ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ, ಅಂಬೇಡ್ಕರ್‌ ಚಿಂತನೆಗಳ ನಡುವೆ ಸಮನ್ವಯತೆ ಸಾಧ್ಯ’

Last Updated 2 ಅಕ್ಟೋಬರ್ 2017, 20:01 IST
ಅಕ್ಷರ ಗಾತ್ರ

ಸಾಗರ: ‘ತಾತ್ವಿಕವಾಗಿ ಅನೇಕ ಭಿನ್ನತೆಗಳು ಇದ್ದರೂ ಗಾಂಧಿ ಹಾಗೂ ಅಂಬೇಡ್ಕರ್ ಚಿಂತನೆಗಳ ನಡುವೆ ಒಂದು ಮಟ್ಟದ ಸಮನ್ವಯತೆ ತರಲು ಸಾಧ್ಯವಿದೆ. ಇವತ್ತಿನ ಸನ್ನಿವೇಶದಲ್ಲಿ ಇದು ತುರ್ತಾಗಿ ಆಗಬೇಕಾದ ಕೆಲಸ ಕೂಡ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯ
ಪಟ್ಟರು.

ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ಸೋಮವಾರ ನಡೆದ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ‘ತಲೆಮಾರುಗಳ ಜೊತೆಗೆ ಗಾಂಧೀಜಿ ನಡೆಸಿದ ಸಂವಾದ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ದಲಿತರ ವಿಮೋಚನೆಯ ಮಾರ್ಗಗಳ ಕುರಿತು ಗಾಂಧಿ ಹಾಗೂ ಅಂಬೇಡ್ಕರ್‌ ನಡುವೆ ಭಿನ್ನಮತ ಇತ್ತೇ ಹೊರತು ಇಬ್ಬರ ಅಂತಿಮ ಗುರಿಯೂ ಒಂದೇ ಆಗಿದ್ದ ಕಾರಣಕ್ಕೆ ಅವರ ವಿಚಾರಗಳಲ್ಲಿ ಸಮನ್ವಯತೆ ಕಾಣುವ ಅವಕಾಶವಿದೆ ಎಂದು ಗುಹಾ ಪ್ರತಿಪಾದಿಸಿದರು.

‘ಅಸ್ಪೃಶ್ಯತೆ ಎನ್ನುವುದು ಮೇಲ್ಜಾತಿಯವರ ಸಮಸ್ಯೆ, ಅದೊಂದು ಪಾಪ. ನಮ್ಮ ಮನಸ್ಸನ್ನು ಶುದ್ಧೀಕರಿಸಿಕೊಂಡು ಮೇಲ್ಜಾತಿಯವರು ಅಸ್ಪೃಶ್ಯತೆಯ ನಿವಾರಣೆಗೆ ಮುಂದಾಗಬೇಕು ಎನ್ನುವುದು ಗಾಂಧೀಜಿ ಚಿಂತನೆಯಾಗಿತ್ತು. ಅದಕ್ಕೆ ಪ್ರತಿಯಾಗಿ, ಶೋಷಣೆ, ಅವಮಾನ ಅನುಭವಿಸಿದ ದಲಿತರಿಂದಲೇ ಅವರ ವಿಮೋಚನೆಯಾಗಬೇಕು ಎಂದು ಅಂಬೇಡ್ಕರ್‌ ಭಾವಿಸಿದ್ದರು. ಹೀಗಾಗಿ ದಲಿತರ ವಿಮೋಚನೆಯ ಪ್ರಶ್ನೆ ಬಂದಾಗ ಅಂಬೇಡ್ಕರ್‌ ಅಥವಾ ಗಾಂಧಿ ಎಂದು ಪ್ರತ್ಯೇಕಿಸುವ ಅಗತ್ಯವಿಲ್ಲ’ ಎಂದರು.

ಅಂಬೇಡ್ಕರ್‌ ಅವರಂತೆಯೇ ಸಾವರ್ಕರ್‌ ಜೊತೆಗೂ ಗಾಂಧೀಜಿ ಸಂವಾದ ನಡೆಸಿದ್ದಾರೆ. ಭಾರತ ಎನ್ನುವುದು ಹಿಂದೂ ರಾಷ್ಟ್ರವಾಗಬೇಕು, ಉಳಿದ ಧರ್ಮೀಯರು ಇಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿರಬೇಕು, ಭಾರತ ತನ್ನ ಸೈನ್ಯವನ್ನು ಬಳಸಿಕೊಂಡು ಅಮೆರಿಕದಂತೆ ಒಂದು ಬಲಿಷ್ಠ ರಾಷ್ಟ್ರವಾಗಬೇಕು ಎಂದು ಸಾವರ್ಕರ್‌ ಬಯಸಿದ್ದರು. ಬಹುಸಂಸ್ಕೃತಿ, ಬಹುಧರ್ಮದ ಸಹೋದರತ್ವ, ಸೌಹಾರ್ದದ ನೆಲೆಗಟ್ಟಿನಲ್ಲಿ ಭಾರತ ನಿರ್ಮಾಣವಾಗಬೇಕು ಎಂದು ಗಾಂಧಿ ಬಯಸಿದ್ದರು. ಹೀಗಾಗಿ ಗಾಂಧಿ ಮತ್ತು ಸಾವರ್ಕರ್‌ ಚಿಂತನೆಗಳ ನಡುವೆ ಯಾವುದೇ ಕಾರಣಕ್ಕೂ ಸಮನ್ವಯತೆ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪಕ್ಕಾ ಎಡಪಂಥೀಯ ನಿಲುವು ಹೊಂದಿದ್ದ ಭಗತ್‌ಸಿಂಗ್‌ ಮತ್ತು ಅವರ ತಂಡದ ರಾಷ್ಟ್ರಪ್ರೇಮದ ಬಗ್ಗೆ ಗಾಂಧೀಜಿಗೆ ತಕರಾರು ಇರಲಿಲ್ಲ. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆ ಗುಂಪು ಹಿಡಿದ ಹಿಂಸಾಮಾರ್ಗವನ್ನು ಗಾಂಧಿ ಪ್ರಬಲವಾಗಿ ವಿರೋಧಿಸಿದ್ದರು. ಯಾವುದೇ ಕೆಲಸಕ್ಕೆ ಹಿಂಸೆಯನ್ನು ಬಳಸಿದರೆ, ಪ್ರತಿಫಲವಾಗಿ ಅದು ದೊಡ್ಡ ಪ್ರಮಾಣದ ಪ್ರತಿಹಿಂಸೆಯನ್ನು ಹುಟ್ಟುಹಾಕುತ್ತದೆ ಎಂಬುದು ಗಾಂಧೀಜಿ ನಿಲುವಾಗಿತ್ತು ಎಂದು ನೆನಪಿಸಿದರು.

ನೆಹರೂ ಜೊತೆ ಗಾಂಧೀಜಿ ಭಾವುಕ ನೆಲೆಯ ಸಂಬಂಧ ಹೊಂದಿದ್ದರು. ಆದರೆ ನೆಹರೂ ಬೃಹತ್‌ ಕೈಗಾರಿಕೆ, ದೊಡ್ಡ ಗಾತ್ರದ ಅಣೆಕಟ್ಟು, ಯೋಜನೆಗಳ ಮೂಲಕ ಭಾರತದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು. ಗಾಂಧಿ ಗುಡಿ ಕೈಗಾರಿಕೆ, ವಿಕೇಂದ್ರೀಕರಣ, ಸರ್ವೋದಯ, ಆತ್ಮಬಲದ ಮೂಲಕ ಭಾರತವನ್ನು ನಿರ್ಮಿಸಬೇಕು ಎಂದು ಆಶಿಸಿದ್ದರು. ಹೀಗಾಗಿ ನೆಹರೂ, ಗಾಂಧಿಯ ಮಾನಸಪುತ್ರರಂತೆ ಇದ್ದರೂ ಗಾಂಧಿ ವಿಚಾರವನ್ನು ಅವರ ಜೊತೆ ಹೆಚ್ಚಿನ ಸಂವಾದ ನಡೆಸದೆ ಇದ್ದಾಗ್ಯೂ ನಿಜವಾದ ಅರ್ಥದಲ್ಲಿ ಮುಂದುವರೆಸಿದವರು ಸಮಾಜವಾದಿಗಳು ಎಂದರು.

ಗಾಂಧಿ ತಮ್ಮ ಸಮಕಾಲೀನರ ಪೈಕಿ ನಡೆಸಿದ ಸಂವಾದಗಳಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜೊತೆ ನಡೆಸಿದ ಸಂವಾದ ಕೂಡ ಪ್ರಮುಖವಾದದ್ದು. ದಂಡಿ ಸತ್ಯಾಗ್ರಹದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಗತ್ಯವಿಲ್ಲ ಎಂದು ಗಾಂಧೀಜಿ ಭಾವಿಸಿದ್ದಕ್ಕೆ ಕಮಲಾದೇವಿ ವಿರೋಧ ವ್ಯಕ್ತಪಡಿಸಿದ ಕಾರಣ ಮಹಿಳೆಯರು ಕೂಡ ಆ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಯಿತು ಎಂಬುದನ್ನು ಅವರು ನೆನಪಿಸಿದರು.

‘ವಿಚಾರದ ಪ್ರಶ್ನೆ ಬಂದಾಗ ಶೇ100ರಷ್ಟು ಯಾರೂ ಪರಿಪೂರ್ಣರಲ್ಲ ಎಂದು ಗಾಂಧಿ ಹೇಳುತ್ತಿದ್ದರು. ಅಪರಿಪೂರ್ಣತೆ, ಮಿತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಒಂದು ವಿಚಾರ ಮತ್ತು ವ್ಯಕ್ತಿಯನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಗಾಂಧಿ ನಂಬಿದ್ದರು. ಆದರೆ ಇಂದು ನಾವು ಮಾತ್ರ ಪರಿಪೂರ್ಣರು, ನಮ್ಮ ವಿರುದ್ಧವಾಗಿ ಚಿಂತಿಸುವವರು ಇರಲೇಬಾರದು ಎನ್ನುವ ಧೋರಣೆ ಮುನ್ನೆಲೆಗೆ ಬಂದಿರುವುದರಿಂದ ಗೌರಿ ಲಂಕೇಶ್‌ ಅವರಂಥವರ ಹತ್ಯೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಗಾಂಧಿ ಹೀಗಳೆಯಲು ಅಸಭ್ಯ ಭಾಷೆ: ಗಾಂಧೀಜಿ ಪ್ರತಿಯೊಂದು ವಿಚಾರದ ಬಗ್ಗೆ ಪ್ರತಿಪಾದನೆ ಮಾಡುವಾಗ ಸಭ್ಯ ಭಾಷೆಯನ್ನೆ ಬಳಸಿದ್ದಾರೆ. ಆದರೆ ಇಂದು ಅವರನ್ನು ಹೀಗೆಳೆಯಲು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಅಸಭ್ಯ ಭಾಷೆ ಬಳಕೆ
ಯಾಗುತ್ತಿರುವುದು ವಿಷಾದದ ಸಂಗತಿ. ಬಲಪಂಥೀಯರಿಗೆ ಗಾಂಧಿ, ಮುಸ್ಲಿಮ
ರನ್ನು ಓಲೈಸುತ್ತಿರುವಂತೆ ಕಂಡರೆ ಎಡಪಂಥೀಯರಿಗೆ, ದಲಿತರಿಗೆ ಮೇಲ್ಜಾತಿಯ ಸಮರ್ಥಕರಂತೆ ಕಾಣಿಸುತ್ತಿದ್ದಾರೆ. ಹೀಗೆ ಅನೇಕ ವರ್ಗದವರಿಗೆ ಗಾಂಧೀಜಿ ಸಮಸ್ಯೆಯಾಗಿ ಕಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಶ್ಲೇಷಿಸಿದರು.

ಸಂವಾದದಲ್ಲಿ ಡಿ.ಎಸ್‌.ನಾಗಭೂಷಣ, ಕೆ.ವಿ.ಅಕ್ಷರ, ಶ್ರೀನಿವಾಸ ಮೂರ್ತಿ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ನಂತರದ ಗೋಷ್ಠಿ
ಯಲ್ಲಿ ಕಲಾಪಿನಿ ಕೊಂಕಾಳಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಾತ್ಯಕ್ಷಿಕೆ ನಡೆಯಿತು. ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ತಿರುಗಾಟ ನಾಟಕ ‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’ (ನಿರ್ದೇಶನ : ಇಕ್ಬಾಲ್‌ ಅಹ್ಮದ್) ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT