ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ‘ವೀರ ವನಿತೆ ಒನಕೆ ಓಬವ್ವ ಹೋರಾಟ ವೇದಿಕೆ’ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಹಿಳಾ ಕಾರ್ಯಕರ್ತರು ಓಬವ್ವ ವೇಷ ತೊಟ್ಟು, ಕೈಯಲ್ಲಿ ಒನಕೆ ಹಿಡಿದು ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

‘ಓಬವ್ವ ಅವರನ್ನು ಹೈದರಾಲಿ (ಟಿಪ್ಪು ತಂದೆ) ಅವರ ಸೈನ್ಯ ಮೋಸದಿಂದ ಹತ್ಯೆ ಮಾಡಿತ್ತು. ಆ ಸೈನ್ಯದಲ್ಲಿ ಟಿಪ್ಪು ಸಹ ಇದ್ದು, ಓಬವ್ವ ವಿರುದ್ಧ ಹೋರಾಡಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಟಿಪ್ಪು ಜಯಂತಿ ಮಾಡಿದರೆ ಓಬವ್ವ ಅವರ ಶೌರ್ಯಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹೀಗಾಗಿ ಜಯಂತಿ ನಡೆಸಬಾರದು’ ಎಂದು ವೇದಿಕೆಯ ಅಧ್ಯಕ್ಷ ಡಾ.ಜೀವರಾಜ್ ಆಗ್ರಹಿಸಿದರು.

‘ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂಬಂತೆ ಸರ್ಕಾರ ಬಿಂಬಿಸುತ್ತಿದೆ. ಟಿಪ್ಪು 1799ರಲ್ಲಿಯೇ ಮೃತಪಟ್ಟಿದ್ದಾನೆ. ಸ್ವಾತಂತ್ರ್ಯ ಹೋರಾಟ ಆರಂಭವಾಗಿದ್ದು 1857ರಲ್ಲಿ. ಹೀಗಿರುವಾಗ, ಆತ ಸ್ವಾತಂತ್ರ್ಯ ಹೋರಾಟಗಾರ ಹೇಗಾಗುತ್ತಾನೆ’ ಎಂದು ಪ್ರಶ್ನಿಸಿದರು.

‘ಮತಾಂಧನಾಗಿದ್ದ ಟಿಪ್ಪು ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾನೆ. ಹಿಂದೂಗಳನ್ನು ಹತ್ಯೆಗೈದಿದ್ದಾನೆ. ಕೊಡವ ಮನೆತನಗಳ ಮೇಲೆ ದಾಳಿ ಮಾಡಿ ಅವರನ್ನು ಕೊಲೆ ಮಾಡಿದ್ದಾನೆ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಜಯಂತಿ ಆಚರಣೆ ಮಾಡುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದರು.

ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಚಿ.ನಾ.ರಾಮು, ‘ವೋಟ್ ಬ್ಯಾಂಕ್‌ಗಾಗಿ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಹೊರಟಿದೆ. ಕಾಂಗ್ರೆಸ್‌ಗೆ ಈ ಹಿಂದೆ ಟಿಪ್ಪು ಮೇಲೆ ವ್ಯಾಮೋಹ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ವ್ಯಾಮೋಹ ಜಾಸ್ತಿಯಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT