ಭಾನುವಾರ, ಡಿಸೆಂಬರ್ 8, 2019
25 °C

ಹೊಸ ಮಜಲು ತಲುಪಿದ ಭಾರತ– ಇಸ್ರೇಲ್‌ ಸಹಕಾರ

Published:
Updated:
ಹೊಸ ಮಜಲು ತಲುಪಿದ ಭಾರತ– ಇಸ್ರೇಲ್‌ ಸಹಕಾರ

ಭಾರತ ಮತ್ತು ಇಸ್ರೇಲ್‌ ನಡುವಿನ ಸಹಕಾರ ಇಷ್ಟು ವರ್ಷ ಬಹುಪಾಲು ರಕ್ಷಣಾ ಕ್ಷೇತ್ರಕ್ಕೆ ಸೀಮಿತವಾಗಿತ್ತು.  ಹೀಗಾಗಿಯೇ, ನಮಗೆ  ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ದೇಶಗಳ ಪೈಕಿ ಅಮೆರಿಕ, ರಷ್ಯಾ ನಂತರದ ಸ್ಥಾನದಲ್ಲಿ ಇಸ್ರೇಲ್‌ ಇತ್ತು. ಇದರಾಚೆಗೂ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇದ್ದ ಅವಕಾಶಗಳನ್ನು ಬಳಸಿಕೊಳ್ಳಲು ಎರಡೂ ಕಡೆಯವರು ಮನಸ್ಸು ಮಾಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್‌ ಭೇಟಿ ಈಗ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ.ನೀರು, ಕೃಷಿ, ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕಾ ಸಂಶೋಧನೆ, ಅಣುಚಾಲಿತ ಗಡಿಯಾರ ತಂತ್ರಜ್ಞಾನದಂತಹ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಏಳು ಒಪ್ಪಂದಗಳಾಗಿವೆ. ಇವುಗಳ ಮೊತ್ತ ಸುಮಾರು 500 ಕೋಟಿ ಡಾಲರ್‌ಗಳು  (ಸುಮಾರು ₹ 32,500 ಕೋಟಿ). ನೀರಿನ ರಕ್ಷಣೆ ಮತ್ತು ಮಿತವ್ಯಯ ಬಳಕೆ, ರಾಡಿ ನೀರು ಸಂಸ್ಕರಣೆ, ಸಂಸ್ಕರಿತ ನೀರನ್ನು ಕೃಷಿ ಕ್ಷೇತ್ರದಲ್ಲಿ ಬಳಸುವುದು ಮತ್ತು ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವುದರಲ್ಲಿ ತನಗಿರುವ ಪರಿಣತಿಯನ್ನು ಭಾರತದ ಜತೆಗೂ ಹಂಚಿಕೊಳ್ಳಲು ಇಸ್ರೇಲ್‌ ಮುಂದೆ ಬಂದಿದೆ. ಇದಲ್ಲದೆ, ₹ 260 ಕೋಟಿ ಮೊತ್ತದ ಆವಿಷ್ಕಾರ ನಿಧಿ ಸ್ಥಾಪಿಸಲಾಗಿದೆ. ನವೋದ್ಯಮಗಳಲ್ಲಿ ಎರಡೂ ದೇಶಗಳು ಹೆಸರುವಾಸಿ. ಹೀಗಾಗಿ ಎರಡೂ ಕಡೆಯ ವಿಜ್ಞಾನಿಗಳು ಮತ್ತು ಸಂಶೋಧಕರು ಜಂಟಿಯಾಗಿ ಆವಿಷ್ಕಾರ, ಸಂಶೋಧನೆ ಕೈಗೊಳ್ಳಲು ಈ ಉಪಕ್ರಮ ಉತ್ತೇಜನ ಕೊಡುತ್ತದೆ.ಎರಡೂ ದೇಶಗಳು ಭಯೋತ್ಪಾದನೆಯ ಹಾವಳಿಯನ್ನು ಎದುರಿಸುತ್ತಿವೆ. ಆದ್ದರಿಂದ ಇಬ್ಬರೂ ಪ್ರಧಾನಿಗಳ ಮಾತುಕತೆಯಲ್ಲಿ ಈ ವಿಚಾರವೂ ಮುಖ್ಯವಾಗಿ ಚರ್ಚೆಗೆ ಬಂದದ್ದು ಸಹಜ. ಆದರೆ ಅಷ್ಟಕ್ಕೇ ಬೇಲಿ ಹಾಕಿಕೊಳ್ಳದೆ ಅದರಾಚೆಗೂ ದೃಷ್ಟಿ ಹರಿಸಿದ್ದು ಒಳ್ಳೆಯ ಬೆಳವಣಿಗೆ. ಅದರ ಅಗತ್ಯವೂ ಇತ್ತು. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ, ಕಡಿಮೆ ನೀರು ಬಳಸಿ ಅತಿ ಹೆಚ್ಚಿನ ಇಳುವರಿ ಪಡೆಯುವುದರಲ್ಲಿ ಇಸ್ರೇಲ್‌ ಹೆಸರುವಾಸಿ. ಆ ಜ್ಞಾನ ಸಿಕ್ಕರೆ ನಮ್ಮ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ.  ಈ ಒಪ್ಪಂದ ಅದಕ್ಕೂ ಅವಕಾಶ ಮಾಡಿಕೊಡುತ್ತದೆ. ‘ಭಾರತದಲ್ಲಿಯೇ ತಯಾರಿಸಿ’ ಅಥವಾ ‘ಮೇಕ್ ಇನ್‌ ಇಂಡಿಯಾ’ ಎಂಬ ಮೋದಿ ಮಂತ್ರಕ್ಕೂ ಜೊತೆಯಾಗಲು ಇಸ್ರೇಲ್ ಉತ್ಸುಕತೆ ತೋರಿದ್ದು ವಿಶೇಷ. ಇದರಿಂದ ರಕ್ಷಣಾ ಉತ್ಪನ್ನಗಳ ತಂತ್ರಜ್ಞಾನ ವಿನಿಮಯಕ್ಕೆ ಮತ್ತು ಭಾರತದಲ್ಲಿಯೇ ತಯಾರಿಸಲು ಒತ್ತು ಸಿಗಲಿದೆ.ಇದು ಎರಡೂ ದೇಶಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸುತ್ತದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಅಪೇಕ್ಷೆಯಲ್ಲಿ ಇರುವ ಭಾರತೀಯ ಕಂಪೆನಿಗಳಿಗೆ ಅನುಕೂಲವಾಗುತ್ತದೆ. ಅಮೆರಿಕದ ‘ತಂತ್ರಗಾರಿಕೆ ಮತ್ತು ಅಂತರರಾಷ್ಟ್ರೀಯ  ಅಧ್ಯಯನಗಳ ಕೇಂದ್ರದ ವಾಧ್ವಾನಿ ಪೀಠ’ದ ಹಿರಿಯ ಸಂಶೋಧಕ ರಿಚರ್ಡ್ ರೊಸ್ಸೊ ಅವರ  ವಿಶ್ಲೇಷಣೆಯ ಪ್ರಕಾರ, ಕಾಲ್‌ ಸೆಂಟರ್‌ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತಕ್ಕೆ  ಪರಿಣತಿ ಇದೆ. ಆದರೆ ನಿರ್ದಿಷ್ಟ ಕಾರ್ಯಕ್ಕಾಗಿ ವಿವಿಧ ಸಾಫ್ಟ್‌ವೇರ್‌ಗಳನ್ನು ಒಟ್ಟುಗೂಡಿಸಿ ಬಳಕೆಗೆ ಲಭ್ಯವಾಗುವಂತೆ ಮಾಡುವ ತಂತ್ರಜ್ಞಾನದಲ್ಲಿ  ಇಸ್ರೇಲ್‌ ಹೆಸರುವಾಸಿ. ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿ ಭಾರತ ಮುಂದಿದ್ದರೆ, ಜೈವಿಕ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ತಯಾರಿಸಿ ವಿಶ್ವಕ್ಕೇ ಸರಬರಾಜು ಮಾಡುವಲ್ಲಿ ಇಸ್ರೇಲ್‌ ಮೇಲುಗೈ ಪಡೆದಿದೆ. 

ಅಲ್ಲದೆ ಅದು ವಿಶ್ವಸಂಸ್ಥೆಯಲ್ಲಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರನ ಹುಡುಕಾಟದಲ್ಲಿತ್ತು. ಹೀಗಾಗಿ ಈಗಿನ ಒಪ್ಪಂದಗಳಿಂದ ಎರಡೂ ಕಡೆಯವರಿಗೂ ಲಾಭವಿದೆ. ಭಾರತಕ್ಕೆ ರಕ್ಷಣಾ ಉತ್ಪನ್ನಗಳ ಸರಬರಾಜು ಮತ್ತು ತಂತ್ರಜ್ಞಾನ ವರ್ಗಾವಣೆ ವಿಚಾರದಲ್ಲಿ ಇಸ್ರೇಲ್‌ ಯಾವತ್ತೂ ಹಿಂಜರಿಕೆ ತೋರಿಸಿಲ್ಲ, ಬಳಕೆಯ ವಿಚಾರದಲ್ಲಿ ಷರತ್ತು ಹಾಕಿಲ್ಲ.  ಅದು ಅತ್ಯಂತ ನಂಬಿಕಸ್ಥ ಪೂರೈಕೆದಾರ. ಈಗ ಒಪ್ಪಂದ ಮಾಡಿಕೊಂಡ ಇತರ  ಕ್ಷೇತ್ರಗಳಲ್ಲಿಯೂ ಅದರಿಂದ ಇದೇ ರೀತಿಯ ವಿಶ್ವಾಸ ನಿರೀಕ್ಷಿಸಬಹುದು. ಇದು ಮೋದಿ ಅವರ ಈ ಭೇಟಿಯ ಅತಿದೊಡ್ಡ ಫಲಶ್ರುತಿ. ಸ್ವಾತಂತ್ರ್ಯಾನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಇಸ್ರೇಲ್‌ ಭೇಟಿಗೆ ಇದು ಇನ್ನಷ್ಟು  ಮೌಲ್ಯ ತಂದುಕೊಟ್ಟಿದೆ.

ಪ್ರತಿಕ್ರಿಯಿಸಿ (+)