‘ಬೇಕು–ಬೇಡ ಸಂತೆ’ಯಲ್ಲಿ ಕಂತೆ ಕಂತೆ ಬೇಡಿಕೆ

ಸೋಮವಾರ, ಮೇ 20, 2019
30 °C
ಸುಸ್ಥಿರ ನಗರಕ್ಕೆ ಜನರ ಹಕ್ಕೊತ್ತಾಯ l ಕಳಕಳಿ ಮೆರೆದ ಚಿಣ್ಣರು l ಉತ್ಸಾಹದಿಂದ ಭಾಗವಹಿಸಿದ ವೃದ್ಧರು

‘ಬೇಕು–ಬೇಡ ಸಂತೆ’ಯಲ್ಲಿ ಕಂತೆ ಕಂತೆ ಬೇಡಿಕೆ

Published:
Updated:
‘ಬೇಕು–ಬೇಡ ಸಂತೆ’ಯಲ್ಲಿ ಕಂತೆ ಕಂತೆ ಬೇಡಿಕೆ

ಬೆಂಗಳೂರು: ನಗರದ ಸುಸ್ಥಿರ ಅಭಿವೃದ್ಧಿಗೆ ಏನು ಬೇಕು, ಏನು ಬೇಡ ಎಂಬ ಬಗ್ಗೆ ಇಲ್ಲಿ ಜನರೇ ಮುಂದಾಗಿ ಹಕ್ಕೊತ್ತಾಯ ಮಂಡಿಸಿದರು. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮುನ್ನ ಸರ್ಕಾರ ಜನರ ಮನದಿಂಗಿತವನ್ನು ಅರಿತುಕೊಳ್ಳಬೇಕು ಎಂದು ಕೋರಿದರು. ಸಲಹೆಗಳನ್ನು ನೀಡಿದರು. ಅಕ್ರಮಗಳನ್ನು ಖಂಡಾತುಂಡವಾಗಿ ಖಂಡಿಸಿದರು.

ಜನರ ಆಶಯಗಳಿಗೆ ನಗರವನ್ನು ಕಟ್ಟುವ ಹೊಸ ಮಾದರಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ನಡೆದ ‘ಬೇಕು ಬೇಡ ಸಂತೆ’ ವೇದಿಕೆಯಾಯಿತು. ನಗರದ ಭವಿಷ್ಯ ನಿರ್ಮಾಣದ ಕನಸನ್ನು ಹಂಚಿಕೊಳ್ಳಲು ನೂರಾರು ಮಂದಿ ರಜಾದಿನವನ್ನು ಬಳಸಿಕೊಂಡರು. ಮಳೆಯ ಭಯದ ನಡುವೆಯೂ ಒಂದೆಡೆ ಕಲೆತು ನಗರದ ಕುರಿತ ಕಳಕಳಿಯನ್ನು ಗಟ್ಟಿ ಧ್ವನಿಯಲ್ಲಿ ಸಾರಿದರು. ಭಿತ್ತಿಬರಹ, ಚಿತ್ರಕಲೆ, ಹಾಡು, ನೃತ್ಯ ಹಾಗೂ ಪ್ರಹಸನಗಳು ‘ಬೇಕು–ಬೇಡ’ಗಳ ಬೇಡಿಕೆಗೆ ಹೊಸ ಆಯಾಮ ನೀಡಿದವು.

ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ‘ಉಕ್ಕಿನ ಸೇತುವೆ ಯೋಜನೆ’ ವಿರುದ್ಧದ ಹೋರಾಟಕ್ಕೆ ವರ್ಷ ತುಂಬಿದ ಸಲುವಾಗಿ ಸಿಟಿಜನ್ಸ್‌ ಫಾರ್‌ ಬೆಂಗಳೂರು ಹಾಗೂ ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ ನೇತೃತ್ವದಲ್ಲಿ ಅನೇಕ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಮೂರು ವರ್ಷದ ಪುಟಾಣಿಗಳಿಂದ ಹಿಡಿದ ವಯೋವೃದ್ಧರವರೆಗೆ ವಿವಿಧ ವಯೋಮಾನದವರು, ವಿವಿಧ ವೃತ್ತಿಯವರು, ವಿವಿಧ ಸಂಘಟನೆಗಳ ಸದಸ್ಯರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ‘ಕೆಲವರಿಂದ ಕೆಲವರಿಗಾಗಿ ಕೆಲವರು ನಡೆಸುವ ಸರ್ಕಾರ ಎಂಬ ಪರಿಸ್ಥಿತಿಯಲ್ಲಿ ನಮ್ಮ ಪ್ರಜಾಪ್ರಭುತ್ವ ಇದೆ. ಈ ಪರಿಸ್ಥಿತಿ ಹೋಗಲಾಡಿಸಲು ರಾಜಕೀಯರಹಿತ ಪ್ರತಿಭಟನೆಗಳ ಅಗತ್ಯ ಇದೆ’ ಎಂದರು.

‘ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವದ ಮಹತ್ವ ತೋರಿಸಿಕೊಡಲು ಈ ಕಾರ್ಯಕ್ರಮ ಹಮ್ಮಿಕೊಂಡೆವು. ಜನರಿಂದ ಸಿಕ್ಕಿರುವ ಸ್ಪಂದನೆಯಿಂದ ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ’ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಎನ್‌.ಎಸ್‌.ಮುಕುಂದ್‌ ತಿಳಿಸಿದರು.

‘ಜನರ ಆಶಯಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ತಲುಪಿಸುತ್ತೇವೆ. ಇದಕ್ಕಾಗಿ ನ.1ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ತಿಳಿಸಿದರು.

***

ಕನ್ನಡದ ಕೂಗು

ಅನೇಕರು ನಗರದಲ್ಲಿ ಕನ್ನಡ ಭಾಷೆಗೆ ಆದ್ಯತೆ ಸಿಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಅನ್ಯರಾಜ್ಯಗಳಿಂದ ಇಲ್ಲಿಗೆ ಬಂದವರು ಈ ನೆಲದ ಭಾಷೆ ಕಲಿತು ನಮ್ಮವರಾಗಬೇಕು ಎಂದು ಒಬ್ಬರು ಬೇಡಿಕೆ ಪಟ್ಟಿಯಲ್ಲಿ ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಕನ್ನಡೇತರ ಭಾಷಿಕರು ಕನ್ನಡ ಕಲಿಯುವ ಹಂಬಲ ವ್ಯಕ್ತಪಡಿಸಿದರು.

***

ಅನೇಕ ಚಿಣ್ಣರು ಚಿತ್ರಗಳನ್ನು ಬರೆಯುವ ಹಾಗೂ ‌ಮಾದರಿಗಳನ್ನು ನಿರ್ಮಿಸುವ ಮೂಲಕ ಕನಸಿನ ನಗರ ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟರು.

ರಸ್ತೆಗುಂಡಿಗಳ ಸಮಸ್ಯೆಯನ್ನೇ ಮಕ್ಕಳು ತಮ್ಮ ಕಲಾಕೃತಿಗಳಲ್ಲಿ ದೊಡ್ಡದಾಗಿ ಬಿಂಬಿಸಿದರು.ಸುರಕ್ಷಿತ ಸೈಕಲ್‌ ಸವಾರಿಗೆ ಅವಕಾಶ ಇರುವಂತೆ ಸಾರಿಗೆ ವ್ಯವಸ್ಥೆ ಬೇಕು. ಮೈದಾನಗಳ ಸಂಖ್ಯೆ ಹೆಚ್ಚಿಸಬೇಕು. ವಾಹನ ದಟ್ಟಣೆ ಇಲ್ಲದ ರಸ್ತೆಗಳಿರಬೇಕು. ಸೌರ ವಿದ್ಯುತ್‌ ಅವಲಂಬನೆ ಹೆಚ್ಚಬೇಕು. ನಗರದ ತುಂಬಾ ಮರಗಳಿರಬೇಕು ಎಂಬ ಆಶಯಗಳನ್ನು ಮಕ್ಕಳು ವ್ಯಕ್ತಪಡಿಸಿದರು.

***

ಶಿವಾನಂದ ವೃತ್ತದ ಬಳಿ ಉಕ್ಕಿನ ಮೇಲ್ಸೇತುವೆ ಬೇಡವೇ ಬೇಡ. ಅದರ ಬದಲು ರಸ್ತೆ ವಿಸ್ತರಣೆ ಮಾಡಲಿ.

ಪದ್ಮಿನಿ ವಿ.ರಾವ್‌, ಶಿವಾನಂದ ಸ್ಟೋರ್ಸ್‌ ನಿವಾಸಿ

***

ರಸ್ತೆಗಳಲ್ಲಿ ಭಾರಿ ಗುಂಡಿಗಳು ನಿರ್ಮಾಣವಾಗುವುದಕ್ಕೆ ಮಳೆ ನೀರು ಚರಂಡಿ ಸರಿ ಇಲ್ಲದಿರುವುದೇ ಕಾರಣ.

ಶಿವಗುರು, ಬಿಟಿಎಂ ಬಡಾವಣೆ ನಿವಾಸಿ

***

10 ವರ್ಷಗಳಿಗಿಂತ ಹಳೆಯ ಕಟ್ಟಡಗಳೂ ಎಸ್‌ಟಿಪಿ ನಿರ್ಮಿಸಿಕೊಳ್ಳಬೇಕು ಎಂಬುದನ್ನು ಕಡ್ಡಾಯ ಮಾಡಬಾರದು.

ಸಿ.ಎಸ್‌.ವಿ. ಪ್ರಸಾದ್‌, ಅಪಾರ್ಟ್‌ಮೆಂಟ್ ಸಮುಚ್ಚಯಗಳ ಒಕ್ಕೂಟದ ಅಧ್ಯಕ್ಷ

***

ನಗರ ಕೇವಲ ಶ್ರೀಮಂತರಿಗೆ ಸೇರಿದ್ದಲ್ಲ. ದುಡಿದು ಉಣ್ಣುವ ಬಡವರಿಗೂ ಇಲ್ಲಿ ಬದುಕುವ ಹಕ್ಕು ಸಿಗಬೇಕು.

ಸುಸ್ಮಿತಾ, ಎಲೆಕ್ಟ್ರಾನಿಕ್‌ಸಿಟಿ

***

ನಗರದ ಬೇರೆ ಭಾಗದಲ್ಲಿ ಮಳೆಯಾದರೂ ಕೋರಮಂಗಲದ ಮನೆಗಳಿಗೆ ನೀರು ನುಗ್ಗುತ್ತದೆ. ಇಲ್ಲಿನ ಒಳಚರಂಡಿಯ ಮಟ್ಟವನ್ನು ಸರಿದೂಗಿಸಬೇಕು.

ಪಾರ್ವತಿ ಶ್ರೀರಾಮ್‌, ಕೋರಮಂಗಲ ನಿವಾಸಿ

***

ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೇರಾ) ರೂಪಿಸಿಲ್ಲ. ಇನ್ನಷ್ಟು ಪ್ರಬಲ ಕಾಯ್ದೆ ಬೇಕು ‌‌

ಅಜಿತ್‌ ನಾಯಕ್‌, ಕೆಂಗೇರಿ ನಿವಾಸಿ.

***

ಏನು ಬೇಕು?

*ಮಳೆ ನೀರು ಸಂಗ್ರಹ ಕಡ್ಡಾಯ

*ಕಸದ ವೈಜ್ಞಾನಿಕ ವಿಲೇವಾರಿ

*ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದು

*ಉತ್ತಮ ರಸ್ತೆಗಳು

*ಪಾರದರ್ಶಕ ಆಡಳಿತ

***

ಏನು ಬೇಡ

* ಲ್ಯಾಂಡ್‌ಫಿಲ್‌ಗಳು

* ರಸ್ತೆಗುಂಡಿಗಳು

* ಕೆರೆಗಳನ್ನು ಗಲೀಜು ಮಾಡುವುದು

* ಪ್ಲಾಸ್ಟಿಕ್‌ ಬಳಕೆ

* ವಸತಿ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣಗಳು

* ವ್ಹೀಲಿಂಗ್‌ಗೆ ಅವಕಾಶ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry