ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಕೊಂಡ: ಹರಿಜನ ಕೇರಿಯ ದಾರುಣ ಬದುಕು

Last Updated 2 ಡಿಸೆಂಬರ್ 2017, 9:09 IST
ಅಕ್ಷರ ಗಾತ್ರ

ಮಾಯಕೊಂಡ: ಕಿಷ್ಕಿಂಧೆಯಂಥ ಮನೆಗಳು, ಒಂದೇ ಮನೆಯಲ್ಲಿ ಬದುಕುವ ಮೂರ್ನಾಲ್ಕು ಕುಟುಂಬ, ದುರ್ನಾತ ಬೀರುವ ಚರಂಡಿ, ಅದರ ಮೇಲೆಯೇ ನಿರ್ಮಿಸಿದ ನಿಂತ ತೆಂಗಿನಗರಿ ಬಚ್ಚಲು–ಇಂಥ ದೃಶ್ಯವುಳ್ಳ ಹರಿಜನ ಕಾಲೊನಿ ಇರುವುದು ಮಾಯಕೊಂಡದಲ್ಲಿ.

ಪರಿಶಿಷ್ಟ ಜಾತಿಗೇ ಮೀಸಲಾದ ವಿಧಾನಸಭಾ ಕ್ಷೇತ್ರದ ಕೇಂದ್ರ ಮಾಯಕೊಂಡ. ಇಲ್ಲಿಯೇ ಹರಿಜನರ ಬದುಕು ಹೀನಾಯ ಸ್ಥಿತಿಯಲ್ಲಿದೆ. ಸರ್ಕಾರದ ಸವಲತ್ತು ಅರಿಯದ ಯುವಕರು, ಶಿಕ್ಷಣ ವಂಚಿತ ಮಕ್ಕಳು ಇಲ್ಲಿನ ಅವ್ಯವಸ್ಥೆಯ ಬದುಕಿಗೆ ಸಾಕ್ಷಿಯಾಗಿದ್ದಾರೆ.

ಅಸ್ಪೃಶ್ಯರ ಬದುಕು ಸುಧಾರಿಸಲು ಸರ್ಕಾರ ‘ಭಾಗ್ಯ’ಗಳ ಧಾರೆ ಹರಿಸಿದ್ದರೂ, ಅವನ್ನು ಅಣಕಿಸುವಂತೆ ಇಲ್ಲಿನ ಬದುಕು ಕಂಡುಬರುತ್ತಿದೆ. ಜನರ ಬಡತನದ ಜತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮೇಳೈಸಿ, ಹರಿಜನ ಕಾಲೊನಿ ಜನರ ಬದುಕು ಹೈರಾಣಾಗಿದೆ.

ಒಂದೇ ಮನೆಯಲ್ಲಿ ಮೂರು ಕುಟುಂಬ: ಕೇರಿಯಲ್ಲಿ ಸುಮಾರು 100 ಕುಟುಂಬಗಳಿವೆ. 25–30 ವರ್ಷಗಳ ಹಿಂದೆ ಮಂಜೂರಾದ, 18X20ಅಡಿ ವಿಸ್ತೀರ್ಣದ ಗೂಡಿನಂಥ ‘ಜನತಾ ಮನೆ’ಗಳಲ್ಲಿ ಜೀವನ ಸವೆಸುತ್ತಿದ್ದಾರೆ. ಮಕ್ಕಳು ಹೆಚ್ಚಿ ಕುಟುಂಬಗಳು ಬೆಳೆದಿವೆಯೇ ವಿನಾ ಮನೆಗಳ ಗಾತ್ರ ದೊಡ್ಡದಾಗಿಲ್ಲ. ಒಂದೇ ಮನೆಯಲ್ಲಿ 2–3 ಕುಟುಂಬದವರು ವಾಸಿಸುತ್ತಿದ್ದಾರೆ.

ಅಡುಗೆ ಕೋಣೆಯಲ್ಲಿ ಒಂದು ಕುಟುಂಬ ಕಾಲು ಚಾಚಲಾರದಷ್ಟು ಜಾಗದಲ್ಲಿ ಬದುಕುತ್ತಿದೆ. ಗೋಡೆ ಕೂಡ ಕಟ್ಟಿಕೊಳ್ಳಲಾಗದೇ ಸೀರೆ ಇಳಿಬಿಟ್ಟು, ಮರೆಮಾಡಿಕೊಂಡಿದ್ದಾರೆ. ಒಡಹುಟ್ಟಿದವರು ಬೇರೆ ಬೇರೆಯಾಗಿದ್ದರೂ ಮನೆ ಕಟ್ಟಿಕೊಳ್ಳಲು ಜಾಗ ಇಲ್ಲದೇ ಒಂದೇ ಮನೆಯಲ್ಲಿ ಅನಿವಾರ್ಯವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ‘ನಮ್ಮ ಗೋಳು ಕೇಳಲು ಯಾರೂ ತಯಾರಿಲ್ಲ’ ಎಂದು ಇಲ್ಲಿನ ನಿವಾಸಿಗಳು ನೊಂದುಕೊಳ್ಳುತ್ತಾರೆ.

‘70 ಮನೆಗಳಲ್ಲಿ 30–40 ಮನೆಗಳು ಮಾತ್ರ ಉತ್ತಮವಾಗಿವೆ. ಉಳಿದ ಮನೆಗಳು ಶಿಥಿಲಗೊಂಡು, ಬೀಳುವ ಸ್ಥಿತಿಯಲ್ಲಿವೆ. 20ಕ್ಕೂ ಹೆಚ್ಚು ಮನೆಗಳಲ್ಲಿ 2–3 ಕುಟುಂಬಗಳು ಬದುಕುತ್ತಿವೆ. ಜನ ಪ್ರತಿನಿಧಿಗಳು ನಮ್ಮ ಕಾಲೊನಿಗೆ ಶೀಘ್ರ ನಿವೇಶನ, ನೀಡಿ ಬವಣೆ ನೀಗಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಪರುಶುರಾಮಪ್ಪ.

ಇಕ್ಕಟ್ಟಿನಿಂದಾಗಿ ಮನೆ ಹೊರಗೆ ಚರಂಡಿ ಮೇಲೆಯೇ ಬಚ್ಚಲು ಕಟ್ಟಿಕೊಂಡಿದ್ದಾರೆ. ಶೌಚಾಲಯ ನಿರ್ಮಿಸಲು ಜಾಗವಿಲ್ಲದ ಕಾರಣ ಕೆಲವರಿಗೆ ಬಯಲು ಶೌಚವೇ ಗತಿಯಾಗಿದೆ ಎಂದು ಇಲ್ಲಿನ ನಿವಾಸಿ ಎಂದು ರೂಪಾ ಮರಿಯಪ್ಪ ನೊಂದುಕೊಂಡರು.

ಕೂಲಿಯಿಂದಲೇ ಬದುಕು, ಶಿಕ್ಷಣಕ್ಕೂ ನಿರಾಸಕ್ತಿ
ದಲಿತರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ, ಆರ್ಥಿಕ ಶಕ್ತಿ ವೃದ್ಧಿಸುವ ಯೋಜನೆಗಳು ಇಲ್ಲಿನವರಿಗೆ ದೊರೆತಿಲ್ಲ. ಅಡಿಕೆ ಸುಲಿಯುವುದು, ಕಳೆ ತಗೆಯುವುದು, ತೆನೆ ಮುರಿಯುವುದು ಮುಂತಾದ ಕೃಷಿ ಕೂಲಿಯೇ ಇವರ ಬದುಕಿನ ಬಂಡಿಗೆ ಆಧಾರ. ಹಳೆ ತಲೆಗಳು ಇಂದಿಗೂ ಕೀಳರಿಮೆಯಿಂದ ಹೊರಬಂದಿಲ್ಲ. ಸರ್ಕಾರದ ಯಾವ ಸವಲತ್ತು, ಸಾಲದ ಯೋಜನೆಯೂ ಕಾಲೊನಿ ಜನರ ಕೈಗೆಟುಕಿಲ್ಲ ಎಂಬ ನೋವು ನಿವಾಸಿಗಳನ್ನು ಕಾಡುತ್ತಿದೆ.

‘ಜೀತ, ಸತ್ತ ದನ ಹೊರುವ ಪದ್ಧತಿ ಬಹುತೇಕ ದೂರವಾಗಿದೆ.20ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ವಂಚಿತರಾಗಿ ಕೂಲಿ ಮಾಡುತ್ತಿದ್ದಾರೆ. ಕಾಲೊನಿಯಲ್ಲಿ ಇರುವುದು ಒಬ್ಬರೇ ಪದವೀಧರ, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜುವರೆಗೆ ಓದಿದ್ದಾರೆ. ಶಿಕ್ಷಣದ ಅರಿವು ಮೂಡಿಸುವ ಅಗತ್ಯವಿದೆ, ಪಂಚಾಯ್ತಿಯ ಮೀಸಲು ಅನುದಾನವೂ ಸೂಕ್ತ ಬಳಕೆಯಾಗಿಲ್ಲ ಎಂದು ಇಲ್ಲಿನ ಯುವಕರು ನೊಂದುಕೊಳ್ಳುತ್ತಾರೆ.

ಕಾಲೊನಿಗೆ ಶುದ್ಧ ಕುಡಿಯುವ ನೀರು ಘಟಕ, ಸಾಮೂಹಿಕ ಶೌಚಾಲಯ, ಸಮುದಾಯ ಭವನ ನಿರ್ಮಿಸಲು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದ ಯಲ್ಲಪ್ಪ, ರಂಗನಾಥ್, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಆಂಜಿನಪ್ಪ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT