ಸೋಮವಾರ, ಮಾರ್ಚ್ 8, 2021
31 °C

ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯಿತಿ ಹೆಚ್ಚಿಸಲು ಚಿಂತನೆ – ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯಿತಿ ಹೆಚ್ಚಿಸಲು ಚಿಂತನೆ – ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಆರ್‌ಐಡಿಎಲ್‌) ಕೈಗೊಳ್ಳುವ ಕಾಮಗಾರಿಗಳಿಗೆ ಕರ್ನಾಟಕ ಪಾರದರ್ಶಕ ಸಂಗ್ರಹಣೆಗಳ ಕಾಯ್ದೆ (ಕೆಟಿಪಿಪಿ) ಅಡಿ ನೀಡಿರುವ ವಿನಾಯಿತಿ ಮಿತಿಯನ್ನು ₹ 2 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಲು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಕೆಆರ್‌ಐಡಿಎಲ್‌ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಭವನ–2 ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಸರ್ಕಾರದ ತುರ್ತು ಕಾಮಗಾರಿಗಳನ್ನು ಟೆಂಡರ್ ಕರೆಯದೆ ಕೆಆರ್‌ಐಡಿಎಲ್‌ ಮೂಲಕ ಮಾಡಲು ಅವಕಾಶ ಇದೆ. ಸರ್ಕಾರದ ಅಂಗ ಸಂಸ್ಥೆ ಎನ್ನುವ ಕಾರಣಕ್ಕೆ ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ಕಾಯ್ದೆಯಿಂದ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ನಿರ್ಮಾಣ ವೆಚ್ಚ ಹೆಚ್ಚಾಗಿರುವುದರಿಂದ ವಿನಾಯಿತಿ ಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ. ನಿಗಮದಿಂದ ಪ್ರಸ್ತಾವನೆ ಕಳುಹಿಸಿ’ ಎಂದು ಸಲಹೆ ನೀಡಿದರು.

ಸರ್ಕಾರದ ಕಾಮಗಾರಿಗಳು ಅತ್ಯಂತ ತ್ವರಿತವಾಗಿ ಪೂರ್ಣಗೊಳ್ಳುತ್ತವೆ ಮತ್ತು ಗುಣಮಟ್ಟದಿಂದ ಕೂಡಿರುತ್ತವೆ ಎಂಬ ಕಾರಣಕ್ಕಾಗಿ ಕೆಆರ್‌ಐಡಿಎಲ್‌ಗೆ ವಹಿಸಲಾಗುತ್ತದೆ. ಖಾಸಗಿ ಗುತ್ತಿಗೆದಾರರಿಗಿಂತಲೂ ಗುಣಮಟ್ಟದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮಾಡಿಸಬೇಕು ಮತ್ತು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿರಬೇಕು. ಆಗ ಮಾತ್ರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂದರು.

‘ನಮ್ಮ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಕೆಆರ್‌ಐಡಿಎಲ್‌ಗೆ ಈ ವರ್ಷ ಸುಮಾರು ₹ 3,000 ಕೋಟಿವರೆಗೆ ಕಾಮಗಾರಿಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ’ ಎಂದು ಹೇಳಿದರು.

ಪ್ರೀ–ಕಾಸ್ಟ್‌ ಕಾರ್ಖಾನೆ ನಿರ್ಮಿಸಿ: ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗೋಡೆ, ತಾರಸಿ, ಕಾಂಪೌಂಡ್ ಸಹಿತ ಎಲ್ಲ ಭಾಗಗಳನ್ನು ಮೊದಲೇ ಅಚ್ಚು ಹಾಕುವ ತಾಂತ್ರಿಕತೆ (ಪ್ರೀ–ಕಾಸ್ಟ್‌) ತಮಿಳುನಾಡಿನ ಕೃಷ್ಣಗಿರಿಯಲ್ಲಿದೆ. ಅಂತಹ ಪ್ರೀ–ಕಾಸ್ಟ್‌ ತಂತ್ರಜ್ಞಾನದ ಕಾರ್ಖಾನೆಯನ್ನು ಕೆಆರ್‌ಐಡಿಎಲ್ ರಾಜ್ಯದಲ್ಲಿ ಸ್ಥಾಪಿಸಬೇಕು. ಇದರಿಂದ ಸರ್ಕಾರದ ಕಾಮಗಾರಿಗಳು ಬೇಗ ಮುಗಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ ಭವನ–2 ಅನ್ನು ಕೆಆರ್‌ಐಡಿಎಲ್‌ ಆವರಣದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಇಲಾಖೆ ಮತ್ತು ನಿಗಮ ಎರಡಕ್ಕೂ ಅನುಕೂಲ ಆಗುತ್ತದೆ. ಎಲ್ಲ ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೂ ಉಪಯುಕ್ತ. ಭವನ ನಿರ್ಮಾಣ ವೆಚ್ಚ ₹ 78.60 ಕೋಟಿ ಇದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಕೆಆರ್‌ಐಡಿಎಲ್‌ ಅಧ್ಯಕ್ಷ ರಾಜಶೇಖರ ಬಿ. ಪಾಟೀಲ, ‘ನಿಗಮ ಪ್ರತಿ ವರ್ಷ ₹ 2,200 ಕೋಟಿ ವ್ಯವಹಾರ ಮಾಡುತ್ತಿತ್ತು. ನಾನು ಅಧಿಕಾರ ವಹಿಸಿಕೊಂಡ ಬಳಿಕ ₹ 3,000 ಕೋಟಿ ತಲುಪಿದೆ. ಕೆಟಿಟಿಪಿ ಕಾಯ್ದೆ ವಿನಾಯಿತಿಯನ್ನು ₹ 2 ಕೋಟಿಯಿಂದ ₹ 5 ಕೋಟಿಗೆ ಹೆಚ್ಚಿಸಿದರೆ, ನಿಗಮದ ವ್ಯವಹಾರ ಮುಂದಿನ ವರ್ಷ ₹ 4,000 ಕೋಟಿ ತಲುಪುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

100 ಎಕರೆ ಜಾಗ ನೀಡಿ: ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ನಾಗಾಂಬಿಕಾದೇವಿ, ‘ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆ ನಿರಂತರ ಕೆಲಸಗಳನ್ನು ಮಾಡುತ್ತಿದೆ. ಎಂಜಿನಿಯರಿಂಗ್ ಕೆಲಸಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ಕೈಗೊಳ್ಳಲು ಬೆಂಗಳೂರು ಹೊರವಲಯದಲ್ಲಿ 100 ಎಕರೆ ಜಾಗ ನೀಡಬೇಕು’ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.