ಶುಕ್ರವಾರ, ಡಿಸೆಂಬರ್ 6, 2019
17 °C
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದ ಕಾರ್ಯಕರ್ತರು l ಶ್ರೀಮಂತ ಪರ ನೀತಿಯ ಆರೋಪ

ಚನ್ನಪಟ್ಟಣ:ಎದೆ ಮೇಲೆ ಕಲ್ಲು ಹೇರಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ:ಎದೆ ಮೇಲೆ ಕಲ್ಲು ಹೇರಿ ಪ್ರತಿಭಟನೆ

ಚನ್ನಪಟ್ಟಣ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಎದೆಯ ಮೇಲೆ ಕಲ್ಲುಗಳನ್ನು ಹೇರಿ ಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ಮೈಸೂರು ಹೆದ್ದಾರಿಯ ಡಾ. ಗುರುವಪ್ಪ ವೃತ್ತದ ಬಳಿ ಜಮಾಯಿಸಿದ್ದ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ರಸ್ತೆಯಲ್ಲಿ ಮಲಗಿ ತಮ್ಮ ಎದೆಯ ಮೇಲೆ ಕಲ್ಲುಗಳನ್ನು ಹೇರಿಕೊಂಡು ಪ್ರತಿಭಟನೆ ನಡೆಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ದೇಶದಲ್ಲಿ ಉತ್ತಮ ದಿನಗಳು ಬರುತ್ತವೆಂದು ಜನರನ್ನು ನಂಬಿಸಿ ಅಧಿಕಾರಕ್ಕೆ ಏರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶ್ರೀಮಂತರ ಪರ ನಿಲುವು ತಳೆದು ಬಡವರ ಬದುಕನ್ನು ದಮನ ಮಾಡುತ್ತಿದೆ. ಇದರ ಜೊತೆಗೆ ಬರದಿಂದ ತತ್ತರಿಸುತ್ತಿರುವ ರೈತ ಸಮುದಾಯದ ಸಾಲ ಮನ್ನಾ ಮಾಡದೆ ದ್ರೋಹ ಎಸಗುತ್ತಿದೆ ಎಂದು ಪ್ರತಿಭಟನಾಕಾರರು ಖಂಡಿಸಿದರು.

ರಾಜ್ಯದ ರೈತರು ಮಳೆ ಇಲ್ಲದೆ ಬರದಿಂದ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ₹50,000 ಸಾಲ ಮನ್ನಾ ಮಾಡಿ ರಾಜ್ಯ ಸರ್ಕಾರ ರೈತರ ನೆರವಿಗೆ ಬಂದಿದೆ. ಬಿಜೆಪಿಯದು ರಿಯಲ್ ಎಸ್ಟೇಟ್, ಅಂಬಾನಿ, ಮಲ್ಯ, ಟಾಟಾ ಬಿರ್ಲಾ ಅವರಂತಹ ಉದ್ಯಮಿಗಳನ್ನು ರಕ್ಷಿಸುವ ಸರ್ಕಾರವಾಗಿದೆ. ನೈತಿಕತೆ ಕಳೆದು ಕೊಂಡಿರುವ ಮೋದಿ ಅಧಿಕಾರ ತೊರೆಯಬೇಕು, ರೈತರು ದೇಶವ ನ್ನಾಳುವ ಅವಕಾಶ ಒದಗಬೇಕು ಎಂದು ಅವರು ಒತ್ತಾಯಿಸಿದರು.

ವೇದಿಕೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಇ.ತಿ.ಶ್ರೀನಿವಾಸ್ ಮಾತನಾಡಿ, ರೈತರು ಸಾಲದ ಶೂಲ, ಬೆಳೆನಷ್ಟ, ಬರದಿಂದಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದರೂ ಅವರಿಗೆ ಸಹಾನುಭೂತಿ ತೋರದಿರುವ ಮೋದಿ ಸರ್ಕಾರ ಶ್ರೀಮಂತರ ಪರವಾಗಿ ತಳೆ ಯುತ್ತಿರುವ ನೀತಿ ಸಮರ್ಥನೀಯವಲ್ಲ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಕುಮಾರ್ ಮಾತ ನಾಡಿ, ಎಡಬಿಡದೆ ಐದಾರು ವರ್ಷಗಳಿಂದ ರಾಜ್ಯವನ್ನು ಬರ ಕಾಡುತ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರ ರೈತರ ಬೆನ್ನಿಗೆ ನಿಲ್ಲುವ ಬದಲಿಗೆ ರಸಗೊಬ್ಬರದ ಮೇಲೆ ತೆರಿಗೆ ವಿಧಿಸಿ, ಇನ್ನೊಂದೆಡೆ ಸಬ್ಸಿಡಿ ನೀಡಲು ಮುಂದಾಗಿದೆ. ಇಲ್ಲಿಯೂ ರೈತರನ್ನು ವಂಚಿಸುವ ಹುನ್ನಾರ ನಡೆದಿದೆ ಎಂದು ಅವರು ಹೇಳಿದರು.

ವೇದಿಕೆಯ ಕೋಶಾಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಯೋಗೀಶ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಯುವ ಘಟಕದ ಉಪಾಧ್ಯಕ್ಷ ರಂಜಿತ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಕೇಶವಮೂರ್ತಿ, ಸಮಾಜ ಸೇವಕ ಅಕ್ರಂಖಾನ್ ಉಸ್ಮಾನಿ, ಡಿ.ಎಸ್.ಎಸ್. ಸಂಚಾಲಕ ವೆೆಂಕಟೇಶ್, ಕೋಟೆ ಶ್ರೀನಿವಾಸ್, ಮರಂಕೇಗೌಡ, ಚಿಕ್ಕೇನಹಳ್ಳಿ ಹನುಮಾನಯ್ಯ, ಸಿದ್ದಾ ಪ್ಪಾಜಿ, ರಾಮಚಂದ್ರು, ರಾಂಪುರ ಸತೀಶ್, ಚಕ್ಕೆರೆ ರಾಮೇಗೌಡ, ಕಿರಣ್ ಸಿಂಗ್, ಆಶಾ, ರಾಜಮ್ಮ, ವಿರುಪಸಂದ್ರ ಮಂಗಳಮ್ಮ, ಯುವ ಘಟಕದ ಅಧ್ಯಕ್ಷ ಕೋಡಂಬಳ್ಳಿ ನಾಗರಾಜು, ಕುಮಾರ್, ಡ್ರೈವರ್ ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

**

ಕೇಂದ್ರ ಸರ್ಕಾರ ರೈತರ ಬಗ್ಗೆ ಕನಿಷ್ಠ ಕಾಳಜಿಯನ್ನು ತೋರಿಲ್ಲ. ಬದಲಾಗಿ ನೌಕರರಿಗೆ ಸಂಬಳ ಹೆಚ್ಚಿಸುವಂತಹ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ.

-ರಮೇಶ್ ಗೌಡ

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)