ಸೋಮವಾರ, ಮಾರ್ಚ್ 8, 2021
31 °C

‘ಏಕರೂಪದ ಜಿಎಸ್‌ಟಿ ಇಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

‘ಏಕರೂಪದ ಜಿಎಸ್‌ಟಿ ಇಲ್ಲ’

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಏಕರೂಪದ ತೆರಿಗೆ ದರ ಜಾರಿಗೆ ತರುವ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸೋಮವಾರ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

‘ಒಂದೇ ಜಿಎಸ್‌ಟಿ ದರ ಇರಬೇಕು ಎಂದು ಬಯಸುವವರು ತೆರಿಗೆ ಸ್ವರೂಪವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಆಹಾರ ಪದಾರ್ಥಗಳಿಗೆ ಯಾವುದೇ ತೆರಿಗೆ ವಿಧಿಸಿಲ್ಲ. ಜನಸಾಮಾನ್ಯರು ಬಳಸುವ ಸರಕುಗಳ ಮೇಲೆ ಶೇ 5ರಷ್ಟು ಕಡಿಮೆ ತೆರಿಗೆ ವಿಧಿಸಲಾಗಿದೆ. ವಿಲಾಸಿ ಸರಕು, ಆರೋಗ್ಯಕ್ಕೆ ಹಾನಿಕರವಾದ ಸರಕುಗಳಿಗೂ ಜನಸಾಮಾನ್ಯರು ಬಳಸುವ ಸರಕುಗಳ ಮೇಲಿನ ತೆರಿಗೆ ಅನ್ವಯಿಸಬೇಕೆ. ಗೋಧಿ, ಅಕ್ಕಿ, ಸಕ್ಕರೆ ಮೇಲೆ ತಂಬಾಕು ಅಥವಾ ಮರ್ಸಿಡಿಸ್‌ ಬೆಂಜ್‌ ಕಾರ್‌ಗೆ ವಿಧಿಸುವ ತೆರಿಗೆ ವಿಧಿಸಬೇಕೆ’ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.

‘ತೆರಿಗೆ ದರಗಳನ್ನು ಇನ್ನಷ್ಟು ಸರಳೀಕರಣ ಮಾಡಬಹುದು. ವರಮಾನ ಸಂಗ್ರಹ ಆಧರಿಸಿ ಇಂತಹ ನಿರ್ಧಾರ ಕೈಗೊಳ್ಳಬಹುದು’ ಎಂದು ಹೇಳಿದ್ದಾರೆ.

ಒಂದೇ ತೆರಿಗೆ ದರ ಇರಬೇಕು ಎನ್ನುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಬೇಡಿಕೆಯನ್ನು ಜೇಟ್ಲಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.  200ಕ್ಕೂ ಹೆಚ್ಚು ದಿನಬಳಕೆಯ ಸರಕುಗಳ ಮೇಲಿನ ತೆರಿಗೆ ದರ ತಗ್ಗಿಸುವಂತೆ ಸರ್ಕಾರದ ಮೇಲೆ ಕಾಂಗ್ರೆಸ್‌ ಒತ್ತಡ ಹಾಕಿತ್ತು ಎನ್ನುವುದನ್ನೂ ಜೇಟ್ಲಿ ನಿರಾಕರಿಸಿದ್ದಾರೆ. ತೆರಿಗೆ ಸರಳೀಕರಣ ಪ್ರಕ್ರಿಯೆ ಮೂರ್ನಾಲ್ಕು ತಿಂಗಳಿನಿಂದ ಪರಿಶೀಲನೆಯಲ್ಲಿತ್ತು.  ಜಿಎಸ್‌ಟಿ ಮಂಡಳಿಯಲ್ಲಿ ಒಮ್ಮತಾಭಿಪ್ರಾಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜಕೀಯ ಒತ್ತಡಕ್ಕೆ ಗುರಿಯಾಗಿ ದರಗಳನ್ನು ತಗ್ಗಿಸಲಾಗಿತ್ತು ಎನ್ನುವುದು ಅಪ್ರಬುದ್ಧ ರಾಜಕೀಯ’ ಎಂದು ಜೇಟ್ಲಿ ಹೇಳಿದ್ದಾರೆ.

ಶೇ 5,12, 18 ಮತ್ತು 28ರ ಬದಲಿಗೆ ಒಂದೇ ತೆರಿಗೆ ದರ ಜಾರಿಗೆ ತರಬೇಕು ಎಂದು ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

* ಜಿಎಸ್‌ಟಿ  ದರ ಸರಳೀಕರಣ ನಿರ್ಧಾರವನ್ನು ಚುನಾವಣೆಗೆ ತಳಕು ಹಾಕುವವರ ಧೋರಣೆಯು ಬಾಲೀಶ ರಾಜಕೀಯವಾಗಿದೆ

–ಅರುಣ್‌ ಜೇಟ್ಲಿ, ಹಣಕಾಸು ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.