ಶುಕ್ರವಾರ, ಫೆಬ್ರವರಿ 26, 2021
20 °C

ಚನ್ನಮ್ಮ ವೃತ್ತ ಸ್ಥಾಪನೆ ಯತ್ನ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮ ವೃತ್ತ ಸ್ಥಾಪನೆ ಯತ್ನ ಸ್ಥಗಿತ

ಬಾಗಲಕೋಟೆ: ಜಿಲ್ಲಾಡಳಿತದಿಂದ ಅನುಮತಿ ಸಿಗದ ಕಾರಣ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಗುರುವಾರ ಇಲ್ಲಿನ ನವನಗರದ ನಗರಸಭೆ ಕಚೇರಿ ಎದುರು ‘ರಾಣಿ ಚನ್ನಮ್ಮ’ ಹೆಸರಿನ ವೃತ್ತ ಆರಂಭ ಪ್ರಯತ್ನ ಅರ್ಧಕ್ಕೆ ಸ್ಥಗಿತಗೊಂಡಿತು.

ನಗರಸಭೆ ಮುಂದಿನ ರಸ್ತೆಯಲ್ಲಿ ಕಿತ್ತೂರು ಚನ್ನಮ್ಮ ಹೆಸರಿನ ವೃತ್ತ ನಿರ್ಮಾಣಕ್ಕೆ ಮುಂದಾದ ಪಂಚಮಸಾಲಿ ಸಮಾಜದವರು, ಅಲ್ಲಿ ಸಿಮೆಂಟ್‌ನ ರಿಂಗ್ ತಂದು ತಾತ್ಕಾಲಿಕವಾಗಿ ವೃತ್ತ ನಿರ್ಮಾಣಕ್ಕೆ ಮುಂದಾಗಿದ್ದರು. ಅಲ್ಲಿ ರಾಣಿ ಚನ್ನಮ್ಮನ ಭಾವಚಿತ್ರ ಇಟ್ಟು, ಕೂಡಲ ಸಂಗಮಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕರೆಸಿ ಪೂಜೆ ಮಾಡಿಸುವ ಮೂಲಕ ಅಧಿಕೃತವಾಗಿ ಉದ್ಘಾಟನೆ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಿದ್ದರು.

ಸುದ್ದಿ ತಿಳಿದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿ.ಟಿ.ಡಿ.ಎ) ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ವೃತ್ತ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿದರು. ಈ ವೇಳೆ ಪಂಚಮಸಾಲಿ ಸಮುದಾಯದ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ವಾಗ್ವಾದಕ್ಕೂ ದಾರಿಯಾಯಿತು. ಇದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು.

ಶಾಸಕ ಎಚ್‌.ವೈ.ಮೇಟಿ, ಜಯಮೃತ್ಯುಂಜಯ ಶ್ರೀ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಾಸಕ ಎಚ್.ವೈ.ಮೇಟಿ, ಸಮಾಜದ ಮುಖಂಡರ ಜೊತೆ ಚರ್ಚಿಸಿದರು. ಈ ವೇಳೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದರು. ‘ನಗರಸಭೆ ಎದುರಿನ ವೃತ್ತಕ್ಕೆ ಚನ್ನಮ್ಮನ ಹೆಸರು ಇಡುವ ಬಗ್ಗೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಬರಬೇಕಿದೆ.

ಅದು ಇನ್ನೂ ದೊರೆಯದ ಕಾರಣ ಈಗ ವೃತ್ತ ನಿರ್ಮಾಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂಬ ಮಾಹಿತಿಯನ್ನು ಜಿಲ್ಲಾಡಳಿತದಿಂದ ಪಡೆದುಕೊಂಡ ಮೇಟಿ, ಅದನ್ನು ಮುಖಂಡರಿಗೆ ತಿಳಿಸಿದರು. ‘ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಹೋಗಬೇಕಿದೆ. ದುಡುಕಿನ ನಿರ್ಧಾರ ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಾನೂ ಕೂಡಾ ವೃತ್ತ ನಿರ್ಮಾಣಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಮೇಟಿ ತಿಳಿಸಿದರು.

ಈ ವೇಳೆ ಗುಂಪಿನಿಂದ ತೂರಿ ಬಂದ ಮಾತಿಗೆ ಆಕ್ರೋಶಗೊಂಡ ಮೇಟಿ, ‘ನಾನೇನ್ ಮಾಡೋಕಾಗುತ್ತೆ ನಾನೇನ್ ಸರ್ಕಾರನಾ, ಹೋಗಿ ಕೇಳಿ ನೀವೇ, ನಾನು ಮಿನಿಷ್ಟ್ರು ಅಲ್ಲ. ಮಾತನಾಡುವ ಮುನ್ನ ಎಚ್ಚರಿಕೆಯಿಂದ ಸರಿಯಾಗಿ ಮಾತನಾಡಿ’ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಬಸವರಾಜ ನಾಶಿ, ಶಿವಾನಂದ ಅಪ್ಜಲ್‌ಪುರ, ಜಿ.ಎಂ. ಸಿಂಧೂರ, ಎಸ್‌.ಎನ್‌.ರಾಂಪುರ, ನಿಂಗಪ್ಪ ಕೋಟಿ ಸೇರಿದಂತೆ ಅನೇಕರು ಇದ್ದರು.

ಪೂಜೆ ಮಾಡದ ಸ್ವಾಮೀಜಿ

ಶಾಸಕ ಮೇಟಿ ತೆರಳಿದ ಕೆಲ ಹೊತ್ತಿನ ನಂತರ ನಗರಸಭೆ ಆವರಣಕ್ಕೆ ಬಂದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಸಮಾಜದ ಮುಖಂಡರೊಂದಿಗೆ ಚರ್ಚೆ ನಡೆಸಿದರು.

‘ಈಗ ಪೂಜೆ ಮಾಡಿ ವೃತ್ತ ಉದ್ಘಾಟಿಸಿದರೆ ಅದನ್ನು ಅರ್ಧಕ್ಕೆ ಕೈ ಬಿಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಾನೂನುಬದ್ಧವಾಗಿ ಅನುಮತಿ ಪಡೆದು ಚನ್ನಮ್ಮನ ಹೆಸರಿನ ವೃತ್ತ ನಿರ್ಮಿಸೋಣ. ನಂತರ ಅದರ ಉದ್ಘಾಟನೆ ಮಾಡೋಣ. ಈ ವಿಚಾರದಲ್ಲಿ ಆತುರ ಮಾಡುವುದು ಬೇಡ’ ಎಂದು ಕಿವಿಮಾತು ಹೇಳಿದ ಸ್ವಾಮೀಜಿ ಪೂಜೆ ಮಾಡಲು ಮುಂದಾಗಲಿಲ್ಲ. ಶ್ರೀಗಳ ಮಾತಿಗೆ ಮನ್ನಣೆ ನೀಡಿದ ಮುಖಂಡರು ಸ್ಥಳದಿಂದ ತೆರಳಿದರು. ಈ ವೇಳೆ ಕೆಲವರು ಚನ್ನಮ್ಮನ ಭಾವಚಿತ್ರಕ್ಕೆ ತಾವೇ ಮುಂದಾಗಿ ಪೂಜೆ ಸಲ್ಲಿಸಿದರು.

ವಾರದೊಳಗೆ ಅನುಮತಿ ಕೊಡಿಸಿ: ‘ಇನ್ನೊಂದು ವಾರದಲ್ಲಿ ಸರ್ಕಾರದಿಂದ ಅನುಮತಿ ಕೊಡಿಸಿ ಚನ್ನಮ್ಮನ ಹೆಸರಿನ ವೃತ್ತ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ’ ಶ್ರೀಗಳ ನೇತೃತ್ವದಲ್ಲಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

* * 

ವೃತ್ತ ಸ್ಥಾಪನೆ ಸೂಕ್ಷ್ಮ ವಿಷಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು

ಎಚ್‌.ವೈ.ಮೇಟಿ ಶಾಸಕರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.