ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಉತ್ತಮ ನಾಗರಿಕರ ಲಕ್ಷಣ

‘ನಗರಸಭೆ ನಡಿಗೆ ವಾರ್ಡ್‌ ಕಡೆಗೆ’ ವಿನೂತನ ಅಭಿಯಾನಕ್ಕೆ ಚಾಲನೆ
Last Updated 11 ಜುಲೈ 2017, 7:45 IST
ಅಕ್ಷರ ಗಾತ್ರ

ಯಾದಗಿರಿ: ಸ್ವಚ್ಛತೆ ಉತ್ತಮ ಬದುಕಿನ ಲಕ್ಷಣ. ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವುದು ಕೂಡ ಉತ್ತಮ ನಾಗರಿಕರ ಲಕ್ಷಣ. ಸ್ವಪ್ರೇರಣೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ನಗರ ಸುಂದರವಾಗಿರಲು ಸಾಧ್ಯ. ದಯವಿಟ್ಟು ಸ್ವಚ್ಛತೆಯತ್ತ ಗಮನ ಕೊಡಿ.. ಶೌಚಾಲಯ ನಿರ್ಮಿಸಿಕೊಳ್ಳಿ..  ಅದಕ್ಕೆ ಬೇಕಾದ ನೆರವು ನಗರಸಭೆ ನೀಡಲಿದೆ.

ನಗರದ 8ನೇ ವಾರ್ಡ್‌ನಲ್ಲಿ ಸೋಮವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ನಗರಸಭೆ ನಡಿಗೆ ವಾರ್ಡ್ ಕಡೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಅವರು ವಾರ್ಡಿನ ಮನೆಮನೆಗೆ ಭೇಟಿ ನೀಡಿ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ಪರಿ ಇದು.

‘ಯಾದಗಿರಿ ನಗರ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಆದರೆ, ಮೂಲಸೌಕರ್ಯದ ಕೊರತೆಯಿಂದ  ನಿವಾಸಿಗಳಿಗೆ ಸಮಸ್ಯೆಗಳು ಹೆಚ್ಚು ಕಾಡುತ್ತಿವೆ. ಜನರು ಅನುಭವಿಸುತ್ತಿರುವ ತೊಂದರೆಗಳನ್ನು ವಾಸ್ತವವಾಗಿ ಅರಿತುಕೊಳ್ಳಲು ಈ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಒಂದು ತಿಂಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ. ನಿತ್ಯ ವಾರ್ಡ್‌ಗಳಲ್ಲಿ ಸಂಚರಿಸಿ ಅಲ್ಲಿನ ಸಮಸ್ಯೆಯ ಬಗ್ಗೆ ಪಟ್ಟಿ ಮಾಡಿಕೊಂಡು ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನಿವಾಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

‘ಜನರು ಪ್ಲಾಸ್ಟಿಕ್ ಬಳಸುವುದನ್ನು ಮೊದಲು ಕೈಬಿಡಬೇಕು. ಚರಂಡಿಗಳಲ್ಲಿ ಬಹುತೇಕ ಪ್ಲಾಸ್ಟಿಕ್ ವಸ್ತುಗಳೇ ತುಂಬಿವೆ. ಇದರಿಂದಾಗಿ ಚರಂಡಿಗಳು ಹಾಳಾಗಿವೆ. ಈ ಬಗ್ಗೆ ಜನರು ಮೊದಲು ತಿಳಿದುಕೊಳ್ಳುವ ಮೂಲಕ ಅಭಿಯಾನಕ್ಕೆ ಸಹಕಾರ ನೀಡಿದರೆ ನಗರ ಸೌಂದರ್ಯವನ್ನು ಕಾಪಾಡಬಹುದು’ ಎಂದು ಹೇಳಿದರು.

ನಗರಸಭೆ ಸದಸ್ಯೆ ಅನ್ನಪೂರ್ಣ ಆಂದೇಲಿ, ಅಧಿಕಾರಿಗಳಾದ ಬಸವರಾಜ, ಸಂತೋಷ , ಕೃಷ್ಣಮೂರ್ತಿ ಕುಲಕರ್ಣಿ, ರಿಯಾಜ್ ಪಟೇಲ್ ವರ್ಕನಳ್ಳಿ, ದೀಪಕ್ ಪೊದ್ದಾರ, ಅಶೋಕ ಮುದ್ನಾಳಕರ್ ಇದ್ದರು.

***

14 ಸಾವಿರ ಶೌಚಾಲಯ ನಿರ್ಮಾಣ ಗುರಿ
ಯಾದಗಿರಿ:
ನಗರದಲ್ಲಿ 1ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 14 ಸಾವಿರ ಕುಟುಂಬಗಳಿವೆ. ವಾರ್ಡಿಗೆ ಹತ್ತಾರು ಮನೆಗಳಲ್ಲಿ ಮಾತ್ರ ಶೌಚಾಲಯಗಳು ಇವೆ. 14 ಸಾವಿರ ಸಾವಿರ ಶೌಚಾಲಯ ನಿರ್ಮಾಣಕ್ಕೆ ನಗರಸಭೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ 400 ಅರ್ಜಿಗಳು ಬಂದಿವೆ. ಕೆಲವರು ನಮಗೇಕೆ ಶೌಚಾಲಯ ಎಂದು ಪ್ರಶ್ನಿಸಿದ್ದಾರೆ. ಅಂತಹವರಿಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ‘ನಗರಸಭೆ ನಡಿಗೆ ವಾರ್ಡ್‌ ಕಡೆಗೆ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಿಂದ ಜನರು ಸ್ವಚ್ಛತೆ ಬಗ್ಗೆ ಅರಿವು ಪಡೆದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ತಿಳಿಸಿದರು.

ಪ್ರತಿ ಶೌಚಾಲಯ ಫಲಾನುಭವಿಗಳಿಗೆ ₹15 ಸಾವಿರ ಅನುದಾನ ಒದಗಿಸಲಾಗುವುದು. ಕೇಂದ್ರ ₹5 ಸಾವಿರ ನೀಡಿದರೆ, ಉಳಿದದ್ದನ್ನು ನಗರಸಭೆ ಸ್ಥಳೀಯ ನಿಧಿ ಅಥವಾ 14ನೇ ಹಣಕಾಸು ಯೋಜನೆಯಡಿ ಆರ್ಥಿಕ ನೆರವು ಒದಗಿಲಿದೆ ಎಂದು ಮಾಹಿತಿ ನೀಡಿದರು.

***

ಎಲ್ಲೆಯವರೆಗೆ ಜನರು ಸ್ವಯಂಪ್ರೇರಣೆಯಿಂದ ಸ್ವಚ್ಛತೆ ಬಗ್ಗೆ ಗಮನಹರಿಸುವುದಿಲ್ಲವೋ ಅಲ್ಲಿಯವರೆಗೆ ನಗರದ ಸ್ವಚ್ಛತೆ ಕಾಪಾಡುವುದು ಕಷ್ಟ
ಲಲಿತಾ ಅನಪೂರ, ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT