ಬುಧವಾರ, ಫೆಬ್ರವರಿ 19, 2020
24 °C
ರಾಜ್ಯ ಬಂಜಾರ ಯುವ ಸಂಘದ ಕಾರ್ಯಕರ್ತರಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

ಕಂದಾಯ ಗ್ರಾಮಕ್ಕಾಗಿ ರಾಷ್ಟ್ರಪತಿಗೆ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂದಾಯ ಗ್ರಾಮಕ್ಕಾಗಿ ರಾಷ್ಟ್ರಪತಿಗೆ ಪತ್ರ ಚಳವಳಿ

ಚಿತ್ರದುರ್ಗ: ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ರಾಜ್ಯದ ಮಸೂದೆಗೆ ಅನುಮೋದನೆ ನೀಡಬೇಕು ಎಂದು ರಾಷ್ಟ್ರಪತಿಯನ್ನು ಒತ್ತಾಯಿಸಿ ಜ್ಯ ಬಂಜಾರ ಯುವ ಸಂಘ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪತ್ರ ಚಳವಳಿ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ರಾಮಾನಾಯ್ಕ್ ಮಾತನಾಡಿ, ‘ಲಂಬಾಣಿ ಸೇರಿದಂತೆ ಶೋಷಿತ ದಲಿತ ಬುಡಕಟ್ಟುಗಳ ತಾಂಡಾ, ಹಟ್ಟಿ, ಹಾಡಿ, ಪಲ್ಲಿ, ಗಲ್ಲಿ, ವಾಡಿ, ಪಾಳ್ಯ, ವಾಸಿಗರ ಭೂ ಒಡೆತನ ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು. ಈ ಸಂಬಂಧ ಕರ್ನಾಟಕ ಭೂ ಸುಧಾರಣೆಗಳ ವಿಧೇಯಕ್ಕೆ ಅನುಮೋದನೆ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆದರೂ ತಾಂಡಾಗಳು ಕಂದಾಯ ಗ್ರಾಮಗಳಾಗಿಲ್ಲ. ಹಾಗಾಗಿ ಯಾರದೋ ಮಾಲೀಕತ್ವದ ಜಮೀನಿನಲ್ಲಿ, ಅರಣ್ಯ ಭೂಮಿಯಲ್ಲಿ, ಬಗರ್‌ಹುಕುಂ ಜಮೀನಿನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಮನೆಯ ಹಕ್ಕುಪತ್ರ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಯೇ ಈ ಸಮುದಾಯಗಳಿಗೆ ಇಲ್ಲ’ ಎಂದು
ಅಳಲು ತೋಡಿಕೊಂಡರು.

ಕಂದಾಯ ಗ್ರಾಮಗಳಾಗದ ಕಾರಣಕ್ಕಾಗಿ ನಾಗರಿಕ ಸೌಲಭ್ಯಗಳಾದ ರಸ್ತೆ, ಸಾರಿಗೆ, ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಅಂಗನವಾಡಿ, ಗ್ರಾಮ ಪಂಚಾಯ್ತಿ ಕಚೇರಿ ಸೇರಿದಂತೆ ಇತರ ಮೂಲ ಸೌಕರ್ಯಗಳಿಂದ ಲಂಬಾಣಿ ಸಮುದಾಯದವರು ವಂಚಿತರಾಗಿದ್ದಾರೆ. ಜನ ವಸತಿಗೆ ಶಾಶ್ವತ ನೆಲೆ ಇಲ್ಲದ ಕಾರಣ ವಲಸೆ, ಅಲೆಮಾರಿಗಳಂತೆ ಈ ಸಮುದಾಯ ತಿರುಗಾಡುವಂತಾಗಿದೆ. ಆದ್ದರಿಂದ ಕಂದಾಯ ಗ್ರಾಮವಾಗಿಸಲು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಸಮುದಾಯದ ಮುಖಂಡರಾದ ಹೈಕೋರ್ಟ್ ವಕೀಲ ಅನಂತನಾಯ್ಕ್, ರಾಮಾನಾಯ್ಕ್, ಜಯರಾಮ್ ನಾಯ್ಕ್, ನಿಂಗಾನಾಯ್ಕ್,  ದೇವದಾಸ್ ನಾಯ್ಕ್, ಚೇತನ್ ನಾಯ್ಕ್, ರವಿಕುಮಾರ್ ನಾಯ್ಕ್, ಅಶ್ವಿನಿ ಪ್ರಕಾಶ್, ಮದಕರಿಪುರ, ಸಿಂಗಾಪುರ ಕಾವಲು ಲಂಬಾಣಿ ಹಟ್ಟಿ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಾಯನಕಹಟ್ಟಿ ಸಾಮಾಜಿಕವಾಗಿ ಹಿಂದುಳಿದಿರುವ ಲಂಬಾಣಿ ತಾಂಡಾಗಳನ್ನು ಅಭಿವೃದ್ಧಿ ಪಡಿಸಲು ಎಲ್ಲ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮನುಮೈನಹಟ್ಟಿ ಗ್ರಾಮಸ್ಥರು ಭಾನುವಾರ ರಾಷ್ಟ್ರಪತಿಗೆ ಪತ್ರ ಚಳವಳಿ ನಡೆಸಿದರು.

ಮುಖಂಡ ಮಹಾಂತೇಶ್, ಆಯಾ ಸಮಾಜದವರಿಗೆ ಭೂ ಒಡೆತನ ನೀಡಬೇಕು ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡ ಶಿವಣ್ಣ ಮಾತನಾಡಿ, ‘ತಾಂಡಾಗಳು ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಇದರಿಂದ ಬೇಸರಗೊಂಡು ರಾಜ್ಯದ ಎಲ್ಲೆಡೆ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯ್ತಿ ಸದಸ್ಯ ಯಶವಂತನಾಯ್ಕ್, ಲಕ್ಷ್ಮಿಬಾಯಿ, ಮುಖಂಡರಾದ ತಿಪ್ಪೇಸ್ವಾಮಿ, ದೇವಾನಂದ, ಲೋಕ್ಯಾನಾಯ್ಕ್, ಹರಿದಾಸನಾಯ್ಕ್, ಜಯಣ್ಣ, ಕಾಂತಪ್ಪ ನಾಯ್ಕ್, ಹೇಮ್ಲಾ ನಾಯ್ಕ್, ನಿರಂಜನ್, ರೆಡ್ಡಿನಾಯ್ಕ್, ಮಲ್ಲೇಶ್‌ನಾಯ್ಕ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)