ಉಡುಪಿ: ವೈವಿದ್ಯತೆಯಲ್ಲಿ ಏಕತೆಯನ್ನು ಸಾರುತ್ತಿರುವ ಪ್ರಾದೇಶಿಕ ಭಾಷೆ ಇಂದು ಅವನತಿಯತ್ತ ಸಾಗುತ್ತಿದೆ ಎಂದು ಲೇಖಕ ನಾಗತಿಹಳ್ಳಿ ಚಂದ್ರ ಶೇಖರ್ ವಿಷಾದ ವ್ಯಕ್ತಪಡಿಸಿದರು. ಮಣಿಪಾಲ ವಿಶ್ವವಿದ್ಯಾಲಯ ಸೋಮವಾರ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಾಷೆ ರಾಜಕೀಯ ಮತ್ತು ಶಿಕ್ಷಣ ಮಾಧ್ಯಮ‘ ಬಹು ಭಾಷತ್ವದ ಸವಾಲುಗಳು’ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರಾದೇಶಿಕ ಭಾಷೆಗಳು ಅವನತಿಯತ್ತ ಸಾಗುತ್ತಿರುವುದರಿಂದ ನಮ್ಮ ಸಂಸ್ಕೃತಿ ಪರಂಪರೆಗಳ ಸರಪಳಿ ಕಳಚಿ ಹೋಗುತ್ತಿದೆ. ಮುಂದಿನ ಪೀಳಿಗೆಯಲ್ಲಿ ಅಕ್ಕಮಹಾದೇವಿ, ಬಸವಣ್ಣ ನಂತಹ ವಚನಕಾರರಂತಹ ವ್ಯಕ್ತಿಗಳು ಕಾಣ ಸಿಗುವುದು ಕಷ್ಟ’ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಭಾಷೆಯನ್ನು ಎಷ್ಟು ಜನರು ಮಾತನಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಆದರಲ್ಲಿನ ಸಂಸ್ಕೃತಿ ಪರಂಪರೆಯ ಸೊಗಡು ಒಮ್ಮೆ ಕಳೆದುಕೊಂಡರೆ ಮತ್ತೆ ಆ ಭಾಷೆ ಧ್ವನಿ ಪಡೆಯಲು ಕಷ್ಟ ಸಾಧ್ಯ.ಈ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ಹೇಳಿದರು.
‘ಯಾಂತ್ರಿಕೃತ ಬದುಕಿನ ಒತ್ತಡದಲ್ಲಿ ಪ್ರತಿಯೊಬ್ಬರು ತಮ್ಮ ಯೋಚನ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಇಂದು ಭಾಷೆ ಕೇವಲ ಒಂದು ಸದ್ದು ಎನ್ನುವ ಹಂತಕ್ಕೆ ನಾವು ಬಂದಿದ್ದೇವೆ. ಆದರೆ ಭಾಷೆ ಮನುಷ್ಯರ ನಡುವಿ ಸಂವಾದಕ್ಕಿರುವ ಆತ್ಮದ ಧ್ವನಿಯಾಗಿದೆ’ ಎಂದರು.
‘ಮೊಬೈಲ್ ಬಳಕೆಯಲ್ಲಿ ಕರ್ನಾಟಕ ದೇಶದಲ್ಲಿ ಆರನೇ ಸ್ಥಾನ ಪಡೆದಿದೆ. ಸುಮಾರು 5.5 ಕೋಟಿ ಜನರು ಮೊಬೈಲ್ ಬಳಕೆದಾರರಲ್ಲಿ ಬಹತೇಕರು ಕನ್ನಡ ಲಿಪಿಗೆ ಒಗ್ಗಿಲ್ಲ. ಅಂತರ್ ಜಾಲದಲ್ಲೂ ಭಾಷೆಯ ಬಳಕೆ ನಿರಾಶದಾಯಕವಾಗಿದೆ. ಕನ್ನಡಿಗರ ಉದಾಸೀನ ಮನೋಭಾವದಿಂದ ಕನ್ನಡದ ಕಡೆಗಣನೆಯಾಗುತ್ತಿದೆ’ ಎಂದು ಲೇಖಕಿ ಭುವನೇಶ್ವರಿ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
‘ ಕನ್ನಡ ಮಾದ್ಯಮ ಶಾಲೆಗಳ ಅವನತಿಗೆ ಸರ್ಕಾರ ಮೂಲ ಕಾರಣವಾಗಿದೆ. ಸರ್ಕಾರದ ಉದಾರ ಪರವಾನಗಿ ನೀತಿಯಿಂದಾಗಿ ಆಂಗ್ಲ ಮಾಧ್ಯಮ ಶಾಲೆಗಳು ಅಣಬೆಗಳಂತೆ ತಲೆಯೆತ್ತಿ ನಿಂತಿದ್ದೆ’ ಎಂದು ಪ್ರೊ.ಮಹಾಬಲೇಶ್ವರ್ ರಾವ್ ಆರೋಪಿಸಿದರು.
‘ರಾಜ್ಯದಲ್ಲಿ ಶೇ 69 ರಷ್ಟು ಜನರಿಗೆ ಕನ್ನಡ ಮಾತೃ ಭಾಷೆಯಾಗಿದೆ. ಉಳಿದ ಶೇ31ರಷ್ಟು ಮಂದಿಗೆ ದ್ವಿತೀಯ ಭಾಷೆಯಾಗಿದೆ. ಆದರೂ ನಮ್ಮಲ್ಲಿ ಕನ್ನಡ ಆಳವಡಿಕೆಗೆ ಆಳಕು. ಪ್ರತಿಯೊಂದು ಮಗುವಿಗೂ 1ನೇ ತರಗತಿಯಿಂದ 10 ತರಗತಿಯ ವರೆಗಿನ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿ ಸಿಗುವಂತಾದ ಮಾತ್ರ ಕನ್ನಡವನ್ನು ಉಳಿಸಿ ಬೆಳಸ ಬಹುದು ಎಂದು ಡಾ.ನಾ. ಸೊಮೇಶ್ವರ ನುಡಿದರು. ಎಸ್.ಎಂ.ಎಸ್ ಆಂಗ್ಲ ಮಾಧ್ಯಮದ ಪ್ರಾಶುಂಪಾಲೆ ಅಭಿಲಾಷ, ಪ್ರೊ.ವರದೇಶ ಹಿರೇಗಂಗ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.