ಸೋಮವಾರ, ಮಾರ್ಚ್ 8, 2021
31 °C

ನಗರದಲ್ಲಿ ಇಂದಿನಿಂದ ಕೃಷಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಇಂದಿನಿಂದ ಕೃಷಿ ಜಾತ್ರೆ

ಬೆಂಗಳೂರು: ರೈತರ ಮಾಹಿತಿ ವಿನಿಮಯ ತಾಣವಾದ ‘ಕೃಷಿ ಮೇಳ’ಕ್ಕಾಗಿ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಬುಧವಾರ ಅಂತಿಮ ಹಂತದ ಸಿದ್ಧತಾ ಕೆಲಸಗಳು ಭರದಿಂದ ಸಾಗಿದವು.

ಕೃಷಿ ಕಾರ್ಮಿಕರ ಕೊರತೆಯಿಂದ ವ್ಯವಸಾಯ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಹಾಗಾಗಿ ಈ ಬಾರಿ ಮೇಳದಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಆದ್ಯತೆ ನೀಡಲು ಕೃಷಿ ವಿಶ್ವವಿದ್ಯಾಲಯ ನಿರ್ಧರಿಸಿದೆ.

‘ಯಂತ್ರೋಪಕರಣಗಳ ಬಳಕೆ ಯಿಂದಲೇ ದೇಶದ ಆಹಾರ ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸುಲಭವಾಗಿ ಬಳಸಬಹುದಾದ ಯಂತ್ರೋಪಕರಣಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಚ್‌. ಶಿವಣ್ಣ ತಿಳಿಸಿದರು.

‘ಜೊತೆಗೆ ಸಿರಿಧಾನ್ಯ ಮತ್ತು ಅದರ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಸಮಗ್ರ ಕೃಷಿ ಪದ್ಧತಿ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ವಿಚಾರಗಳು ನಮ್ಮ ಆದ್ಯತಾ ಪಟ್ಟಿಯಲ್ಲಿವೆ’ ಎಂದು ಹೇಳಿದರು.

ಕೃಷಿ ಎಂಜಿನಿಯರಿಂಗ್‌: ಮೇಳದಲ್ಲಿ ಸುಮಾರು 175ಕ್ಕೂ ಹೆಚ್ಚು ಮಳಿಗೆಗಳು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೀಸಲಿರುತ್ತವೆ. ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಮಹೇಂದ್ರ ಆ್ಯಂಡ್‌ ಮಹೇಂದ್ರ, ಜಾನ್‌ಡೀರ್‌, ಜೈನ್‌ ಇರಿಗೇಷನ್‌ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಸಂಯುಕ್ತ ಕೂರಿಗೆ, ಕಬ್ಬು ನಾಟಿ ಮಾಡುವ ಯಂತ್ರ, ಒಕ್ಕಣೆ ಯಂತ್ರ, ಸೌರಶಕ್ತಿಯಿಂದ ಕೊಳವೆ ಬಾವಿಯಲ್ಲಿ ನೀರೆತ್ತುವ ಸಬ್‌ ಮರ್ಸಿಬಲ್‌ ಪಂಪ್‌, ಮಾವಿನಕಾಯಿ ಮತ್ತು ಸಪೋಟ ಕೀಳುವ ಸಾಧನ, ರಾಸಾಯನಿಕ ಬಳಕೆಯಿಲ್ಲದೆ ದ್ವಿದಳ ಧಾನ್ಯಗಳ ಸುರಕ್ಷಿತ ಶೇಖರಣೆ... ಹೀಗೆ ರೈತಪರ ಉಪಕರಣಗಳು ಇರಲಿವೆ.

ಪಶುಸಂಗೋಪನೆ: ಸುಮಾರು 65 ಮಳಿಗೆಗಳಲ್ಲಿ ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲದ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ.

ಕುರಿಗಳಲ್ಲಿ ಸುಧಾರಿತ ಸ್ಥಳೀಯ ತಳಿಗಳಾದ ಡೆಕ್ಕಣಿ, ಬಂಡೂರು, ಕೆಂಗುರಿ ಹಾಗೂ ವಿದೇಶಿ ತಳಿಗಳಾದ ರ‍್ಯಾಂಬುಲೆ, ಡಾರ್ಫರ್‌ ಮತ್ತು ಮೆರಿನೋ ಪ್ರದರ್ಶಿಸಲಾಗುತ್ತದೆ. ಮೇಕೆಯಲ್ಲಿ ಬ್ಲಾಕ್‌ ಬೆಂಗಾಲ್‌, ಜಮ್ನಪಾರಿ, ಶಿರೋಹಿ ಮತ್ತು ಬೀತಲ್‌ ತಳಿಗಳು ಹಾಗೂ ಕೋಳಿಗಳಲ್ಲಿ ಕಾವೇರಿ, ಗಿರಿರಾಣಿ, ಸ್ವರ್ಣದಾರ, ಗಿರಿರಾಜ, ನಾಟಿ ತಳಿಗಳ ಜತೆಗೆ ವಿಶಿಷ್ಟವಾದ ಕಪ್ಪು ಮಾಂಸ ಮತ್ತು ಕಪ್ಪು ರಕ್ತವಿರುವ ಖಡಕ್‌ನಾಥ ತಳಿ ಇಲ್ಲಿ ಕಾಣಲು ಸಿಗಲಿವೆ.

ಸುಧಾರಿತ ತಳಿಗಳು: ಹುರುಳಿ, ನೆಲಗಡಲೆ, ಚೆಂಡು ಹೂವು, ಹನಿ ನೀರಾವರಿಯಲ್ಲಿ ದೊಣ್ಣೆ ಮೆಣಸಿನಕಾಯಿ, ತೊಗರಿ, ಹರಳು, ಪ್ಲಾಸ್ಟಿಕ್‌ ಹೊದಿಕೆಯಲ್ಲಿ ಬದನೆ, ನವಣೆ, ರಾಗಿ, ಸೂರ್ಯಕಾಂತಿ, ಅಲಸಂದೆ, ಅರೆ ನೀರಾವರಿ ಭತ್ತದ ತಾಕುಗಳ ಪ್ರದರ್ಶನವೂ ಇರುತ್ತದೆ. ಮಳೆಯಾಶ್ರಿತ ಸಮಗ್ರ ಕೃಷಿ ಮತ್ತು ನೀರಾವರಿ ಆಶ್ರಿತ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ.

ಜೈವಿಕ ಇಂಧನ: ಹೊಂಗೆ, ಬೇವು, ಹಿಪ್ಪೆ, ಸಿಮರೂಬಾ, ಅಮೂರ, ಜತ್ರೋಪಾ... ಹೀಗೆ ವಿವಿಧ ಜಾತಿಯ ಸಸ್ಯಗಳನ್ನು ಬೆಳೆಯುವ, ಸಂಸ್ಕರಿಸುವ ಮತ್ತು ಬಳಕೆ ಬಗ್ಗೆ ಮೇಳದಲ್ಲಿ ಮಾಹಿತಿ ದೊರೆಯುತ್ತದೆ.

ಎಂಟು ಹೊಸ ತಳಿಗಳ ಬಿಡುಗಡೆ

‘ಕೃಷಿ ಮೇಳದಲ್ಲಿ ಪ್ರತಿ ಬಾರಿಯೂ ಹೊಸ ತಳಿಗಳನ್ನು ಪರಿಚಯಿಸುತ್ತೇವೆ. ಈ ಬಾರಿ ಎಂಟು ಹೊಸ ತಳಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಕುಲಪತಿ ಶಿವಣ್ಣ ತಿಳಿಸಿದರು.

ಕಬ್ಬು (ವಿಸಿಎಫ್ 0517) ತಳಿ: ಈ ತಳಿ 12–14 ತಿಂಗಳುಗಳಲ್ಲಿ ಬೆಳೆಯುತ್ತದೆ. ಜುಲೈನಿಂದ ನವೆಂಬರ್‌ವರೆಗೆ ನಾಟಿ ಮಾಡಬಹುದು. ಅಗಲವಾದ ಸಾಲು ಬೇಸಾಯಕ್ಕೆ ಸೂಕ್ತ. ಪ್ರತಿ ಎಕರೆಗೆ ಮೊದಲ ಬೆಳೆಯಲ್ಲಿ 80–90 ಟನ್‌ ಹಾಗೂ ಕೂಳೆ ಬೆಳೆಯಲ್ಲಿ 70–80 ಟನ್‌ ಇಳುವರಿ ನೀಡುತ್ತದೆ. ಮಂಡ್ಯ ಭಾಗದಲ್ಲಿ ಕೆಲವು ರೈತರು ಈಗಾಗಲೇ ಈ ತಳಿಯನ್ನು ಬೆಳೆದಿದ್ದಾರೆ.

ಮೇವಿನ ಅಲಸಂದೆ (ಎಂಎಫ್‌ಸಿ–09–1) ತಳಿ: ಈ ತಳಿಯು ಎಕರೆಗೆ 96 ಕ್ವಿಂಟಲ್‌ ಹಸಿರು ಮೇವು, 17.20 ಕ್ವಿಂಟಲ್‌ ಒಣ ಮೇವಿನ ಇಳುವರಿ ನೀಡುತ್ತದೆ.

ಮುಸುಕಿನಜೋಳದಲ್ಲಿ ಸಂಕರಣ ತಳಿ (ಎಂಎಎಚ್‌–14–5): ಈ ತಳಿ 110–120 ದಿನಗಳಲ್ಲಿ ಬೆಳೆಯುತ್ತದೆ. ಪ್ರತಿ ಎಕರೆಗೆ ಸುಮಾರು 44 ಕ್ವಿಂಟಲ್‌ ಇಳುವರಿ ನೀಡುತ್ತದ. ಎಲೆ ಅಂಗಮಾರಿ ರೋಗವನ್ನು ತಡೆಯುವ ಶಕ್ತಿ ಹೊಂದಿದೆ. ಕಟಾವು ಮಾಡುವ ಹಂತದಲ್ಲೂ ಗಿಡ ಹಸಿರುತನವನ್ನು ಕಾಯ್ದುಕೊಂಡಿರುತ್ತದೆ. ಇದು ಈ ತಳಿಯ ವಿಶೇಷ.

ತೊಗರಿ (ಬಿಆರ್‌ಜಿ–3): ಈ ತಳಿ ಬೆಳೆಯುವ ಅವಧಿ 160ರಿಂದ 175 ದಿನಗಳು. ಎಕರೆಗೆ ಸುಮಾರು 8 ಕ್ವಿಂಟಲ್‌ ಇಳುವರಿ ನೀಡುತ್ತದೆ. ಫ್ಯೂಸೆರಿಯಮ್‌ ಸೊರಗು ರೋಗ ಮತ್ತು ಬಂಜೆರೋಗದ ನಂಜಾಣುವಿಗೆ ನಿರೋಧಕ ಗುಣ ಹೊಂದಿದೆ.

ಅಲಸಂದೆ (ಎವಿ–6): ತಳಿಯ ಅವಧಿ 80–85 ದಿನಗಳು. ಪ್ರತಿ ಎಕರೆಗೆ 4.35 ಕ್ವಿಂಟಲ್‌ ಇಳುವರಿ ಸಿಗುತ್ತದೆ. ಜುಲೈ–ಸೆಪ್ಟೆಂಬರ್‌ ಮತ್ತು ಜನವರಿ ತಿಂಗಳು ಬಿತ್ತನೆಗೆ ಸೂಕ್ತಕಾಲ. ತುಕ್ಕು ರೋಗ ಹಾಗೂ ದುಂಡಾಣು ಅಂಗಮಾರಿ ರೋಗವನ್ನು ತಡೆದುಕೊಳ್ಳುವ ಗುಣ ಹೊಂದಿದೆ. ಬೀಜಗಳು ದಪ್ಪವಾಗಿದ್ದು ತಿಳಿಕಂದು ಬಣ್ಣ ಹೊಂದಿರುತ್ತವೆ.

ಬೀಜದ ದಂಟು (ಕೆಬಿಜಿಎ–4): 90 ದಿನಗಲ್ಲಿ ಬೆಳೆಯುತ್ತದೆ. ಪ್ರತಿ ಎಕರೆಗೆ 8.80 ಕ್ವಿಂಟಲ್‌ ಇಳುವರಿ ಸಿಗುತ್ತದೆ.

ನೇರಳೆಯಲ್ಲಿ ಚಿಂತಾಮಣಿ ಸೆಲೆಕ್ಷನ್‌ (ಆಯ್ಕೆ–1): ಈ ತಳಿಯ ಪ್ರತಿ ಮರದಲ್ಲಿ ವರ್ಷಕ್ಕೆ 150 ಕಿಲೊ ಹಣ್ಣು ಸಿಗುತ್ತದೆ. ಸ್ಥಳೀಯ ತಳಿಗಳಿಗಿಂತ ಶೇ 198ರಷ್ಟು ಅಧಿಕ ಇಳುವರಿ ನೀಡುತ್ತದೆ.

ಸ್ವೀವಿಯ ರೆಬುಡಿನ–ಮಿಕ್ಸಾಫ್ಲೈಡ್‌: ಇದು ಮೇವಿನ ತಳಿಯಾಗಿದ್ದು, ಎಕರೆಗೆ 37.60 ಕ್ವಿಂಟಲ್‌ ಇಳುವರಿ ಕೊಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.