ನಿಸಿ

Published:
Updated:
ನಾಗರಿಕ ಸೇವೆ ಪರೀಕ್ಷೆ ಬರೆಯಲು ಯತ್ನಿಸಿ

ಉಡುಪಿ: ತರಬೇತಿ ಕೇಂದ್ರ ಆರಂಭಿಸುವ ಮೂಲಕ ನಾಗರಿಕ ಸೇವೆ ಪರೀಕ್ಷೆ ಬರೆಯುವ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಮಂಗಳೂರು ಶಾಸಕ ಜೆ.ಆರ್. ಲೋಬೊ ಅಭಿಪ್ರಾಯಪಟ್ಟರು.

ನಗರದ ಶೋಕಮಾತಾ ಇಗರ್ಜಿಯಲ್ಲಿ ಭಾನುವಾರ ನಡೆದ ಕ್ಯಾಥೋಲಿಕ್ ಸಭಾ ಉಡುಪಿಯ ವಾರ್ಷಿಕ ಮಹಾ ಸಭೆ ಹಾಗೂ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾಥೋಲಿಕ್ ಮಹಾಸಭಾ ನಿಸ್ವಾರ್ಥ ಸೇವೆಯ ಮೂಲಕ ಜನ ಮನ್ನಣೆ ಗಳಿಸುತ್ತಿದೆ. ರಾಜಕೀಯ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯದ ನಾಯಕರು ಬರಲು ಸಂಘಟನೆಯ ಪಾತ್ರ ಮಹತ್ವದ್ದಾಗಿದೆ. ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ, ರಾಜ್ಯ ಹಾಗೂ ಕೇಂದ್ರ ಲೋಕಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಗಳಿಸುವಲ್ಲಿ ಹಿಂದೆ ಬಿದ್ದಿದ್ದಾರೆ.

ನಾಗರಿಕ ಸೇವೆ ಪರೀಕ್ಷೆ ಬರೆಯುವಂತೆ ಯುವ ಸಮುದಾಯಕ್ಕೆ ಪ್ರೇರಣೆ ನೀಡಬೇಕಿದೆ. ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಲು ತರಬೇತಿ ಅಕಾಡೆಮಿ ಆರಂಭಿಸಬೇಕಿದೆ ಎಂದು ಸಲಹೆ ನೀಡಿದರು. ಪೋಷಕರು ಸಹ ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಹೇಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್‌ ಬ್ಯಾಪ್ಟಿಸ್ಟ್‌ ಮಿನೇಜಸ್, ಕ್ಯಾಥೋಲಿಕ್ ಸಭಾ ಸಂಘಟನೆ ಸಮುದಾಯದ ಜನರ ನೋವು– ನಲಿವುಗಳಿಗೆ ಸ್ಪಂದಿಸುತ್ತಿದೆ. ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜಾ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಅಲ್ಮೇಡಾ. ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಜತ್ತನ್ನ ಹಾಗೂ ರಾಬರ್ಟ್‌ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು.

ಬರಹಗಾರ ಸ್ಟೀವನ್ ಕ್ವಾಡ್ರಸ್ ಅವರಿಗೆ ದಿ. ಪ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ವಿಜೇತರಿಗೂ ಬಹುಮಾನ ವಿತರಿಸಲಾಯಿತು.

ಕ್ಯಾಥೋಲಿಕ್ ಸಭಾದ ಉಪಾಧ್ಯಕ್ಷೆ ಲೀನಾ ಮಿನೇಜಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಸಿಂತಾ ಕೊಲಾಸೊ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಸೊಲೊಮನ್ ಅಲ್ವಾರಿಸ್ ವಾರ್ಷಿಕ ಲೆಕ್ಕಪರಿಶೋಧನ ವರದಿ  ಮಂಡಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ, ಎಐಸಿಯು ರಾಜ್ಯಾಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕ್ಯಾಥೋಲಿಕ್‌ ಸಭಾದ ಆದ್ಯಾತ್ಮಿಕ ನಿರ್ದೇಶಕ ಫರ್ಡಿನಂಡ್‌ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಲೇರಿಯನ್ ಮೆಂಡೋನ್ಸಾ, ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ ಇದ್ದರು.

* * 

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಸ್ವಂತ ಉದ್ಯೋಗ ಮಾಡಬೇಕಾದ ಪರಿಸ್ಥಿತಿ ಬರಲಿದ್ದು, ಅದಕ್ಕೆ ಸಹ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು.

ಜೆ.ಆರ್. ಲೋಬೊ,

ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry