ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗ್ನಪ್ರೇಮಗಳ ದಾಟಿದ ದಿಟ್ಟೆ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ನಿಮಗೂ, ಕ್ರಿಕೆಟಿಗ ಧೋನಿಗೂ ಸಂಬಂಧವಿತ್ತೆ’- ಈಗಲೂ ಯಾವ ಸುದ್ದಿಮಿತ್ರರು ಸಂದರ್ಶನ ಮಾಡಿದರೂ ಕೇಳುವ ಮಾಮೂಲು ಪ್ರಶ್ನೆ ಇದು. ಆದರೆ, ನಟಿ ರೈ ಲಕ್ಷ್ಮೀ (Raai Laxmi) ಈ ಪ್ರಶ್ನೆ ಕೇಳಿ ಮುಜುಗರಕ್ಕೆ ಒಳಗಾಗುವುದನ್ನು ಬಿಟ್ಟು ವರ್ಷಗಳೇ ಆಗಿವೆ.

ಅವರು ಪ್ರಶ್ನೆಯನ್ನು ಸ್ವಲ್ಪ ವಿಸ್ತರಿಸುತ್ತಾರೆ: ‘ಆ ಸುದ್ದಿ ಹೊಗೆಯಾಡಿದ ಮೇಲೆ ನಾನು ನಾಲ್ಕೈದು ಹುಡುಗರನ್ನು ಪ್ರೇಮಿಸಿದೆ. ಅದರ ಬಗೆಗೆ ಯಾರೂ ಪ್ರಶ್ನೆ ಕೇಳುವುದೇ ಇಲ್ಲವಲ್ಲ; ಯಾಕೆ’.

ಲಕ್ಷ್ಮೀ ದಶಕಗಳ ಹಿಂದೆ ದರ್ಶನ್ ಅಭಿನಯದ ಕನ್ನಡದ ಸಿನಿಮಾ ‘ಸ್ನೇಹಾನಾ ಪ್ರೀತೀನಾ’ಗೆ ಸಹಿ ಹಾಕಿದ್ದವರು. ಆಗ ಅವರು ಬೆಳಗಾವಿ ನಿವಾಸಿ. ಆಗಿನ್ನೂ ಹದಿನಾರರ ಬಾಲೆ. ಹದಿನೈದನೇ ವಯಸ್ಸಿನಲ್ಲೇ ಫ್ಯಾಷನ್ ಶೋ ಚಿಮ್ಮುಹಲಗೆಯಿಂದ ಸಿನಿಮಾ ಸೆಟ್ ಗೆ ಜಿಗಿದಿದ್ದವರು. ತಮಿಳು ಚಿತ್ರಕರ್ಮಿ ಆರ್. ವಿ. ಉದಯಕುಮಾರ್ ಅವರಿಗೆ ಅವಕಾಶದ ಬಾಗಿಲು ತೋರಿಸಿದ್ದರು. ಆಮೇಲೆ ಪರೋಕ್ಷ ಆಮಿಷಗಳನ್ನು ಅರ್ಥ ಮಾಡಿಕೊಳ್ಳಲೇ ಲಕ್ಷ್ಮೀ ನಾಲ್ಕು ವರ್ಷ ವ್ಯಯಿಸಬೇಕಾಯಿತು.

‘ಕಾಸ್ಟಿಂಗ್ ಕೌಚ್’ ಸಮಸ್ಯೆಯನ್ನು ಅವರು ನೇರವಾಗಿ ಎದುರಿಸಲಿಲ್ಲವಾದರೂ, ಕೆಲವರು ಸುತ್ತಿ ಬಳಸಿ ಅಂಥ ಖೆಡ್ಡಾಕ್ಕೆ ತಳ್ಳಲು ಯತ್ನಿಸಿದ್ದುಂಟು. ಅಂತಹ ಸಂದರ್ಭಗಳಲ್ಲೆಲ್ಲ ಲಕ್ಷ್ಮೀ ಸೆಟ್ ನಿಂದ ಸೀದಾ ಹೊರನಡೆದ ಉದಾಹರಣೆಗಳಿವೆ. ‘ಒಂದು ಕ್ಷಣ ಮೈಮರೆತು ಅಂಥ ಆಮಿಷಗಳಿಗೆ ಒಪ್ಪಿದ್ದರೆ, ಈಗ ನಾನು ಸೂಪರ್ ಸ್ಟಾರ್ ನಟಿ ಆಗಿರುತ್ತಿದ್ದೆ’ ಎಂದು ಅವರು ವಿಷಾದದಿಂದ ಹೇಳುವುದಿಲ್ಲ; ಹಾಗೆ ನಡೆದು ತಾನು ಆತ್ಮಸಾಕ್ಷಿ ಮೆರೆದ ಹೆಮ್ಮೆಯಿಂದ ಹೇಳುತ್ತಾರೆ.

ಹನ್ನೆರಡು ವರ್ಷಗಳ ಸುದೀರ್ಘ ಸಿನಿಮಾ ಅನುಭವ ಬೆನ್ನಿಗಿಕ್ಕಿಕೊಂಡ ಲಕ್ಷ್ಮೀ, ಇಪ್ಪತ್ತನೇ ವಯಸ್ಸಿನಲ್ಲಿಯೇ ಮೋಹನ್ ಲಾಲ್, ಮುಮ್ಮುಟ್ಟಿ, ವಿಕ್ರಮ್, ಅಜಿತ್ ತರಹದ ನಟರ ಜತೆ ಅಭಿನಯಿಸಿದವರು. ಐಟಂ ಹಾಡಿಗೂ ಸಹಿ ಹಾಕಿದ್ದುಂಟು. ನೃತ್ಯ ಲಾಲಿತ್ಯ ಬಯಸುವ ಒಂದು ಹಾಡಿನಲ್ಲೇ ಜನಮನಸೂರೆಗೊಳ್ಳುವುದು ಸವಾಲೇ ಅಲ್ಲವೇ ಎಂದು ಅವರು ಹಿಂದೊಮ್ಮೆ ಪ್ರಶ್ನಿಸಿದ್ದರು.

ತನಗಿಂತ ಮೂರು ಪಟ್ಟು ವಯಸ್ಸಾದ ನಟರಿಗೆ ನಾಯಕಿಯಾದ ಅನುಭವವನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಮೊದ ಮೊದಲು ಸಂಕೋಚ. ಸ್ಟಾರ್ ನಟರಿಗೆ ಸಿಗುತ್ತಿದ್ದ ಆರಾಧನೆ ಕಂಡು ಮೂಕವಿಸ್ಮಿತರಾಗಿದ್ದರು. ಆಮೇಲೆ ಅವರ ಜತೆಗಿನ ಒಡನಾಟ ಆತ್ಮವಿಶ್ವಾಸ ಮೂಡಿಸಿತು. ಸ್ಟಾರ್ ಪಟ್ಟದ ಭಾರವನ್ನು ಇಳಿಸಿಕೊಳ್ಳುವುದು ಹೇಗೆ ಎಂದು ಮೋಹನ್ ಲಾಲ್ ಸಣ್ಣ ಉಪನ್ಯಾಸ ನೀಡಿದ್ದನ್ನು ಅವರು ಮರೆಯಲಾರರು.

ಬಾಲಿವುಡ್ ಪ್ರವೇಶಕ್ಕೆ ಮೊದಲಿನಿಂದಲೂ ಹಿಂದೇಟು ಹಾಕುತ್ತಾ ಬಂದ ಲಕ್ಷ್ಮೀ, ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷವನ್ನೂ ನಂಬುತ್ತಾರೆ. ‘Lakshmi Rai’ ಎಂದು ಇದ್ದ ಹೆಸರನ್ನು ‘Raai Laxmi’ ಎಂದು ಬದಲಿಸಿಕೊಂಡ ಮೇಲೆ ಅವರಿಗೆ ಅದೃಷ್ಟ ಖುಲಾಯಿಸಿತಂತೆ. ಇದಕ್ಕೆ ಕೆಲವು ಉದಾಹರಣೆಗಳನ್ನೂ ಅವರು ಕೊಡಬಲ್ಲರು.

ಈಗ ಅವರು ಸುದ್ದಿಮನೆಯಲ್ಲಿ ಇರುವುದು ‘ಜ್ಯೂಲಿ 2’ ಹಿಂದಿ ಸಿನಿಮಾ ಮೂಲಕ. ‘ಅಕಿರಾ’ ಹಿಂದಿ ಚಿತ್ರದ ಐಟಂ ಹಾಡಿಗೆ ಕುಣಿದಿದ್ದ ಅವರು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ.

ಹಿಂದಿ ಸಿನಿಮಾ ನಾಯಕಿಯಾಗುವ ಅವಕಾಶವನ್ನು ಅವರು ತಕ್ಷಣಕ್ಕೆ ಒಪ್ಪಿಕೊಳ್ಳಲಿಲ್ಲ. ತಿಂಗಳುಗಳ ಕಾಲ ವಿವೇಚಿಸಿದರು. ಐಳೂವರೆ ಕೆ.ಜಿ. ದೇಹತೂಕ ಇಳಿಸಿಕೊಂಡು, ಬೋಲ್ಡ್ ದೃಶ್ಯಗಳಿಗಾಗಿ ಮನಸ್ಸನ್ನು ಗಟ್ಟಿ ಮಾಡಿಕೊಂಡ ಅವರ ಎದುರು ಈಗ ಇನ್ನಷ್ಟು ಅವಕಾಶಗಳಿವೆ.

ಇಷ್ಟಕ್ಕೂ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಿದ್ದಾದರೂ ಯಾಕೆ? ಹೇಳಿಕೇಳಿ ಅವರು ಕ್ರೀಡಾಪ್ರೇಮಿ. ಬಾಲ್ಯದಿಂದಲೇ ಹಲವು ಆಟಗಳಲ್ಲಿ ಗೆದ್ದವರು. ಅವರ ನೀಳಕಾಯದ ಗುಟ್ಟೂ ಅದೇ. ಕ್ರಿಕೆಟ್ ಬಗೆಗೆ ಏನೂ ಗೊತ್ತಿರಲಿಲ್ಲವಾದ್ದರಿಂದ ಧೋನಿ ಅವರನ್ನು ಮಾತಾಡಿಸಿ, ಒಂದಿಷ್ಟು ಜ್ಞಾನ ಸಂಪಾದಿಸಿದರಂತೆ.

ವೃತ್ತಿ ಬದುಕಿನ 50ನೇ ಚಿತ್ರದ ಸುಖದಲ್ಲಿರುವ ಲಕ್ಷ್ಮೀ ತಮ್ಮ ಬದುಕಿನ ಯಾವ ಸಣ್ಣ ಕಹಿಯನ್ನೂ ಮರೆತಿಲ್ಲ ಎನ್ನುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT