ಗುರುವಾರ , ಫೆಬ್ರವರಿ 25, 2021
17 °C
ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಗೆ ₹ 9 ಸಾವಿರ ಕೋಟಿ ನೀಡಿದ ಕೇಂದ್ರ

ಅಪೌಷ್ಟಿಕತೆ ನೀಗಿಸಲು ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪೌಷ್ಟಿಕತೆ ನೀಗಿಸಲು ಪಣ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆ (ಎನ್‌ಎನ್‌ಎಂ) ಸಮರ್ಪಕ ಜಾರಿಗೆ ಆರು ಹಂತದ ನಿಗಾ ವ್ಯವಸ್ಥೆ ರೂಪಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ದೌರ್ಬಲ್ಯ ಸಮಸ್ಯೆಗಳನ್ನು 2022ರ ವೇಳೆಗೆ ಸಂಪೂರ್ಣವಾಗಿ ತಡೆಗಟ್ಟುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಯೋಜನೆಯ ಮೇಲುಸ್ತುವಾರಿಗೆ ಅನುಕೂಲವಾಗುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ಮತ್ತು ಮೇಲ್ವಿಚಾರಕಿಯರಿಗೆ ಟ್ಯಾಬ್‌ ನೀಡಲು ನಿರ್ಧರಿಸಲಾಗಿದೆ.

ಅನುಷ್ಠಾನ ಮತ್ತು ನಿಗಾ ವ್ಯವಸ್ಥೆಗೆ ತಗಲುವ ಖರ್ಚುವೆಚ್ಚ ಭರಿಸಲು ಮೂರು ವರ್ಷಗಳ ಅವಧಿಗೆ ₹9,046.19 ಕೋಟಿ ಅನುದಾನ ಮೀಸಲಿಡಲಾಗಿದೆ.

ಯೋಜನೆ ಯಶಸ್ಸಿಗೆ ಸಮನ್ವಯದಿಂದ ಕೆಲಸ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳನ್ನು ಒಂದೇ ವೇದಿಕೆ ಅಡಿ ತರಲಾಗಿದೆ.

ದೇಶದಲ್ಲಿ ಮಕ್ಕಳು ಪೌಷ್ಟಿಕ ಆಹಾರದ ತೀವ್ರ ಕೊರತೆ ಎದುರಿಸುತ್ತಿರುವ 315 ಜಿಲ್ಲೆಗಳನ್ನು ಗುರುತಿಸಲಾಗಿದ್ದು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರಾಕೇಶ್‌ ಶ್ರೀವಾತ್ಸವ್‌ ತಿಳಿಸಿದರು.ಯೋಜನೆಯಿಂದ ಹತ್ತು ಕೋಟಿ ಜನರಿಗೆ ಪ್ರಯೋಜನ ದೊರೆಯಲಿದೆ. ಅಪೌಷ್ಟಿಕತೆ ಮತ್ತು ಕಡಿಮೆ ತೂಕದ ಮಕ್ಕಳು ಹುಟ್ಟುವ ಪ್ರಮಾಣವನ್ನು ವರ್ಷಕ್ಕೆ ಶೇ 2ರಷ್ಟು ಇಳಿಸುವುದು ಯೋಜನೆಯ ಮುಖ್ಯ ಉದ್ದೇಶ.

ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪುವಂತೆ ನೋಡಿಕೊಳ್ಳಲು ಆಧಾರ್‌ ನೆರವು ಪಡೆಯಲು ನಿರ್ಧರಿಸಿದ್ದೇವೆ. ಇದರಿಂದ ಯೋಜನೆಯ ದುರುಪಯೋಗ ಮತ್ತು ಸೋರಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ತಿಳಿಸಿದರು.

ಫಲಾನುಭವಿಗಳ ಹೆಸರನ್ನು ಆಧಾರ್‌ಗೆ ನೋಂದಣಿ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ₹500 ಪ್ರೋತ್ಸಾಹಧನ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

*

ಮೂರು ಹಂತಗಳಲ್ಲಿ ಯೋಜನೆ ಜಾರಿ

* 2017: ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿರುವ 162 ಜಿಲ್ಲೆಗಳಲ್ಲಿ ಎನ್‌ಎನ್‌ಎಂ ಪ್ರಾಯೋಗಿಕ ಜಾರಿ

*2017–18: ಮೊದಲ ಹಂತದ ಯೋಜನೆಗೆ 315 ಜಿಲ್ಲೆ ಆಯ್ಕೆ

* 2018–19: ಎರಡನೇ ಹಂತದಲ್ಲಿ 225 ಜಿಲ್ಲೆಗಳಲ್ಲಿ ಅನುಷ್ಠಾನ

*2019–20: ಆದ್ಯತೆ ಮೇರೆಗೆ ಇನ್ನುಳಿದ ಜಿಲ್ಲೆಗಳ ಆಯ್ಕೆ

*

ಎನ್‌ಎನ್‌ಎಂ ಜಾರಿಗೆ ಸಮಿತಿ ರಚನೆ

* ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆ (ಎನ್‌ಎನ್‌ಎಂ) ಜಾರಿ ಮೇಲುಸ್ತುವಾರಿಗೆ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮಿತಿ

* ಎನ್‌ಎನ್‌ಎಂ ತಾಲ್ಲೂಕು ಸಮಿತಿಗೆ ಉಪ ವಿಭಾಗಾಧಿಕಾರಿ, ಜಿಲ್ಲಾ ಸಮಿತಿಗೆ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಮಿತಿಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ.

* ರಾಜ್ಯ ಮಟ್ಟದ ಎನ್‌ಎನ್‌ಎಂ ಸಮಿತಿ ಮುಖ್ಯಸ್ಥರ ಹುದ್ದೆಗೆ ಹಿರಿಯ ಅಧಿಕಾರಿಯೊಬ್ಬರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಲಾಗಿದೆ.

*

ದೇಶದ 162 ಜಿಲ್ಲೆಗಳಲ್ಲಿ ರಾಷ್ಟ್ರೀಯ ಆಹಾರ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಎಲ್ಲ ಅಂಗನವಾಡಿ ಸಹಾಯಕರಿಗೆ ಸ್ಮಾರ್ಟ್‌ ಫೋನ್‌ ನೀಡಲಾಗಿದೆ.

– ಮೇನಕಾ ಗಾಂಧಿ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.