ಸೋಮವಾರ, ಮಾರ್ಚ್ 1, 2021
23 °C

ಕಾಲು ಇಲ್ಲದಿದ್ದರೂ ನೆರವಿನ ಹಸ್ತಕ್ಕೆ ಬರವಿಲ್ಲ

ಗಂಗಾಧರ್.ವಿ. ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

ಕಾಲು ಇಲ್ಲದಿದ್ದರೂ ನೆರವಿನ ಹಸ್ತಕ್ಕೆ ಬರವಿಲ್ಲ

ಕೊಡಿಗೇನಹಳ್ಳಿ: ಆರು ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ. ಎರಡು ಕಾಲುಗಳು ಸ್ವಾಧೀನ ಇಲ್ಲ. ಕಿತ್ತು ತಿನ್ನುವ ಕಡು ಬಡತನ. ಆದರೂ ಓದಬೇಕೆಂಬ ಛಲ. ತೆವಳುತ್ತಲೇ ಶಾಲೆ, ಕಾಲೇಜಿಗೆ ಹೋಗಿ ಪಿಯುಸಿಯವರೆಗೂ ವಿದ್ಯಾಭ್ಯಾಸ ಮುಗಿಸಿದ್ದಾಯಿತು. ಆದರೆ ಕೆಲಸಕ್ಕಾಗಿ ಅಲೆದಾಟ. ಆದರೆ ಎಲ್ಲೂ ಸಿಗದ ಕೆಲಸ. ಕೊನೆಗೆ ಅಂಗಡಿ ತೆರದು ಜೀವನ ಕಟ್ಟಿಕೊಂಡರು. ಅಷ್ಟಕ್ಕೆ ಸಿಗದ ತೃಪ್ತಿ. ಬಡ ಹುಡುಗರ ಶಿಕ್ಷಣಕ್ಕಾಗಿ ನೆರವಾಗಬೇಕೆಂಬ ಆಸೆ. ಇದಕ್ಕಾಗಿ ಅಂಗಡಿಯಲ್ಲಿ ದುಡಿದ ಹಣದಲ್ಲಿ ಸ್ವಲ್ಪ ಭಾಗ ಉಳಿಕೆ.

ಇವಿಷ್ಟು, ಕೊಡಿಗೇನಹಳ್ಳಿ ಹೋಬಳಿ ಗುಂಡಗಲ್ಲು ಗ್ರಾಮದ ಅಂಜಮ್ಮ ಮತ್ತು ಗಂಗಪ್ಪ ದಂಪತಿಯ ಮೂರನೆಯ ಮಗ 38 ವರ್ಷದ ಜಿ.ಹನುಮಂತರಾಜು ಅವರ ಕಥೆ. ಕೊಡಿಗೇನಹಳ್ಳಿ ಗ್ರಾಮದಲ್ಲಿ 1999 ರಿಂದ ಸ್ವಂತ ಅಂಗಡಿ ಆರಂಭಿಸಿ ಹನುಮಂತರಾಜು, ಪತ್ರ ಬರಹಗಾರರಾಗಿಯೂ ಗಮನ ಸೆಳೆದಿದ್ದಾರೆ.

ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ತಂದೆ. ತಾನು ಅನುಭವಿಸಿದ ಕಷ್ಟಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ’ಸ್ವಂತ ಉದ್ಯೋಗದ ಕನಸನ್ನು ವಿಧಾನಸೌಧ ಮುಂದೆ ಕಂಡೆನು. ಇನ್ನೆಲ್ಲೂ ಕೆಲಸ ಹುಡುಕಬಾರದೆಂದು ನಿರ್ಧರಿಸಿ ಊರಿಗೆ ಬಂದು ಅಂಗಡಿ ತೆರೆದೆ’ ಎಂದು ಹೇಳಿದರು.

ಈವರೆಗೂ  600ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವು ನೀಡಿದ್ದಾರೆ. ‘ನಾನು ವಿದ್ಯಾಭ್ಯಾಸಕ್ಕೆ ನೆರವು ನೀಡುವುದನ್ನು ಕಂಡು ಕೆಲವರು ಕೊಂಕು ನುಡಿಯುತ್ತಾರೆ. ಮತ್ತೇ ಕೆಲವರು ಮರೆಯಲ್ಲೇ ನಗುತ್ತಾರೆ. ನನಗೆ ಬಡತನದ ಕಷ್ಟ ಗೊತ್ತಿದೆ. ಯಾರು ಏನೇ ನಿಂದಿಸಿದರೂ ನನ್ನ ನೆರವಿನ ಹಸ್ತ ನಿಲ್ಲದು’ ಎನ್ನುವಾಗ ಮಂಜುನಾಥ್ ಕಣ್ಣಾಲಿಗಳು ತುಂಬಿ ಬಂದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.