ಒಂದು ದಿನ ರಾಜ ಪ್ರಜೆಗಳ ಯೋಗಕ್ಷೇಮ ನೋಡಲು ಇಚ್ಛಿಸಿದ. ರಾಜನ ವೇಷಭೂಷಣ ತೆಗೆದಿಟ್ಟು ಸಾಮಾನ್ಯ ಪ್ರಜೆಯಂತೆ ವೇಷಧರಿಸಿದ. ಕುದುರೆ, ರಥ ಬಿಟ್ಟು ಎತ್ತಿನಬಂಡಿ ಹೂಡಿಕೊಂಡು ಸಂಚರಿಸುತ್ತಿದ್ದ. ಆತನ ಸೇವಕರು ಸಾಮಾನ್ಯ ಪ್ರಜೆಗಳಂತೆ ಚಕ್ಕಡಿಯನ್ನು ಹಿಂಬಾಲಿಸಿದರು.

ಮಾರುವೇಷದಲ್ಲಿ ಹೊರಟಿದ್ದ ರಾಜನ ಬಂಡಿ ರೈತರ ಹೊಲಗಳ ಮೂಲಕ ಹಾದು ಪುಟ್ಟ ಗುಡ್ಡವೊಂದನ್ನು ಹತ್ತಿತು. ಗುಡ್ಡದ ಮೇಲೆ ನಿಂತು ಸುತ್ತಲಿನ ಪರಿಸರ ವೀಕ್ಷಿಸುತ್ತಿದ್ದ ರಾಜನ ಕಣ್ಣಿಗೆ ಒಂದು ವಿಚಿತ್ರ ದೃಶ್ಯ ಕಂಡಿತು. ಒಬ್ಬ ರೈತ ಹೊಲ ಉಳುಮೆ ಮಾಡುವ ಕೆಲಸದಲ್ಲಿ ನಿರತನಾಗಿದ್ದ. ನೇಗಿಲಿಗೆ ಎತ್ತುಗಳ ಬದಲು ತನ್ನ ಹೆಂಡತಿ, ವಯಸ್ಸಾದ ತಾಯಿ ಹಾಗೂ ಚಿಕ್ಕ ಮಗುವನ್ನು ಹೂಡಿದ್ದ. ಈ ಮೂವರು ನೇಗಿಲು ಎಳೆಯುತ್ತಿದ್ದರು.

ರಾಜ ತನ್ನ ಪರಿವಾರ ಕರೆದುಕೊಂಡು ಆ ನೇಗಿಲಯೋಗಿಯ ಬಳಿಗೆ ಬಂದನು. ರೈತನ ಮೇಲೆ ಕೋಪಗೊಂಡು ಅವನ ಕಡೆ ಸಿಡುಕಿನ ನೋಟ ಬೀರಿದ. ‘ಅವಿವೇಕಿ... ಏನ್ ಮಾಡ್ತಿದ್ದಿಯಾ? ದನದ ಬದಲು ಮನುಷ್ಯರನ್ನು ನೇಗಿಲಿಗೆ ಕಟ್ಟಿರುವೆಯಲ್ಲ?’ ಎಂದು ರೈತನನ್ನು ಗದರಿಸಿ ಕೇಳಿದ. ರೈತ ಉಳುಮೆ ಮಾಡುವುದನ್ನು ನಿಲ್ಲಿಸಿ ತಲೆ ಎತ್ತಿ ನೋಡಿದ. ಮುಂದೆ ಬೃಹದಾಕಾರವಾದ ಎತ್ತುಗಳನ್ನು ಹೂಡಿದ್ದ ಬಂಡಿ ನಿಂತಿತ್ತು.

ಬಂಡಿಯೊಳಗೆ ಮುಖದಲ್ಲಿ ಗಾಂಭೀರ್ಯ ತುಂಬಿಕೊಂಡು ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದ ವ್ಯಕ್ತಿ ಕುಳಿತಿರುವುದನ್ನು ನೋಡಿದ. ಯಾರಿವರು? ಮುಖದಲ್ಲಿ ರಾಜಕಳೆ ಉಕ್ಕುತ್ತಿದೆ. ಯಾರೋ ದೊರೆಗಳೆ ಇರಬೇಕು. ದೊರೆಗಳಾಗಿದ್ದರೆ ಇಂತಹ ಎತ್ತಿನ ಬಂಡಿಯಲ್ಲಿ ಏಕೆ ಬರುತ್ತಿದ್ದರು. ಹಾಗಾದರೆ ಇವರು ಯಾರೋ ಬೇಡರ ನಾಯಕನಿರಬೇಕು ಎಂದು ಯೋಚಿಸಿದ. ರೈತನಿಗೆ ರಾಜನ ಗುರುತು ಸಿಗಲಿಲ್ಲ.

ಮಾರುವೇಷದಲ್ಲಿದ್ದ ರಾಜನ ಮುಂದೆ ಮಂಡಿಯೂರಿ ತಲೆಬಾಗಿ ನಮಿಸಿದ. ರೈತನಿಗೆ ಬಂಡಿಯಲ್ಲಿರುವ ವ್ಯಕ್ತಿ ಮುಂದೆ ಮಾತಾಡಲಾಗಲಿಲ್ಲ. ಧ್ವನಿ ನಡುಗಲಾರಂಭಿಸಿತು. ಮಾತುಗಳು ತೊದಲಲಾರಂಭಿಸಿದವು. ಅಂಜುತ್ತಲೇ ಹೇಳಿದ. ‘ಬುದ್ಧಿ ನಾವು ಬಡವರು. ನೆಲೆ ಇಲ್ಲದವರು. ನಮ್ಮ ಬಳಿ ಇದ್ದ ಎತ್ತುಗಳನ್ನು ಕಂದಾಯ ಕಟ್ಟಲಿಲ್ಲವೆಂದು ರಾಜನ ಸೇವಕರು ಕಸಿದುಕೊಂಡು ಹೋಗಿದ್ದಾರೆ. ರಾಜನ ಆಜ್ಞೆಯಂತೆ ನಮ್ಮ ಜೀವನಾಧಾರವಾಗಿದ್ದ ಎತ್ತುಗಳನ್ನು ಕೊಂಡೊಯ್ದಿದ್ದಾರೆ. ಹೊಟ್ಟೆಪಾಡಿಗಾಗಿ ಆಹಾರ ಧಾನ್ಯ ಬೆಳೆಯಬೇಕಲ್ಲ. ಅದಕ್ಕೆ ನನ್ನ ತಾಯಿ, ಹೆಂಡತಿ, ಮಗನನ್ನೇ ನೇಗಿಲಿಗೆ ಕಟ್ಟಿರುವೆ’ ಎಂದು ಉತ್ತರಿಸಿದ.

ರೈತನ ಮಾತು ಕೇಳಿ ರಾಜನ ಮುಖ ಕಪ್ಪಿಟ್ಟಿತು. ಪ್ರಜೆಗಳ ಮೇಲೆ ತಾನು ವಿಧಿಸುತ್ತಿರುವ ಸುಂಕದ ನೀತಿಗಳಿಂದ ಆತನಿಗೆ ನಾಚಿಕೆಯಾಯಿತು. ತನ್ನ ವರ್ತನೆಯಿಂದ ಜನಸಾಮಾನ್ಯರು ಇಷ್ಟೊಂದು ಕಷ್ಟ ಅನುಭವಿಸುತ್ತಿದ್ದಾರಲ್ಲ ಎನ್ನುವುದು ಅರಿವಾಯಿತು. ತನಗೆ ತಾನೇ ಜಿಗುಪ್ಸೆಗೊಂಡು ಮರು ಮಾತಾಡದೆ ಸುಮ್ಮನಾಗಿಬಿಟ್ಟ.

ನಮಗೆ ಅನ್ನ ಹಾಕುವ ರೈತನಿಗೆ ಈ ಪರಿಸ್ಥಿತಿ ಇನ್ನೆಂದಿಗೂ ಬರಬಾರದು ಎಂದುಕೊಂಡ. ಮನಸ್ಸಿನಲ್ಲಿ ಕಳವಳ ಉಂಟಾಯಿತು. ಅನ್ನದಾತನ ಸಂಕಷ್ಟ ನೋಡಿ ಕರುಳು ಕಿತ್ತು ಬಂದಂತಾಗಿ ಬಂಡಿಯಿಂದ ಕೆಳಗಿಳಿದು ರೈತನ ಕಡೆಗೆ ತಿರುಗಿದ.

ರಾಜ ಬಂಡಿಯಿಂದ ಇಳಿದಿದ್ದೆ ತಡ ರೈತ ದಿಗಿಲುಗೊಂಡ. ಅವನ ಮೈ ಬೆವರತೊಡಗಿತು. ಅಂಜುತ್ತಲೇ ಹಿಂದಕ್ಕೆ ಸರಿಯತೊಡಗಿದ. ಎಡವಿ ಬಿದ್ದ. ದಿಗ್ಗನೆ ಎದ್ದು ಹಿಂತಿರುಗಿ ಓಡತೊಡಗಿದ. ರೈತನ ಸ್ಥಿತಿ ನೋಡಿದ ರಾಜ, ‘ಏಯ್ ನಿಲ್ಲು ನಿಲ್ಲು... ಎಲ್ಲಿಗೆ ಓಡ್ತಿದ್ದಿಯಾ?’ ಎಂದ. ರೈತ ನಿಲ್ಲಲೇ ಇಲ್ಲ. ರಾಜ ಮತ್ತೆ ನಿಲ್ಲುವಂತೆ ಕೂಗಿ ಹೇಳಿದ. ರೈತ ನಿಂತ. ರಾಜನ ಕಡೆಗೆ ಬರತೊಡಗಿದ. ರೈತ ಬರುತ್ತಿದ್ದಂತೆಯೇ ‘ಹುಂ ತಗೋ ಈ ಎತ್ತುಗಳನ್ನು...’ ಎಂದ ರಾಜ, ತನ್ನ ಎತ್ತುಗಳ ಹಗ್ಗವನ್ನು ರೈತನ ಕಡೆಗೆ ಚಾಚಿದ. ರೈತ ವಿಚಲಿತನಾದ. ಆತನ ತಾಯಿ, ಪತ್ನಿ, ಮಗನೂ ಹೌಹಾರಿ ನಿಂತರು.

ಯೋಗ್ಯವಾದ ಎತ್ತುಗಳನ್ನು ನನ್ನಂಥ ಬಿಕಾರಿಗೆ ಹೇಗೆ ಕೊಡಲು ಸಾಧ್ಯ? ಧಣಿಗಳು ತಮಾಷೆ ಮಾಡುತ್ತಿದ್ದಾರೆ ಎಂದು ರೈತ ಆಲೋಚಿಸಿದ. ಎತ್ತುಗಳ ಹಗ್ಗ ಹಿಡಿಯಲು ಹಿಂದೇಟು ಹಾಕಿದ. ‘ತಗೋ ಬೇಗ, ಮತ್ತೆ ನಾನು ಮನಸ್ಸು ಬದಲಿಸಿದರೆ ನಿನಗೆ ಎತ್ತುಗಳನ್ನು ಕೊಡುವುದಿಲ್ಲ ನೋಡು...’ ಎಂದು ಭೀತಿ ಹುಟ್ಟುವಂತೆ ಗದರಿಸಿ ಹೇಳಿ ಎತ್ತುಗಳನ್ನು ಅಲ್ಲೆ ಬಿಟ್ಟು ನಡೆದುಕೊಂಡ ಹೊರಟ. ಸೇವಕರು ಆತನನ್ನು ಹಿಂಬಾಲಿಸಿದರು.

ರೈತನಿಗೆ ದಿಕ್ಕು ತೋಚದಂತಾಗಿ ‘ಆ ದೇವರೇ ಇವರನ್ನು ನಮ್ಮಲ್ಲಿಗೆ ಕಳುಹಿಸಿರಬೇಕು’ ಎಂದು ಮನದಲ್ಲಿ ಬಡಬಡಿಸಿದ. ಎತ್ತುಗಳನ್ನೊಮ್ಮೆ ನೋಡಿದ. ಅವನಿಗೆ ಹೆದರಿಕೆಯಾಯಿತು. ಒಂದು ವೇಳೆ ಇದು ಮಾಯಮಂತ್ರವಾದರೆ? ಎಂಬ ಅನುಮಾನ ಕಾಡಿತು. ಒಂದೊಂದೆ ಹೆಜ್ಜೆ ಇಡುತ್ತಾ ಎತ್ತುಗಳ ಹಿಂದೆ ಹೋಗಿ ಅವುಗಳ ಮೈಮೇಲೆ ಕೈ ಇಟ್ಟ. ಎತ್ತು ರೈತನ ತೊಡೆಗೆ ಜಾಡಿಸಿ ಒದೆಯಿತು. ರೈತ ‘ಅಮ್ಮಾ...’ ಎಂದು ಕಿರುಚಿ ಕೆಳಗೆ ಬಿದ್ದ. ಒದೆತ ಬಿದ್ದ ಕಡೆ ಕೈಯಿಂದ ಅವುಕಿ ಹಿಡಿದುಕೊಂಡು ‘ಇಲ್ಲ, ಇವು ನಿಜವಾದ ಎತ್ತುಗಳೇ!’ ಎಂದುಕೊಂಡ. ಸಂತೋಷವಾಯಿತು, ಮಹಾದಾನಂದದಿಂದ ಕೂಗಿದ.

‘ಧಣಿಗಳೇ ನಿಲ್ಲಿರಿ, ಯಾರು ನೀವು? ಎಲ್ಲಿಂದ ಬಂದಿದ್ದಿರಿ? ದಯಮಾಡಿ ಹೇಳಿ ಹೋಗಿರಿ’ ಎಂದು ಗೋಗೆರದ. ರಾಜ ರೈತನ ಮಾತು ಕಿವಿಗೆ ಹಾಕಿಕೊಳ್ಳದೆ, ಹಿಂತಿರುಗಿಯೂ ನೋಡದೆ ಹಾಗೆ ಹೊರಟ.

ಹಿಂದೆ ನಿಧಾನಗತಿಯಲ್ಲಿ ಹೊರಟಿದ್ದ ಸಹಚರನೊಬ್ಬನ ಕಾಲಿಗೆ ಬಿದ್ದು ಕೇಳಿದ ರೈತ. ಆ ಸಹಚರ ಹೇಳಿದ, ‘ಕಂದಾಯ ಕಟ್ಟಲಿಲ್ಲವೆಂದು ನಿನ್ನ ಎತ್ತುಗಳನ್ನು ಎಳೆದುಕೊಂಡು ಬರಲು ಆಜ್ಞಾಪಿಸಿದ್ದನಲ್ಲ ರಾಜ, ಆ ರಾಜನೆ ಇವರು. ಮಾರುವೇಷದಲ್ಲಿದ್ದಾರೆ’ ಎಂದು ಹೇಳಿ ಹೊರಟ. ರೈತ ಮೂಕವಿಸ್ಮಿತನಾದ. ಕಣ್ಣು ಮಿಟುಕಿಸದೆ ರಾಜ ಹೋಗುವುದನ್ನೇ ನೋಡುತ್ತಾ ನಿಂತ. ರಾಜನ ಪರಿವಾರ ಗುಡ್ಡ ಹತ್ತಿ ಇಳಿದು ಕಣ್ಮರೆಯಾಯಿತು.

ರಾಜನ ಕಿವಿಯಲ್ಲಿ ರೈತನ ಮಾತುಗಳು ಮಾರ್ದನಿಸುತ್ತಿದ್ದವು. ತನ್ನ ತಪ್ಪಿನ ಅರಿವಾಗಿ ರೈತರ ಮೇಲೆ ಇನ್ನು ಮುಂದೆ ಯಾವುದೇ ತೆರಿಗೆ ವಿಧಿಸಬಾರದು ಎಂದು ತೀರ್ಮಾನ ಮಾಡಿದ. ರೈತ ಖುಷಿಯಿಂದ ಹೆಂಡತಿ, ತಾಯಿ, ಮಗನೊಂದಿಗೆ ಎತ್ತುಗಳ ಮುಖದ ಮೇಲೆ ಕೈಯಾಡಿಸುತ್ತಿದ್ದ. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.