ಮಂಗಳವಾರ, ಮಾರ್ಚ್ 2, 2021
28 °C

ಇತಿಹಾಸ, ಸಂಸ್ಕೃತಿ, ದಾಖಲೆ ನಮ್ಮ ಪರವಾಗಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ, ಸಂಸ್ಕೃತಿ, ದಾಖಲೆ ನಮ್ಮ ಪರವಾಗಿವೆ

ಧಾರವಾಡ: ‘ಇತಿಹಾಸ, ಸಂಸ್ಕೃತಿ ಹಾಗೂ ಪೂರಕ ದಾಖಲೆಗಳು ನಮ್ಮ ಪರವಾಗಿವೆ. ಹೀಗಾಗಿ ದೇಶದ 7ನೇ ಧರ್ಮವಾಗಿ ಲಿಂಗಾಯತ ಧರ್ಮ ಖಂಡಿತ ಸ್ಥಾಪನೆಯಾಗಲಿದೆ’ ಎಂದು ಜಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು. ಇದೇ 5ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಬೃಹತ್‌ ಸಮಾವೇಶದ ಅಂಗವಾಗಿ ಮುರುಘಾಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ ಹಾಗೂ ಸಮಾಜದ ಇತರ ಮುಖಂಡರ ಸತತ ಪರಿಶ್ರಮದಿಂದ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ದೊರೆತಿವೆ. ಬೌದ್ಧ, ಜೈನ ಹಾಗೂ ಸಿಖ್‌ ಧರ್ಮದಂತೆ ಲಿಂಗಾಯತ ಧರ್ಮವೂ ಪ್ರತ್ಯೇಕ ಸ್ಥಾನಮಾನ  ಪಡೆಯಲಿದೆ’ ಎಂದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ಕ್ರಾಂತಿ ಮಾಡಿದರೆ, 21ನೇ ಶತಮಾನದಲ್ಲಿ ಆ ಕ್ರಾಂತಿಯ ಬೆಳಕಾಗಿ ನಿಂತಿರುವ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ಹೋರಾಟ ಆರಂಭಗೊಂಡಿದೆ. ಅಂದು ಜನ್ಮ ತೆಳೆದ ಶರಣರ ಕ್ರಾಂತಿಗೆ ಇಂದು ಧರ್ಮದ ಮಾನ್ಯತೆ ಸಿಗುವ ಸಕಾಲ ಕೂಡಿ ಬಂದಿದ್ದು, ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಪ್ರತ್ಯೇಕ ಧರ್ಮ ಸ್ಥಾಪನೆಯಿಂದ ಶೈಕ್ಷಣಕ, ಔದ್ಯೋಗಿಕವಾಗಿ ಸಮಾಜ ಅಭಿವೃದ್ಧಿ ಹೊಂದಲಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಒಡೆದು ಹೋಗಿದ್ದ ಸಮಾಜವನ್ನು ಒಗ್ಗೂಡಿಸುವುದು ಸವಾಲಿನ ಕೆಲಸ. ಸಮಾಜದ ಈ ಸಮಾವೇಶದಲ್ಲಿ ಸೌಕರ್ಯಗಳನ್ನೇ ನೆಪಮಾಡದೆ, ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು. 5ಲಕ್ಷಕ್ಕೂ ಹೆಚ್ಚು ಜನರ ಸೇರುವ ಮೂಲಕ ಶಕ್ತಿಯ ದರ್ಶನ ಮಾಡಿಸಬೇಕು. ಹೀಗಾದಾಗ ಮಾತ್ರ ಸಮಾಜಕ್ಕೆ ಸಿಗಬೇಕಾದ ಸೌಕರ್ಯಗಳು ದೊರಕಲಿವೆ’ ಎಂದು ಹೇಳಿದರು.

ರಾಷ್ಟ್ರೀಯ ಬಸವಸೇನಾ ಅಧ್ಯಕ್ಷ ವಿನಯ ಕುಲಕರ್ಣಿ ಮಾತನಾಡಿ, ‘ಸಮಾಜದ ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಆಗ ಗೆಲುವು ನಮ್ಮದಾಗಲಿದೆ. ಇದು ಯಾವುದೇ ಪಕ್ಷದ ಹೋರಾಟವಲ್ಲ. ಎಲ್ಲಾ ಪಕ್ಷದಲ್ಲಿರುವ ಲಿಂಗಾಯತ ಮುಖಂಡರಿಗೂ ಆಹ್ವಾನ ಕಳುಹಿಸಲಾಗುತ್ತಿದೆ’ ಎಂದು ಹೇಳಿದರು.

‘ವೀರಶೈವ ಎಂಬುದು ಲಿಂಗಾಯತದ ಒಳಪಂಗಡವೇ ಆಗಿದೆ. ವೀರಶೈವ ಅನ್ನೋರು ದಾಖಲಾತಿ ತೋರಿಸಲಿ. ಹೋರಾಟದಿಂದ ಸಮಾಜ ಒಡೆಯುತ್ತಿಲ್ಲ. ಬದಲಾಗಿ ಒಗ್ಗಟ್ಟಾಗುತ್ತಿದೆ’ ಎಂದರು.

ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಹಾಗೂ ನವದೆಹಲಿಯ ಬಸವ ಮಂಟಪದ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಂಬಿಗರ ಚೌಡಯ್ಯ, ನಿಂಗಪ್ಪ ಗುಂಟಿ, ನೀಲಕಂಠಪ್ಪ ಅಸೂಟಿ, ಶಿವಣ್ಣ ಬೆಲ್ಲದ, ಅಶೋಕ ದೊಡಮನಿ, ಶಿವಶಂಕರ ಹಂಪಣ್ಣವರ, ಕಲ್ಲಪ್ಪ ಪುಡಕಲಕಟ್ಟಿ, ಮಲ್ಲಪ್ಪ ಭಾವಿಕಟ್ಟಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.