ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌರಿಂಗ್‌ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ

ಎಚ್‌.ಎಸ್.ಐ.ಎಸ್‌. ಘೋಷಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಉದ್ಘಾಟನೆ
Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ವೈದ್ಯಕೀಯ ಕಾಲೇಜಿಗೆ ₹ 200 ಕೋಟಿ ಅನುದಾನ ಒದಗಿಸಲಾಗಿದೆ. ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತ ಘಟಕ, ವಿದ್ಯಾರ್ಥಿನಿ ನಿಲಯ (464 ಮಂದಿ ಉಳಿದುಕೊಳ್ಳಲು ಸೌಲಭ್ಯ), ನರ್ಸಿಂಗ್‌ ಶಾಲೆ ಮತ್ತುವಿದ್ಯಾರ್ಥಿನಿ ನಿಲಯ (202 ಮಂದಿ ಉಳಿದುಕೊಳ್ಳಲು ಸೌಲಭ್ಯ) ಹಾಗೂ ನರ್ಸಿಂಗ್‌ ವಸತಿಗೃಹಗಳ ನಿರ್ಮಾಣಕ್ಕೆ ಈ ಅನುದಾನ ಬಳಕೆ ಆಗಲಿದೆ.

ಆಡಳಿತ ಘಟಕದಲ್ಲಿ ಉಪನ್ಯಾಸ ಸಭಾಂಗಣ, ಗ್ರಂಥಾಲಯ, ಅಂಗ ರಚನಾ ಶಾಸ್ತ್ರ, ಮನಃಶಾಸ್ತ್ರ, ಜೀವರಸಾಯನಶಾಸ್ತ್ರ, ಸಮುದಾಯ ಆರೋಗ್ಯ, ವಿಧಿವಿಜ್ಞಾನ, ಔಷಧ, ರೋಗಲಕ್ಷಣ, ಸೂಕ್ಷ್ಮಜೀವಿ ವಿಜ್ಞಾನ, ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಸೌಲಭ್ಯ, ಪ್ರಯೋಗಾಲಯ, ಕೇಂದ್ರೀಯ ಸಂಶೋಧನಾ ಕೇಂದ್ರ, ಪರೀಕ್ಷಾ ಕೊಠಡಿ ಹಾಗೂ ಉಪನ್ಯಾಸ ಕೊಠಡಿಗಳು ನಿರ್ಮಾಣವಾಗಲಿವೆ.

ನರ್ಸಿಂಗ್‌ ಶಾಲೆಯಲ್ಲಿ ಸಿಬ್ಬಂದಿ ಕಚೇರಿ, ಪೌಷ್ಟಿಕಾಂಶ ಪ್ರಯೋಗಾಲಯ, ಸಮುದಾಯ ಚಿಕಿತ್ಸೆ ಪ್ರಯೋಗಾಲಯ, ದಾಖಲೆಗಳ ಕೊಠಡಿ, ನರ್ಸಿಂಗ್‌ ಪ್ರತಿಷ್ಠಾನದ ಪ್ರಯೋಗಾಲಯ, ಉಪನ್ಯಾಸ ಕೊಠಡಿಗಳು, ಗ್ರಂಥಾಲಯ, ವಾಚನಾಲಯ, ಬಹುಪಯೋಗಿ ಕೊಠಡಿಗಳು ಕ್ರೀಡೆ ಹಾಗೂ ಮನರಂಜನಾ ಕೊಠಡಿಗಳು ನಿರ್ಮಾಣವಾಗಲಿವೆ.

ಮಹಿಳಾ ಮತ್ತು ಮಕ್ಕಳ ವಿಭಾಗ ಉದ್ಘಾಟನೆ: ಎಚ್‌ಎಸ್‌ಐಎಸ್‌ ಘೋಷಾ ಆಸ್ಪತ್ರೆಯ ನವೀಕೃತ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ವಿಭಾಗವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಇಲ್ಲಿನ ನವೀಕೃತ ಕಟ್ಟಡಕ್ಕೆ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯ ಹೆರಿಗೆ ವಿಭಾಗವನ್ನೂ ಸ್ಥಳಾಂತರಿಸಲಾಗಿದೆ.

ಈ ಆಸ್ಪತ್ರೆಯಲ್ಲಿ 120 ಹಾಸಿಗೆ ಸೌಲಭ್ಯವಿರುವ ಹೆರಿಗೆ ವಿಭಾಗ, 3 ಬೋಧಕ ಘಟಕಗಳು, 10 ಹಾಸಿಗೆಗಳ ಸಾಮರ್ಥ್ಯದ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು), ತುರ್ತು ಪ್ರಸವಕ್ಕಾಗಿ ಹಾಸಿಗೆ ಸಾಮರ್ಥ್ಯದ ತುರ್ತು ನಿಗಾ ಘಟಕ, 10 ಹಾಸಿಗೆಗಳ ಸಾಮರ್ಥ್ಯದ ಹೆರಿಗೆ ವಾರ್ಡ್‌, ಒಂದು ತುರ್ತು ಶಸ್ತ್ರ ಚಿಕಿತ್ಸಾ ಘಟಕ, 2 ಸಾಮಾನ್ಯ ಶಸ್ತ್ರ ಚಿಕಿತ್ಸಾ ಘಟಕಗಳಿವೆ.

***
ಮೆಟ್ರೊನಿಲ್ದಾಣದಿಂದ ಆಸ್ಪತ್ರೆಗೆ ನೇರ ಸಂಪರ್ಕ: ಒತ್ತಾಯ

‘ಶಿವಾಜಿನಗರ ಬಸ್‌ ನಿಲ್ದಾಣದ ಬಳಿ ನೆಲದಡಿಯಲ್ಲಿ ನಿರ್ಮಾಣವಾಗಲಿರುವ ಮೆಟ್ರೊ ನಿಲ್ದಾಣದಿಂದ ಬೌರಿಂಗ್‌ ಆಸ್ಪತ್ರೆ ಹಾಗೂ ಎಚ್‌ಎಸ್‌ಐಎಸ್‌ ಘೋಷಾ ಆಸ್ಪತ್ರೆಗಳಿಗೆ ನೇರವಾಗಿ ಸುರಂಗ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಬೇಕು’ ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್‌ ಬೇಗ್‌ ಒತ್ತಾಯಿಸಿದರು.

‘ಇದರಿಂದ ನಗರದ ಬೇರೆ ಭಾಗಗಳಿಂದ ಹಾಗೂ ಅನ್ಯಜಿಲ್ಲೆಗಳಿಂದ ಈ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅನುಕೂಲವಾಗಲಿದೆ’ ಎಂದರು. ‘ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಶಿವಾಜಿನಗರದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗುವ ಸ್ಥಳವನ್ನು ಹಾಗೂ ಅದರ ನೀಲ ನಕಾಶೆಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು.

***

‘ಪಿತ್ತಜನಕಾಂಗ ಕಸಿಗೆ ಹೊಸ ಆಸ್ಪತ್ರೆ’

‘ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ₹ 20 ಲಕ್ಷದಿಂದ ₹ 25 ಲಕ್ಷ ದರ ವಿಧಿಸುತ್ತಿವೆ. ಈ ಚಿಕಿತ್ಸೆಯ ಅಗತ್ಯವಿರುವ ಬಡವರು ಮನೆ, ಜಮೀನು ಮಾರಿ ಈ ಚಿಕಿತ್ಸೆಗೆ ಹಣ ಹೊಂದಿಸುವ ಸ್ಥಿತಿ ಇದೆ’ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.

‘ಪಿತ್ತಜನಕಾಂಗ ಕಸಿ ನಡೆಸಲು ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಲಿದ್ದೇವೆ. ಇಲ್ಲಿ ಬಡ ರೋಗಿಗಳೂ ₹ 5 ಲಕ್ಷದೊಳಗೆ ಚಿಕಿತ್ಸೆ ಪಡೆಯಬಹುದು’ ಎಂದರು.

***

ಎಂಬಿಬಿಎಸ್‌  ಕಲಿಯಲು ಸರ್ಕಾರಿ ವೈದ್ಯಕೀಯ ಕಾಲೇಜುಗಳೇ ಬೇಕು. ಇಲ್ಲಿ ಕಲಿತವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಮಾತ್ರ ಆಗುವುದಿಲ್ಲ. ಇದು ಯಾವ ನ್ಯಾಯ
ಸಿದ್ದರಾಮಯ್ಯ, ಮುಖ್ಯಮಂತ್ರಿ

***
ಬಡವರು ಹೆಣವನ್ನು ತೆಗೆದುಕೊಂಡು ಹೋಗಲು ಆಗದ ದುಸ್ಥಿತಿಗಳನ್ನೆಲ್ಲಾ ನೋಡಿದಾಗ ನಮಗೆ ಈ ಅಧಿಕಾರ ಇರಬೇಕಾ ಎಂಬ ಪ್ರಶ್ನೆ ಕಾಡುತ್ತದೆ. ನಾವು ಬಡವರ ಪರವೇ ಹೊರತು ಯಾರ ವಿರುದ್ಧವೂ ಅಲ್ಲ
–ಕೆ.ಆರ್‌.ರಮೇಶ್‌ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT