ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗುತ್ತಿದೆಯೇ? ಕಾರ್ಯಕ್ಷಮತೆ ಹೆಚ್ಚಿಸಲು ಇಲ್ಲಿದೆ ಸಲಹೆ

Last Updated 20 ನವೆಂಬರ್ 2017, 16:25 IST
ಅಕ್ಷರ ಗಾತ್ರ

ಪ್ರತಿ ಬಾರಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದಂತೆ ನಮ್ಮ ಬಳಿ ಇರುವ ಹಳೆಯ ಫೋನ್‌ನ ಕಾರ್ಯಕ್ಷಮತೆ ನಿಧಾನವಾಗಲು ಶುರುವಾಗುತ್ತದೆ. ಆ್ಯಪಲ್ ಹೊಸ ಐಫೋನ್‌ ಬಿಡುಗಡೆ ಮಾಡಿದಾಗಲೆಲ್ಲ ಹಳೆ ಐಫೋನ್‌ನ ಕಾರ್ಯನಿರ್ವಹಣಾ ವೇಗ ಕಡಿಮೆಯಾಗುತ್ತದೆ ಎಂಬುದು ಗ್ರಾಹಕರ ಅಳಲು.

ಇತ್ತೀಚಿನ ಅಂಕಿಅಂಶಗಳೂ ಇದನ್ನು ದೃಢಪಡಿಸಿವೆ. ನವೆಂಬರ್‌ ಆರಂಭದಲ್ಲಿ ಆ್ಯಪಲ್‌ ಕಂಪೆನಿಯು ‘ಐಫೋನ್ 8’ ಅನ್ನು ಬಿಡುಗಡೆ ಮಾಡಿತ್ತು. ಆ ಸಂದರ್ಭ ‘ಐಫೋನ್ ಸ್ಲೋ’ ಎಂಬ ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದವರ ಪ್ರಮಾಣ ಶೇಕಡಾ 50ರಷ್ಟು ಹೆಚ್ಚಿತ್ತು.

ತಂತ್ರಜ್ಞಾನ ಕಂಪೆನಿಗಳು ಹೊಸ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಈ ಸಂಚು ಹೂಡುತ್ತಿವೆ ಎಂಬ ಅಪನಂಬಿಕೆ ಹಲವರಲ್ಲಿದೆ. ಹೊಸ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಲೆಲ್ಲ ಅವುಗಳ ಮಾರಾಟ ಹೆಚ್ಚಿಸುವ ಸಲುವಾಗಿಯೇ ತಂತ್ರಜ್ಞಾನ ಕಂಪೆನಿಗಳು ಹೀಗೆ ಮಾಡುತ್ತವೆ ಎಂಬುದು ಇವರ ಲೆಕ್ಕಾಚಾರ.

ಆದರೆ, ಈ ಆರೋಪ ಸುಳ್ಳು ಎಂಬುದು ತಜ್ಞರ ಅಭಿಮತ. ಅವರ ಪ್ರಕಾರ, ಹೊಸ ಸ್ಮಾರ್ಟ್‌ಫೋನ್ ಅಸ್ತಿತ್ವಕ್ಕೆ ಬಂದಾಗ ಹಳೆಯದ್ದು ನಿಧಾನವಾಗಲು ‘ಸಾಫ್ಟ್‌ವೇರ್‌ ಅಪ್‌ಗ್ರೇಡ್‌’ ಕಾರಣ.

‘ಕಂಪೆನಿಗಳು ಉದ್ದೇಶಪೂರ್ವಕವಾಗಿ ಹಳೆಯ ಫೋನ್‌ ನಿಧಾನವಾಗುವಂತೆ ಮಾಡಲು ಯಾವುದೇ ಬಲವಾದ ಕಾರಣಗಳಿಲ್ಲ’ ಎಂಬುದು ಮೈಕ್ರೋಸಾಫ್ಟ್‌ನ ಮಾಜಿ ಪ್ರೋಗ್ರಾಂ ಮ್ಯಾನೇಜರ್ ‘ಗ್ರೆಗ್‌ ರೈಜ್’ ಅವರ ಅಭಿಪ್ರಾಯ. ಸಾಫ್ಟ್‌ವೇರ್‌ಗಳು ಸೃಷ್ಟಿಸುವ ಬಗ್‌ಗಳೇ ಫೋನ್‌ ನಿಧಾನವಾಗಲು ಕಾರಣ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಆ್ಯಪಲ್, ಗೂಗಲ್, ಮೈಕ್ರೋಸಾಫ್ಟ್‌ನಂಥ ಕಂಪೆನಿಗಳು ಹೊಸ ಹಾರ್ಡ್‌ವೇರ್‌ಗಳನ್ನು ಬಿಡುಗಡೆ ಮಾಡಿದಾಗ ಅವುಗಳ ಆಪರೇಟಿಂಗ್ ಸಿಸ್ಟಂಗೆ (ಕಾರ್ಯನಿರ್ವಹಣಾ ತಂತ್ರಾಂಶ) ಪೂರಕವಾದ ಪರಿಷ್ಕೃತ ಸಾಫ್ಟ್‌ವೇರ್‌ಗಳನ್ನೂ ಬಿಡುಗಡೆ ಮಾಡುತ್ತವೆ. ಉದಾಹರಣೆಗೆ, ಕೆಲ ತಿಂಗಳುಗಳ ಹಿಂದೆ ‘ಐಫೋನ್ 8’ ಬಿಡುಗಡೆಯಾಗಿತ್ತು. ಆಗ ಆ್ಯಪಲ್ ಕಂಪೆನಿ ‘ಐಒಎಸ್ 11’ ಬಿಡುಗಡೆ ಮಾಡಿತ್ತು. ನಾಲ್ಕು ವರ್ಷ ಹಳೆಯ ‘ಐಫೋನ್ 5ಎಸ್’ ಸೇರಿದಂತೆ ಎಲ್ಲ ಐಫೋನ್‌ ಬಳಕೆದಾರರಿಗೆ ಇದನ್ನು ಉಚಿತವಾಗಿ ನೀಡಲಾಗಿತ್ತು.

ಹಳೆ ಆಪರೇಟಿಂಗ್ ಸಿಸ್ಟಂನಿಂದ ಹೊಸದಕ್ಕೆ ಅಪ್‌ಡೇಟ್ ಮಾಡುವುದು ಬಹಳ ಸಂಕೀರ್ಣವಾದ ವಿಚಾರ. ಕಡತಗಳನ್ನು (ಫೈಲ್‌ಗಳನ್ನು), ಆ್ಯಪ್‌ಗಳನ್ನು ಮತ್ತು ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಸಂಕೀರ್ಣ ಕೆಲಸ. ಹೀಗಾಗಿ ಹಳೆ ಸಾಧನಗಳಿಗೆ ಹೊಸ ಆಪರೇಟಿಂಗ್‌ ಸಿಸ್ಟಂ ಇನ್‌ಸ್ಟಾಲ್‌ ಮಾಡಿದಂತೆಲ್ಲ ಸಮಸ್ಯೆಗಳು ಉದ್ಭವಿಸುತ್ತವೆ. ಕ್ಯಾಮೆರಾ ಓಪನ್ ಮಾಡುವುದರಿಂದ ತೊಡಗಿ ಬ್ರೌಸಿಂಗ್‌ವರೆಗೆ ಎಲ್ಲ ಕೆಲಸಗಳು ಜಡವಾದಂತೆ ಭಾಸವಾಗುತ್ತವೆ. ‘ಇದೊಂಥರಾ, ಮನೆಯ ಇತರ ಯಾವುದನ್ನೂ ಬದಲಾಯಿಸದೆ ಕೊಳಾಯಿಯನ್ನು ಮಾತ್ರ ಬದಲಿಸಿದಂತೆ’ ಎನ್ನುತ್ತಾರೆ ಮೈಕ್ರೋಸಾಫ್ಟ್‌ನ ಮಾಜಿ ಮ್ಯಾನೇಜರ್ ಸ್ಕಾಟ್ ಬರ್ಕುನ್.

ಹಳೆಯ ಸಾಧನಗಳ ಕಾರ್ಯಕ್ಷಮತೆ ನಿಧಾನವಾಗುವುದನ್ನು ತಪ್ಪಿಸಲೂ ಪರಿಹಾರಗಳಿವೆ. ಹಳೆಯ ಗ್ಯಾಜೆಟ್‌ಗಳ ವೇಗ ವೃದ್ಧಿಸಲು ಆಪರೇಟಿಂಗ್ ಸಿಸ್ಟಂ ತಜ್ಞರ ಮಾಹಿತಿ ಆಧಾರಿತ ಕೆಲವು ಸಲಹೆಗಳು ಇಲ್ಲಿವೆ.

‘ಕ್ಲೀನ್‌ ಇನ್‌ಸ್ಟಾಲ್’ ಮಾಡುವುದು ಉತ್ತಮ
ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡುವುದನ್ನು ಕಂಪೆನಿಗಳು ಸರಳವಾಗಿಸಿವೆ. ‘ಅಪ್‌ಡೇಟ್’ ಬಟನ್ ಒತ್ತುವ ಮೂಲಕ ಈ ಕೆಲಸ ಮಾಡಬಹುದಾಗಿದೆ. ಈ ವೇಳೆ ತನ್ನಿಂತಾನೆ ಆ್ಯಪ್‌ಗಳು, ಫೈಲ್‌ಗಳು ಹೊಸ ಸಿಸ್ಟಂಗೆ ಮೂವ್ ಆಗುತ್ತವೆ.

‘ಆದರೆ, ಇದು ಉತ್ತಮ ವಿಧಾನವಲ್ಲ. ನಮ್ಮ ಹಳೆಯ ಮೊಬೈಲ್‌ನಲ್ಲಿರುವ ಎಲ್ಲ ಆ್ಯಪ್‌ಗಳು, ಫೈಲ್‌ಗಳ ಬ್ಯಾಕ್‌ಅಪ್ ಇಟ್ಟುಕೊಂಡು, ಅದನ್ನು ಖಾಲಿಯಾಗಿರಿಸಿ ಆಪರೇಟಿಂಗ್ ಸಿಸ್ಟಂ ಅಪ್‌ಗ್ರೇಡ್ ಮಾಡಿಕೊಳ್ಳುವುದು ಒಳ್ಳೆಯದು. ಈ ‘ಕ್ಲೀನ್ ಇನ್‌ಸ್ಟಾಲ್’ ವಿಧಾನ ಉತ್ತಮ’ ಎಂದು ಗ್ರೆಗ್‌ ರೈಜ್ ಸಲಹೆ ನೀಡಿದ್ದಾರೆ.

ಉದಾಹರಣೆಗೆ, ‘ಐಫೋನ್‌ 6’ನಲ್ಲಿ 100 ಆ್ಯಪ್‌ಗಳು, ನಾಲ್ಕು ಇ–ಮೇಲ್ ಅಕೌಂಟ್‌ಗಳು ಮತ್ತು 2,000 ಫೋಟೊಗಳಿವೆ ಎಂದಿಟ್ಟುಕೊಳ್ಳೋಣ. ಇವೆನ್ನಲ್ಲ ಬ್ಯಾಕ್‌ಅಪ್ ಇಟ್ಟುಕೊಂಡು ಖಾಲಿ ‘ಐಫೋನ್‌ 6’ಗೆ ಆಪರೇಟಿಂಗ್ ಸಿಸ್ಟಂ ಅಪ್‌ಗ್ರೇಡ್ ಮಾಡುವುದು ಹೆಚ್ಚು ಪರಿಣಾಮಕಾರಿ.

ಸ್ಮಾರ್ಟ್‌ಫೋನ್‌ಗಳಿಗಾದರೆ ಡೇಟಾಗಳನ್ನು (ದತ್ತಾಂಶಗಳನ್ನು) ಕಂಪ್ಯೂಟರ್‌ನಲ್ಲಿಯೂ ಕಂಪ್ಯೂಟರ್‌ಗಾದರೆ ಡೇಟಾವನ್ನು ಆನ್‌ಲೈನ್‌ನಲ್ಲಿಯೂ ಬ್ಯಾಕ್‌ಅಪ್ ಇಟ್ಟುಕೊಂಡು ಆಪರೇಟಿಂಗ್ ಸಿಸ್ಟಂ ಅಪ್‌ಗ್ರೇಡ್ ಮಾಡುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕ್ಲೀನಿಂಗ್‌ ಅಪ್‌ ಮಾಡುತ್ತಿರಿ

ಕೆಲವೊಮ್ಮೆ ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಐಟಿ ತಜ್ಞರು ಇದನ್ನು ‘ಕ್ರಫ್ಟ್’ ಎಂದು ಕರೆಯುತ್ತಾರೆ. ಕ್ಲೀನಿಂಗ್‌ ಆ್ಯಪ್‌ಗಳ ಮೂಲಕ ‘ಕ್ರಫ್ಟ್’ಗಳನ್ನು ನಿರ್ಮೂಲನೆಗೊಳಿಸಿ ವೇಗ ವೃದ್ಧಿಸಿಕೊಳ್ಳಬಹುದು. ಕಂಪ್ಯೂಟರ್‌ಗಳಿಗಾದರೆ, ಮ್ಯಾಕ್ ಬಳಕೆದಾರರು ‘ಓನಿಕ್ಸ್ (Onyx) ಎಂಬ ಉಚಿತ ಆ್ಯಪ್‌ ಬಳಸಬಹುದು. ವಿಂಡೋಸ್ ಬಳಕೆದಾರರು ಸಿಸ್ಟಂನಲ್ಲಿರುವ ‘ಕ್ಲೀನ್‌ಅಪ್’ ವ್ಯವಸ್ಥೆಯನ್ನೇ ಬಳಸಬಹುದು. ಐಫೋನ್‌ಗಳಿಗಾದರೆ ‘ಸೆಟ್ಟಿಂಗ್ಸ್ ಆ್ಯಪ್’ ಓಪನ್ ಮಾಡಿ ‘ರಿಸೆಟ್ ಸೆಟ್ಟಿಂಗ್ಸ್’ ಮಾಡುವ ಮೂಲಕ ವೇಗ ವೃದ್ಧಿಸಿಕೊಳ್ಳಬಹುದು. (ಅತ್ಯಾವಶ್ಯಕ ಫೈಲ್‌ಗಳ ಬ್ಯಾಕ್‌ಅಪ್ ಇಟ್ಟುಕೊಳ್ಳುವುದು ಉಚಿತ. ಇಲ್ಲವಾದಲ್ಲಿ ಕಳೆದುಕೊಳ್ಳುವ ಸಾಧ್ಯತೆ ಇದೆ)

ಸ್ಟೋರೇಜ್ (ಸಂಗ್ರಹ ಸಾಮರ್ಥ್ಯ) ಬಗ್ಗೆ ಗಮನವಿರಲಿ
ಸ್ಮಾರ್ಟ್‌ಫೋನ್‌ಗಳ ಮೆಮೊರಿ ಸಾಮರ್ಥ್ಯದ (ಸಂಗ್ರಹ ಸಾಮರ್ಥ್ಯ) ಬಗ್ಗೆ ಸದಾ ಗಮನವಹಿಸಬೇಕು. ಸ್ಟೋರೇಜ್‌ನಿಂದಾಗಿಯೂ ಅನೇಕ ಬಾರಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ. ಉದಾಹರಣೆಗೆ, ನಿಮ್ಮ ಐಫೋನ್ ಅಥವಾ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ 64 ಜಿ.ಬಿ (ಜಿಗಾಬೈಟ್‌) ಸ್ಟೋರೇಟ್ ಸಾಮರ್ಥ್ಯ ಹೊಂದಿದೆ ಎಂದಿಟ್ಟುಕೊಳ್ಳೋಣ. ಅದಷ್ಟನ್ನೂ ತುಂಬಿಸಬೇಕೆಂದೇನಿಲ್ಲ. ಸ್ಮಾರ್ಟ್‌ಫೊನ್‌ನ ಮೆಮೊರಿಯಲ್ಲಿ ಖಾಲಿ ಜಾಗದ ಪ್ರಮಾಣ ಎಷ್ಟು ಹೆಚ್ಚಿದ್ದಷ್ಟು ಕಾರ್ಯನಿರ್ವಹಣೆ ವೇಗ ಹೆಚ್ಚಿರುತ್ತದೆ.

ಫೋಟೊಗಳು ಹೆಚ್ಚಿದ್ದಷ್ಟು ಫೋನ್ ನಿಧಾನವಾಗುವ ಸಾಧ್ಯತೆ ಇದೆ. ಫೋಟೊ ಲೈಬ್ರೆರಿಯನ್ನು ಗೂಗಲ್‌ ಫೋಟೊಸ್‌ನಂಥ ತಾಣಗಳಿಗೆ ಮೂವ್ ಮಾಡುವ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಬಹುದು.

ಆಧುನಿಕ ವೈ–ಫೈ ಅಳವಡಿಸಿ
‘ನಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಅನೇಕ ಆ್ಯಪ್‌ಗಳು ಅಂತರ್ಜಾಲವನ್ನು ಅವಲಂಬಿತವಾಗಿರುತ್ತವೆ. ಹೀಗಾಗಿ ಕಳಪೆ ವೈ–ಫೈ ರೂಟರ್‌ಗಳಿಂದಾಗಿಯೂ ಸಮಸ್ಯೆ ಉದ್ಭವಿಸುತ್ತದೆ. ಇದನ್ನು ಪರಿಹರಿಸಲು ಆಧುನಿಕ ವೈ–ಫೈ ರೂಟರ್‌ ಅಳವಡಿಸಿಕೊಳ್ಳವುದು ಉತ್ತಮ’ ಎಂಬುದು ತಂತ್ರಜ್ಞ ಮಿ. ಡನ್ಸ್ಲೋ ಸಲಹೆ.

ವೈ–ಫೈ ರೂಟರ್ ಸೇರಿದಂತೆ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವುದು ಹೊಸ ಫೋನ್‌ ಖರೀದಿಸುವುದಕ್ಕಿಂತಲೂ ಒಳ್ಳೆಯ ವಿಧಾನ ಎಂಬುದು ಅವರ ಅಭಿಮತ.

ಪ್ರತಿ ವರ್ಷ ಹೊಸ ಫೋನ್ ಖರೀದಿಗಾಗಿ ಸಾವಿರ ಡಾಲರ್ ವ್ಯಯಿಸುವ ಬದಲು ನೆಟ್‌ವರ್ಕಿಂಗ್ ವೇಗ ವೃದ್ಧಿಸಲು 500 ಡಾಲರ್ ವ್ಯಯಿಸಿ ಎಂಬುದು ಡನ್ಸ್ಲೋ ಸಲಹೆ.

ಆಪರೇಟಿಂಗ್ ಸಿಸ್ಟಂಅಪ್‌ಗ್ರೇಡ್ ಮಾಡುತ್ತಿರಿ
ಸ್ಮಾರ್ಟ್‌ಫೋನ್‌ ನಿಧಾನವಾಗುತ್ತಿದೆ ಎಂದು ಅನಿಸಿದಾಗಲೆಲ್ಲ ಹೊಸ ಆಪರೇಟಿಂಗ್ ಸಿಸ್ಟಂ ಬಂದಿದೆಯೇ ಎಂಬುದನ್ನು ಪರಿಶೀಲಿಸಿ ಅಪ್‌ಗ್ರೇಡ್ ಮಾಡುವುದನ್ನು ರೂಢಿಸಿಕೊಳ್ಳಿ. ಹೊಸ ಆಪರೇಟಿಂಗ್ ಸಿಸ್ಟಂಗಳು ಉತ್ತಮ ಫೀಚರ್‌ಗಳನ್ನು ಹೊಂದಿದ್ದು, ವೇಗವೃದ್ಧಿಗೆ ಪೂರಕವಾಗಿರುತ್ತವೆ. ಕೆಲವೊಮ್ಮೆ ಹೊಸ ಆಪರೇಟಿಂಗ್ ಸಿಸ್ಟಂ ಅಪ್‌ಗ್ರೇಡ್‌ ಮಾಡಿದಾಗ ಸಮಸ್ಯೆಗಳೂ ಉದ್ಭವಿಸಬಹುದು. ಇಂಥ ಸಂದರ್ಭದಲ್ಲಿ ರಿಸೆಟ್‌ ಮಾಡುವ ಮೂಲಕ ಸಮಸ್ಯೆ ಬಗೆಹರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕೃಪೆ: ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT