ಸೋಮವಾರ, ಮಾರ್ಚ್ 8, 2021
22 °C
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಘಟನೆ l ಮರಣ ಪತ್ರ ಪತ್ತೆ

ಮೈಸೂರು ಕಾರ್ಪೊರೇಟರ್‌ ಪುತ್ರಿ ಆತ್ಮಹತ್ಯೆ; ಅತ್ತೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಕಾರ್ಪೊರೇಟರ್‌ ಪುತ್ರಿ ಆತ್ಮಹತ್ಯೆ; ಅತ್ತೆ ಬಂಧನ

ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ ನಾಗಭೂಷಣ ಅವರ ಪುತ್ರಿ ವನಿತಾ (27) ನಗರದಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಅತ್ತೆ ಶ್ರೀಮತಿ (50) ಅವರನ್ನು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

‘ನಗರದ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಎಂಜಿನಿಯರ್‌ ಆಗಿರುವ ವಸಂತ್‌ ಎಂಬುವರಿಗೆ ಆರು ತಿಂಗಳ ಹಿಂದಷ್ಟೇ ವನಿತಾ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ದಂಪತಿ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್ದರು. ಅದೇ ಮನೆಯಲ್ಲಿ ವನಿತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಬೆಳಗ್ಗೆ 7.30 ಗಂಟೆಗೆ ವಸಂತ್ ಕೆಲಸಕ್ಕೆ ಹೋಗಿದ್ದರು. 11 ಗಂಟೆಯ ಸುಮಾರಿಗೆ ವನಿತಾ ಅವರಿಗೆ ಕರೆ ಮಾಡಿದ್ದರು. ಅವರು ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಪತಿ, ನೆರೆಮನೆಯವರಿಗೆ ಕರೆ ಮಾಡಿ ಪತ್ನಿಗೆ ಕೊಡುವಂತೆ ಹೇಳಿದ್ದರು. ಆಗ ನೆರೆಮನೆಯವರು ಮನೆಯೊಳಗೆ ಹೋಗಿದ್ದಾಗ ವಿಷಯ ಗೊತ್ತಾಗಿದೆ’ ಎಂದರು.

ಕಿರುಕುಳ ಉಲ್ಲೇಖ: ವನಿತಾ ಬರೆದಿದ್ದಾರೆ ಎನ್ನಲಾದ ಮರಣ ಪತ್ರ ಪೊಲೀಸರಿಗೆ ಸಿಕ್ಕಿದೆ. ಅತ್ತೆ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಅದರಲ್ಲಿ ಬರೆಯಲಾಗಿದೆ. ಅದನ್ನು ಆಧರಿಸಿ ವನಿತಾ ಪೋಷಕರು ನೀಡಿರುವ ದೂರಿನನ್ವಯ ವರದಕ್ಷಿಣೆ ಸಾವು (ಐಪಿಸಿ 304–ಬಿ) ಆರೋಪದಡಿ ಅತ್ತೆಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವಸಂತ್‌ ತಂದೆ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಕೆಲಸಕ್ಕಾಗಿ ಅವರು ಬೆಂಗಳೂರಿಗೆ ಬಂದ ಬಳಿಕ, ಅವರ ತಾಯಿ ತಮಿಳುನಾಡಿನಲ್ಲಿದ್ದರು. ಮದುವೆ ಬಳಿಕ ವಸಂತ್‌ ಹಾಗೂ ವನಿತಾ ಪ್ರತ್ಯೇಕವಾಗಿ ವಾಸವಿದ್ದರು. ಆಗಾಗ ಅವರ ಮನೆಗೆ ಶ್ರೀಮತಿ ಬಂದು ಹೋಗುತ್ತಿದ್ದರು. ಅದೇ ವೇಳೆ ಮನೆಯಲ್ಲಿ ಜಗಳವಾಗುತ್ತಿತ್ತು ಎಂದು ಗೊತ್ತಾಗಿದೆ.

‘‍ಮದುವೆ ಬಳಿಕ ತೊಂದರೆ ಅನುಭವಿಸುತ್ತಿ‌ದ್ದೇನೆ.  ವರದಕ್ಷಿಣೆಗೆ ಪೀಡಿಸುತ್ತಿರುವ ಅತ್ತೆ, ಪತಿಯೊಂದಿಗೆ ಮಾತನಾಡಲು ಬಿಡುತ್ತಿಲ್ಲ. ಮಾನಸಿಕ, ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ. ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮರಣ ಪತ್ರದಲ್ಲಿದೆ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.