ಗುರುವಾರ , ಫೆಬ್ರವರಿ 25, 2021
17 °C

ಮುಧೋಳ: ಕೃಷಿ ಮೇಳಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ಕೃಷಿ ಮೇಳಕ್ಕೆ ಚಾಲನೆ

ಮುಧೋಳ: ‘ಭೂಮಿ ಆರೋಗ್ಯ ಚೀಟಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಹಿಂದೆಲ್ಲ ರಸಗೊಬ್ಬರ ಅಭಾವ ಉಂಟಾಗಿತ್ತು. ರೈತರು ಸರದಿಯಲ್ಲಿ ನಿಂತು ತರುತ್ತಿದ್ದರು. ಅದನ್ನು ನಿವಾರಿಸಿ, ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಸಂಶೋಧನಾ ಕೇಂದ್ರ ಮುಧೋಳ ಮತ್ತು ಕೃಷಿಕ ಸಮಾಜ ಮುಧೋಳ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳು, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನ ಹಾಗೂ ಕೃಷಿ ಮೇಳ–2017 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಂಗಳವಾರ ಮಾತನಾಡಿದರು.

‘ಯೂರಿಯಾ ಕಳ್ಳಕಾಕರ, ಯಾವುದ್ಯಾವುದೊ ಉದ್ದೇಶಕ್ಕೆ ಕಳ್ಳ ಸಂತಿಯಲ್ಲಿ ಮಾರವಾಗುತ್ತಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ಕೇಂದ್ರ ಮಂತ್ರಿ ಅನಂತಕುಮಾರ್‌ ಅವರ ದೂರದೃಸ್ಟಿಯಿಂದ ಬೇವು ಲೇಪಿತ ಯೂರಿಯಾ ರೈತರಿಗೆ ನಿರಾಯಸವಾಗಿ ದೊರಕುತ್ತಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ ‘ರಾಜ್ಯ ಸರ್ಕಾರ ಸದಾ ರೈತರೊಂದಿಗೆ ಇದೆ. ಕೃಷಿ ಮಂತ್ರಿ ಕೃಷ್ಣಭೈರೇಗೌಡ ರಚನಾತ್ಮ ಕಾರ್ಯಗಳನ್ನು ಮಾಡಿದರ ಫಲವಾಗಿ ಜಿಲ್ಲೆಯಲ್ಲಿ 11,500 ಕೃಷಿ ಹೊಂಡಕ್ಕೆ ₹78 ಕೋಟಿ, ₹ 91 ಕೋಟಿ ಪಾಲಿಹೌಸ್ ನಿರ್ಮಾಣಕ್ಕೆ, ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಯವರು ರೈತರ ₹50 ಸಾವಿರ ಸಾಲ ಮನ್ನಾ ಮಾಡುವುದರ ಮೂಲಕ ರೈತರ ನೆರವಿಗೆ ಧಾವಿಸಿದ್ದನ್ನು ಯಾರು ಮರೆಯಬಾರದು’ ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ‘ರೈತರ ಸಂಕಷ್ಟಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರ್ಥಮಾಡಿಕೊಳ್ಳುತ್ತಿಲ್ಲ. ರೈತರಿಗೆ ಯಾವ ರಿಯಾಯತಿ ಬೇಡ. ಬೆಳೆದ ಫಸಲಿಗೆ ಯೋಗ್ಯ ವೈಜ್ಞಾನಿಕ ಬೆಲೆಯನ್ನು ಬಿತ್ತನೆ ಮೊದಲೇ ಘೋಷಣೆ ಮಾಡಬೇಕು’ ಎಂದು ಹೇಳಿದರು.

ಹುಲ್ಯಾಳ ಗುರುದೇವ ಆಶ್ರಮದ ಹರ್ಷಾನಂದ ಶ್ರಿಗಳು ಸಾನ್ನಿಧ್ಯವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಿ.ಎಂ.ದೇಸಾಯಿ, ತಾಲ್ಲೂಕು ಅಧ್ಯಕ್ಷ ಶಶಿಕಾಂತ ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಉಪಾಧ್ಯಕ್ಷೆ ವೀಣಾ ದೇಸಾಯಿ, ಬಿಜೆಪಿ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಕಾಂಗ್ರೆಸ್ ಅಧ್ಯಕ್ಷ ಸಂಜಯ ನಾಯಿಕ, ಉಪ ಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ, ಡಾ.ಟಿ.ಎ.ಮಾಲಬಸರಿ, ಮಾಜಿ ಪುರಸಭೆ ಅಧ್ಯಕ್ಷ ಸಿದ್ದು ಸೂರ್ಯವಂಶಿ, ಆರ್.ಟಿ.ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸಂಗಪ್ಪ ಇಮ್ಮಣ್ಣವರ, ಪರಮಾನಂದ ಜನವಾಡ ಇದ್ದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಗತಿಪರ ಕೃಷಿಕರಾದ ಮುಗಳಖೋಡ ಗ್ರಾಮದ ಶ್ರೀಕಾಂತ ಕುಂಬಾರ, ಮಳಲಿ ಗ್ರಾಮದ ಶಿವಾನಂದ ನ್ಯಾಮಗೌಡ, ನಾಗರಾಳ ಗ್ರಾಮದ ಜಗನ್ನಾಥ ಶಿರಬೂರ, ಇಂಗಳಗಿ ಗ್ರಾಮದ ಉಮೇಶ ಗುಳಪ್ಪಗೋಳ, ಮುಗಳಖೋಡ ಗ್ರಾಮದ ರಾಮಪ್ಪ ಸಂಕ್ರಟ್ಟಿ, ಮಿರ್ಜಿ ಗ್ರಾಮದ ಯಮನಪ್ಪ ಲೊಹಾವಿ, ಬೆಳಗಲಿ ಗ್ರಾಮದ ರಾಮಲಿಂಗಯ್ಯ ಯಾದವಾಡ ಅವರನ್ನು ಹಾಗೂ ಪ್ರೊ ಬಿ.ಆರ್.ನಿಲಗಾರ ಅವರನ್ನು ಗಣ್ಯರು ಗೌರವಿಸಿದರು.

ಚೆಕ್ ವಿತರಣೆ: ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಮುದ್ದಾಪುರ ಗ್ರಾಮದ ಹೊಳೆವ್ವ ಮಾಳಿ, ಬಿದರಿ ಗ್ರಾಮದ ರಾಮಪ್ಪ ಕೀಲಬನೂರ, ಜುನ್ನೂರ ಗ್ರಾಮದ ವೆಂಕಪ್ಪ ತಳವಾರ, ನಾಗಣಾಪುರ ಗ್ರಾಮದ ಈರಪ್ಪ ಅಂಗಡಿ, ದಾದನಟ್ಟಿ ಗ್ರಾಮದ ಈರಪ್ಪ ಮುದಕವಿ ಕುಟುಂಬದ ಸದಸ್ಯರಿಗೆ ತಲಾ ₹5 ಲಕ್ಷ ಚಕ್ ನ್ನು ಶಾಸಕ ಗೋವಿಂದ ಕಾರಜೋಳ ವಿತರಿಸಿದರು. ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ ಸ್ವಾಗತಿಸಿದರು. ಮಂಜುಳಾ ಕಲ್ಯಾಣಿ ನಿರೂಪಿಸಿದರು

‘ಹೆಚ್ಚು ನೀರು ಹರಿಸಿದರೆ ಭೂಮಿ ಹಾಳು

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತಿರಣಾ ನಿರ್ದೇಶಕ ಡಾ.ವಿ.ಐ.ಬೆಣಗಿ ಮಾತನಾಡಿ ‘ಕೃಷಿಯಲ್ಲಿ ಬಾಗಲಕೋಟೆ ಜಿಲ್ಲೆ ಪ್ರಗತಿ ಪಥದಲ್ಲಿದೆ.  ₹50 ಸಾವಿರ ಖರ್ಚುಮಾಡಿ ನೀರಿನ ವ್ಯವಸ್ಥೆ ಮಾಡಿ ಮನಬಂದತೆ ನೀರು ಹರಿಸಿದರೆ ಭೂಮಿ ಹಾಳಾಗಿ ಅದನ್ನು ದುರಸ್ತಿ ಮಾಡಲು ₹2.5 ಲಕ್ಷ ಖರ್ಚಾಗುತ್ತದೆ ಎಂದು ಮನಗಾಣಬೇಕು. ನೀರನ್ನು ಮಿತವಾಗಿ ಉಪಯೋಗಿಸಿ’ ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪಿ.ರಮೇಶಕುಮಾರ ಮಾತನಾಡಿ ‘ಮಣ್ಣು ನಮ್ಮ ಸಂಸ್ಕೃತಿ ಪ್ರತಿಬಿಂಬ ಅದರ ಸಂರಕ್ಷಣೆ ಪ್ರತಿ ರೈತರ ಕರ್ತವ್ಯ. ಭೂಮಿ ನಮ್ಮ ಪೂರ್ವಜರಿಂದ ಬಳವಳಿ ಆದರೆ ಅದು ನಮ್ಮ ಮುಂದಿನ ಜನಾಂಗಕ್ಕೆ ನಾವು ಕೊಡುವ ಕೊಡುಗೆ ಯಾಗಬೇಕಾದರೆ ಬೂಮಿಯ ಆರೋಗ್ಯ ಕಾಪಾಡಬೇಕು’ ಎಂದು ಹೇಳಿದರು.

* * 

ಓಡುವ ನೀರನ್ನು ನಡೆಯುವಂತೆ ಮಾಡು, ನಡೆಯುವ ನೀರನ್ನು ನಿಲ್ಲುವಂತೆ ಮಾಡು, ನಿಲ್ಲುವ ನೀರನ್ನು ಇಂಗುವಂತೆ ಮಾಡು

ಗೋವಿಂದ ಕಾರಜೋಳ

ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.