ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ರೆ ಎಲ್ರೂ ಚಂದ ಕಾಣ್ತಾರೆ...

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಕಲಾವತಿ ಬೈಚಬಾಳ.

*

ಹಲೋ ವೈಷ್ಣವಿ. ಸಾರಿ ಸಾರಿ, ಹಲೋ ಸನ್ನಿಧಿ. ಹೇಗಿದ್ದೀರಿ?

ಚೆನ್ನಾಗಿದ್ದೀನಿ. ನೀವೂ ವೈಷ್ಣವಿ ಅಂದ್ರೂ ನಾನು ಹಾಯ್ ಅಂತೀನಿ. ನನಗೆ ರೂಢಿ ಆಗಿದೆ.

ನಂದು ಬಿಜಾಪುರ. ನಾನೂ 'ಅಗ್ನಿಸಾಕ್ಷಿ' ನೋಡ್ತೀನ್ರೀ...

ಹೌದಾ, ಥ್ಯಾಂಕ್ಸ್.

ಏನು ಮುಂದಿನ ಟ್ವಿಸ್ಟು?

ಕಥೆ ಬರೆದವರನ್ನೇ ಕೇಳಿ. ನಂಗೆ ಗೊತ್ತಿಲ್ಲಪ್ಪಾ.

ಹೋಗ್ಲಿ, ಆಗ್ನಿಸಾಕ್ಷಿ ಬಗ್ಗೆ ಒಂದಿಷ್ಟು ಮಾತಾಡಿ...

ಒಂದಿಷ್ಟು ಏನು, ಎಷ್ಟು ಬೇಕಾದ್ರೂ ಮಾತಾಡ್ತೀನಿ. ‘ಅಗ್ನಿಸಾಕ್ಷಿ’ ನನಗೆ ಹೊಸ ಜೀವನ ಕೊಟ್ಟಿದೆ. ಚಿತ್ರೀಕರಣ ತಂಡದಲ್ಲಿ ಒಂದೇ ಕುಟುಂಬ ಎನ್ನುವ ಹಾಗೆ ಕೆಲಸ ಮಾಡ್ತಿದ್ದೀವಿ. ಎರಡು ವರ್ಷಗಳ ಅನುಭವ ನಿಜಕ್ಕೂ ಅದ್ಭುತ. ನಾನಂತೂ ತುಂಬಾ ಎಂಜಾಯ್ ಮಾಡ್ತೀದಿನಿ.

ನಟಿ ಆಗಬೇಕು ಅಂತ ಯಾವಾಗ ಅನಿಸ್ತು?

ಕಾಲೇಜಿನಲ್ಲಿ ಓದ್ತಾ ಇದ್ದಾಗ ನಟನೆ ಶುರು ಮಾಡಿದ್ದೆ. ಒಂದು ದಿನ ದೇವಸ್ಥಾನದಲ್ಲಿ ನಮ್ಮ ಅಸೋಸಿಯೆಟ್ ಡೈರೆಕ್ಟರ್ ಮಾತನಾಡಿಸಿದ್ರು. ಅವಕಾಶದ ಬಗ್ಗೆ ಹೇಳಿದ್ರು. ಮನೇಲಿ ಮಾತಾಡಿ ಒಪ್ಪಿಕೊಂಡೆ. ನಾನು 'ಅಗ್ನಿಸಾಕ್ಷಿ'ಗೆ ಬಂದಿದ್ದು ಅನಿರೀಕ್ಷಿತ.

ನೀವು ಭಾಳ ಛಂದ್ ಅದೀರಿ...

ಓಹ್, ಹೌದಾ? ಥ್ಯಾಂಕ್ಸ್

ನಿಮ್ಮ ಸೌಂದರ್ಯದ ಗುಟ್ಟು ತಿಳ್ಕೋಬೋದಾ?

ಗುಟ್ಟುಪಟ್ಟು ಏನೂ ಇಲ್ಲ. ದಿನಾಲು ಯೋಗ ಮಾಡ್ತೀನಿ, ಚೆನ್ನಾಗಿ ನೀರು ಕುಡಿತೀನಿ. ನಗ್ತಾ ಇದ್ರೆ ಎಲ್ರೂ ಚಂದ ಕಾಣ್ತಾರೆ.ನಾನಂತೂ ಎಲ್ಲರ ಜೊತೆಗೆ ನಗ್ತಾನೇ ಮಾತಾಡ್ತೀನಿ. ಸೀರೆ ನನಗೆ ತುಂಬಾ ಇಷ್ಟ. ಸೀರೆ ಉಡೋಕೆ ಅಂತಾನೇ ಹಬ್ಬ- ಫಕ್ಷನ್‌ಗಳಿಗೆ ಕಾಯ್ತೀನಿ.

ಬಿಡುವಿದ್ದಾಗ ಏನ್ ಮಾಡ್ತೀರಿ?

ನಂಗೆ ಬೆಲ್ಲಿ ಡಾನ್ಸ್ ಬರುತ್ತೆ. ಡಾನ್ಸ್ ಅಂದ್ರೆ ತುಂಬಾ ಇಷ್ಟ. ಟಿ.ವಿ, ಫಿಲ್ಮ್ ನೋಡ್ತೀನಿ. ಕುಟುಂಬದೊಂದಿಗೆ ಸಮಯ ಕಳಿತೀನಿ.

ನಿಮ್ಮಿಷ್ಟ ನಟ-ನಟಿ, ಸಿನಿಮಾ?

ಎಲ್ಲ ಕನ್ನಡದ ಹುಡುಗೀರಂತೆ ನಂಗೂ ಸುದೀಪ್, ಗಣೇಶ್ ಅಂದ್ರೆ ಇಷ್ಟ. ಹಿಂದಿಯಲ್ಲಿ ಶಾರುಖ್‌ಖಾನ್ ನೆಚ್ಚಿನ ನಟ. ಕಲ್ಪನಾ ನನ್ನ ನೆಚ್ಚಿನ ನಟಿ. ಶ್ರೀದೇವಿ, ರೇಖಾ ಅಭಿನಯವೂ ಇಷ್ಟ ಆಗುತ್ತೆ. ನಾನು ಎಷ್ಟೊಂದು ಸಿನಿಮಾ ನೋಡ್ತೀನಿ. ಹೀಗಾಗಿ ಇಂಥದ್ದೇ ಸಿನಿಮಾ ಇಷ್ಟ ಅಂತ ಹೇಳೋದು ಕಷ್ಟ. 'ಮುಗುಳುನಗೆ' ಚೆನ್ನಾಗಿದೆ ಅಲ್ವಾ?

ಸಿನಿಮಾ ಬದುಕಿನ ಬಗ್ಗೆಯೂ ಮಾತನಾಡಿ...

ಸಿನಿಮಾಕೆ ಬರಬೇಕು ಅಂತ ಆಸೆ ಇತ್ತು. ಆದ್ರೆ ಇಷ್ಟು ಬೇಗ ಅವಕಾಶ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ‘ಭಲೇಹುಚ್ಚ’ ನನ್ನ ಮೊದಲ ಚಿತ್ರ. ಕಾರಣಾಂತರಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಇನ್ನೆರಡು ಚಿತ್ರಗಳಲ್ಲಿ ನಟನೆ ಮಾಡ್ತಿದೀನಿ. ‘ರೀಲೆ’ ಚಿತ್ರದ ಚಿತ್ರೀಕರಣ ಮುಗಿದಿದೆ. ‘ಚಾಕೋಲೆಟ್ ಬಾಯ್’ ಚಿತ್ರೀಕರಣ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ನಿಮ್ಮ ವೈಷ್ಣವಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ತಾಳೆ.

ನಟಿಯಾಗಬೇಕು ಅಂದ್ರೆ 'ಎಲ್ಲದಕ್ಕೂ' ಸಿದ್ಧರಿರಬೇಕು ಅನ್ನೋ ಮಾತಿದೆ...

'ಎಲ್ಲದಕ್ಕೂ' ಅಂತ ಯಾಕೆ ಹೇಳ್ತಿದ್ದೀರಿ ಅಂತ ನನಗೆ ಗೊತ್ತಾಯ್ತು. ನನಗಂತೂ ಅಂಥ ಅನುಭವ ಆಗಿಲ್ಲ. ನಾನೆಲ್ಲಿಗೆ ಹೋದ್ರು ನನ್ನ ತಂದೆ ಅಥವಾ ತಾಯಿ ಜೊತೆಲಿ ಇರ್ತಾರೆ. ನನ್ನನ್ನು ಭೇಟಿ ಆಗೋ ಜನರು ಕೂಡ ಒಳ್ಳೆಯ ರೀತಿಯಲ್ಲಿ ಮಾತಾಡಿಸ್ತಾರೆ. ನಮ್ಮ ಕುಟುಂಬದಲ್ಲಿ ಒಬ್ಬಳು ಅನ್ನೋ ರೀತಿಯಲ್ಲೇ ನಡೆಸಿಕೊಳ್ತಾರೆ.

**

ಲೈಂಗಿಕ ದೌರ್ಜನ್ಯಕ್ಕೆ ಬಟ್ಟೆ ಕಾರಣ ಅನ್ನೋ ವಾದ ನೀವು ಒಪ್ತೀರಾ?

ಇಲ್ಲ ಕಣಮ್ಮ, ನಾನು ಒಪ್ಪಲ್ಲ. ನಾನ್ ಹೇಳೋದಿಷ್ಟೇ. ಅತ್ಯಾಚಾರಗಳಿಗೆಲ್ಲ ಹುಡುಗೀರು ಹಾಕೋ ಬಟ್ಟೆಯೇ ಕಾರಣ ಅಲ್ಲ. ಗಂಡಸರು ಅನಿಸಿಕೊಂಡವರು ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿಯೇ ಇದಕ್ಕೆ ಕಾರಣ. ಅಂಥವರ ಮನಸು ಸರಿ ಹೋದ್ರೆ ಸಮಾಜ ತಾನಾಗಿಯೇ ಸರಿ ಹೋಗುತ್ತೆ. ನಾನು ಗಂಡಸರಿಗೆ ಹೇಳುವುದು ಇಷ್ಟೇ, ನೀವು ಹುಡುಗೀರನ್ನು ನೋಡೋ ದೃಷ್ಟಿ, ಅವರೊಡನೆ ವರ್ತಿಸುವ ರೀತಿಯೇ ನೀವು ಎಂಥವರು ಅಂತ ತಿಳಿಸುತ್ತೆ.

ನಿಮ್ಮ ತಾಯಿ, ತಂಗಿಯರನ್ನು ನೋಡುವ ರೀತಿಯಲ್ಲೇ ಇತರ ಹೆಣ್ಣು ಮಕ್ಕಳನ್ನೂ ನೋಡಿ ಎಲ್ಲವೂ ಸರಿ ಆಗುತ್ತೆ. ಇಂಥ ವಿಷಯಗಳಲ್ಲಿ ಹುಡುಗಿಯರೂ ಗಟ್ಟಿಯಾಗಿರಬೇಕು. ಯಾವ ಮುಲಾಜೂ ಇಟ್ಟುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT