ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಸಂಭ್ರಮ ಮುಮ್ಮಡಿ

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪುಣೆ: ಪಂದ್ಯದ ಮೊದಲ ದಿನದಿಂದ ಪ್ರಾಬಲ್ಯ ಮೆರೆಯುತ್ತಲೇ ಬಂದಿರುವ ಕರ್ನಾಟಕ ತಂಡದವರ ಖುಷಿ ಶುಕ್ರವಾರ ಇಮ್ಮಡಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ ಗಳಿಸಿದ ತ್ರಿಶತಕ ಮತ್ತು ಕರುಣ್‌ ನಾಯರ್‌ ಸೊಗಸಾದ ಶತಕ ಇದಕ್ಕೆ ಕಾರಣವಾಯಿತು.

ಇದರಿಂದಾಗಿ ಕರ್ನಾಟಕ ತಂಡ ಈ ಬಾರಿಯ ರಣಜಿ ಟೂರ್ನಿಯ ‘ಎ’ ಗುಂಪಿನಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆಯುವ ಕನಸಿಗೆ ರೆಕ್ಕೆ ಮೂಡಿದೆ. ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಕಳೆದ ಬಾರಿ ಅನುಭವಿಸಿದ್ದ ನಿರಾಸೆಗೆ ಈ ಬಾರಿ ತಿರುಗೇಟು ನೀಡುವ ಹಾದಿಯೂ ಸಮೀಪವಾಗಿದೆ. ಇದಕ್ಕೆ ಬೇಕಿರುವುದು ಆರು ವಿಕೆಟ್ ಮಾತ್ರ.

ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 461 ರನ್‌ ಗಳಿಸಿದ್ದ ಕರ್ನಾಟಕ ಒಟ್ಟು 628 ರನ್‌ ಕಲೆ ಹಾಕಿ ಡಿಕ್ಲೇರ್‌ ಮಾಡಿಕೊಂಡಿತು. 176 ಓವರ್‌ ಕ್ರೀಸ್‌ನಲ್ಲಿದ್ದ ರಾಜ್ಯದ ಬ್ಯಾಟ್ಸ್‌ಮನ್‌ಗಳು ಮಹಾರಾಷ್ಟ್ರದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ತಂಡದವರು ಎರಡನೇ ಇನಿಂಗ್ಸ್‌ನಲ್ಲಿ 135 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತ್ರಿಶತಕದ ರಂಗು: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡು ವರ್ಷಗಳ ಬಳಿಕ ಮೂರಂಕಿಯ ಮೊತ್ತ ಮುಟ್ಟಿದ್ದ ಮಯಂಕ್‌ ಅದನ್ನು ತ್ರಿಶತಕವಾಗಿ ಪರಿವರ್ತಿಸಿದರು. ಎಂಟು ಗಂಟೆ ಏಳು ನಿಮಿಷ ಕ್ರೀಸ್‌ನಲ್ಲಿದ್ದು ಔಟಾಗದೆ 304 ರನ್‌ ಗಳಿಸಿದರು. ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ 136 ರನ್‌ ಕಲೆ ಹಾಕಿದರು.

ಶುಕ್ರವಾರ ದಿನದಾಟದ ಆರಂಭದಲ್ಲಿ ಮಯಂಕ್ ಮತ್ತು ಕರುಣ್‌ ನಿಧಾನವಾಗಿ ರನ್ ಗಳಿಸಿದರು. ಭೋಜನ ವಿರಾಮದ ಅವಧಿಗೆ 36 ಓವರ್‌ಗಳಲ್ಲಿ ಈ ಜೋಡಿ ಕೇವಲ 127 ರನ್ ಮಾತ್ರ ಕಲೆ ಹಾಕಿತ್ತು. ಭೋಜನದ ಬಳಿಕ ವೇಗದ ಆಟಕ್ಕೆ ಒತ್ತು ನೀಡಿತು. ಮಯಂಕ್‌ 250ರಿಂದ 300 ರನ್‌ ಗಳಿಸಲು 63 ಎಸೆತಗಳನ್ನು ತೆಗೆದುಕೊಂಡಿದ್ದು ಇದಕ್ಕೆ ಸಾಕ್ಷಿ.

ಆರ್‌. ಸಮರ್ಥ್‌ ಜೊತೆ ದಾಖಲೆಯ ಜೊತೆಯಾಟವಾಡಿದ್ದ ಮಯಂಕ್‌ಗೆ ತ್ರಿಶತಕ ಗಳಿಸಲು ಕರುಣ್‌ ನೆರವಾದರು. ಐದು ಗಂಟೆ ಕ್ರೀಸ್‌ನಲ್ಲಿದ್ದು 256 ಎಸೆತಗಳಲ್ಲಿ 116 ರನ್ ಗಳಿಸಿದರು. ಇವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ 270 ರನ್‌ ಕಲೆ ಹಾಕಿ ಮಹಾರಾಷ್ಟ್ರದ ಬೌಲರ್‌ಗಳ ಬೆವರಿಳಿಸಿದರು. ಇದರಿಂದ ತಂಡಕ್ಕೆ ಎರಡನೇ ಶ್ರೇಷ್ಠ ಮೊತ್ತ ಗಳಿಸಲು ಸಾಧ್ಯವಾಯಿತು. 1990–91ರಲ್ಲಿ ಇಲ್ಲಿಯೇ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ 638 ರನ್‌ ಗಳಿಸಿದ್ದು ಹೆಚ್ಚು ಮೊತ್ತವೆನಿಸಿದೆ.

ಮಹಾರಾಷ್ಟ್ರ ಪರದಾಟ: ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವಂತಿದ್ದ ಪಿಚ್‌ನಲ್ಲಿ ರಾಜ್ಯದ ಇಬ್ಬರು ಶತಕ ಮತ್ತು ಒಬ್ಬ ಬ್ಯಾಟ್ಸ್‌ಮನ್‌ ತ್ರಿಶತಕ ಗಳಿಸಿದರು. ಆದರೆ, ಇದೇ ಅಂಗಳದಲ್ಲಿ ಮಹಾರಾಷ್ಟ್ರದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು.

ಸ್ವಪ್ನಿಲ್‌ ಗುಗಾಲೆ, ನೌಶಾದ್‌ ಶೇಖ್‌ ಎರಡಂಕಿಯ ಮೊತ್ತ ಮುಟ್ಟುವ ಮೊದಲೇ ಪೆವಿಲಿಯನ್‌ ಸೇರಿದರೆ, ಹರ್ಷದ್‌ ಖಡಿವಾಲೆ ಹಾಗೂ ನಾಯಕ ಅಂಕಿತ್ ಭಾವ್ನೆ 20 ರನ್ ಗಳಿಸುವ ಮೊದಲೇ ವಿಕೆಟ್‌ ಒಪ್ಪಿಸಿದರು. ಪ್ರಮುಖ ನಾಲ್ಕು ವಿಕೆಟ್‌ಗಳು ಪತನವಾದಾಗ ತಂಡದ ಖಾತೆಯಲ್ಲಿ 84 ರನ್ ಮಾತ್ರ ಇದ್ದವು.

ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ರಾಹುಲ್‌ ತ್ರಿಪಾಠಿ ಮತ್ತು ರುತುರಾಜ್ ಗಾಯಕವಾಡ ತಂಡವನ್ನು ಸೋಲಿನಿಂದ ಪಾರು ಮಾಡಲು ಹೋರಾಟ ನಡೆಸಿದ್ದಾರೆ. ಮಧ್ಯಮವೇಗಿ ಅಭಿಮನ್ಯು ಮಿಥುನ್ ಎರಡು ವಿಕೆಟ್‌ ಕಬಳಿಸಿದರು. ಗಾಯಕವಾಡ 45 ರನ್‌ ಗಳಿಸಿದ್ದ ವೇಳೆ ಮಿಥುನ್ ಬೌಲಿಂಗ್‌ನಲ್ಲಿ ಸ್ಲಿಪ್‌ ಬಳಿಯಿದ್ದ ಪವನ ದೇಶಪಾಂಡೆ ಸುಲಭವಾಗಿದ್ದ ಕ್ಯಾಚ್‌ ಕೈಚೆಲ್ಲಿದರು. ಇಲ್ಲವಾದರೆ ಐದು ವಿಕೆಟ್‌ಗಳು ಉರುಳುತ್ತಿದ್ದವು.

ತ್ರಿಶತಕ ಗಳಿಸಿದ ರಾಜ್ಯದ ಮೂರನೇ ಆಟಗಾರ
ರಣಜಿಯಲ್ಲಿ ತ್ರಿಶತಕ ಗಳಿಸಿದ ಕರ್ನಾಟಕದ ಮೂರನೇ ಆಟಗಾರ ಎನ್ನುವ ಕೀರ್ತಿಗೆ ಮಯಂಕ್‌ ಅಗರವಾಲ್ ಪಾತ್ರರಾದರು.

2014–15ರಲ್ಲಿ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ವಿರುದ್ಧ ಕೆ.ಎಲ್‌. ರಾಹುಲ್‌ (337) ಮತ್ತು ಅದೇ ವರ್ಷ ತಮಿಳುನಾಡು ವಿರುದ್ಧ ಮುಂಬೈನಲ್ಲಿ ನಡೆದ ರಣಜಿ ಫೈನಲ್‌ನಲ್ಲಿ ಕರುಣ್‌ (328) ತ್ರಿಶತಕ ಬಾರಿಸಿದ್ದರು.

ಬಲಗೈ ಬ್ಯಾಟ್ಸ್‌ಮನ್‌ ಮಯಂಕ್‌ ಮಹಾರಾಷ್ಟ್ರ ವಿರುದ್ಧ ವೈಯಕ್ತಿಕ ಹೆಚ್ಚು ರನ್ ಗಳಿಸಿದ ಸಾಧನೆಯನ್ನೂ ತಮ್ಮದಾಗಿಸಿಕೊಂಡರು. 2012–13ರಲ್ಲಿ ಇದೇ ಕ್ರೀಡಾಂಗಣದಲ್ಲಿ ಸಿ.ಎಂ. ಗೌತಮ್‌ ಅಜೇಯ 264 ರನ್‌ ಗಳಿಸಿದ್ದು ರಾಜ್ಯದ ಆಟಗಾರರ ಹಿಂದಿನ ಉತ್ತಮ ಸಾಧನೆ ಎನಿಸಿತ್ತು.

ಈ ಬಾರಿ ಮೂರನೇ ತ್ರಿಶತಕ
2017–18ನೇ ಸಾಲಿನ ರಣಜಿ ಟೂರ್ನಿಯಲ್ಲಿ ಒಟ್ಟಾರೆಯಾಗಿ ದಾಖಲಾದ ಮೂರನೇ ತ್ರಿಶತಕವಿದು. ಹಿಮಾಚಲ ಪ್ರದೇಶದ ಪ್ರಶಾಂತ ಚೋಪ್ರಾ (328) ಪಂಜಾಬ್‌ ಮೇಲೂ, ಆಂಧ್ರದ ಹನುಮ ವಿಹಾರಿ (ಅಜೇಯ 302) ಒಡಿಶಾ ವಿರುದ್ಧ ತ್ರಿಶತಕ ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT