ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ತೂರಾಟ: ಬೆಳಗಾವಿ ಪರಿಸ್ಥಿತಿ ಉದ್ವಿಗ್ನ

Last Updated 15 ನವೆಂಬರ್ 2017, 19:25 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಖಂಜರ್‌ ಗಲ್ಲಿ, ಚವಾಟ್‌ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ರಾತ್ರಿ ಹಿಂದೂ– ಮುಸ್ಲಿಂ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ.

6 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್‌ ಜೀಪ್‌ಗೂ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆಯಲ್ಲಿ ಪೊಲೀಸ್‌ ಕಮಿಷನರ್‌ ಕೃಷ್ಣಭಟ್‌ ಅವರನ್ನೂ ಉದ್ರಿಕ್ತರು ತಳ್ಳಾಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ‘ತಳ್ಳಾಡಿದ್ದು ನಿಜ. ಆದರೆ, ಗಾಯ ಆಗಿಲ್ಲ’ ಎಂದು ಕೃಷ್ಣಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯುವಕನೊಬ್ಬನ ಮೇಲೆ ನಡೆದ ಹಲ್ಲೆಗೆ ಪ್ರತೀಕಾರವಾಗಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ರಾತ್ರಿ 10 ಗಂಟೆ ಸುಮಾರಿಗೆ 100ಕ್ಕೂ ಹೆಚ್ಚು ಜನರು ಗುಂಪು ಕಟ್ಟಿಕೊಂಡು ಚವಾಟ್‌ ಗಲ್ಲಿಯ ಬಳಿ ಜಮಾಯಿಸಿ, ಘೋಷಣೆಗಳನ್ನು ಕೂಗಿದರು. ಪಕ್ಕದ ಖಡಕ್‌ ಗಲ್ಲಿಯ ತಿರುವಿನಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದರು. ಇದರ ಬಳಿಯೇ ಇದ್ದ ಪೊಲೀಸ್‌ ಜೀಪ್‌ಗೂ ಬೆಂಕಿ ಹಾಕಲು ಯತ್ನಿಸಿದರು.

ಉದ್ವಿಗ್ನ ಪರಿಸ್ಥಿತಿ ಇರುವ ಚವಾಟ್ ಗಲ್ಲಿ, ಭಡಕಲ್ ಗಲ್ಲಿ, ಖಂಜರ್ ಗಲ್ಲಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಧಿವೇಶನದ ಬಂದೋಬಸ್ತ್ ಗೆ ಆಗಮಿಸಿದ್ದ ಪೊಲೀಸರನ್ನು ನಿಯೋಜನೆಗೆ ಬಳಸಿಕೊಳ್ಳಲಾಗಿದೆ.

ಘಟನೆಗೆ ನಿಖರವಾದ ಕಾರಣ ಏನು ಎಂಬುದು ಗೊತ್ತಾಗಿಲ್ಲ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ನಗರದಲ್ಲಿಯೇ ಉಳಿದಿದ್ದು, ಎಲ್ಲೆಡೆ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಕಲ್ಲೇಟಿನಿಂದ ಎಸಿಪಿಗೆ ಗಾಯ

ಕಲ್ಲೂ ತೂರಾಟದ ವೇಳೆ ಮಾರ್ಕೆಟ್ ಎಸಿಪಿ ಶಂಕರ ಮಾರಿಹಾಳ ಅವರಿಗೆ ಕಲ್ಲು ಬಿದ್ದು ಗಾಯವಾಗಿದೆ. ಅವರಿದ್ದ ವಾಹನಕ್ಕೂ ಕಲ್ಲು ತೂರಲಾಗಿದೆ ಎಂದು ಡಿಸಿಪಿ ಅಮರನಾಥರೆಡ್ಡಿ ಪತ್ರಕರ್ತರಿಗೆ ತಿಳಿಸಿದರು.

ಕಲ್ಲು ತೂರಾಟ ಮಾಡಿದ ಘಟನೆಯನ್ನು ವಿಡಿಯೊ ಮಾಡಲಾಗಿದೆ. ಅದನ್ನು ಪರಿಶೀಲಿಸಿ ಆರೋಪಗಳನ್ನು ಬಂಧಿಸಲಾಗುವುದು. ಘಟನೆಯಲ್ಲಿ ನಿವಾಸಿಗಳಿಗೆ ಯಾರಿಗೂ ಗಾಯವಾಗಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಕೇಳಿಬರುತ್ತಿರುವುದು ವದಂತಿ. ಅಶ್ರುವಾಯುಗಳನ್ನು ಕೂಡ ಪ್ರಯೋಗಿಸಿಲ್ಲ. ಕಲ್ಲುತೂರಾಟದ ವೇಳೆ ಯಾರೋ ಪಟಾಕಿ ಹಚ್ಚಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT