ಶನಿವಾರ, ಮಾರ್ಚ್ 6, 2021
25 °C

ಸೌಂದರ್ಯೀಕರಣಕ್ಕೆ ಜನರ ಮೆಚ್ಚುಗೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಂದರ್ಯೀಕರಣಕ್ಕೆ ಜನರ ಮೆಚ್ಚುಗೆ..!

ವಿಜಯಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ, ಹಳೆ ಪ್ರವಾಸಿ ಮಂದಿರ, ತೋಟಗಾರಿಕೆ ಇಲಾಖೆಯ ಜಿಲ್ಲಾ ಕಚೇರಿ ಮುಂಭಾಗ ಇದೀಗ ನವರಂಗು ತುಂಬಿದೆ.

ಪಡುವಣದ ಬಾನಂಚಿನಲ್ಲಿ ದಿನಕರ ಇಳಿಜಾರುತ್ತಿದ್ದಂತೆ, ಬೆಳಗುವ ವಿದ್ಯುತ್ ದೀಪಗಳ ಝಗಮಗ ಬೆಳಕು ಹೊಸತೊಂದು ಲೋಕವನ್ನೇ ಸೃಷ್ಟಿಸಿದೆ.

ಅಂಬೇಡ್ಕರ್ ವೃತ್ತದ ಮೂಲಕ ರಾತ್ರಿ ವೇಳೆ ಸ್ಟೇಷನ್‌ ರಸ್ತೆ ಸಂಪರ್ಕಿಸುತ್ತಿದ್ದಂತೆ ಹೃನ್ಮನ ಸಂತಸದಿ ತೇಲಲಿದೆ. ಕೊಂಚ ದೂರ ಕಣ್ಣಿಗೆ ಕೋರೈಸುವ ಬೆಳಕಿನ ಲೋಕ ಖುಷಿ ನೀಡುತ್ತದೆ. ಒಮ್ಮೆ ಇತ್ತ ಹಾಯ್ದರೆ ಮತ್ತೊಮ್ಮೆ ಸುಮ್ಮನೆ ಹಾದು ಬರಬೇಕು ಎಂಬ ಭಾವನೆ ಮನಸ್ಸಿನಲ್ಲಿ ಮೊಳೆಯುತ್ತದೆ.

ಅತ್ಯಾಧುನಿಕತೆಯನ್ನು ಮೈಗೂಡಿಸಿಕೊಂಡು ಅಭಿವೃದ್ಧಿಯ ಶರವೇಗದಲ್ಲಿ ಮುನ್ನಡೆಯುತ್ತಿರುವ ನಗರವೊಂದರಲ್ಲಿ ಸಂಚರಿಸಿದ ಅನುಭವ ಈ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡಿದವರಿಗೆ ಆಗುತ್ತಿದೆ. ಇದೇ ರೀತಿ ನಗರದ ನಾಲ್ಕು ದಿಕ್ಕಿನ ಎಲ್ಲ ರಸ್ತೆಗಳು, ಅಭಿವೃದ್ಧಿಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸುತ್ತಿರುವವರ ಸಂಖ್ಯೆ ದಿನೇ ದಿನೇ ನಗರದ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ.

ಮನಸ್ಸಿಗೆ ಮುದ: ‘ರಾತ್ರಿ ಸಮಯ ಅಂಬೇಡ್ಕರ್ ವೃತ್ತದಲ್ಲಿ ಚಲಿಸುವುದೇ ಆನಂದ. ಸ್ಟೇಷನ್‌ ರಸ್ತೆಯ ವಿಭಜಕದ ಬೀದಿ ದೀಪಗಳ ಬೆಳಕಿನ ಜತೆಗೆ, ಫುಟ್‌ಪಾತ್‌ಗೆ ಹೊಂದಿಕೊಂಡಂತೆ ಪುಟ್ಟ ಪುಟ್ಟ ಫೋಲ್ ನೆಟ್ಟು, ಅವು ವಿದ್ಯುತ್ ಬೆಳಕಿನಿಂದ ಬೆಳಗುವಂತೆ ಮಹಾನಗರ ಪಾಲಿಕೆ ಆಡಳಿತ ಮಾಸ್ಟರ್‌ಪ್ಲಾನ್‌ನಡಿ ಅಭಿವೃದ್ಧಿಗೊಳಿಸಿದ್ದು, ಇದನ್ನು ಕಣ್ತುಂಬಿಕೊಳ್ಳುವುದೇ ಮನಕ್ಕೆ ಮಹಾದಾನಂದ’ ಎಂದು ಮಲ್ಲು ಕುಂಬಾರ ತನ್ನ ಮನದಾಳದ ಅನಿಸಿಕೆಯನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ವಿಜಯಪುರ ಬದಲಾವಣೆಗೆ ತೆರೆದುಕೊಳ್ಳುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಕ್ಷರಶಃ ಇಲ್ಲಿ ರಾತ್ರಿ ವೇಳೆ ಸಂಚರಿಸಿದ ಸಂದರ್ಭ ಮನಸ್ಸಿಗಾಗುವ ಆನಂದವನ್ನು ವರ್ಣಿಸಲು ಅಸಾಧ್ಯ’ ಎಂದವರು ಲಕ್ಷ್ಮಣ ಕರಾಡೆ.

‘ಕೆಲವೇ ಮೀಟರ್ ದೂರ ಅಳವಡಿಸಿರುವ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ಬೆಳಕಿನ ಲೋಕ ನಿಜಕ್ಕೂ ಮನಸ್ಸಿಗೆ ಆನಂದ ನೀಡುತ್ತದೆ. ಮುಂಜಾನೆಯಿಂದ ಮನಸ್ಸಿನಾಳದಲ್ಲಿ ಅಡಗಿದ್ದ ನಿತ್ಯದ ಜಂಜಾಟವನ್ನು ಮರೆಸುತ್ತದೆ. ಒಂದೊಂದು ಕಂಬವು ಒಂದೊಂದು ಬಣ್ಣದಿಂದ ಕಂಗೊಳಿಸಲಿದ್ದು, ಇದನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮಾಚರಣೆ ಎನಿಸಿದೆ’ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ಜ್ಯೋತಿ ತಿಳಿಸಿದರು.

ಎಲ್ಲೆಡೆ ನಡೆಯಲಿ: ‘ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಇದೀಗ ಅತ್ಯಾಧುನಿಕ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಿರುವುದು ಕೆಲವೇ ಮೀಟರ್ ದೂರ. ಇದನ್ನು ಪ್ರಾಯೋಗಿಕವಾಗಿ ಅಳವಡಿಸಿದೆಯೋ ? ಎಲ್ಲೆಡೆ ಇದೇ ಮಾದರಿ ಅನುಸರಿಸುತ್ತದೆಯೋ ಎಂಬುದು ನಮಗೆ ಗೊತ್ತಿಲ್ಲ.

ನಮ್ಮ ಬೇಡಿಕೆ ಒಂದೇ. ನಗರದ ಅಭಿವೃದ್ಧಿಯ ದಿಕ್ಕು ನಿಧಾನಗತಿಯಲ್ಲಿ ಬದಲಾಗುತ್ತಿದೆ. ಇದಕ್ಕೆ ಶರವೇಗ ನೀಡಿ ಪ್ರಮುಖ ರಸ್ತೆಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಎಲ್ಲ ರಸ್ತೆಗಳನ್ನು ಇದೇ ಪರಿ ಅಭಿವೃದ್ಧಿ ಪಡಿಸಲು ಅನುದಾನದ ಕೊರತೆ ಕಾಡಬಹುದು.

ಪ್ರಮುಖ ರಸ್ತೆಗಳಿಗೆ ಈ ಆದ್ಯತೆ ನೀಡಿ ಉಳಿದ ರಸ್ತೆಗಳ ತಗ್ಗು ಮುಚ್ಚಲು ಮೊದಲ ಆದ್ಯತೆ ನೀಡಬೇಕಿದೆ. ಮಾಸ್ಟರ್‌ಪ್ಲಾನ್‌ನಡಿ ಅಭಿವೃದ್ಧಿಗೊಂಡ ರಸ್ತೆ ವಿಭಜಕವನ್ನು ಜಾಹೀರಾತು ಉದ್ದೇಶಕ್ಕೆ ಬಳಸುವ ಜತೆಗೆ ಉದ್ಯಾನ ನಿರ್ಮಾಣಕ್ಕೂ ಬಳಸಬೇಕಿದೆ. ಫುಟ್‌ಪಾತ್‌ನ ಬದಿ ಗಿಡ ನೆಟ್ಟು, ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಬೇಕು’ ಎನ್ನುತ್ತಾರೆ ನಗರದ ನಿವಾಸಿ ಶಂಕರ ರಾಠೋಡ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.