ಗುರುವಾರ , ಮಾರ್ಚ್ 4, 2021
29 °C
ಇದೇ 8ರಂದು ಶಾಸಕರು, ಬಿಬಿಎಂಪಿ ಸದಸ್ಯರ ಸಭೆ

ಯಾತ್ರೆ ವೈಫಲ್ಯ: ಕಾರಣ ಹುಡುಕಲು ಜಾವಡೇಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾತ್ರೆ ವೈಫಲ್ಯ: ಕಾರಣ ಹುಡುಕಲು ಜಾವಡೇಕರ್‌

ಬೆಂಗಳೂರು: ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾರಂಭಕ್ಕೆ ನಿರೀಕ್ಷಿತ ಯಶಸ್ಸು ಸಿಗದೇ ಇರುವುದರಿಂದ ಅಸಮಾಧಾನಗೊಂಡಿರುವ ವರಿಷ್ಠರು ಅದಕ್ಕೆ ಕಾರಣಗಳನ್ನು ಹುಡುಕಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್‌ ಅವರನ್ನು ಇದೇ 8ರಂದು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ.

ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪಕ್ಕೆ ನಾಂದಿ ಹಾಡುವುದು ಉದ್ಘಾಟನಾ ಸಮಾರಂಭದ ಆಶಯವಾಗಿತ್ತು. 17 ಜಿಲ್ಲೆಗಳ 114 ವಿಧಾನಸಭಾ ಕ್ಷೇತ್ರಗಳಿಂದ ಎರಡು ಲಕ್ಷ ಕಾರ್ಯಕರ್ತರನ್ನು ಕರೆತರಲು ಯೋಜನೆ ರೂಪಿಸುವಂತೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಸೂಚಿಸಿದ್ದರು. ಇದೊಂದು ಐತಿಹಾಸಿಕ ಸಮಾರಂಭ ಆಗಬೇಕು ಎಂದೂ ಷಾ ಹೇಳಿದ್ದರು.

ಆದರೆ, ನಾಯಕರ ಮಧ್ಯದ ಭಿನ್ನಮತ, ಸಂಘಟನೆಯ ಕೊರತೆಯಿಂದಾಗಿ ಅಂದು ಸೇರಿದ್ದ ಕಾರ್ಯಕರ್ತರ ಸಂಖ್ಯೆ 40,000 ದಾಟಿರಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಜನ ಸೇರಿಸದೇ ಇದ್ದುದಕ್ಕೆ ಷಾ ಆಕ್ರೋಶಗೊಂಡಿದ್ದರು. ಕಳಪೆ ಪ್ರದರ್ಶನದಿಂದಾಗಿ ಪಕ್ಷದ ನಾಯಕರ ಜಂಘಾಬಲವೇ ಉಡುಗಿ ಹೋಗಿತ್ತು.

‘ಈ ಅವ್ಯವಸ್ಥೆಗೆ ಕಾರಣ ಪತ್ತೆ ಹಚ್ಚಲು ಜಾವಡೇಕರ್ ಬರಲಿದ್ದಾರೆ. ಸಮಾರಂಭದ ಜವಾಬ್ದಾರಿ ಹೊತ್ತಿದ್ದ ಶಾಸಕ ಆರ್. ಅಶೋಕ್ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಹಾಗೂ ಮಾಜಿ ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಅವರಿಗೆ ಸೂಚನೆ ಹೋಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸಂಘನಾತ್ಮಕವಾಗಿ ಎಲ್ಲಿ ಎಡವಟ್ಟಾಗಿದೆ, ಯಾರು ಇದಕ್ಕೆ ಜವಾಬ್ದಾರರು ಎಂಬ ಮಾಹಿತಿಯನ್ನು ಅವರು ಪಡೆಯಲಿದ್ದಾರೆ’ ಎಂದು ಮೂಲಗಳು ಹೇಳಿವೆ.

‍ಪ್ರಮುಖರ ಸಮಿತಿ ಸಭೆ: ‘ನ.9ರಂದು ಮಂಗಳೂರಿನಲ್ಲಿ ‍ಪಕ್ಷದ ಪ್ರಮುಖರ ಸಮಿತಿ ಸಭೆ ನಡೆಯಲಿದೆ. ಬೆಂಗಳೂರಿನ ಸಭೆಯಲ್ಲಿ ಪಡೆದ ವಿವರಗಳನ್ನು ಅಲ್ಲಿ ಪ್ರಸ್ತಾಪಿಸಲಿರುವ ಜಾವಡೇಕರ್‌, ಮುಂದಿನ ದಿನಗಳಲ್ಲಿ ಯಾತ್ರೆ ಯಶಸ್ವಿಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.