ಶನಿವಾರ, ಫೆಬ್ರವರಿ 27, 2021
28 °C

ಚರಂಡಿ ನೀರಿನಲ್ಲಿ ಕೃಷಿ

ಚಂದ್ರಹಾಸ ಚಾರ್ಮಾಡಿ . Updated:

ಅಕ್ಷರ ಗಾತ್ರ : | |

ಚರಂಡಿ ನೀರಿನಲ್ಲಿ ಕೃಷಿ

ಅವರಿಗೆ ನಾಲ್ಕು ಎಕರೆ ಜಮೀನಿದೆ. ಭೂಮಿ ತುಂಬಾ ಬಗೆಬಗೆಯ ಬೆಳೆಗಳನ್ನು ಬೆಳೆಯಬೇಕೆಂಬ ಆಸೆಯಿಂದ ಕೊಳವೆ ಬಾವಿಗಳನ್ನು ಕೊರೆಸಿದರು. ತೋಡಿಸಿದ ನಾಲ್ಕು ಕೊಳವೆ ಬಾವಿಗಳೂ ಬೇಸಿಗೆಯಲ್ಲಿ ಬತ್ತಿ ಹೋದವು. ಕುಡಿಯುವ ನೀರಿಗೆ ಸಹ ಪರಾವಲಂಬನೆ ಅನಿವಾರ್ಯವಾಯಿತು. ಆದರೆ ಇದೀಗ ಅವರ ಮೂರು ಎಕರೆ ಭೂಮಿಯಲ್ಲಿ ರೇಷ್ಮೆ, ಒಂದು ಎಕರೆ ಭೂಮಿಯಲ್ಲಿ ಹಸಿರು ಹುಲ್ಲು ಬೆಳೆದು ನಿಂತಿದೆ. ಬರದ ನಾಡಿನಲ್ಲಿ ಹಸಿರು ಮುಕ್ಕಳಿಸುತ್ತಿದೆ.

ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ನಾರಾಯಣಸ್ವಾಮಿಯವರ ಸಾಹಸದ ಕಥೆ. ಕಳೆದ ಐದು ವರ್ಷಗಳಿಂದ ಕೃಷಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಇಲ್ಲಿ ಮಳೆಯಾಗಿಲ್ಲ. ಎರಡು ಸಾವಿರ ಅಡಿ ತೋಡಿದರೂ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಆದರೆ ಸ್ವಾಮಿಯವರ ಹೊಸ ಪ್ರಯೋಗವೊಂದು ಇಲ್ಲಿ ಯಶಸ್ಸನ್ನು ಕಂಡಿದೆ. ಐದು ವರ್ಷಗಳಿಂದ ಇವರ ಭೂಮಿ ನೀರಿನ ಸಮಸ್ಯೆಯಿಂದ ಮುಕ್ತವಾಗಿದೆ.

ಏನಿದು ಪ್ರಯೋಗ?: ನೀರು ಇಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಹೊಸ ಆಲೋಚನೆಯೊಂದಕ್ಕೆ ಮೂರ್ತಸ್ವರೂಪ ನೀಡಿದರು. ಭಕ್ತರಹಳ್ಳಿಯಲ್ಲಿ 60 ಮನೆಗಳಿವೆ. ಪ್ರತಿಮನೆಯ ಎದುರು ಬಳಕೆಯಾದ ನಂತರ ವ್ಯರ್ಥನೀರು ಹರಿದುಹೋಗುವ ಚರಂಡಿಯಿದೆ. ಚರಂಡಿಯ ನೀರು ಇವರ ಮನೆಯ ಎದುರಿಗಿರುವ ರಸ್ತೆಯ ಇನ್ನೊಂದು ಬದಿಯಿಂದ ಹಾದು ಹೋಗುತ್ತದೆ. ಇವರು ಮನೆಪಕ್ಕದ ಚರಂಡಿಗೆ ಐದು ಇಂಚಿನ ಪೈಪ್‌ ಅಳವಡಿಸಿದ್ದಾರೆ.

ಪೈಪ್ ಮೂಲಕ ಬಂದ ನೀರನ್ನು ಸಂಗ್ರಹಿಸುವುದಕ್ಕಾಗಿ ಮನೆಯ ಎಡಭಾಗದಲ್ಲಿ ಭೂಮಿಯೊಳಗೆ 22 ಅಡಿ ಆಳ, ಐದು ಅಡಿ ಅಗಲದ ಬಾವಿಯಂತಹ ಟ್ಯಾಂಕ್‌ವೊಂದನ್ನು ನಿರ್ಮಿಸಿದ್ದಾರೆ. ಇಲ್ಲಿ ಚರಂಡಿಯ ನೀರನ್ನು ಎರಡು ಬಾರಿ ಸೋಸುವ ವಿಧಾನದ ಮೂಲಕ ಫಿಲ್ಟರ್ ಮಾಡಲಾಗುತ್ತದೆ. ದಪ್ಪವಾದ ನೀರು ಟ್ಯಾಂಕಿನ ತಳಭಾಗದಲ್ಲಿ ಉಳಿಯುತ್ತದೆ.

ಮನೆಯಲ್ಲಿ ಬಳಸುವ ನೀರು, ದನದ ಕೊಟ್ಟಿಗೆ, ದನ ತೊಳೆಯುವ, ಬಟ್ಟೆ ತೊಳೆದ ನೀರು ಇಲ್ಲಿಗೆ ಬೀಳುವಂತೆ ಸ್ವಾಮಿಯವರು ವ್ಯವಸ್ಥೆಗೊಳಿಸಿದ್ದಾರೆ. ಇಲ್ಲಿ ಹತ್ತು ಸಾವಿರ ಲೀಟರ್ ನೀರು ಶೇಖರಣೆಯಾಗುತ್ತದೆ. ಟ್ಯಾಂಕ್‌ ತುಂಬಿದಾಗ ಚರಂಡಿ ನೀರು ಬಾರದಂತೆ ವಾಲ್ವ್‌ ತಿರುವಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಮೂರು ಎಚ್.ಪಿ ಸಾಮರ್ಥ್ಯದ ಪಂಪ್‌ಗೆ ಎರಡು ಇಂಚಿನ ಪೈಪನ್ನು ಅಳವಡಿಸುವ ಮೂಲಕ ಒಂದೂವರೆ ಕಿ.ಮೀ. ದೂರದಲ್ಲಿರುವ ತಮ್ಮ ತೋಟಕ್ಕೆ ನೀರನ್ನು ಹರಿಸುತ್ತಾರೆ.

ನೀರು ನೇರವಾಗಿ ರೇಷ್ಮೆ ಸೊಪ್ಪಿನ ಮೇಲೆ ಬೀಳುವುದನ್ನು ತಡೆಯುವುದಕ್ಕಾಗಿ ತೋಟದ ಮಧ್ಯೆ 40 ಅಡಿ ಅಗಲ, 11 ಅಡಿ ಆಳವಿರುವ ಕೃಷಿ ಹೊಂಡವೊಂದನ್ನು ತೋಡಿದ್ದಾರೆ. ಅದರಲ್ಲಿ ನೀರನ್ನು ಶೇಖರಿಸಿ ಇಲ್ಲಿಂದ ಮೂರು ಎಚ್.ಪಿ ಪಂಪ್ ಮೂಲಕ ನೀರನ್ನು ಮೇಲಕ್ಕೆತ್ತಿ ಹನಿ ನೀರಾವರಿ ವಿಧಾನದ ಮೂಲಕ ನೀರು ಹಾಯಿಸುತ್ತಾರೆ. ಭೂಮಿಯೊಳಗಿನ ನೀರಿನಾಂಶ ಹೆಚ್ಚಾಗಬೇಕು ಎಂಬುವುದು ಇದರ ಇನ್ನೊಂದು ಉದ್ದೇಶ. ಇದರಲ್ಲಿ ಇದೀಗ ಮೀನು ಸಾಕಣೆಯನ್ನು ಕೈಗೊಂಡಿದ್ದಾರೆ.

ಹದಿನೈದು ದಿನಕ್ಕೊಂದು ಬಾರಿ ಟ್ಯಾಂಕಿನ ಫಿಲ್ಟರ್‌ನಲ್ಲಿರುವ ಕೆಸರನ್ನು ತೆಗೆಯುತ್ತಾರೆ. ಇದನ್ನು ಕೃಷಿಗೆ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಚರಂಡಿ ನೀರನ್ನು ಟ್ಯಾಂಕಿಗೆ ಬಿಡುವುದಿಲ್ಲ. ಕಾಲೊನಿಯಿಂದ ಇವರ ಮನೆಗೆ 200 ಮೀಟರ್ ದೂರವಿದೆ. ನಿತ್ಯ 5ರಿಂದ 6 ಸಾವಿರ ಲೀಟರ್ ನೀರು ಇವರ ಟ್ಯಾಂಕಿಗೆ ಸೇರುತ್ತದೆ.

ಕೃಷಿ ಹೊಂಡಕ್ಕೆ ಮಣ್ಣು ಬೀಳದಂತೆ ಒಳಭಾಗದಿಂದ ಪ್ಲಾಸ್ಟಿಕ್‌ ಅಳವಡಿಸಲಾಗಿದೆ. ಮಳೆಗಾಲದಲ್ಲಿ ತುಂಬಿದ ನೀರನ್ನು ಪೈಪ್ ಮೂಲಕ ಕೃಷಿ ಹೊಂಡದಿಂದ ಹೊರಕ್ಕೆ ಬಿಡಲಾಗುತ್ತದೆ.

ಮೂರು ಎಕರೆಯಲ್ಲಿ ರೇಷ್ಮೆ ಕೃಷಿಗೆ ಬೇಕಾದ ಹಿಪ್ಪುನೇರಳೆ, ಹಸುಗಳಿಗೆ ಹಸಿರು ಹುಲ್ಲು, ಬಗೆಬಗೆಯ ತರಕಾರಿ, ಮೆಕ್ಕೆಜೋಳ ಹೀಗೆ ಬಹುಬೆಳೆಗಳನ್ನು ಬೆಳೆಯುವ ಮೂಲಕ ಕೈತುಂಬಾ ಆದಾಯವನ್ನು ಗಳಿಸುತ್ತಿದ್ದಾರೆ. ಒಣ ಮೇವಿಗಾಗಿ ಒಂದು ಎಕರೆಯಲ್ಲಿ ರಾಗಿಯನ್ನು ಬೆಳೆದಿದ್ದಾರೆ. ಸರ್ವಋತುಗಳಲ್ಲೂ ನೀರಿನ ಸಮಸ್ಯೆ ಇವರನ್ನು ಕಾಡುತಿಲ್ಲ. ಬೇಸಿಗೆಯಲ್ಲೂ ಅಗತ್ಯಕ್ಕಿಂತ ಅಧಿಕ ನೀರು ಇವರಿಗೆ ದೊರೆಯುತ್ತದೆ. ಹಾಗೆಂದು ಯಾವುದೇ ಕಾರಣಕ್ಕೂ ಒಂದಿಂಚು ನೀರನ್ನು ಇವರು ವ್ಯರ್ಥ ಮಾಡುವುದಿಲ್ಲ.

ಎರಡು ಪಂಪ್ ಖರೀದಿ, ಟ್ಯಾಂಕ್‌, ಕೃಷಿಹೊಂಡ ನಿರ್ಮಾಣ, ಚರಂಡಿಯಿಂದ ಟ್ಯಾಂಕಿಗೆ, ಟ್ಯಾಂಕಿನಿಂದ ಕೃಷಿಹೊಂಡಕ್ಕೆ ಪೈಪ್ ಅಳವಡಿಕೆ ಹಾಗೂ ಹನಿನೀರಾವರಿ ವ್ಯವಸ್ಥೆಗೆ ₹1.5 ಲಕ್ಷ ಖರ್ಚು ಮಾಡಿದ್ದಾರಂತೆ. 

ಸಂಪರ್ಕ: 99016 00580.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.