ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಭಾರತದ ಆರ್ಥಿಕತೆಯ ಎಂಜಿನ್

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಭಾರತದ ಆರ್ಥಿಕತೆಯ ಇಂಜಿನ್ ಇದ್ದಂತೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು. ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕರ್ನಾಟಕವು ಏಕಾಂಗಿಯಾಗಿ ಅಭಿವೃದ್ಧಿಯ ಕನಸು ಕಂಡರೆ ಸಾಲದು. ಭಾರತದ ಸರ್ವತೋಮುಖ ಅಭಿವೃದ್ಧಿಯ ಕನಸು ಕಾಣುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

ಸಾಂಸ್ಕೃತಿಕ ಮತ್ತು ಭಾಷಿಕ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಕರ್ನಾಟಕವು ಮಿನಿ ಭಾರತದಂತಿದೆ. ದೇಶದ ಎಲ್ಲ ದಿಕ್ಕುಗಳ ಯುವ ಸಮುದಾಯದ ಗಮನ ಸೆಳೆದಿದೆ. ಜ್ಞಾನ ಮತ್ತು ಉದ್ಯೋಗ ಅರಸಿ ಇಲ್ಲಿಗೆ ಬರುತ್ತಿರುವ ಯುವಕರು ತಮ್ಮ ಶ್ರಮ ಮತ್ತು ಬೌದ್ಧಿಕತೆಯನ್ನು ಧಾರೆ ಎರೆಯುತ್ತಿದ್ದಾರೆ. ಇದರಿಂದ ಉಭಯತ್ರರಿಗೂ ಲಾಭವಾಗಿದೆ ಎಂದು ಹೇಳಿದರು.

ಸಾಂಸ್ಕೃತಿಕ, ಅಧ್ಯಾತ್ಮಿಕ, ಬೌದ್ಧಿಕ, ಶೈಕ್ಷಣಿಕ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಪರಂಪರೆ ಭವ್ಯವಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ಹಂಪಿಯು ವಿಶ್ವದ ವೈಭವಯುತ ಹಾಗೂ ಅತ್ಯುತ್ಕೃಷ್ಟ ನಗರಗಳಲ್ಲಿ ಒಂದಾಗಿತ್ತು ಎಂದು ಕೊಂಡಾಡಿದರು.

ಜಾಗತಿಕ ಆರ್ಥಿಕ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ಎದುರಿಸಿ ಭಾರತವನ್ನು ಪ್ರಕಾಶಮಾನವಾಗಿಸಲು ಉದಾತ್ತ ಪರಂಪರೆ, ಚರಿತ್ರೆಯನ್ನು ಹೊಂದಿದ ಕರ್ನಾಟಕವನ್ನು ಮಾದರಿಯಾಗಿಟ್ಟುಕೊಳ್ಳಬೇಕಿದೆ. ತಂತ್ರಜ್ಞಾನ ಮತ್ತು ಏಕತೆಯ ಉದ್ದೇಶವೇ ಪ್ರಗತಿಯ ಹಾದಿಯಲ್ಲಿ ನಮ್ಮನ್ನು ಮುನ್ನಡೆಯತ್ತ ಕೊಂಡೊಯ್ಯಬಲ್ಲದು. ಇದನ್ನು ಸಾಧಿಸುವಲ್ಲಿ ಉಭಯ ಸದನಗಳ ಸದಸ್ಯರ ಮೇಲೆ ವಿಶೇಷ ಜವಾಬ್ದಾರಿ ಇದೆ ಎಂದೂ ಅವರು ಹೇಳಿದರು.

‌ತ್ರೀ ‘ಡಿ’ಗಳು:

ಶಾಸಕಾಂಗಕ್ಕೆ ಡಿಬೇಟ್ (ಸಂವಾದ), ಡಿಸೆಂಟ್ (ಭಿನ್ನಾಭಿಪ್ರಾಯ), ಅಂತಿಮವಾಗಿ ಡಿಸೈಡ್‌ (ನಿರ್ಧಾರ) ಎಂಬ ಮೂರು ‘ಡಿ’ಗಳು ಮುಖ್ಯ. ಇದರ ಜತೆಗೆ ನಾಲ್ಕನೆಯದಾಗಿ  ಡೀಸೆನ್ಸಿ(ಸಭ್ಯ ನಡವಳಿಕೆ)ಯನ್ನೂ ಸೇರಿಸಿಕೊಂಡರೆ ಐದನೆಯ ‘ಡಿ’ ಆಗಿರುವ ಡೆಮಾಕ್ರಸಿ (ಪ್ರಜಾಪ್ರಭುತ್ವ) ವಾಸ್ತವವಾಗುತ್ತದೆ. ಶಾಸನಸಭೆ ಸದಸ್ಯರು ರಾಜಕೀಯ ನಂಬಿಕೆ, ಜಾತಿ, ಧರ್ಮ, ಲಿಂಗ, ಭಾಷೆಗಳಾಚೆಗೆ ನಿಂತು ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸಲು ಸಮರ್ಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಂವಾದ, ಚರ್ಚೆ, ಸೇವೆಗಳು ವಿಧಾನಸೌಧ ಮತ್ತು ರಾಜಕೀಯ ಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಈ ಶ್ರೇಷ್ಠ ನಾಡಿನ ಮಣ್ಣಿನ ಗುಣವಾಗಿದೆ. ವಿಜ್ಞಾನದಷ್ಟೇ ಆದ್ಯತೆಯನ್ನು ಇಲ್ಲಿನವರು ಅಧ್ಯಾತ್ಮಕ್ಕೂ ನೀಡಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಮತ್ತು ಬೌದ್ಧಿಕ ವಿಕಾಸಕ್ಕೆ ರಾಜ್ಯದವರ ಕೊಡುಗೆ ಅನನ್ಯ ಎಂದು ಹೇಳಿದರು

ದೇವೇಗೌಡರ ಮರೆತ ಕೋವಿಂದ್

ರಾಷ್ಟ್ರಪತಿ ಕೋವಿಂದ್, ಕರ್ನಾಟಕವನ್ನು ಆಳಿದ ಮುಖ್ಯಮಂತ್ರಿಗಳ ಹೆಸರುಗಳನ್ನು ಉಲ್ಲೇಖಿಸುವಾಗ ಎಚ್.ಡಿ. ದೇವೇಗೌಡರ ಹೆಸರು ಹೇಳುವುದನ್ನು ಮರೆತರು.

ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ ಅವರ ಹೆಸರು ಉಲ್ಲೇಖಿಸಿದ ರಾಷ್ಟ್ರಪತಿಗಳು ಎಸ್‌.ನಿಜಲಿಂಗಪ್ಪ, ದೇವರಾಜ ಅರಸ್, ಬಿ.ಡಿ. ಜತ್ತಿ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ, ಎಸ್.ಎಂ. ಕೃಷ್ಣ ಅವರನ್ನು ನೆನೆದರು.

ಕೆಲ ಕ್ಷಣ ಮಾತು ನಿಲ್ಲಿಸಿದ ರಾಷ್ಟ್ರಪತಿ ಅತ್ತಿತ್ತ ನೋಡಿದರು. ಜೆಡಿಎಸ್‌ ಸದಸ್ಯರು ದೇವೇಗೌಡ ಎಂದು ಕೂಗಿದರು.

‘ದೇವೇಗೌಡರು ಮುಖ್ಯಮಂತ್ರಿಯಾಗಿದ್ದಂತೆ ನನಗೆ ನೆನಪು’ ಎಂದು ರಾಷ್ಟ್ರಪತಿ ಹೇಳಿದರು. ಮಧ್ಯ ಪ್ರವೇಶಿಸಿದ ಜೆಡಿಎಸ್‌ನ ವೈ.ಎಸ್.ವಿ. ದತ್ತ, ದೇವೇಗೌಡರು ಮಾಜಿ ಪ್ರಧಾನಿ ಎಂದು ನೆನಪಿಸಿದರು. ಆಗ ಜೆಡಿಎಸ್ ಶಾಸಕರು ಓ ಎಂದು ಕೂಗಿದರು.

‘ಹೌದು ದೇವೇಗೌಡರು ಮಾಜಿ ಪ್ರಧಾನಿ ಮತ್ತು ನನ್ನ ಸ್ನೇಹಿತರು. ಕೆಲವರ ಹೆಸರನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದೆ’ ಎಂದು ಕೋವಿಂದ್ ಹೇಳಿದರು.

ದೇವೇಗೌಡರಿಗೆ ಕರೆ ಮಾಡಿದ ಕೋವಿಂದ್: ಬೆಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬುಧವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರಿಗೆ ದೂರವಾಣಿ ಕರೆ ಮಾತನಾಡಿದರು.

‘ವಜ್ರಮಹೋತ್ಸವ ಸಮಾರಂಭದಲ್ಲಿ ನಿಮ್ಮನ್ನು ಭೇಟಿ ಮಾಡಲು ಉತ್ಸುಕನಾಗಿದ್ದೆ. ಕಣ್ತಪ್ಪಿನಿಂದ ಭಾಷಣದಲ್ಲಿ ನಿಮ್ಮ ಹೆಸರನ್ನು ಪ್ರಸ್ತಾಪ ಮಾಡಲಿಲ್ಲ. ಇದರಲ್ಲಿ ಅನ್ಯ ಕಾರಣ ಇಲ್ಲ’ ಎಂದು ರಾಷ್ಟ್ರಪತಿಯವರು ಸ್ಪಷ್ಟಪಡಿಸಿದರು.

ಇದನ್ನು ತಾವು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಇಂಥ ಸಣ್ಣ ಪ್ರಮಾಣದ ಪ್ರಮಾದ‌ ಸಾಮಾನ್ಯ ಎಂದು ದೇವೇಗೌಡರು ಹೇಳಿದರು. ದಿಲ್ಲಿಗೆ‌ ಬಂದಾಗ ಭೇಟಿ ಆಗುವಂತೆಯೂ ರಾಮನಾಥ ಕೋವಿಂದ್‌ ಆಹ್ವಾನ ನೀಡಿದರು ಎಂದು ದೇವೇಗೌಡರ ಆಪ್ತ ವಲಯದ ಮೂಲಗಳು ತಿಳಿಸಿವೆ.

ಬಸವಾಚಾರ್ಯ . .

ಅಧ್ಯಾತ್ಮ ಮತ್ತು ಸಾಮಾಜಿಕ ಚಳವಳಿಗಳ ಪರಂಪರೆಯನ್ನು ವಿವರಿಸುವಾಗ ಬಸವಣ್ಣನವರ ಹೆಸರನ್ನು ‘ಬಸವಾಚಾರ್ಯ’ ಎಂದು ಕೋವಿಂದ್ ಹೇಳಿದರು.

‘ಬಸವಾಚಾರ್ಯ ನೇತೃತ್ವದಲ್ಲಿ ನಡೆದ ಸಮಾಜ ಸುಧಾರಣೆ ಲಿಂಗಾಯತ ಚಳವಳಿ ಕೂಡ ಕರ್ನಾಟಕದಲ್ಲೇ ಹುಟ್ಟಿತು’ ಎಂದು ಅವರು ಹೇಳಿದಾಗ ಶಾಸಕರು ಪರಸ್ಪರ ಮುಖ ನೋಡಿಕೊಂಡರು.

‘ಪ್ರಾಚೀನ ಜೈನ ಮತ್ತು ಬೌದ್ಧ ಪರಂಪರೆಯ ಕರ್ಮಭೂಮಿಯಾಗಿರುವ ಕರ್ನಾಟಕದಲ್ಲಿ ಆದಿ ಶಂಕರಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದರು. ಕಲಬುರ್ಗಿಯು ಸೂಫಿ ಪರಂಪರೆಯ ಕೇಂದ್ರವಾಗಿದೆ’ ಎಂದೂ ಅವರು ಹೇಳಿದರು.

20 ನಿಮಿಷ ವಿಳಂಬ: ಪೂರ್ವ ನಿಗದಿಯಂತೆ ಬೆಳಗ್ಗೆ 10.55ಕ್ಕೆ ರಾಷ್ಟ್ರಪತಿಗಳು ಸಭಾಂಗಣ ಪ್ರವೇಶಿಸಬೇಕಿತ್ತು. 40 ನಿಮಿಷ ಭಾಷಣ ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು.

ಆದರೆ 11.20ಕ್ಕೆ ಸಭಾಂಗಣಕ್ಕೆ ಆಗಮಿಸಿದ ಅವರು, ಕೇವಲ 15 ನಿಮಿಷದಲ್ಲಿ ಲಿಖಿತ ಭಾಷಣ ಓದಿ ಮುಗಿಸಿ ತೆರಳಿದರು.‌

ದೇವೇಗೌಡ, ಕೃಷ್ಣ, ಯಡಿಯೂರಪ್ಪ ಗೈರು

ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಿಗೆ ಆಮಂತ್ರಣ ನೀಡಲಾಗಿತ್ತಾದರೂ ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಬಿ.ಎಸ್‌. ಯಡಿಯೂರಪ್ಪ ಗೈರಾಗಿದ್ದರು.

ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಜರಿರಲಿಲ್ಲ.

ಅಧಿಕಾರಿಗಳ ಗ್ಯಾಲರಿಯಲ್ಲಿ ಗಣ್ಯರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಸಚಿವರಾದ ಎಚ್.ಎನ್. ಅನಂತಕುಮಾರ್, ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಕವಿ ನಿಸಾರ್ ಅಹಮದ್, ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ ಈ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT